ರಾಂಚಿ, ಝಾರ್ಖಂಡ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ಜುಲೈ 12 ರಿಂದ 14 ರವರೆಗೆ ರಾಂಚಿಯ ಸರಳಾ ಬಿರ್ಲಾ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಬೈಠಕ್ ನ ಕೊನೆಯ ದಿನ ಸರಳಾ ಬಿರ್ಲಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಅವರು ಬೈಠಕ್ ನಲ್ಲಿ ಚರ್ಚೆಯಾದ ವಿಷಯದ ಕುರಿತು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ನಡೆಯುತ್ತದೆ. ಈ ವರ್ಷ ನಡೆದ ಬೈಠಕ್ ನಲ್ಲಿ 227 ಮಂದಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಎಲ್ಲಾ ಸಹಸರಕಾರ್ಯವಾಹರು ಬೈಠಕ್ ನಲ್ಲಿ ಉಪಸ್ಥಿತರಿದ್ದರು. ಪ್ರಮುಖವಾಗಿ ದೇಶಾದ್ಯಂತ ಸಂಘದ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಅಖಿಲ ಭಾರತ ಕಾರ್ಯಕಾರಿಣಿಯ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ತಿಳಿಸಿದರು.
ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ವಿಭಿನ್ನ ಕ್ರಿಯಾ ಯೋಜನೆಗಳ ಬಗ್ಗೆ ವಿಚಾರ, ವಿಮರ್ಶೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಸಂಘಟನಾತ್ಮಕವಾಗಿ ಮಾಡಬೇಕಾದ ಪ್ರಯತ್ನಗಳ ಕುರಿತು ಮಂಥನ ನಡೆಯಿತು ಎಂದು ತಿಳಿಸಿದರು.
ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಶಾಖಾಕೇಂದ್ರಿತವಾಗಿ ಮಾಡಿಕೊಂಡುಬರುತ್ತಿದೆ. ಸಂಘ ಶಿಕ್ಷಣಕ್ಕಾಗಿ ದೇಶವ್ಯಾಪಿ ಪ್ರಶಿಕ್ಷಣ ವರ್ಗಗಳು ನಡೆಯುತ್ತವೆ. ಈ ವರ್ಷದಿಂದ ಪ್ರಶಿಕ್ಷಣ ವರ್ಗಗಳಲ್ಲಿ ನೂತನ ಪಠ್ಯಕ್ರಮ ಅಳವಡಿಸಲಾಗಿದ್ದು ಅದರ ಕುರಿತು ಅವಲೋಕನ ನಡೆಸಲಾಯಿತು. ಇಲ್ಲಿಯವರೆಗೂ ಸಂಘ ಶಿಕ್ಷಾ ವರ್ಗ ಪ್ರಥಮ, ದ್ವಿತೀಯ, ತೃತೀಯ ಎಂದು ನಡೆಯುತ್ತಿತ್ತು. ಈಗ ಸಂಘ ಶಿಕ್ಷಾ ವರ್ಗ ಮತ್ತು ಕಾರ್ಯಕರ್ತ ವಿಕಾಸ ವರ್ಗ ಪ್ರಥಮ, ದ್ವಿತೀಯ ಎಂದು ರೂಪುಗೊಂಡಿದೆ. 2024ರ ಮಾರ್ಚ್ 2024ರವರೆಗೆ ದೇಶದಲ್ಲಿ ಗ್ರಾಮೀಣ ಭಾಗದ 58981 ಮಂಡಲಗಳಲ್ಲಿ 36823 ಮಂಡಲಗಳಲ್ಲಿ ದೈನಿಕ ಶಾಖೆಗಳಿವೆ. ಹಾಗೆಯೇ ನಗರ ಪ್ರದೇಶಗಳಲ್ಲಿ 23649 ವಸತಿಗಳಲ್ಲಿ 14645 ವಸತಿಗಳಲ್ಲಿ ಸಂಘ ಕಾರ್ಯವಿದೆ. ಪ್ರಸ್ತುತ ದೇಶದಲ್ಲಿ 73117 ಶಾಖೆಗಳು, 27717 ಮಿಲನ್ ಗಳು ಕಾರ್ಯನಿರ್ವಹಿಸುತ್ತಿದೆ.
ಕಾರ್ಯಕರ್ತ ವಿಕಾಸ ವರ್ಗ ಸಂಘದ ಜವಾಬ್ದಾರಿ ಹೊಂದಿರುವ ಕಾರ್ಯಕರ್ತರಿಗಾಗಿ ಇರುವಂತದ್ದು. ರಾಷ್ಟ್ರೀಯ ವಿಚಾರಧಾರೆಯಿಂದ ಪ್ರಭಾವಿತರಾಗಿ ಸಂಘಕ್ಕೆ ಬರುವವರಿಗೆ, ಸಂಘದ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುವವರಿಗೆ ಪ್ರಾರಂಭಿಕ ವರ್ಗ, ಪ್ರಾಥಮಿಕ ಶಿಕ್ಷಾ ವರ್ಗಗಳಿರುತ್ತವೆ. Join RSS ಮೂಲಕವೂ ಸಮರ್ಪಿತ ಭಾವವುಳ್ಳ, ಸಂಘದಿಂದ ಆಕರ್ಷಿತ ಹೊಸ ಯುವಕರು ಸಂಘಕ್ಕೆ ಬರುತ್ತಿದ್ದಾರೆ. ಈ ವರ್ಷ ಜೂನ್ ಅಂತ್ಯದವರೆಗೆ 66529 ಮಂದಿ ಆರ್ ಎಸ್ ಎಸ್ ಸೇರಿದ್ದಾರೆ.
ಜಾಗರಣ ಪತ್ರಿಕೆಯ ಮೂಲಕ ಶಾಖೆಗಳು ತಲುಪದ ಸ್ಥಳಗಳಿಗೆ ಸಂಘದ ವಿಚಾರ ತಲುಪುತ್ತಿದೆ. 1,58,532 ಗ್ರಾಮಗಳಿಗೆ ಜಾಗರಣ ಪತ್ರಿಕೆಗಳು ತಲುಪುತ್ತಿವೆ. ಇಡೀ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಸಮಾಜವನ್ನು ನಿರ್ಮಿಸುವ ಸಂಘದ ಧ್ಯೇಯದಂತೆ ಪ್ರಯತ್ನಗಳಾಗುತ್ತಿವೆ ಎಂದು ತಿಳಿಸಿದರು.
2025ರ ವಿಜಯದಶಮಿಗೆ ಸಂಘ ನೂರು ವರ್ಷವನ್ನು ಪೂರೈಸಲಿದೆ. ಅಷ್ಟರೊಳಗೆ ಪ್ರತಿ ಮಂಡಲ/ ವಸತಿ ಶಾಖಾಯುಕ್ತ ಆಗುವ ಗುರಿಯೊಂದಿಗೆ ಕಾರ್ಯಪ್ರವೃತ್ತರಾಗಿದ್ದೇವೆ. ಈ ವರ್ಷ ಹಲವು ದೇವಾಲಯಗಳನ್ನು ಪುನರುಜ್ಜೀವನ ಗೊಳಿಸಿದ ಪುಣ್ಯಶ್ಲೋಕ ಅಹಲ್ಯಬಾಯಿ ಹೋಳ್ಕರ್ ಅವರ 300ನೇ ಜಯಂತಿಯ ಪ್ರಯುಕ್ತ ದೇಶವ್ಯಾಪಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಗೋಸೇವಾ, ಗ್ರಾಮವಿಕಾಸ, ಸೇವಾಭಾರತಿ, ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರದ ಮೂಲಕ ಸದೃಢ ಸಮಾಜವನ್ನು ನಿರ್ಮಿಸುವ ಕಾರ್ಯ ನಿರಂತರವಾಗಿ ಆಗುತ್ತಿದೆ ಎಂದು ನುಡಿದರು.
ಸಂಘ ಪ್ರೇರಿತ ಸಂಘಟನೆಗಳ ಸಮನ್ವಯ ಬೈಠಕ್ ಆಗಸ್ಟ್ 30, 2024 ರಿಂದ ಸೆಪ್ಟೆಂಬರ್ 1, 2024 ರವರೆಗೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಝಾರ್ಖಂಡ್ ಪ್ರಾಂತ ಸಂಘಚಾಲಕ ಸಚ್ಚಿದಾನಂದ ಲಾಲ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನರೇಂದ್ರ ಕುಮಾರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.