
ಹೆಬ್ರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಂಘ ಶಿಕ್ಷಾ ವರ್ಗವು ಹೆಬ್ರಿಯ ಪಿ.ಆರ್.ಎನ್. ಅಮೃತಭಾರತೀ ವಿದ್ಯಾ ಕೇಂದ್ರದ ಆವರಣದಲ್ಲಿ, ಮೇ9 ರಿಂದ ಪ್ರಾರಂಭವಾಗಿ 15 ದಿನಗಳ ಕಾಲ ನಡೆಯಿತು. ಮೇ 24ರಂದು ಸಂಜೆ 5:30ಕ್ಕೆ ಹೆಬ್ರಿಯ ಪಿ.ಆರ್.ಎನ್. ಅಮೃತಭಾರತೀ ವಿದ್ಯಾ ಕೇಂದ್ರದ ಆವರಣದಲ್ಲಿ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭವು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಅವರು ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕ ಡಾ. ಪಿ. ವಾಮನ ಶೆಣೈ, ಶಿಬಿರಾಧಿಕಾರಿ ಡಾ. ನಾರಾಯಣ ಶೆಣೈ, ಪ್ರಾಂತ ಸಹ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಉಪಸ್ಥಿತರಿದ್ದರು. ಸಂಘದ ಅನೇಕ ಹಿರಿಯರು, ಹಿತೈಷಿಗಳು, ಮಾತೆಯರು ಸಾರ್ವಜನಿಕರು ಈ ಸಮಾರಂಭದಲ್ಲಿ ಪಾಲ್ಗೊಂಡರು. ಸಮಾರಂಭದಲ್ಲಿ ಶಿಕ್ಷಾರ್ಥಿಗಳಿಂದ ಘೋಷ್ ಪ್ರದರ್ಶನ, ಸಾಮೂಹಿಕ ಸಮತಾ, ದಂಡ, ನಿಯುದ್ದ, ಯೋಗಾಸನ, ಆಟಗಳ ವಿಷಯಗಳಲ್ಲಿ ತಾವು ವರ್ಗದಲ್ಲಿ ಕಲಿತ ಶಿಕ್ಷಣದ ಪ್ರದರ್ಶನವನ್ನು ಮಾಡಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ವರ್ಗದ ಅಧ್ಯಕ್ಷ ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ನಮ್ಮದು ಅತ್ಯಂತ ಶ್ರೇಷ್ಠ ಸಂಸ್ಕೃತಿ, ಪಾಶ್ಚಾತ್ಯ ಪ್ರಭಾವದಿಂದ ಕೆಲವು ವಿಕೃತಿಗಳು, ದುಶ್ಚಟಗಳು, ಅನಾರೋಗ್ಯ ಬೆಳೆಯುತ್ತಿರುವುದು ಚಿಂತೆಯ ವಿಷಯ. ನಮ್ಮ ಕುಟುಂಬದ ಯೋಗಕ್ಷೇಮ, ಆರೋಗ್ಯಕರ ಆಹಾರ ಪದ್ಧತಿ, ನಿತ್ಯ ಜೀವನದಲ್ಲಿ ಹಿಂದೂ ಸಂಸ್ಕೃತಿಯ ಬದ್ಧತೆಯನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪರಿವರ್ತನೆ ತರಲು ಪ್ರಯತ್ನಿಸಬೇಕು ಎಂದು ನುಡಿದರು.


ಕಾರ್ಯಕ್ರಮದಲ್ಲಿ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯಾದವಕೃಷ್ಣ ಅವರು ತಮ್ಮ ಭಾಷಣದಲ್ಲಿ ಸಂಘ ಕಳೆದ 98 ವರ್ಷಗಳಿಂದ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಬಂದಿದ್ದು, ಸಂಸ್ಕೃತಿಯ ಪುನರುತ್ಥಾನ ಆಗುತ್ತಿರುವುದರಿಂದ ಪ್ರಪಂಚವೇ ಭಾರತದತ್ತ ನೋಡುತ್ತಿದೆ; ಅಧ್ಯಯನ, ವಿಮರ್ಶೆ ಮಾಡಿ ಮೆಚ್ಚುಗೆ ಸೂಚಿಸುತ್ತಿದೆ. ಸ್ವತ್ವದ ಆಧಾರದ ಮೇಲೆ ದೇಶ ಕಟ್ಟುವ ಕೆಲಸ ನಡೆದ ಕಾರಣ ಬಲ, ತೇಜಸ್ಸು, ಶೀಲ, ಜ್ಞಾನ, ಪ್ರಭಾವ ಇವೆಲ್ಲಾ ಪ್ರವರ್ಧಮಾನಕ್ಕೆ ಬರುತ್ತಿರುವುದು ಸಾಧ್ಯವಾಗಿದೆ. ಈಗ ಸಂಘದ ಕೆಲಸಕ್ಕೆ ಪೂರಕ ವಾತಾವರಣ ಇದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಕೌಟುಂಬಿಕ ಮೌಲ್ಯಗಳ ಸಂರಕ್ಷಣೆ, ಪರ್ಯಾವರಣ ಸಂರಕ್ಷಣೆ, ಸಮಾಜದಲ್ಲಿ ಸಾಮರಸ್ಯ, ನಿತ್ಯ ಜೀವನದಲ್ಲಿ ಸ್ವದೇಶೀ ಆಚರಣೆ, ನಾಗರಿಕ ಶಿಷ್ಟಾಚಾರದ ಪರಿಪಾಲನೆ ಇವುಗಳಿಗೆ ಒತ್ತು ಕೊಟ್ಟು ನಾವೆಲ್ಲಾ ಇನ್ನೂ ಹೆಚ್ಚು ಶ್ರಮ ಸಮಯ ಕೊಟ್ಟು ಕೆಲಸ ಮಾಡಿ ಈ ಪೂರಕ ವಾತಾವರಣದ ಸದುಪಯೋಗಪಡಿಸಿಕೊಂಡು ದೇಶದ ಉನ್ನತಿಯ ಗುರಿಯತ್ತ ಸಾಗಬೇಕಾಗಿದೆ ಎಂದು ಕರೆ ನೀಡಿದರು.


ವರ್ಗದ ಶಿಬಿರಾಧಿಕಾರಿ ಡಾ. ನಾರಾಯಣ್ ಶೆಣೈ ಅವರು ವರ್ಗದ ವರದಿಯನ್ನು ಸಲ್ಲಿಸಿದರು. ವರ್ಗದ ಸಹ ಪ್ರಬಂದ ಪ್ರಮುಖ್ ಶ್ರೀ ಸುಧೀರ್ ನಾಯಕ್ ಹೆಬ್ರಿ ಇವರು ಧನ್ಯವಾದ ಸಮರ್ಪಿಸಿದರು. ಶಿಬಿರದ ಬೌದ್ಧಿಕ್ ಪ್ರಮುಖ್ ಶ್ರೀ ಸುರೇಶ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.