ರಾಷ್ಟ್ರದಲ್ಲಿ ಚರ್ಚೆಯಲ್ಲಿರುವ ಜಾತಿ ಗಣತಿಯ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವುದೇ ರೀತಿಯ ತಾರತಮ್ಯ ಅಥವಾ ಅಸಮಾನತೆಯಿಂದ ಮುಕ್ತವಾದ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಹಿಂದೂ ಸಮಾಜದ ಲಕ್ಷ್ಯವನ್ನಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದರು.
ವಿವಿಧ ಐತಿಹಾಸಿಕ ಕಾರಣಗಳಿಂದಾಗಿ, ಸಮಾಜದ ಅನೇಕ ಘಟಕಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬುದು ನಿಜ. ಅವರ ಅಭಿವೃದ್ಧಿ, ಉನ್ನತಿ ಮತ್ತು ಸಬಲೀಕರಣದ ದೃಷ್ಟಿಯಿಂದ, ವಿವಿಧ ಸರ್ಕಾರಗಳು ಕಾಲಕಾಲಕ್ಕೆ ಅನೇಕ ಯೋಜನೆಗಳು ಮತ್ತು ನಿಬಂಧನೆಗಳನ್ನು ಮಾಡುತ್ತವೆ. ಇದನ್ನು ಸಂಘವು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಆದರೆ ಜಾತಿ ಆಧಾರಿತ ಜನಗಣತಿಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಬಳಸಬೇಕು ಎಂದು ನಾವು ಭಾವಿಸುತ್ತೇವೆ. ಜೊತೆಗೆ ಹಾಗೆ ಮಾಡುವಾಗ, ಯಾವುದೇ ಕಾರಣಕ್ಕೂ ಸಾಮಾಜಿಕ ಸಾಮರಸ್ಯ ಮತ್ತು ಏಕೀಕರಣವನ್ನು ಮುರಿಯದಂತೆ ಎಲ್ಲಾ ಪಕ್ಷಗಳು ಖಚಿತಪಡಿಸಿಕೊಳ್ಳಬೇಕು ಎಂದು ನುಡಿದರು.