
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವು ದೇಶಾದ್ಯಂತ ದಿನದಿಂದ ದಿನಕ್ಕೆ ವೇಗಗೊಳ್ಳುತ್ತಿದೆ. ಪುನರ್ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲೀಗ ಹೊಸ ಉತ್ಸಾಹ ಮನೆ ಮಾಡಿದೆ. ಈ ಕಟ್ಟಡದಂತೆಯೇ ನಮ್ಮ ಕೆಲಸಗಳೂ ದೊಡ್ಡದಾಗಿರಬೇಕು. ಈ ಕೆಲಸಗಳು ಜಗತ್ತಿನಾದ್ಯಂತ ಮುಟ್ಟುತ್ತವೆ ಮತ್ತು ಭಾರತವನ್ನು ಪುನಃ ವಿಶ್ವಗುರು ಸ್ಥಾನಕ್ಕೆ ತಲುಪಿಸಲಿದೆ. ಭಾರತ ವಿಶ್ವಗುರುವಾಗುವುದನ್ನು ನಮ್ಮ ಜೀವನದಲ್ಲಿಯೇ ನೋಡಲಿದ್ದೇವೆ ಎಂದು ನಾವು ನಂಬಿದ್ದೇವೆ. ಈ ಕಾರ್ಯಸಾಧನೆಗಾಗಿ ಪ್ರತಿ ಸ್ವಯಂಸೇವಕನೂ ಸ್ವಾರ್ಥರಹಿತವಾಗಿ ಕೆಲಸ ಮಾಡಬೇಕು ಮತ್ತು ಉದ್ದೇಶಕ್ಕೆ ಬದ್ಧರಾಗಿರಬೇಕು ಎಂದು ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ದೆಹಲಿಯ ಝಂಡೆವಾಲನ್ನಲ್ಲಿ ಫೆಬ್ರವರಿ 19ರಂದು ನಡೆದ ಪುನರ್ನಿರ್ಮಿತ ‘ಕೇಶವ ಕುಂಜ್’ ಕಟ್ಟಡದ ಪ್ರವೇಶೋತ್ಸವದಲ್ಲಿ ಡಾ. ಮೋಹನ್ ಭಾಗವತ್ ಮಾತನಾಡಿದರು.

ಸಂಘದ ಚಟುವಟಿಕೆಗಳು ಬಹುಆಯಾಮಗಳಲ್ಲಿ ವಿಸ್ತರಿಸುತ್ತಿವೆ. ಈ ಕಾರಣದಿಂದ ಪ್ರತಿ ಸ್ವಯಂಸೇವಕನು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಅಗತ್ಯ ಶುದ್ಧತೆ ಮತ್ತು ಸಾಮರ್ಥ್ಯಗಳನ್ನು ಗಳಿಸಿಕೊಳ್ಳಬೇಕು. ಸಂಘದ ಸ್ಥಿತಿಗತಿಗಳು ಈಗ ಬದಲಾಗಿವೆ (ಮೊದಲಿನ ಪರಿಸ್ಥಿತಿಗಳಿಗೆ ಹೋಲಿಸಿದರೆ ಕಷ್ಟಕರವಾಗಿಲ್ಲ). ಆದರೆ ಕಾರ್ಯದ ಉದ್ದೇಶ ಬದಲಾಗಬಾರದು. ಸಮೃದ್ಧಿ ಹೊಂದುವುದು ಒಂದು ಅಗತ್ಯವಾಗಿದೆ. ನಮಗೆ ಬೇಕಾದ್ದನ್ನು ನಾವು ಪಡೆದುಕೊಳ್ಳಬೇಕು. ಆದರೆ, ಮಿತಿಯೊಳಗೆ ಇರಬೇಕೆಂದು ಸ್ಪಷ್ಟಪಡಿಸಿದರು.
ಹಿರಿಯರ ಸ್ಮರಣೆ:
ಇದೇ ಸಂದರ್ಭದಲ್ಲಿ ಡಾ. ಮೋಹನ್ ಭಾಗವತ್ ಅವರು ನಾಗ್ಪುರದ ಮಹಲ್ನಲ್ಲಿ ಆರಂಭವಾದ ಸಂಘದ ಆರಂಭಿಕ ಚಟುವಟಿಕೆಗಳು ಹಾಗೂ ಆರ್ಎಸ್ಎಸ್ ಸಂಸ್ಥಾಪಕ ಮತ್ತು ಆದ್ಯ ಸರಸಂಘಚಾಲಕ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್ ಅವರ ಹೋರಾಟಗಳನ್ನು ನೆನಪಿಸಿಕೊಂಡರು.
ದೆಹಲಿಯು ರಾಷ್ಟ್ರದ ರಾಜಧಾನಿಯಾದ ಕಾರಣ ಹಲವು ಚಟುವಟಿಕೆಗಳ ಕೇಂದ್ರವಾಗಿದೆ ಮತ್ತು ಚಟುವಟಿಕೆಗಳಿಗೆ ದಿಕ್ಕು ತೋರಿಸುವ ಕೇಂದ್ರವಾಗಿ ಸೇವೆ ಸಲ್ಲಿಸುತ್ತದೆ. ಆದ್ದರಿಂದ ಅಗತ್ಯಗಳನ್ನು ಪೂರೈಸುವ ಆಕಾರವನ್ನು ಹೊಂದುವುದು ಅಗತ್ಯವಾಗಿತ್ತು. ಇದೇ ಕಾರಣದಿಂದ ಈ ಕಾರ್ಯಾಲಯವನ್ನು ಆರಂಭಿಸಲಾಗಿದೆ. ಕಟ್ಟಡವು ಸಿದ್ಧವಾಗಿದೆ ಎಂದು ಸಂಘದ ಕೆಲಸಗಳು ಇಲ್ಲಿಯೇ ಅಂತ್ಯಗೊಳ್ಳುವುದಿಲ್ಲ. ಟೀಕೆ ಮತ್ತು ವಿರೋಧಗಳು ನಮ್ಮನ್ನು ಜಾಗೃತಗೊಳಿಸುತ್ತವೆ. ಅಲ್ಲದೇ ಸಕಾರಾತ್ಮಕ ವಾತಾವರಣವಿರುವ ಸ್ಥಳದಲ್ಲಿಯೂ ನಾವು ಜಾಗೃತರಾಗಿರಬೇಕು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.

ಅಲ್ಲದೇ, ಕಾರ್ಯಾಲಯವು ನಮಗೆ ಯಾವಾಗಲೂ ಕೆಲಸ ಮಾಡಲು ಸ್ಫೂರ್ತಿ ನೀಡುತ್ತದೆ. ಆದ್ದರಿಂದ ಕಾರ್ಯಾಲಯದಲ್ಲಿ ಯಾವಾಗಲೂ ಧನಾತ್ಮಕ ವಾತಾವರಣ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸ್ವಯಂಸೇವಕನ ಜವಾಬ್ದಾರಿ ಎಂದು ಡಾ.ಭಾಗವತ್ ತಿಳಿಸಿದರು.
ಗುರೂಜಿ ಮತ್ತು ಛತ್ರಪತಿ ಶಿವಾಜಿ ಜಯಂತಿ:
ಶ್ರೀರಾಮ ಜನ್ಮಭೂಮಿ ನ್ಯಾಸದ ಖಜಾಂಚಿ ಪೂಜ್ಯ ಶ್ರೀ ಗೋವಿಂದದೇವ್ ಮಹಾರಾಜ್ ಅವರು ಆಶೀರ್ವಚನ ನೀಡಿ, ಇಂದು ಶ್ರೀಗುರೂಜಿ ಮತ್ತು ಸಂಘದ ತಾತ್ತ್ವಿಕ ಶಕ್ತಿಯನ್ನು ಪ್ರತಿನಿಧಿಸುವ ಛತ್ರಪತಿ ಶಿವಾಜಿ ಜಯಂತಿಯಾಗಿದ್ದು, ಅತ್ಯಂತ ಪವಿತ್ರ ದಿನ ಎಂದರು. ಕಾಂಚಿ ಕಾಮಕೋಟಿ ಪೀಠದ ಆಗಿನ ಶಂಕರಾಚಾರ್ಯ ಪರಮಾಚಾರ್ಯಜಿ ಒಮ್ಮೆ ಹಿರಿಯ ಪ್ರಚಾರಕರೊಬ್ಬರಿಗೆ ಸಂಘದ ಪ್ರಾರ್ಥನೆಯೇ ಅತಿದೊಡ್ಡ ಮಂತ್ರ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ಮಾವಲರಂತೆ ಸ್ವಯಂಸೇವಕರು:
ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ ‘ಛಾವಾ’ ಚಿತ್ರವನ್ನು ಉಲ್ಲೇಖಿಸಿದ ಪೂಜ್ಯ ಶ್ರೀ ಗೋವಿಂದದೇವ್ ಗಿರಿ, ಛತ್ರಪತಿ ಶಿವಾಜಿ ಎಂದಿಗೂ ದಣಿಯದ, ನಿಲ್ಲದ, ಶರಣಾಗದ ಮತ್ತು ಯಾರಿಂದಲೂ ಖರೀದಿಸಲಾಗದ ಮಾವಲರನ್ನು ಪೋಷಿಸಿದರು ಎಂದು ನೆನಪಿಸಿದರು. ಅಲ್ಲದೇ, ಸಂಘದ ಸ್ವಯಂಸೇವಕರನ್ನು ಛತ್ರಪತಿ ಶಿವಾಜಿಯ ಸೈನಿಕರಾದ ಮಾವಲರಿಗೆ ಹೋಲಿಸಿದರು. ನಾವು ಹಿಂದೂ ಭೂಮಿಯ ಮಕ್ಕಳು ಮತ್ತು ಸಂಘವು ಭಾರತದ ಸಾಂಪ್ರದಾಯಿಕ ಮಾರ್ಗದಲ್ಲೇ ದೇಶದ ಅಭಿವೃದ್ಧಿ ಬಯಸುತ್ತದೆ ಎಂದು ಶ್ಲಾಘಿಸಿದರು.

ಡಾಕ್ಟರ್ಜಿ ಅಚಲ ಸಂಕಲ್ಪ:
ದೆಹಲಿಯ ಉದಾಸೀನ್ ಆಶ್ರಮದ ಪ್ರಧಾನ ಸಂತ ಶ್ರೀ ರಾಘವಾನಂದ್ ಮಹಾರಾಜ್ ಆಶೀರ್ವಚನ ನೀಡಿ, ಡಾಕ್ಟರ್ಜಿ ಅವರ ಅಚಲ ಸಂಕಲ್ಪದಿಂದಾಗಿ ಸಂಘವು 100 ವರ್ಷಗಳನ್ನು ಪೂರೈಸುತ್ತಿದೆ. ಸಂಘವು ಸಮಾಜಕ್ಕಾಗಿ ಸಮರ್ಪಣಾ ಭಾವದಿಂದ ಮತ್ತು ಎಲ್ಲ ವರ್ಗಗಳ ಉನ್ನತಿಗಾಗಿ ಕೆಲಸ ಮಾಡಿದೆ. ಸಂಘದ ಕೆಲಸ ನಿರಂತರವಾಗಿ ಪ್ರಗತಿಯಲ್ಲಿರಲು ಇದೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಶವ ಸ್ಮಾರಕ ಸಮಿತಿ ಅಧ್ಯಕ್ಷ ಅಲೋಕ್ಕುಮಾರ್ ಮಾತನಾಡಿ 2016ರಲ್ಲಿ ಆರಂಭವಾದ ಕೇಶವ ಕುಂಜ್ನ ಪುನರ್ನಿರ್ಮಾಣದ ವಿವಿಧ ಹಂತಗಳನ್ನು ವಿವರಿಸಿದರು. ಸಂಘದ ಈ ಕಾರ್ಯಾಲಯವು 1939ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು ಎಂಬುದು ಗಮನಾರ್ಹ ವಿಷಯ. ಆ ಸಮಯದಲ್ಲಿ, ಝಂದೇವಾಲನ್ನ ಈ ಸ್ಥಳದಲ್ಲಿ ಚಿಕ್ಕ ಕಟ್ಟಡವನ್ನು ನಿರ್ಮಿಸಲಾಯಿತು. 1962 ರಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಯಿತು. 1969 ರಲ್ಲಿ ಕೇಶವ ಸ್ಮಾರಕ ಸಮಿತಿ ರಚಿಸಲಾಯಿತು. 1980ರ ದಶಕದಲ್ಲಿ, ಅಗತ್ಯಗಳಿಗೆ ತಕ್ಕಂತೆ ಕಟ್ಟಡವನ್ನು ಮತ್ತಷ್ಟು ವಿಸ್ತರಿಸಲಾಯಿತು. 2016ರಲ್ಲಿ, ಪೂಜ್ಯ ಸರಸಂಘಚಾಲಕರು ಕೇಶವ ಸ್ಮಾರಕ ಸಮಿತಿ ನಿರ್ಮಿಸಲು ಉದ್ದೇಶಿಸಿದ ಕೇಶವ ಕುಂಜ್ನ ಈ ಮೂರು ಗೋಪುರಗಳ ಕಟ್ಟಡದ ಪುನರ್ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಇಂದು, ಪುನರ್ನಿರ್ಮಾಣಗೊಂಡು ಹೊಸ ರೂಪದಲ್ಲಿ ನಮ್ಮ ಮುಂದೆ ನಿಂತಿದೆ ಎಂದು ವಿವರಿಸಿದರು.

ಮೂರು ಗೋಪುರಗಳು:
ಕೇಶವ ಕುಂಜ್ನಲ್ಲಿ ಮೂಲತಃ ಮೂರು ಗೋಪುರಗಳಿವೆ. 1. ಸಾಧನಾ, 2. ಪ್ರೇರಣಾ, 3. ಅರ್ಚನಾ ಎಂಬ ಹೆಸರು ನೀಡಲಾಗಿದೆ. ಇಲ್ಲಿ ಅಶೋಕ್ ಸಿಂಘಾಲ್ ಸಭಾಂಗಣವಿದೆ. ಇದು ಅತ್ಯಾಧುನಿಕವಾಗಿದೆ ಮತ್ತು ಸಮಕಾಲೀನ ಅಗತ್ಯಗಳನ್ನು ಪೂರೈಸಲು ಬೇಕಾಗಿರುವಂತೆ ಸುಸಜ್ಜಿತವಾಗಿದೆ. ಇಲ್ಲಿ ಕೇಶವ ಗ್ರಂಥಾಲಯವೂ ಇದೆ. ಹೊರರೋಗಿ ಚಿಕಿತ್ಸಾಲಯ, ಸುರುಚಿ ಪ್ರಕಾಶನ ಸೇರಿದಂತೆ ಇನ್ನಷ್ಟು ಸೌಲಭ್ಯಗಳಿವೆ. ವಿದ್ಯುತ್ ಅಗತ್ಯಗಳಿಗಾಗಿ ಕೇಶವ ಕುಂಜ್ನಲ್ಲಿ 150 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಸ್ಥಾವರವಿದೆ. ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಗಾಗಿ 140 ಕೆಎಲ್ಡಿ ಸಾಮರ್ಥ್ಯದ ಎಸ್ಟಿಪಿ (ಕೊಳಚೆನೀರಿನ ಸಂಸ್ಕರಣಾ ಘಟಕ) ಸ್ಥಾಪಿಸಲಾಗಿದೆ. ಕಾರ್ಯಾಲಯದಲ್ಲಿ ಸುಂದರವಾದ, ಭಕ್ತಿ ಹೆಚ್ಚಿಸುವ ಹನುಮಾನ್ ಮಂದಿರವಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಟ್ಟಡದ ನಿರ್ಮಾಣಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಉತ್ತರ ಕ್ಷೇತ್ರೀಯ ಸಂಘಚಾಲಕ ಪವನ್ ಜಿಂದಾಲ್ ಮತ್ತು ದೆಹಲಿ ಪ್ರಾಂತ ಸಂಘಚಾಲಕ ಡಾ. ಅನಿಲ್ ಅಗರ್ವಾಲ್ ಉಪಸ್ಥಿತರಿದ್ದರು.

ಸಚಿವರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಆರ್ಎಸ್ಎಸ್ ಸಹಸರಕಾರ್ಯವಾಹ ಡಾ. ಕೃಷ್ಣ ಗೋಪಾಲ್, ಅರುಣ್ ಕುಮಾರ್, ಹಿರಿಯ ಪ್ರಚಾರಕ ಸುರೇಶ್ ಸೋನಿ, ಸಂಪರ್ಕ ಪ್ರಮುಖ್ ರಾಮಲಾಲ್, ಸಹ-ಪ್ರಚಾರ ಪ್ರಮುಖ ನರೇಂದ್ರ ಠಾಕೂರ್, ಇಂದ್ರೇಶ್ ಕುಮಾರ್, ಪ್ರೇಮ್ಜಿ ಗೋಯಲ್, ರಾಮೇಶ್ವರ್ ಮತ್ತು ಹಲವು ಹಿರಿಯ ಕಾರ್ಯಕರ್ತರು, ಸ್ವಯಂಸೇವಕರು ಪಾಲ್ಗೊಂಡಿದ್ದರು.