ಲೇಖನ: ಅರುಣ್ ಕಿರಿಮಂಜೇಶ್ವರ
ಭಾರತದಲ್ಲಿ ಸ್ವಾತಂತ್ರ್ಯದ ಗಂಗೆಯನ್ನು ಹರಿಸುವುದಕ್ಕಾಗಿ ಸಾವಿರಾರು ತೊರೆಗಳು ತಮ್ಮನ್ನು ತಾವು ಸಮರ್ಪಿಸಿಕೊಂಡಿವೆ. ಆದರೆ ಎಲ್ಲಾ ತೊರೆಗಳಿಗೂ ಸಮಾನವಾದ ಮಹತ್ವವನ್ನು ಕಟ್ಟಿಕೊಡುವುದರಲ್ಲಿ ಭಾರತೀಯರಾದ ನಾವು ಸೋತಿದ್ದೇವೆ! ಇದರ ಪರಿಣಾಮವಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಳು, ಮಹಾನ್ ಪುರುಷರು ಹಾಗೂ ಸಂಘಟನೆಗಳ ಸ್ವಾತಂತ್ರ್ಯ ಹೋರಾಟದಲ್ಲಿನ ಪಾತ್ರವನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರೂ ಕೂಡ ಆಧಾರವಿಲ್ಲದೆ ನಗಣ್ಯವೆಂದು ಹೇಳುವ ಹಾಗೂ ಅವುಗಳ ವಿರುದ್ಧ ಕಥನಗಳನ್ನು (Narratives) ಹೆಣೆಯುವ ಪ್ರಯತ್ನಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಆ ಕಥನಗಳ ಭಾಗವಾಗಿ 1925ರಲ್ಲಿ ಸ್ಥಾಪನೆಗೊಂಡ ಹಾಗೂ ಇಂದು ಜಗತ್ತಿನ ಅತ್ಯಂತ ಬೃಹತ್ ಸ್ವಯಂಸೇವಕ ಸಂಘಟನೆಯಾಗಿ ಬೆಳೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾತಂತ್ರ್ಯ ಹೋರಾಟಕ್ಕೆ ಏನೂ ಕೊಡುಗೆ ನೀಡಿಲ್ಲ ಎನ್ನುವ ತಥಾಕಥಿತ ಆರೋಪ ಮಾಡಲಾಗುತ್ತಿದೆ. ಕಥನಗಳ ಯುಗದಲ್ಲಿ ಎಲ್ಲಾ ಕಥನಗಳು ಸತ್ಯವೇ ಆಗಿರಬೇಕೆಂದೇನಿಲ್ಲ. ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯವೆಂದು ಬಿಂಬಿಸುವ ಪ್ರಯತ್ನ ನಿರಂತರವಾಗಿ ಈ ನಾಡಿನಲ್ಲಿ ಬೆಳೆದುಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರದ ಕುರಿತಾದ ಕಥನ ಕೂಡ ಟೊಳ್ಳು ಎನ್ನುವುದನ್ನು ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಸ್ಪಷ್ಟವಾಗುತ್ತದೆ.
ಸಂಘಸಂಸ್ಥಾಪಕ ಡಾ.ಹೆಡಗೇವಾರ್ ಅಪ್ರತಿಮ ಕ್ರಾಂತಿಕಾರಿ: ಸಂಘ ಸಂಸ್ಥಾಪಕರಾದ ಡಾ.ಕೇಶವ ಬಲಿರಾಮ ಹೆಡಗೇವಾರರಿಗೆ ದೇಶಭಕ್ತಿ ರಕ್ತಗತವಾಗಿತ್ತು. ಯುಗಾಂತರ, ಅನುಶೀಲನ ಸಮಿತಿಯಂತಹ ಕ್ರಾಂತಿಕಾರಿ ಸಂಘಟನೆಗಳ ಭಾಗವಾಗಿದ್ದ ಮೊದಲ ದರ್ಜೆಯ ಕ್ರಾಂತಿಕಾರಿಯಾಗಿದ್ದ ಅವರು ಪಾಂಡುರಂಗ ಖಾನಖೋಜೇ, ಅರವಿಂದ ಘೋಷ್, ವಾರೀಂದ್ರ ಘೋಷ್, ತ್ರೈಲೋಕ್ಯನಾಥ ಚಕ್ರವರ್ತಿ ಮೊದಲಾದವರ ಸಹವರ್ತಿಗಳಾಗಿ ಕಾರ್ಯ ನಿರ್ವಹಿಸಿದ್ದವರು. ಕಲ್ಕತ್ತೆಯಲ್ಲಿ ವ್ಯಾಸಂಗ ಮುಗಿಸಿ ನಾಗಪುರಕ್ಕೆ ಬಂದ ಡಾಕ್ಟರ್‌ಜಿ ನಾಗಪುರ ಮತ್ತು ಬಂಗಾಳ ನಡುವಿನ ಕ್ರಾಂತಿಕಾರ್ಯದ ಒಂದು ಬಹು ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದರು. ಸಂಘಸ್ಥಾಪನೆಗೂ ಮುನ್ನ ಬಂಗಾಳದಿಂದ ಅವರ ಬಳಿಗೆ ಎಷ್ಟೋ ಸಲ ಸುಸ್ಥಿತಿಯ ಮತ್ತು ರಿಪೇರಿಗಾಗಿ ಪಿಸ್ತೂಲುಗಳು ಬರುತ್ತಿದ್ದವು ಹಾಗೂ ನಾಗಪುರದಿಂದ ಅವರ ಮೂಲಕವೇ ಮರಳುತ್ತಿದ್ದವು. ಈ ಎಲ್ಲಾ ಕಾರ್ಯಗಳು ಸದಾ ಅವರ ಹಿಂದೆ ಇರುತ್ತಿದ್ದ ಪೊಲೀಸ್ ಗುಪ್ತಚರರ ನಡುವೆಯೂ ನಡೆಯುತ್ತಿದ್ದವು!
ಈ ಕುರಿತು ಖ್ಯಾತ ಕ್ರಾಂತಿಕಾರಿ ರಾಮಲಾಲ ವಾಜಪೇಯಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ದಾಖಲಿಸುತ್ತಾರೆ:
“ಶ್ರೀ ದಾದಾಸಾಹೇಬ್‌ಬುಟೆಯವರಿಂದ ಆರ್ಥಿಕ ಸಹಾಯ ಪಡೆದು ಆರೆಸ್ಸೆಸ್ ಸಂಸ್ಥಾಪಕರಾದ ಕೇಶವರಾವ್ ಹೆಡಗೇವಾರ್ ಅವರನ್ನು ವಿದ್ಯಾಭ್ಯಾಸಕ್ಕಿಂತಲೂ ಮುಖ್ಯವಾಗಿ ಪುಲಿನಬಿಹಾರಿದಾಸ್ ಅವರ ನೇತೃತ್ವದಲ್ಲಿ ಕ್ರಾಂತಿಕಾರಿ ಸಂಘಟನೆಯ ಶಿಕ್ಷಣ ಪಡೆಯಲು ಕಳಿಸಲಾಯಿತು, ವಿದ್ಯಾರ್ಥಿ ದೆಸೆಯಲ್ಲೇ ಆಂಗ್ಲರ ವಿರುದ್ಧದ ತನ್ನ ಹೋರಾಟ ಪ್ರವೃತ್ತಿಯಿಂದಾಗಿ ಗುಪ್ತಚರರ ಪೀಡೆಯನ್ನು ಬೆನ್ನಿಗಂಟಿಸಿಕೊಂಡಿದ್ದ ಕೇಶವರಾವ್, ಕಲ್ಕತ್ತೆಯ ವೈದ್ಯ ಶಿಕ್ಷಣದ ದಿನಗಳಲ್ಲೂ ತಮ್ಮದೇ ಕೋಣೆಯಲ್ಲಿ ಅಂಥೊಬ್ಬ ಗುಪ್ತಚರನಿರುತ್ತಲೇ ಕ್ರಾಂತಿಕಾರ್ಯದಲ್ಲಿ ತೊಡಗಿದರು. ಅಸಾಧ್ಯವೆನಿಸಬಲ್ಲ ಇಂಥ ಸಾಹಸವನ್ನು ಅವರು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು.”
ಸಂಘದ ಧ್ಯೇಯವೇ ಸ್ವರಾಜ್ಯವಾಗಿತ್ತು: 1925ರ ವಿಜಯದಶಮಿಯಂದು ಸಂಘವನ್ನು ಸ್ಥಾಪಿಸಿದಾಗಿನಿಂದಲೂ ಡಾ. ಹೆಡಗೇವಾರ್ ಅವರ ಉದ್ದೇಶ ಸ್ವರಾಜ್ಯವೇ ಆಗಿತ್ತು. ಸಂಘದ ಸ್ವಯಂಸೇವಕರಿಗೆ ನೀಡಲಾಗುತ್ತಿದ್ದ ಪ್ರತಿಜ್ಞೆ – “ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸಲು ತನು-ಮನ-ಧನದಿಂದ ಪ್ರಾಮಾಣಿಕವಾಗಿ ಜೀವನಪರ್ಯಂತ ಪ್ರಯತ್ನಿಸುತ್ತೇನೆ” ಎನ್ನುವುದಾಗಿತ್ತು. (ಸ್ವಾತಂತ್ರ್ಯದ ನಂತರ “ಹಿಂದೂ ರಾಷ್ಟ್ರದ ಸರ್ವಾಂಗೀಣ ಉನ್ನತಿಯನ್ನು ಮಾಡುವುದಕ್ಕಾಗಿ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕನಾಗಿದ್ದೇನೆ” ಎಂದು ಪುನರ್‌ರಚಿತವಾಯಿತು.) ಇದರ ಆಧಾರದಲ್ಲೇ ಸಂಘದ ಸ್ವಯಂಸೇವಕರು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ತಮ್ಮ ಕೈಲಾದ ಪಾತ್ರವನ್ನು ನಿರ್ವಹಿಸತೊಡಗಿದ್ದರು. ಸಂಘದ ಪ್ರಭಾವದಿಂದ 1926-27ರಲ್ಲಿ ನಾಗಪುರದ ಭೋಸಲೆ – ವೇದ ಶಾಲೆಯಲ್ಲಿ ಓದುತ್ತಿದ್ದ ಪ್ರಸಿದ್ಧ ಕ್ರಾಂತಿಕಾರಿ ರಾಜಗುರು ಅವರು ಸ್ವಯಂಸೇವಕರಾದರು. ಭಗತ್‌ಸಿಂಗ್ ಅವರು ಕೂಡ ಇದೇ ಸಂದರ್ಭದಲ್ಲಿಯೇ ಡಾಕ್ಟರ್‌ಜಿ ಅವರನ್ನು ನಾಗಪುರದಲ್ಲಿ ಭೇಟಿಯಾಗಿದ್ದರು.
ರಾಜಗುರು ಅವರಿಗೆ ಸಹಾಯ: 1928ರಲ್ಲಿ ಭಾರತಕ್ಕೆ ಬಂದ ಸೈಮನ್ ಕಮಿಷನ್ ವಿರುದ್ಧ ರಾಷ್ಟ್ರಾದ್ಯಂತ ಬಹಿಷ್ಕಾರದ ಕೂಗು ಮೊಳಗಿತು. ನಾಗಪುರದಲ್ಲಾದ ಹರತಾಳ, ಹೋರಾಟಗಳಲ್ಲಿ ಸಂಘದ ಸ್ವಯಂಸೇವಕರು ಮುಂಚೂಣಿಯಲ್ಲಿದ್ದರು. ‘ಗೋ ಬ್ಯಾಕ್ ಸೈಮನ್’ ನ ಭಾಗವಾಗಿ ನಡೆದ ಪ್ರತಿಭಟನೆಯಲ್ಲಿ ‘ಪಂಜಾಬಿನ ಕೇಸರಿ’, ಅಪ್ರತಿಮ ದೇಶಭಕ್ತ ಲಾಲ ಲಜಪತ್ ರಾಯ್ ಅವರನ್ನು ಲಾಠಿ ಏಟಿನ ಮೂಲಕ ಝರ್ಜರಿತಗೊಳಿಸಿ ಅವರ ಸಾವಿಗೆ ಕಾರಣವಾದ ಸ್ಕಾಟ್ ನನ್ನು ಕೊಲ್ಲಲು ಲಾಲಾಜಿ ಅವರ ಶಿಷ್ಯರು ನಿರ್ಧರಿಸಿದರು. 1928ರ ಡಿಸೆಂಬರ್‌ನಲ್ಲಿ ನನ್ನು ಕೊಲ್ಲುವ ಬದಲು ಸ್ಯಾಂಡರ್ಸ್ ಹತ್ಯೆ ನಡೆಯಿತು. ಲಾಲ ಲಜಪತ್ ರಾಯರ ಹತ್ಯೆಯ ಸೇಡನ್ನು ತೀರಿಸಿಕೊಂಡ ಈ ಕ್ರಾಂತಿಕಾರಿಗಳು ಲಾಹೋರ್‌ನಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದರು. ಈ ಹಂತದಲ್ಲಿ ರಾಜಗುರು ಮತ್ತು ಭಗತ್‌ಸಿಂಗ್‌ರಿಗೆ ತಲೆಮರೆಸಿಕೊಳ್ಳಲು ಸ್ಥಳ ಒದಗಿಸಿಕೊಟ್ಟವರು ಡಾ|| ಹೆಡಗೇವಾರ್! ನಂತರದ ದಿನಗಳಲ್ಲಿ ಅಖಿಲ ಭಾರತ ಸರಕಾರ್ಯವಾಹರಾದ ಭಯ್ಯಾಜಿ ದಾಣಿ ಅವರ ಫಾರ್ಮ್ ಹೌಸ್‌ನಲ್ಲಿ ರಾಜಗುರು ಅವರು ಅಡಗಿದರು.
ಸಂಘದ ಶಾಖೆಗಳಲ್ಲಿ ಪೂರ್ಣ ಸ್ವರಾಜ್ಯ ಆಚರಣೆ: 1929ರ ಡಿಸೆಂಬರ್ 31ರಂದು ಲಾಹೋರ್‌ನಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಸಂಪೂರ್ಣ ಸ್ವರಾಜ್ಯಗಳಿಸುವ ಗುರಿಯನ್ನು ಪ್ರಕಟಿಸಿತು. 1930ರ ಜನವರಿ 26ನ್ನು ಸ್ವಾತಂತ್ರ‍್ಯ ದಿನವನ್ನಾಗಿ ದೇಶಾದ್ಯಂತ ಆಚರಿಸಲು ನಿರ್ಧರ ಮಾಡಲಾಯಿತು. ಆದರೆ ಇದಕ್ಕೆ ಹತ್ತು ವರ್ಷಗಳ ಮುಂಚೆಯೇ 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಡಾ|| ಹೆಡಗೇವಾರ್ ಅವರು ಸಂಪೂರ್ಣ ಸ್ವಾತಂತ್ರ‍್ಯದ ಕುರಿತು ಪ್ರಸ್ತಾವನೆಯನ್ನು ಮಂಡಿಸಿದ್ದರು. ಆದರೆ ಆ ಪ್ರಸ್ತಾವನೆಗೆ ಬೆಂಬಲ ದೊರಕಿರಲಿಲ್ಲ. ಸಂಪೂರ್ಣ ಸ್ವರಾಜ್ಯದಂತಹ ಸರಿಯಾದ ಗುರಿಯನ್ನು ಕಾಂಗ್ರೆಸ್ ತಡವಾಗಿಯಾದರೂ ಸ್ವೀಕರಿಸಿದ್ದರಿಂದ ಸಂತೋಷಗೊಂಡ ಡಾಕ್ಟರ್‌ಜಿ ಅವರು 1930ರ ಜನವರಿ 26ರ ಭಾನುವಾರದಂದು ಸ್ವಾತಂತ್ರ‍್ಯ ದಿನ ಆಚರಿಸುವಂತೆ ಸಂಘದ ಎಲ್ಲ ಶಾಖೆಗಳಿಗೆ ಸೂಚನಾಪತ್ರ ಕಳುಹಿಸಿದರು. ಈ ಪತ್ರದ ಅನುಸಾರ ಸಂಘದ ಎಲ್ಲಾ ಶಾಖೆಗಳಲ್ಲಿ ಸಂಜೆ 6 ಗಂಟೆಗೆ ರಾಷ್ಟ್ರಧ್ವಜ ವಂದನೆ ನಡೆಸಿ, ‘ಸ್ವಾತಂತ್ರ‍್ಯದ ಕಲ್ಪನೆ ಮತ್ತು ಅವಶ್ಯಕತೆ’ ಕುರಿತಂತೆ ಉಪನ್ಯಾಸ ನಡೆಸಲಾಯಿತು.
ಜಂಗಲ್ ಸತ್ಯಾಗ್ರಹ: ಚೌರಾಚೌರಿ ಘಟನೆಯಾದ ನಡೆದು ಎಂಟು ವರ್ಷಗಳ ಬಳಿಕ ಗಾಂಧೀಜಿ 1930ರ ಎಪ್ರಿಲ್ 6 ರಂದು ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸುವ ಮೂಲಕ ಜನಾಂದೋಲನವನ್ನು ಆರಂಭಿಸಿದರು. ಈ ವೇಳಗಾಗಲೇ ಮಧ್ಯಭಾರತದಲ್ಲಿ ಸಂಘದ ಪ್ರಭಾವಲಯ ಹಿಗ್ಗಿತ್ತು. ಸಂಘ ಉಪ್ಪಿನ ಕಾನೂನು ಭಂಗದ ಬದಲು ಅರಣ್ಯ ಕಾನೂನು ಭಂಗಕ್ಕಾಗಿ ಸತ್ಯಾಗ್ರಹ ನಡೆಸಲು ನಿರ್ಧರಿಸಿತು. ಆಗ ಡಾ.ಹೆಡ್ಗೇವಾರ್ ಸಂಘದ ಜವಾಬ್ದಾರಿಯನ್ನು ಡಾ.ಪರಾಂಜಪೆಯವರಿಗೆ ವಹಿಸಿ, 11 ಮಂದಿ ಸ್ವಯಂಸೇವಕರೊಂದಿಗೆ ಸತ್ಯಾಗ್ರಹಕ್ಕಾಗಿ ಸ್ವತಃ ಧಾವಿಸಿದರು. ಹೆಡಗೇವಾರರಿಗೆ 11 ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಯಿತು ಉಳಿದ 11 ಜನರಿಗೆ 4 ತಿಂಗಳ ಸೆರೆವಾಸ.! ಇವರಲ್ಲಿ ಅಪ್ಪಾಜಿ ಜೋಶಿ (ನಂತರ ಸರಕಾರ್ಯವಾಹರಾದವರು), ದಾದಾರಾವ್ ಪರಮಾರ್ಥ (ನಂತರ ಮದ್ರಾಸ್‌ನಲ್ಲಿ ಪ್ರಥಮ ಪ್ರಾಂತ ಪ್ರಚಾರಕರಾದವರು), ಮುಂದೆ ಅಖಿಲ ಭಾರತೀಯ ಶಾರೀರಿಕ ಶಿಕ್ಷಣ ಪ್ರಮುಖರಾದ (ಸರ ಸೇನಾಪತಿ) ಮಾರ್ತಾಂಡ ರಾವ್ ಜೋಗ್, ನಾಗಪುರದ ಜಿಲ್ಲಾ ಸಂಘಚಾಲಕ ಅಪ್ಪಾಜಿ ಹಲ್ಲೆ, ಮೊದಲಾದ ಕಾರ್ಯಕರ್ತರು ಹಾಗೂ ಸ್ವಯಂಸೇವಕರ ತಂಡಗಳು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಂಡವು. ಸತ್ಯಾಗ್ರಹದ ಸಂದರ್ಭದಲ್ಲಿ ಪೊಲೀಸರ ಹಿಂಸೆಗೆ ಒಳಗಾಗುವ ಸತ್ಯಾಗ್ರಹಿಗಳ ಸುರಕ್ಷತೆಗಾಗಿ 100 ಜನ ಸ್ವಯಂಸೇವಕರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಇದರ ಸದಸ್ಯರು ಸತ್ಯಾಗ್ರಹದ ವೇಳೆ ಉಪಸ್ಥಿತರಿರುತ್ತಿದ್ದರು.
ಬ್ರಿಟಿಷರ ವಿರೋಧ: 1932ರ ಡಿಸೆಂಬರ್ 15ರಂದು ಮಧ್ಯಭಾರತ ಸರಕಾರವು(ನಾಗಪುರವನ್ನು ಒಳಗೊಂಡಿತ್ತು) ಸಂಘದ ಕುರಿತು ಗುಪ್ತಚರ ವಿಭಾಗದ ವರದಿಯನ್ನು ಆಧರಿಸಿ ಸರಕಾರಿ ನೌಕರರು ಸಂಘದಲ್ಲಿ ಪಾಲ್ಗೊಳ್ಳುವುದರ ಮೇಲೆ ನಿಷೇಧ ಹೇರಿತು. ಬ್ರಿಟಿಷರ ಏಜಂಟರಾಗಿದ್ದರೆ ನಿಷೇಧವನ್ನು ಹೇರುವ ಅಗತ್ಯತೆ ಏನಿತ್ತು? ವಿಪರ್ಯಾಸದ ಸಂಗತಿ ಎಂದರೆ ಸಂಘದ ಮೇಲಿನ ನಿಷೇಧವನ್ನು ಅಂದಿನ ಕಾಂಗ್ರೆಸ್ ವಿರೋಧಿಸಿತ್ತು! ಕಾನೂನು ರದ್ದಾಗಿ ಸಂಘ ವಿಜಯಿಯಾಗುವಲ್ಲಿ ಪಾತ್ರವಹಿಸಿತ್ತು.
1942ರ ಭಾರತ ಬಿಟ್ಟು ತೊಲಗಿ ಆಂದೋಲನ: ಗಾಂಧೀಜಿಯವರೇ ‘ಮಾಡು ಇಲ್ಲವೇ ಮಡಿ’ ಎಂಬ ಧ್ಯೇಯದಡಿಯಲ್ಲಿ ಶುರು ಮಾಡಿದ ಜನಾಂದೋಲನ ಭಾರತ ಬಿಟ್ಟು ತೊಲಗಿ ಆಂದೋಲನ. ಆದರೆ ಆಂದೋಲನದ ಆರಂಭದಲ್ಲೇ ಗಾಂಧೀಜಿ ಸೇರಿದಂತೆ ಅನೇಕ ನಾಯಕರುಗಳು ಬಂಧನಕ್ಕೆ ಒಳಗಾಗಿ, ಹಲವು ನಾಯಕರು ಅಂತರ್ಗತರಾಗಿ ಕಾರ್ಯನಿರ್ವಹಿಸಬೇಕಾದ ಸನ್ನಿವೇಷ ಎದುರಾದಾಗ, ಬಂಧಿತ ನಾಯಕರ ಸ್ಥಾನ ತುಂಬಿದ ಅರುಣಾ ಅಸಫ್ ಅಲಿಯಂತಹ ನಾಯಕರಿಗೆ ಬೆಂಬಲವಾಗಿ ನಿಂತಿದ್ದು, ಭೂಗತವಾಗಿ ಕೆಲಸ ಮಾಡಲು ನಿರ್ಧರಿಸಿದ ನಾಯಕರಿಗೆ ಆಶ್ರಯ ನೀಡಿದ್ದು ಆರ್‌ಎಸ್‌ಎಸ್ ಸ್ವಯಂಸೇವಕರು.
ಗಾಂಧೀಜಿ, ನೆಹರು, ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ಸ್ವಯಂಸೇವಕರು:
1. ಗಾಂಧೀಜಿ ಅವರು ದಿಲ್ಲಿಯಲ್ಲಿ ವಾಸವಿರುತ್ತಿದ್ದ ಭಂಗಿ ಓಣಿಯಲ್ಲಿನ ವಾಲ್ಮೀಕಿ ಮಂದಿರ ಎದುರೇ ಮುಸ್ಲಿಂ ಲೀಗ್‌ನ ದೊಡ್ಡ ಕೇಂದ್ರವಿತ್ತು. ಪೊಲೀಸರ ರಕ್ಷಣೆಯಲ್ಲಿರಲು ಬಯಸದ ಗಾಂಧೀಜಿಯವರ ಮೇಲೆ ಅಲ್ಲಿಂದ ಯಾವಾಗ ಬೇಕಾದರೂ ಆಕ್ರಮಣವಾಗಬಹುದೆಂದು ಗಾಂಧೀಜಿ ಅವರ ನಿಕಟವರ್ತಿ ಮತ್ತು ನಂತರದ ದಿನಗಳಲ್ಲಿ ಸಂಸತ್ ಸದಸ್ಯರಾದ ಶ್ರೀ ಕೃಷ್ಣನ್ ನಾಯರ್ ಅವರು ದಿಲ್ಲಿಯ ಆಗಿನ ಪ್ರಾಂತ ಪ್ರಚಾರಕರಾಗಿದ್ದ ವಸಂತರಾವ್ ಓಕ್ ಅವರ ಬಳಿ ಗಾಂಧೀಜಿಯ ರಕ್ಷಣೆಯ ಹೊಣೆಯನ್ನು ಸಂಘವು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
2. ಆಗಿನ್ನೂ ಕಾಂಗ್ರೆಸ್ ದೇಶವಿಭಜನೆಯನ್ನು ಒಪ್ಪಿರಲಿಲ್ಲ. 1946ರಲ್ಲಿ ಸಿಂಧ್‌ನಲ್ಲಿ ನಡೆದ ನೆಹರೂ ಅವರ ಸಭೆಯನ್ನು ಮುಸ್ಲಿಂ ಲೀಗ್‌ನವರು ಭಂಗಗೊಳಿಸುವ ಸಾಧ್ಯತೆ ಇತ್ತು. ಇದರಿಂದಾಗಿ ಆಗಿನ ಕಾಂಗ್ರೆಸ್ ಧುರೀಣರಾದ ಡಾ.ಚಿಮನದಾಸ್ ಮತ್ತು ಬಾಬಾ ಕಿಶನ್‌ಚಂದ ಅವರು ಸಿಂಧ್ ಪ್ರಾಂತ್ಯದಲ್ಲಿ ಬಲಿಷ್ಠವಾಗಿದ್ದ ಸಂಘದ ಸಹಾಯವನ್ನು ಕೋರಿದರು.
3. 1946 ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನ ಸಮ್ಮಿಶ್ರ ಸರ್ಕಾರದ ಕೇಂದ್ರೀಯ ಅಸೆಂಬ್ಲಿ ಪಾರಂಭವಾಯಿತು. ಇದರಲ್ಲಿ ಮುಸ್ಲಿಂ ಲೀಗ್‌ನವರು ಕಲ್ಲೆಸೆದು ಕಾಂಗ್ರೆಸ್ ಧುರೀಣರಿಗೆ ಅವಮಾನ ಎಸಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ತಮ್ಮ ಯೋಜನೆ ಸಫಲವಾಗುತ್ತಿದೆ ಎಂದೆನಿಸಿ ಮರುದಿನ ಲೀಗ್‌ನ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಈ ಸಂದರ್ಭದಲ್ಲಿ ದಿಲ್ಲಿ ಕಾಂಗ್ರೆಸ್ ಧುರೀಣ ದೇಶಬಂಧು ಗುಪ್ತಾ ಅವರು ಸಂಘ ಕಾರ್ಯಾಲಯಕ್ಕೆ ತೆರಳಿ ಸಂಘದ ಅಧಿಕಾರಿಗಳಲ್ಲಿ ಸಹಾಯವನ್ನು ಯಾಚಿಸಿದರು.
ಈ ಮೂರೂ ಸಂದರ್ಭಗಳಲ್ಲೂ ಸಂಘ ತಕ್ಷಣ ಭದ್ರತೆಯ ದೃಷ್ಟಿಯಿಂದ ನೆರವಿಗೆ ಧಾವಿಸಿ ಅನೇಕ ಅನಾಹುತಗಳನ್ನು ತಡೆಯಲು ಸಹಕಾರಿಯಾಯಿತು.
ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಸಂಘ 1947ರ ನಂತರವೂ ಹೋರಾಟ: 1947ರಲ್ಲಿ ಸ್ವಾತಂತ್ರ್ಯ ಅಧಿಕೃತವಾಗಿ ನಮ್ಮದಾಗಿಸಿಕೊಂಡ ನಂತರವೂ ಕಾಶ್ಮೀರ, ಹೈದರಬಾದ್, ಜುನಾಗಢ ಪ್ರದೇಶಗಳು ಗೊಂದಲದ ಗೂಡಾಗಿತ್ತು ಹಾಗೂ ಗೋವಾ ಪೋರ್ಚುಗೀಸರ ಪಾಲಾಗಿತ್ತು. 1947ರಲ್ಲಿ ಕಾಶ್ಮೀರದ ವಿಲೀನಕ್ಕಾಗಿ ರಾಜ ಹರಿಸಿಂಹನ ಮನವೊಲಿಸಲು ಸರ್ದಾರ್ ಪಟೇಲರು ಮತ್ತು ನೆಹರು ಅವರಿಗೇ ಸಾಧ್ಯವಾಗದಿದ್ದಾಗ ಅವರು ಮೊರೆ ಹೋಗಿದ್ದು ಆಗಿನ ಸಂಘದ ಸರಸಂಘಚಾಲಕರಾದ ಶ್ರೀ ಗುರೂಜಿ ಅವರ ಬಳಿ. ಹೈದರಾಬಾದಿನ ರಜಾಕರರ ವಿರುದ್ಧ ಸಂಘದ ಸ್ವಯಂಸೇವಕರು ಪ್ರಾಣ ಪಣವಾಗಿಟ್ಟು ಹೋರಾಡಿ ಆ ಪ್ರದೇಶವನ್ನು ತಾಯ್ನಾಡಿನಲ್ಲೇ ಉಳಿಸಿದ ಶ್ರೇಯಸ್ಸು ಅವರಿಗೇ ಸಲ್ಲಬೇಕು. ಪೋರ್ಚುಗೀಸರ ಹಿಡಿತದಲ್ಲಿದ್ದ ಗೋವಾ ವಿನೋಚನೆಗಾಗಿ 1950ರ ದಶಕದಲ್ಲೇ ಅತ್ಯಂತ ಪ್ರಖರ ಆಂದೋಲನಗಳು ಪ್ರಾರಂಭವಾಗಿ ಕೊನೆಗೂ ಗೋವಾ ಭಾರತದ್ದೇ ಭಾಗವಾಗುವಲ್ಲಿನ ತನಕ ನಡೆದ ಸಮರ್ಪಣೆಯ ಇತಿಹಾಸದಲ್ಲಿ ಸಂಘದ ಪಾತ್ರ ಮಹತ್ವದ್ದು.
ಸ್ವಾತಂತ್ರ್ಯ ಸೇನಾನಿಗಳಿಗೆ ಸದಾ ನಂಬಿಕೆಯ ಆಶ್ರಯ ತಾಣ ಸಂಘದ ಮನೆಗಳು: 1932ರ ಜನವರಿಯಲ್ಲಿ ಕ್ರಾಂತಿಕಾರಿ ಸಂಘಟನೆಯಿಂದ ಸರಕಾರಿ ಖಜಾನೆಯನ್ನು ಲೂಟಿ ಮಾಡಲು ನಡೆದ ಬಾಲಾ ಘಾಟ್ ಕಾಂಡದಲ್ಲಿ ವೀರ ಬಾಘಾ ಜತಿನ್ ತಮ್ಮ ಸಂಗಡಿಗರೊಂದಿಗೆ ಹುತಾತ್ಮರಾದರು. ಬಾಲಾಜಿ ಹುದ್ದಾರ್ ಮೊದಲಾದ ಕ್ರಾಂತಿಕಾರಿಗಳನ್ನು ಈ ಘಟನೆಯಲ್ಲಿ ಬಂಧಿಸಲಾಯಿತು. ಬಾಲಾಜಿ ಹುದ್ದಾರ್ ಆಗ ಸಂಘದ ಅಖಿಲ ಭಾರತೀಯ ಸರಕಾರ್ಯವಾಹರಾಗಿದ್ದರು. ಸ್ವಾತಂತ್ರ್ಯ ಸೇನಾನಿಗಳಿಗೆ ಸದಾ ನೆರವಾಗಿದ್ದಿದ್ದಲ್ಲದೇ ತನ್ನ ಕಾರ್ಯದ ಮೂಲಕ ಸಂಘ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಮದನಮೋಹನ ಮಾಳವೀಯ, ಸುಭಾಷ್‌ಚಂದ್ರಬೋಸ್ ಮುಂತಾದ ಸ್ವಾತಂತ್ರ್ಯ ಸೇನಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.