
ಶಿವಮೊಗ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತದ ಈ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ಪೇಸಿಟ್ ಕಾಲೇಜಿನ ಆವರಣದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಗ್ರಾಮವಿಕಾಸದ ಅಖಿಲ ಭಾರತೀಯ ಸಂಯೋಜಕ ಗುರುರಾಜ್ ಅವರು ಸಂಘದ ಕಾರ್ಯದಲ್ಲಿ ಕಾರ್ಯಕರ್ತ ನಿರ್ಮಾಣ ವಿಶೇಷವಾದದ್ದು. ಸಮಾಜದ ಸಂಘಟನೆಯಾಗಲು ಕಾರ್ಯಕರ್ತರು ಬೇಕು. ಅಂತಹ ಕಾರ್ಯಕರ್ತರನ್ನು ನಿರ್ಮಾಣ ಮಾಡಲು ಇಂತಹ ಶಿಬಿರಗಳನ್ನು ಸಂಘ ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ ಎಂದು ನುಡಿದರು.


ಸಂಘದ ಶಾಖೆ ಕೇವಲ ಕ್ರೀಡಾ ಕೇಂದ್ರಿತ, ಕವಾಯತು ನಡೆಸುವ ಜಾಗ ಅಲ್ಲ. ಸಮಾಜದ ಸಜ್ಜನ ಶಕ್ತಿ ಏನನ್ನೂ ಅಪೇಕ್ಷೆ ಪಡದೆ ಸಮಾಜದ ಕಾರ್ಯಮಾಡುವ, ಯಾವುದೇ ವಿಪತ್ತುಗಳಿಗೆ ತ್ವರಿತವಾಗಿ ಧಾವಿಸುವ ಆಶಾಕಿರಣ, ದುಷ್ಟ ವಿರೋಧಿ ಶಕ್ತಿಗಳಿಗೆ ಅಂಕುಶ ಹಾಕುವ ಶಕ್ತಿ ಕೇಂದ್ರವೂ ಹೌದು ಎಂದರು.
ಇಂದು ಸಮಾಜದಲ್ಲಿ ಮರೆಯುತ್ತಿರುವ ಕುಟುಂಬ ಮೌಲ್ಯಗಳು, ಪರಿಸರದ ಬಗ್ಗೆ ಕಾಳಜಿ ಇಲ್ಲದಿರುವುದು, ಜಾತೀಯತೆಯ ವಿಷ ಭಾವನೆ ಸಮಾಜಕ್ಕೆ ಮಾರಕವಾಗಿದೆ. ಕುಟುಂಬ ಮೌಲ್ಯಗಳ ಸಬಲೀಕರಣ, ಪರಿಸರದ ಬಗ್ಗೆ ಕಾಳಜಿ ಹೆಚ್ಚಿಸುವುದು, ಸಾಮರಸ್ಯದ ವಾತಾವರಣ ನಿರ್ಮಾಣ ಮಾಡುವುದು ಸಮಾಜದ ಎಲ್ಲಾ ಬಂಧುಗಳ ಸಹಕಾರದಿಂದ ಸಾಧ್ಯವೆಂದು ಹೇಳಿದರು.
ಅಷ್ಟೆ ಅಲ್ಲದೆ, ಪ್ರಾದೇಶಿಕತೆ, ದಲಿತ ಪ್ರಗತ ಎಂಬ ನಾನಾ ಹೆಸರಿನಲ್ಲಿ ಭ್ರಮೆಯನ್ನು ಉಂಟುಮಾಡುವ ಜನರ ಮುಖವಾಡ ಕಳಚುವ ಸಂದರ್ಭ ಬಂದಿದೆ. ಕಾಶ್ಮೀರದಲ್ಲಿ ನಡೆದ ನರಮೇಧವು ಕೇವಲ 20 ನಿಮಿಷದ ಭೀಭತ್ಸ ಕಾರ್ಯ ಆಗಿರಬಹುದು, ಆದರೆ ಅದರ ಪೂರ್ವ ತಯಾರಿ ಬಹಳ ದೊಡ್ಡದಿದೆ. ಅಂತಹ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರಾಗಿ ಆ ಸಂದರ್ಭದಲ್ಲಿ ನಾವೇಗೆ ಸಿದ್ಧರಾಗಬೇಕು, ಕೇವಲ ಸರ್ಕಾರ ಮತ್ತು ಪೊಲೀಸ್, ಮಿಲಿಟರಿ ಆ ಜಾಗಕ್ಕೆ ತಲುಪುವುದರೊಳಗಾಗಿ ನಾವು ಕಾರ್ಯಪ್ರವೃತ್ತರಾಗಬೇಕು. ನಾವು ಹಗಲು ರಾತ್ರಿ, 360 ಡಿಗ್ರಿ ಜಾಗೃತ ಆಗಬೇಕಿದೆ ಎಂದರು.


100 ವರ್ಷದ ಹಿಂದೆ ಕೇಶವ ನೆಟ್ಟಿದ ಸಸಿ ಹೆಮ್ಮರವಾಗಿದೆ.
ಸಂಘ ಯೋಚನೆ ಮಾಡುವುದು. ಹಿಂದೂ ಸಮಾಜ ದೋಷ ದೌರ್ಬಲ್ಯ ಗಳಿಂದ ಮುಕ್ತ, ಸದ್ಗುಣಗಳನ್ನು ತುಂಬಿಕೊಳ್ಳಬೇಕು. ಜಗತ್ತಿನ ದುಷ್ಟ ಶಕ್ತಿ ನಿರ್ನಾಮ ಮಾಡಲು ಹಿಂದೂ ಸಮಾಜ ಜಾಗೃತ ಆಗಬೇಕು. ಸಂಘದ ಮಹದಾಸೆ ಇದೆ. ಅದಕ್ಕೆ ಸಮಯ ಸಮರ್ಪಣೆ ಬೇಕು. ಇದುವರೆಗೆ ಅಂತಹ ಹಾದಿ ಕ್ರಮಿಸಿಯೇ ಸಂಘ ಇಲ್ಲಿಯವರೆಗೆ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಕೀರ್ತಿಗೆ ಆಸೆ ಪಡದೆ ಕೆಲಸ ಮಾಡುವ ಕಾರ್ಯಕರ್ತರ ಪಡೆ ನಿರ್ಮಾಣ ಆಗಬೇಕಿದೆ. ನಮ್ಮ ಜೀವಮಾನದಲ್ಲಿ ಸಂಘದ ಶತಾಬ್ದಿ ವರ್ಷ ಬರುತ್ತಿದೆ. ಹೇಗೆ ಕುಂಭಮೇಳ ನಮ್ಮ ಜೀವನದಲ್ಲಿ ಬಂದ ಯೋಗಾಯೋಗನೋ, ಸಂಘ ಶತಾಬ್ದಿ ವರ್ಷ ಸಹ ನಮ್ಮ ಯೋಗಾ ಯೋಗ. ಈ ವರ್ಷ ನಮ್ಮ ಸಕ್ರಿಯ ವರ್ಷವಾಗಬೇಕು , ಪ್ರತಿಯೊಬ್ಬರೂ ನಾವೇಗೆ ಸಮಯ ಕೊಡಬಹುದು ಎಂದು ಯೋಚಿಸೋಣ. ಸಂಘದ ಕಾರ್ಯಕರ್ತರಿಂದ ಮಾತ್ರವಲ್ಲದೆ, ಸಜ್ಜನ ಶಕ್ತಿಗಳು ನಿಸ್ವಾರ್ಥ ಭಾವದಿಂದ ಕೆಲಸ ಮಾಡುತ್ತಿದ್ದು ಅವರೆಲ್ಲರನ್ನೂ ಜೋಡಿಸಿಕೊಂಡು ಸಮಾಜದ ಕೆಲಸ ಮಾಡಲು ಸಂಘ ಹೊರಟಿದೆ.


ಮುಖ್ಯ ಅತಿಥಿಯಾಗಿದ್ದ ಡಾ. ನರೇಂದ್ರ ನಿಶಾನಿಮಠ ರವರು ಮಾತನಾಡುತ್ತಾ ಸಂಘ ನಿಸ್ವಾರ್ಥವಾಗಿ ಈ ದೇಶದಲ್ಲಿ ವಿಪತ್ತು ಬಂದಾಗಲೆಲ್ಲ ಸೇವೆ ಮಾಡಿದೆ. ಕೇವಲ ಹಿಂದೂ ಸಂಘಟನೆ ಮಾಡುವ ಸಂಘ ಎಂದು ನಾನು ಭಾವಿಸಿದ್ದೆ, ಆದರೆ ದೇಶದಲ್ಲಿ ಆಪತ್ತು ಬಂದಾಗ, ಕೇವಲ ಮುಸ್ಲಿಮರು ಇರುವ ರಾಜ್ಯಗಳಲ್ಲಿ ಬೇಧವೆಣಿಸದೆ ಈ ದೇಶದಲ್ಲಿ ಇರುವವರೆಲ್ಲರೂ ಹಿಂದೂಗಳೇ ಎಂದು ಭಾವಿಸಿ ಸೇವೆ ಮಾಡಿದೆ. ಇಂತಹ ಕಾರ್ಯಕ್ರಮಕ್ಕೆ ಭಾಗವಹಿಸಿರುವುದಕ್ಕೆ ಸಂತೋಷವಾಯಿತು ಎಂಬ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಗೋವಿಂದರಾಜ್, ಪ್ರಾಂತ ಸಂಘಚಾಲಕ ಜಿ ಎಸ್ ಉಮಾಪತಿ ಅವರು ಉಪಸ್ಥಿತರಿದ್ದರು.