ಮಂಗಳೂರು, ಜನವರಿ 6, 2024: ಖ್ಯಾತ ಹಿರಿಯ ಸಾಹಿತಿ, ಸಂಶೋಧಕ ಪ್ರೊ.ಅಮೃತ ಸೋಮೇಶ್ವರ (88) ಅವರು ವಯೋಸಹಜ ಕಾರಣದಿಂದ ತಮ್ಮ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ. ಇವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ಸಲ್ಲಿಸಿದೆ.
ಆರ್ ಎಸ್ ಎಸ್ ಸಂತಾಪ ಸಂದೇಶ
ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ
ಭಾವಪೂರ್ಣ ಶ್ರದ್ಧಾಂಜಲಿ
ಪ್ರೊ. ಅಮೃತ ಸೋಮೇಶ್ವರ
(27.09.1935 – 06.01.2024)
ಹಿರಿಯ ಜಾನಪದ ತಜ್ಞ, ಕನ್ನಡ ಮತ್ತು ತುಳು ಸಾಹಿತ್ಯಲೋಕದ ಮೇರು ವ್ಯಕ್ತಿತ್ವ, ಯಕ್ಷಗಾನ ಪ್ರಸಂಗಕರ್ತರಾಗಿದ್ದ ಪ್ರೊ. ಅಮೃತ ಸೋಮೇಶ್ವರ ಅವರ ನಿಧನವಾರ್ತೆ ಅತ್ಯಂತ ದುಃಖಕರವಾದುದು.
ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ನಾಟಕ, ಸಂಸ್ಕೃತಿ ಚಿಂತನೆ, ಭೂತಾರಾಧನೆ ಕ್ಷೇತ್ರಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಅಕ್ಷರಲೋಕದ ನಿರಂತರ ಕಾರ್ಯದಲ್ಲಿನ ಅವರ ಶ್ರಮ ಅನನ್ಯವಾದದ್ದು. ಅವರ ಸಾಹಿತ್ಯಕೃಷಿಗೆ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅರ್ಹವಾಗಿಯೇ ಸಂದಿದ್ದವು. ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರಿಗೂ ಆತ್ಮೀಯರಾಗಿದ್ದವರು.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಹತ್ತಿರದ ಒಡನಾಟ ಹೊಂದಿದ್ದ ಪ್ರೊ. ಅಮೃತ ಸೋಮೇಶ್ವರ ಅವರು ರಾಷ್ಟ್ರೋತ್ಥಾನ ಸಾಹಿತ್ಯದ ‘ಭಾರತ – ಭಾರತಿ’ ಪುಸ್ತಕ ಸರಣಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.
ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.
ವಿ. ನಾಗರಾಜ
ಕ್ಷೇತ್ರೀಯ ಸಂಘಚಾಲಕ
ರಾಷ್ಟ್ರೀಯ ಸ್ವಯಂಸೇವಕ ಸಂಘ
06.01.2024
ಪರಿಚಯ: ಪ್ರೊ. ಅಮೃತ ಸೋಮೇಶ್ವರ ಅವರು 27 ಸೆಪ್ಟೆಂಬರ್ 1935ರಂದು ಮಂಗಳೂರಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ ಜನಿಸಿದರು. ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದ ಇವರು ಉನ್ನತ ಶಿಕ್ಷಣವನ್ನು ಖಾಸಗಿಯಾಗಿ ಪೂರೈಸಿದರು. ನಂತರ ಅಧ್ಯಾಪನದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಇವರು ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಅವರು ಕರಾವಳಿಯ ಸಂಸ್ಕೃತಿಯ ಭಾಗವಾದ ಭೂತಾರಾಧನೆ, ಯಕ್ಷಗಾನ ಮತ್ತು ಇನ್ನಿತರ ಜಾನಪದ ಕಲೆಗಳ ಕುರಿತು ನೂರಾರು ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಈ ಕಾರ್ಯದ ಮೂಲಕ ಸಂಸ್ಕೃತಿಯನ್ನು ದಾಖಲಿಸುವ ಮಹತ್ತರದ ಕಾರ್ಯವನ್ನು ಮಾಡಿದ್ದಾರೆ. ಅವರ ಸಾಹಿತ್ಯ ಕೃಷಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ಹಲವು ಪಶಸ್ತಿಗಳು ಲಭಿಸಿವೆ.