ಧಾರವಾಡ, ಫೆ.1, 2026: ನಮ್ಮೆಲ್ಲರ ಹೊಣೆಗಾರಿಕೆ ನಮ್ಮ ದೇಶದ ಶಿಕ್ಷಣ ಬೇರೆ ಯಾವುದೇ ದೇಶ ಸರಿಗಟ್ಟಬಲ್ಲ ಶಿಕ್ಷಣ ನಿರ್ಮಾಣ ಮಾಡುವುದು ಹೇಗೆ? ಎಂದು ಚಿಂತಿಸುವುದಾಗಿದೆ. ಇಂದು ಭಾರತೀಯರು ಗುಣಾತ್ಮಕ ಶಿಕ್ಷಣ ನಿರ್ಮಾಣ ಮಾಡುವತ್ತ ಸಾಗಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ನಗರದ ಶ್ರೀ ವೀರೇಂದ್ರ ಹೆಗಡೆ ಕಲಾಕ್ಷೇತ್ರ ಸತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಉತ್ತರ ವತಿಯಿಂದ ಸಂಘ ಶತಾಬ್ಧಿ ಹಿನ್ನೆಲೆ ರವಿವಾರ ಫೆಬ್ರವರಿ 1, 2026 ಆಯೋಜಿಸಿದ್ದ ‘ಸಂಘ 100, ಪ್ರಾಧ್ಯಾಪಕರ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಭಾರತ ಆರ್ಥಿಕ, ಆಹಾರ ರಂಗಗಳಲ್ಲಿ ಅಷ್ಟೇ ಅಲ್ಲದೇ ಶಿಕ್ಷಣ ಮತ್ತು ಜ್ಞಾನದ ರಂಗದಲ್ಲಿ ಸ್ವಾವಲಂಬಿಯಾಗಬೇಕು. ಭಾರತದ ಶಿಕ್ಷಿತ ಜನರು ಚರಿತ್ರಯುತರಾಗಬೇಕು. ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರುತ್ತಿರುವವರು ಶಿಕ್ಷಿತರೇ! ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರು ಭ್ರಷ್ಟಾಚಾರಿಗಳಾಗಿ ಸಮಾಜ ಕೊಳ್ಳೆಹೊಡೆಯುತ್ತಿದ್ದಾರೆ ಎಂದಾದರೆ, ದೇಶಕ್ಕೆ ದ್ರೋಹ ಮಾಡುತ್ತಾರೆ ಎನ್ನುವುದಾದರೆ ನಾವು ಎಲ್ಲಿ ತಪ್ಪಿದ್ದೀವಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಗುಣಾತ್ಮಕತೆ ಮತ್ತು ಚಾರಿತ್ರ್ಯ ನಿರ್ಮಾಣವಾದಾಗ ಮಾತ್ರ ಜನರು ಅದನ್ನು ಒಪ್ಪಿಕೊಳ್ಳುತ್ತಾರೆ. ನಮ್ಮ ಬಗ್ಗೆ ಸಂಸ್ಕೃತಿ ಅರಿವಿನಲ್ಲಿ ನಾವು ಅರಿತುಕೊಳ್ಳಬೇಕು, ಜೊತೆಗೆ ಆತ್ಮಗೌರವ ಪಡೆಯುವುದರ ಬಗ್ಗೆ ಹಿಂದೇಟು ಹಾಕಬಾರದು ಎಂದರು.

ಭಾರತದ ಕಲ್ಪನೆ, ಇಲ್ಲಿನ ಅರಿವಿನ ಬಗ್ಗೆ ತಿಳಿಸುವ ಕಾರ್ಯ ಆಗಬೇಕಿದೆ. ಆಧುನಿಕ ಸಮಾಜದ ಸಂಸ್ಕೃತಿಯಲ್ಲಿ ಎಲ್ಲಿ ಕೊರತೆ ಇದೆ ಎಂಬುದನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ. ಡಾ. ರಾಧಾಕೃಷ್ಣನ್ ಅವರ ಉನ್ನತ ಶಿಕ್ಷಣದ ಸಮಿತಿಯ ಗುಣಾತ್ಮಕತೆ ಬಗ್ಗೆ ತಿಳಿಸಿರುವುದನ್ನು ಒಂದು ಬಾರಿ ಮೆಲಕು ಹಾಕಬೇಕಿದೆ ಎಂದು ಪ್ರಾಧ್ಯಾಪಕರನ್ನು ಎಚ್ಚರಿಸಿದರು.

ಭಾರತ ಯಾವಾಗಲೂ ಲೋಕ ಕಲ್ಯಾಣವನ್ನು ಬಯಸುತ್ತದೆ. ಭಾರತ ಬೆಳೆಯಬೇಕು, ಜಗತ್ತಿಗೆ ಒಂದು ದೀಪಸ್ತಂಭ ಆಗಬೇಕು. ಜಗತ್ತಿಗೆ ಬದುಕುವಂತಹ ಉದ್ದೇಶ ಏನು ಎಂಬುದನ್ನು ಕಲಿಸುವುದಕ್ಕಾಗಿ ಈ ದೇಶ ಏಳಬೇಕು ಮತ್ತು ಬೆಳೆಯಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಡಾ.ಪಿ ವಾಮನ್ ಶೆಣೈ, ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಸುಧೀರ್ ಸೇರಿದಂತೆ ವಿಶ್ವವಿದ್ಯಾಲಯ, ಸಂಲಗ್ನಿತ ಪದವಿ ಮಹಾವಿದ್ಯಾಲಯಗಳು, ವೈದ್ಯಕೀಯ, ತಾಂತ್ರಿಕ, ಕಾನೂನು, ಶಿಕ್ಷಣ ಮತ್ತು ಸಾಮಾನ್ಯ ಪದವಿ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧನಾ ಸಹಾಯಕರು, ಅತಿಥಿ ಉಪನ್ಯಾಸಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.