ಬೆಂಗಳೂರು, ಜ.17, 2025: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಹಿನ್ನೆಲೆಯಲ್ಲಿ ಮಂಡಲಗಳಲ್ಲಿ ಗಣವೇಷದಲ್ಲಿ ವಿಜಯದಶಮಿ ಉತ್ಸವಗಳು, ತಾಲೂಕು ಮಟ್ಟದಲ್ಲಿ ಯುವ ಸಮಾವೇಶಗಳು, ಮನೆಮನೆ ಸಂಪರ್ಕ ಅಭಿಯಾನ, ವಸತಿ/ಮಂಡಲಗಳಲ್ಲಿ ಹಿಂದುಸಮ್ಮೇಳನ, ತಾಲೂಕು ಮಟ್ಟದಲ್ಲಿ ಸಾಮಾಜಿಕ ಸದ್ಭಾವನಾ ಸಮಾವೇಶಗಳು, ಜಿಲ್ಲಾ ಕೇಂದುಗಳಲ್ಲಿ ಪ್ರಮುಖ ನಾಗರಿಕ ಗೋಷ್ಠಿಯ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಪೈಕಿ ಈಗಾಗಲೇ ವಿಜಯದಶಮಿ ಉತ್ಸವಗಳು, ಯುವ ಸಮಾವೇಶಗಳು, ಮನೆ ಮನೆ ಸಂಪರ್ಕ ಅಭಿಯಾನಗಳು ಅತ್ಯಂತ ಯಶಸ್ವಿಯಾಗಿ ನಡೆದಿದೆ.

ಜನವರಿ 18ರಿಂದ ಫೆಬ್ರವರಿ 1, 2026ರ ತನಕ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದ ಮಂಡಲಗಳಲ್ಲಿ ಹಾಗೂ ನಗರ ಪ್ರದೇಶದ ವಸತಿ (ವಾರ್ಡ್ ಮಟ್ಟ)ಗಳಲ್ಲಿ ಹಿಂದು ಸಮಾಜೋತ್ಸವ ಅಥವಾ ಹಿಂದು ಸಮ್ಮೇಳನ ಕಾರ್‍ಯಕ್ರಮಗಳು ನಡೆಯಲಿವೆ. ಸುಮಾರು ೩೦೦೦ಕ್ಕೂ ಹೆಚ್ಚು ಕಡೆಗಳಲ್ಲಿ ಹಿಂದು ಸಮಾಜೋತ್ಸವ ಅಥವಾ ಹಿಂದು ಸಮ್ಮೇಳನ ಕಾರ್‍ಯಕ್ರಮಗಳು ನಡೆಯಲಿದ್ದು, ಲಕ್ಷಾಂತರ ಮಂದಿ ಸಾರ್ವಜನಿಕರು-ನಾಗರಿಕರು ಭಾಗವಹಿಸಲಿದ್ದಾರೆ. ಕರ್ನಾಟಕ ಉತ್ತರ ಪ್ರಾಂತದಲ್ಲಿ ಫೆಬ್ರವರಿ ೨೮ರ ತನಕ ಹಿಂದು ಸಮ್ಮೇಳನಗಳು ಮುಂದುವರೆಯಲಿವೆ.
ಹಿಂದು ಸಮಾಜೋತ್ಸವ ಅಥವಾ ಹಿಂದು ಸಮ್ಮೇಳನಗಳನ್ನು ತಾಲೂಕು ಮಟ್ಟದ ಸ್ಥಾನೀಯ ಸಮಿತಿ ಆಯೋಜನೆ ಮಾಡಲಿದೆ. ಸಮಾಜದ ಗಣ್ಯರು, ಮುಖಂಡರು, ವಿವಿಧ ಸಾಮಾಜಿಕ ಹಿನ್ನೆಲೆಯ ಪ್ರಮುಖರು ಈ ಸಮಿತಿಯ ಪದಾಧಿಕಾರಿಗಳಾಗಿ ಹಿಂದು ಸಮ್ಮೇಳನವನ್ನು ಆಯೋಜಿಸಲಿದ್ದಾರೆ. ಪಂಚಪರಿವರ್ತನೆಯ ವಿಷಯಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸ್ವದೇಶೀ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಗೋಪೂಜೆ, ಶೋಭಾಯಾತ್ರೆ, ಬೈಕ್‌ರ್‍ಯಾಲಿ, ಸ್ವದೇಶೀ ಉತ್ಪನ್ನಗಳ ಪ್ರದರ್ಶನ-ಮಾರಾಟ, ಸಾಂಸ್ಕೃತಿಕ-ದೇಶಭಕ್ತಿಯ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಿಂದು ಸಮಾಜೋತ್ಸವದ ಕಾರ್‍ಯಕ್ರಮದಲ್ಲಿ ಸಂತ-ಸ್ವಾಮೀಜಿಗಳು, ಸಾಮಾಜಿಕ ಮುಖಂಡರು, ಮಾತೃಶಕ್ತಿ, ವಿಷಯ ತಜ್ಞರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಧರ್ಮ, ಸಂಸ್ಕೃತಿ, ಸಮಾಜ, ರಾಷ್ಟ್ರ – ಮುಂತಾದ ವಿಷಯಗಳ ಕುರಿತು ಹಾಗೂ ನಮ್ಮ ದೇವಾಲಯಗಳು ಸಮಾಜ ಜಾಗೃತಿಯ ಕೇಂದುಗಳಾಗಬೇಕು ಎನ್ನುವ ಆಶಯದ ಕುರಿತು ಜಾಗೃತಿ ಮೂಡಿಸುವುದು ಹಿಂದು ಸಮಾಜೋತ್ಸವದ ಪ್ರಮುಖ ಉದ್ದೇಶವಾಗಿರಲಿದೆ.

ಕರ್ನಾಟಕ ಉತ್ತರ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಸೇರಿದಂತೆ ರಾಜ್ಯದ ಒಟ್ಟು 3000ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಸಂಸ್ಥೆ-ಸಂಘಟನೆಗಳ ಸಹಭಾಗಿತ್ವದೊಂದಿಗೆ ಸ್ಥಾನೀಯ ಹಿಂದು ಸಮಾಜೋತ್ಸವ ಸಮಿತಿಯ ಮೂಲಕ ಹಿಂದು ಸಮಾಜೋತ್ಸವ ಕಾರ್‍ಯಕ್ರಮಗಳು ಆಯೋಜನೆಗೊಳ್ಳಲಿವೆ.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ನಾ. ತಿಪ್ಪೇಸ್ವಾಮಿ, ಹಿಂದು ಸಮಾಜೋತ್ಸವ ಸಮಿತಿ ಜಯನಗರದ ಅಧ್ಯಕ್ಷೆ ಸಾಧನಾ ರಾಜಶೇಖರ್, ಹಿಂದು ಸಮಾಜೋತ್ಸವ ಸಮಿತಿ ಕೆಂಗೇರಿಯ ಅಧ್ಯಕ್ಷ ಎಂ. ಮುನಿಆಂಜನಪ್ಪ, ಹಿಂದು ಸಮಾಜೋತ್ಸವ ಸಮಿತಿ ಹನುಮಂತನಗರದ ಎ. ರಾಜೇಂದ್ರ ನಾಯ್ಡು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.