ಬೆಂಗಳೂರು: ಆರ್‌ಎಸ್‌ಎಸ್‌ ನೂರನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ನವೆಂಬರ್ 8 ಹಾಗೂ 9 ರಂದು ಆಯೋಜಿಸಲಾಗಿದ್ದ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಎಂಬ ಶೀರ್ಷಿಕೆಯ ಎರಡು ದಿನದ ಉಪನ್ಯಾಸ ಮಾಲೆಯ ಎರಡನೇ ದಿನ ಭಾಗವಹಿಸಿದ್ದ ಗಣ್ಯರು, ಚಿಂತಕರು ಕೇಳಿದ ಪ್ರಶ್ನೆಗಳಿಗೆ ಆರೆಸ್ಸೆಸ್ ಸರಸಂಘಚಾಲಕ ಡಾ|| ಮೋಹನ್ ಭಾಗವತ್ ಉತ್ತರಿಸಿದರು.


ಸಂಘವನ್ನು ಏಕೆ ನೋಂದಣಿ ಮಾಡಿಸುತ್ತಿಲ್ಲ ಎಂದು ಕರ್ನಾಟಕ ಸೇರಿ ಅನೇಕ ಕಡೆಗಳಲ್ಲಿ ಕೇಳಲಾಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಡಾ||ಮೋಹನ್‌ ಭಾಗವತ್‌ ಅವರು, ಸಂಘ ಆರಂಭವಾಗಿದ್ದು 1925ರಲ್ಲಿ. ಸಂಘವನ್ನು ಆರಂಭಿಸಿದ ಡಾ. ಹೆಡಗೆವಾರರು ಬ್ರಿಟಿಷರ ವಿರುದ್ಧವೇ ಹೋರಾಡಿದವರು. ಹಾಗಾದರೆ ನಾವು ಬ್ರಿಟಿಷ್‌ ಸರ್ಕಾರದಲ್ಲಿ ನೋಂದಣಿ ಆಗಬೇಕಿತ್ತೇ? ಸ್ವಾತಂತ್ರ್ಯದ ನಂತರ ಸರ್ಕಾರವು ಸಂಘವನ್ನು ‘ವ್ಯಕ್ತಿಗಳ ಸಂಘಟನೆ’ ಎಂದು ಗುರುತಿಸಿದೆ, ಆದಾಯ ತೆರಿಗೆ ಇಲಾಖೆಯು ಗುರುದಕ್ಷಿಣೆ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದೆ. ಮೂರು ಬಾರಿ ಸರ್ಕಾರವು ಸಂಘವನ್ನು ನಿಷೇಧಿಸಿದೆ ಎಂದರೆ ಅದೂ ಗುರುತಿಸಿದೆ ಎಂದಲ್ಲವೇ? ಸಂಘವು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ, ಸಂವಿಧಾನಬದ್ಧವಾಗಿದೆ. ಹಾಗೆ ನೋಡಿದರೆ ಹಿಂದೂ ಧರ್ಮವೂ ನೋಂದಣಿ ಆಗಿಲ್ಲ ಅಲ್ಲವೇ? ಎಂದರು.
ಆರ್‌ಎಸ್‌ಎಸ್‌ನಲ್ಲಿ ಮುಸ್ಲಿಮರು ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್‌ ಅವರು, ಸಂಘದಲ್ಲಿ ಬ್ರಾಹ್ಮಣ, ಶೈವ, ಶಾಕ್ತ, ಯಾವುದೇ ಜಾತಿ, ಮುಸ್ಲಿಂ, ಕ್ರೈಸ್ತರಿಗೆ ಪ್ರವೇಶವಿಲ್ಲ. ಕೇವಲ ಹಿಂದೂಗಳಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ ತಮ್ಮ ಪ್ರತ್ಯೇಕತೆಯನ್ನು ಹೊರಗಿಟ್ಟು ಮುಸ್ಲಿಂ, ಕ್ರೈಸ್ತರೂ ಸಂಘಕ್ಕೆ ಆಗಮಿಸಬಹುದು. ಸಂಘದ ಶಾಖೆಗೆ ಆಗಮಿಸುವಾಗ ನಿಮ್ಮ ವಿಶೇಷತೆಯನ್ನು ತರಬಹುದು, ಆದರೆ ಪ್ರತ್ಯೇಕತೆಯನ್ನಲ್ಲ. ಭಾರತ ಮಾತೆಯ ಪುತ್ರರಾಗಿ, ಭಾರತೀಯ ಸಮಾಜದ ಸದಸ್ಯನಾಗಿ ಶಾಖೆಗೆ ಆಗಮಿಸಬಹುದು. ಈ ರೀತಿಯಲ್ಲಿ ಅನೇಕರು ಈಗಾಗಲೆ ಆಗಮಿಸುತ್ತಿದ್ದಾರೆ. ಆದರೆ ಪ್ರತ್ಯೇಕವಾಗಿ ಅಂಥವರ ಲೆಕ್ಕವನ್ನು ಇಡುವುದಿಲ್ಲ ಎಂದರು.

ಸಂಘವು ಭಗವಾಧ್ವಜವನ್ನೇಗೆ ಆರಿಸಿಕೊಂಡಿದೆ? ತ್ರಿವರ್ಣ ಧ್ವಜವೇಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಸಂಘ ಆರಂಭವಾಗಿದ್ದು 1925ರಲ್ಲಿ. ಸಂಘಟನೆ ಸ್ವಾವಲಂಬಿಯಾಗಲು ಆರ್ಥಿಕ ಸ್ವಾವಲಂಬನೆ ಮುಖ್ಯ. ಸ್ವಯಂಸೇವಕರು ಗುರುದಕ್ಷಿಣೆ ಅರ್ಪಿಸಲು ಮೊದಲಿಗೆ ಗುರು ಬೇಕಾಗಿತ್ತು. ವ್ಯಕ್ತಿಯ ಬದಲಿಗೆ ಮೌಲ್ಯವಾದ ಭಗವಾಧ್ವಜವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತ್ರಿವರ್ಣ ಧ್ವಜಕ್ಕೆ ಸಂಘವು ಎಂದಿಗೂ ಗೌರವ ನೀಡಿದೆ. 1933ರಲ್ಲಿ ಜವಾಹರಲಾಲ್‌ ನೆಹರೂ ಅವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲೇ ಧ್ವಜಸ್ಥಂಭಕ್ಕೆ ಧ್ವಜವು ಸಿಕ್ಕಿಕೊಂಡಾಗ ಅದನ್ನು ಬಿಡಿಸಿದ್ದು ಸಂಘದ ಸ್ವಯಂಸೇವಕ ಕಿಶನ್‌ ಸಿಂಗ್‌ ರಾಜಪೂತ್‌. ಆಗಸ್ಟ್‌ 15 ಹಾಗೂ ಜನವರಿ 26ರಂದು ದೇಶದ ಎಲ್ಲ ಸಂಘ ಕಾರ್ಯಾಲಯಗಳ ಮೇಲೆ ತ್ರಿವರ್ಣ ಧ್ವಜ ಹಾರುತ್ತದೆ. ನಮ್ಮಲ್ಲಿ ಭಗವಾ ವರ್ಸಸ್‌ ತಿರಂಗಾ ಎಂಬ ಭಾವನೆಯಿಲ್ಲ ಎಂದರು.


ಮಹಿಳೆಯರ ಒಳಗೊಳ್ಳುವಿಕೆ
ಸಂಘದಲ್ಲಿ ಮಹಿಳೆಯರನ್ನು ಒಳಗೊಳ್ಳಲು ಯಾವ ಹೆಜ್ಜೆ ಇರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ ಭಾಗವತ್‌ ಅವರು, ಸಂಘವು ಯುವಕರ ನಡುವೆ ಕಾರ್ಯ ಮಾಡುವ ಸಂಘಟನೆ. ಇದರೊಂದಿಗೆ ಯುವತಿಯರನ್ನೂ ಒಳಗೊಂಡರೆ ಗಾಳಿಸುದ್ದಿಗೆ ಅವಕಾಶ ನೀಡುತ್ತಿತ್ತು. ಯುವ ಸಂಘಟನೆ ಹಾಗೆ ಮಾಡುವುದು ಹಾನಿ ಮಾಡುತ್ತದೆ ಎಂಬ ಕಾರಣಕ್ಕೆ ಯುವಕರಿಗೆ ಶಾಖೆ ಆರಂಭಿಸಲಾಯಿತು. ಆದರೆ ತಾವೇ ಈ ಕಾರ್ಯವನ್ನು ಮುನ್ನಡೆಸುವುದಾಗಿ ಸ್ವಯಂಸೇವಕರ ತಾಯಿಯೊಬ್ಬರು ಮುಂದೆ ಬಂದಾಗ ಹೆಡಗೆವಾರರು ಸಂಪೂರ್ಣ ಸಹಕಾರ ನೀಡಿದರು. ರಾಷ್ಟ್ರ ಸೇವಿಕಾ ಸಮಿತಿಯು ಇಂದು ಸಾಕಷ್ಟು ಬೆಳೆದಿದೆ, ದೇಶಾದ್ಯಂತ 10,000 ಶಾಕೆಗಳಿವೆ, ಸಂಗದಲ್ಲಿ ಪ್ರಚಾರಕರಂತೆ 50ಕ್ಕೂ ಹೆಚ್ಚು ಪ್ರಚಾರಿಕೆಯರಿದ್ದಾರೆ. ಶಾಖೆಯನ್ನು ಹೊರತುಪಡಿಸಿ ಸ್ವಯಂಸೇವಕರು ನಡೆಸುವ ಸಂಘಟನೆಗಳಲ್ಲಿ ಮಹಿಳೆಯರು ಸರಿಸಮನಾಗಿ ಭಾಗವಹಿಸುತ್ತಿದ್ದಾರೆ ಎಂದರು.


ಬಹಿರಂಗ ಪ್ರತಿಕ್ರಿಯೆ
ಸಂಘದ ಕುರಿತು ಟೀಕೆಗಳಿಗೆ ಏಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ಕುರಿತು ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಸಂಘವು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಾಗಿಲ್ಲ. ಕೆಲವರು ಸುಖಾಸುಮ್ಮನೆ, ಅನುಮಾನಾಸ್ಪದವಾಗಿ ಪ್ರಶ್ನೆ ಕೇಳುತ್ತಾರೆ, ಅವರಿಗೆ ಉತ್ತರಿಸುವ ಅಗತ್ಯವಿಲ್ಲ. ಆ ರೀತಿ ಎಲ್ಲರಿಗೂ ಉತ್ತರಿಸುತ್ತಾ ನಮ್ಮ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ, ನಮಗೆ ಮಾಡಲು ಬೇರೆ ಕೆಲಸಗಳಿವೆ. ಇಷ್ಟು ವರ್ಷಗಳ ನಂತರವೂ, ಟೀಕೆಗಳೇ ನಮ್ಮನ್ನು ಹೆಚ್ಚು ಪ್ರಸಿದ್ಧಿ ಮಾಡುತ್ತಿವೆ. ನೀವು ಈಗಂತೂ ಕರ್ನಾಟಕದಲ್ಲಿ ಇದಕ್ಕೆ ಸಾಕ್ಷಿಯಾಗಿದ್ದೀರಿ. ನಾವು ಅಂತಹದ್ದಕ್ಕೆ ಏಕೆ ಅವಕಾಶ ನೀಡಬೇಕು? ಆದರೆ, ಯಾರು ನೈಜ ಉದ್ದೇಶ ಹೊಂದಿ ಪ್ರಶ್ನೆ ಮಾಡುತ್ತಾರೆಯೋ ಅವರಿಗೆ ಉತ್ತರಿಸಿದ್ದೇವೆ, ಉತ್ತರಿಸುತ್ತೇವೆ.


ರಾಜಕೀಯೇತರ ಸಂಘಟನೆ
ಸಂಘವು ಯಾವ ರಾಜಕೀಯ ಪಕ್ಷವನ್ನೂ ಏಕೆ ಬೆಂಬಲಿಸುವುದಿಲ್ಲ ಎಂಬ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ಸಂಘವು ಸಮಾಜವನ್ನು ಒಗ್ಗೂಡಿಸಲು ಕೆಲಸ ಮಾಡುತ್ತದೆ. ಹಾಗೆ ನೋಡಿದರೆ ರಾಜಕೀಯ ಕ್ಷೇತ್ರ ಎನ್ನುವುದು ಅದರ ಮೂಲ ಸ್ವಭಾವದಲ್ಲೇ ಸಮಾಜದಲ್ಲಿ ಭಿನ್ನತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಾವು ರಾಜಕೀಯದಿಂದ ದೂರವಿದ್ದೇವೆ. ನಾವು ನೀತಿಯನ್ನು ಬೆಂಬಲಿಸುತ್ತೇವೆ. ಈಗಂತೂ ನಾವೊಂದು ಶಕ್ತಿಯಾಗಿದ್ದೇವೆ, ಹಾಗಾಗಿ ಉತ್ತಮ ನೀತಿಗಳನ್ನು ಬೆಂಬಲಿಸಲು ಈ ಶಕ್ತಿಯನ್ನು ಬಳಸುತ್ತೇವೆ. ವ್ಯಕ್ತಿ, ಪಕ್ಷವನ್ನಲ್ಲ, ನೀತಿಗೆ ನಮ್ಮ ಬೆಂಬಲ.


ಉದಾಹರಣೆಗೆ, ರಾಮಮಂದಿರ ಬೇಕೆಂದು ಬಯಸಿದೆವು. ಯಾರು ಈ ನಿರ್ಮಾಣಕ್ಕೆ ಬೆಂಬಲಿಸಿದರೋ ಆ ಪಕ್ಷ ಬಿಜೆಪಿಯನ್ನು ಸ್ವಯಂಸೇವಕರು ಬೆಂಬಲಿಸಿದರು. ಕಾಂಗ್ರೆಸ್‌ ಇದಕ್ಕೆ ಮುಂದಾಗಿದ್ದರೆ ಬಹುಶಃ ಸ್ವಯಂಸೇವಕರು ಆ ಪಕ್ಷವನ್ನೂ ಬೆಂಬಲಿಸುತ್ತಿದ್ದರು. ನಮಗೆ ಒಂದು ಪಕ್ಷದ ಮೇಲೆ ನಮಗೆ ವಿಶೇಷ ಪ್ರೀತಿ ಇಲ್ಲ. ಸಂಘದ ಪಕ್ಷ ಎನ್ನುವುದು ಯಾವುದೂ ಇಲ್ಲ, ಎಲ್ಲ ಪಕ್ಷಗಳೂ ನಮ್ಮವೆ. ನಾವು ರಾಷ್ಟ್ರನೀತಿಯನ್ನು ಬೆಂಬಲಿಸುತ್ತೇವೆಯೇ ವಿನಃ ರಾಜನೀತಿಯನ್ನಲ್ಲ.
ಎಸ್‌ಸಿಎಸ್‌ಟಿ ಸಮುದಾಯಗಳ ಸಂಪರ್ಕ
ಎಸ್‌ಸಿಎಸ್‌ಟಿ ಸೇರಿ ವಿವಿಧ ಸಮುದಾಯಗಳನ್ನು ಒಳಗೊಳ್ಳಲು ಸಂಘದ ಯೋಜನೆಯೇನು ಎಂಬ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ಒಂದು ಸಂಘಟನೆಯಾಗಿ ನಾವು ಎಲ್ಲ ವರ್ಗವನ್ನೂ ನಾವು ತಲುಪಬೇಕು, ಆದರೆ ಅದಕ್ಕೆ ನಮ್ಮದೇ ಮಾರ್ಗವಿದೆ. ಪ್ರಚಾರ ಅಥವಾ ಅಬ್ಬರದ ಮೂಲಕ ಹೋಗುವುದಿಲ್ಲ. ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ, ಪ್ರತಿನಿತ್ಯ ದೇಶಕ್ಕೆ ಏನಾದರೂ ಮಾಡಬೇಕೆಂದು ವಿನಂತಿಸುತ್ತೇವೆ, ಇದಕ್ಕೆ ಸಮಯ ತಗಲುತ್ತದೆ. ಸಂಘದಲ್ಲಿ ಹಿಂದೂ ಸಮಾಜದ ವಿವಿಧ ವರ್ಗಗಳಿಂದ ಪ್ರಾತಿನಿಧಿತ್ವವು ಹೆಚ್ಚುತ್ತಿರುವುದನ್ನು ಕ್ಷೇತ್ರೀಯ ಮಟ್ಟದವರೆಗೂ ಕಾಣುತ್ತಿದ್ದೇವೆ. ಅಖಿಲ ಭಾರತದ ಮಟ್ಟದವರೆಗೆ ಅದು ಶೀಘ್ರದಲ್ಲೇ ಬರಲಿದೆ ಎಂದರು.
ನಾವು ಸಮಾಜದ ಎಲ್ಲ ವರ್ಗಗಳನ್ನೂ ಮೇಲೆತ್ತಬೇಕು. ಸಮಾಜದಲ್ಲಿ ಇನ್ನೂ ಭೇದಭಾವ, ಅಸ್ಪೃಶ್ಯತೆ ಜೀವಂತವಾಗಿದೆ. ಅದು ಇಂದಿನ ಸಮಾಜದ ಕ್ರೂರ ವಾಸ್ತವ. ಕೆಲವು ಬಿಸಿ ಸಮುದಾಯದವರು, ನಮಗೆ ಈಗ ಮೀಸಲಾತಿ ಬೇಕಿಲ್ಲ, ಬೇರೆಯವರಿಗೆ ಕೊಡಿ ಎನ್ನುತ್ತಿದ್ದಾರೆ. ನಾವು ಈಗ ಮರಳಿ ನೀಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಿದ್ದಾರೆ. ಅಂತಹ ವಾತಾವರಣ ನಿರ್ಮಾಣ ಆಗುತ್ತಿದೆ. ಮೀಸಲಾತಿ ಮುಂದುವರಿಯಲಿ, ಅಸಮಾನತೆ ಕೊನೆಗೊಳ್ಳಲಿ. ಹೃದಯವನ್ನು ಕುಬ್ಜವಾಗಿಸಿಕೊಳ್ಳುವುದು ಬೇಡ. ಮುಕ್ತ ಮನಸ್ಸಿನಿಂದ ಆಲೋಚಿಸೋಣ ಎಂದರು.


2047ರ ಗುರಿ
2047ರಲ್ಲಿ ಭಾರತ ಹೇಗಿರಬೇಕು ಹಾಗೂ ಅದಕ್ಕಾಗಿ ಆರ್‌ಎಸ್‌ಎಸ್‌ ಏನು ಮಾಡುತ್ತದೆ ಎಂಬ ಕುರಿತು ಪ್ರತಿಕ್ರಿಯೆ ನೀಡಿದ ಡಾ. ಮೋಹನ್‌ ಭಾಗವತ್‌ ಅವರು, ವ್ಯಕ್ತಿನಿರ್ಮಾಣವನ್ನಷ್ಟೆ ಸಂಘ ಮಾಡುತ್ತದೆ. ಸಮಾಜವನ್ನು ಸಿದ್ಧಪಡಿಸುವುದು ನಮ್ಮ ಪ್ರಯತ್ನ. ಮುಂದಿನದ್ದನ್ನು ಸಮಾಜವೇ ತನ್ನಷ್ಟಕ್ಕೆ ತಾನು ನೋಡಿಕೊಳ್ಳುತ್ತದೆ ಎಂದರು. ಸಮಗ್ರ ಆರ್ಥಿಕ ಪ್ರಗತಿಯ ಮಾರ್ಗವೇನು ಎಂಬ ಕುರಿತು ಪ್ರತಿಕ್ರಿಯಿಸಿದ ಭಾಗವತ್‌ ಅವರು, ಆಸ್ತಿ ಹಾಗೂ ಉತ್ಪಾದನೆಯ ಕೇಂದ್ರೀಕರಣದಿಂದಾಗಿ ಈ ಅಸಮಾನತೆ ಹೆಚ್ಚುತ್ತಿದೆ. ಇದು ಎಲ್ಲ ದೇಶಗಳಲ್ಲೂ ಆಗುತ್ತಿದೆ. Mass Production ಅಲ್ಲ, Production by Masses ಎನ್ನುವುದು ನಮ್ಮ ಧ್ಯೇಯ. ವಿಕೇಂದ್ರೀಕೃತ ಉತ್ಪಾದನೆ, ವಿಕೇಂದ್ರೀಕೃತ ಸಂಪನ್ಮೂಲ ಹಂಚಿಕೆ ಆಗಬೇಕು. ಈ ದೃಷ್ಟಿಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಬೇಕು, ಸಫಲಗೊಳ್ಳುವಂತೆ ಮಾಡಬೇಕು, ಪ್ರಪಂಚಕ್ಕೆ ಅದನ್ನು ತೋರಿಸಬೇಕು ಎಂದರು.


ಪಾಕಿಸ್ತಾನದೊಂದಿಗೆ ಸಂಬಂಧ
ಪಾಕಿಸ್ತಾನದೊಂದಿಗೆ ಶಾಂತಿ ಕಾಯ್ದುಕೊಳ್ಳಲು ಏನು ಮಾಡಬೇಕು ಎಂಬ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ನಾವು ಪಾಕಿಸ್ತಾನದೊಂದಿಗೆ ಯಾವಾಗಲೂ ಶಾಂತಿಯನ್ನು ಹೊಂದಿದ್ದೇವೆ. ಆದರೆ ಪಾಕಿಸ್ತಾನವೇ ನಮ್ಮೊಂದಿಗೆ ಶಾಂತಿಯನ್ನು ಹೊಂದಲು ಬಯಸುವುದಿಲ್ಲ. ಪಾಕಿಸ್ತಾನ ಎಲ್ಲಿವರೆಗೆ ನಮಗೆ ಹಾನಿ ಮಾಡುವುದರಿಂದ ಸಂತೋಷವನ್ನು ಕಾಣಲು ಬಯಸುತ್ತದೆಯೋ ಅಲ್ಲಿವರೆಗೆ ಅದು ಹಾಗೆಯೇ ಮುಂದುವರಿಯುತ್ತದೆ. ನಾವು ನಮ್ಮ ಕಡೆಯಿಂದ ಶಾಂತಿಗೆ ಧಕ್ಕೆ ತರುವುದಿಲ್ಲ, ಆದರೆ ಆ ಕಡೆಯಿಂದ ತೊಂದರೆ ಮಾಡಲು ಪ್ರಯತ್ನಿಸಿದರೆ ಅದು ಆ ದೇಶಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ.


ಇಂಡೋ-ಚೀನಾ ನೀತಿ ಕುರಿತು ಪ್ರತಿಕ್ರಿಯಿಸಿ, ಎಲ್ಲರೊಂದಿಗೆ ಸ್ನೇಹ ಬೆಳೆಸಬೇಕು ಎನ್ನುವುದು ಭಾರತದ ದೃಷ್ಟಿಕೋನ. ಚೀನಾ ಜೊತೆಗೆ ಸರ್ಕಾರ ಕೆಲವು ಭಿನ್ನಾಭಿಪ್ರಾಯ ಹೊಂದಿದೆ, ಚೀನಾದ ಉದ್ದೇಶದ ಕುರಿತು ನಮ್ಮಲ್ಲಿ ಅನೇಕರಿಗೂ ಬಲವಾದ ಅನುಮಾನಗಳಿವೆ. ಗಡಿಯಲ್ಲೂ ವಿವಾದ ಹುಟ್ಟಿಸುತ್ತಿದ್ದಾರೆ. ಬೆಳೆಯುತ್ತಿರುವ ಭಾರತ ಅವರಿಗೆ ಅನುಕೂಲವಲ್ಲದ್ದರಿಂದ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಇದೆಲ್ಲ ಸಂಕೀರ್ಣತೆಗಳ ನಡುವೆ ನಾವು ಸದೃಢವಾಗಿರಬೇಕು. ಇಲ್ಲಿವರೆಗಂತೂ ನಮ್ಮ ವಿದೇಶಾಂಗ ನೀತಿ ಸಾಕಷ್ಟು ಸಫಲವಾಗಿದೆ, ಭವಿಷ್ಯದಲ್ಲೂ ಹೀಗೇ ಇರುತ್ತದೆ ಎಂದು ಆಶಿಸೋಣ ಎಂದರು.


ಮತಾಂತರಕ್ಕೆ ಕಾರಣ
ಮತಾಂತರದ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ಕೇವಲ ಒಂದು ಶತಮಾನದಲ್ಲಿ ವಿಶ್ವದ ಮೂರು ಖಂಡಗಳು ಸಂಪೂರ್ಣ ಮತಾಂತರವಾದವು. ಆದರೆ ಭಾರತದಲ್ಲಿ ಮೂರು ಶತಮಾನಗಳು ಕಳೆದರೂ ಇನ್ನೂ ಮತಾಂತರವಾದವರು ನಗಣ್ಯ ಎನ್ನಿಸುವಷ್ಟು ಅಲ್ಪಸಂಖ್ಯಾತರಾಗಿದ್ದಾರೆ.

ಮೆಕ್ಸಿಕೋ-ಸೈಬೀರಿಯಾವರೆಗೆ ಸೋರ್‌ ಮೂಲಕ ಎಲ್ಲ ದೇಶಗಳೂ ಬದಲಾದವು. ರೋಮ್‌, ಈಜಿಪ್ಟ್‌ ಕೇವಲ ಹೆಸರಿಗಷ್ಟೇ ಇವೆ. ಆದರೆ ಭಾರತ ಇಂದಿಗೂ ಹಿಂದೂಸ್ಥಾನವಾಗಿದೆ. ಹಾಗಾಗಿ ನಮ್ಮ ಈ ಏಕತೆ, ಸಾಮರ್ಥ್ಯವನ್ನು ಅರಿಯಬೇಕು. ಈ ಸಾಮರ್ಥ್ಯ ಹೆಚ್ಚಬೇಕು ಎನ್ನುವುದಷ್ಟೇ ಸಮಸ್ಯೆಗೆ ಪರಿಹಾರ ಎಂದರು.


ಜಾತಿ ನಿರ್ಮೂಲನೆಗೆ ಸಂಘದ ಕಾರ್ಯತಂತ್ರವೇನು ಎಂಬ ಕುರಿತು ಪ್ರತಿಕ್ರಿಯಿಸಿ, ಈಗಂತೂ ಜಾತಿ ಎನ್ನುವುದು ವ್ಯವಸ್ಥೆಯಲ್ಲ, ಅದೊಂದು ಗೊಂದಲವಾಗಿದೆ. ಸಾಂಪ್ರದಾಯಿಕವಾಗಿ ಜಾತಿಗೆ ಒಂದು ಉದ್ಯೋಗ ಇತ್ತು, ಬೇರೆಯವರು ಆ ಕೆಲಸವನ್ನು ಮಾಡಲು ಸಾಧ್ಯವಿರಲಿಲ್ಲ. ಆ ವ್ಯವಸ್ಥೆ ಈಗ ಇಲ್ಲ. ಯಾರು ಯಾವ ಕೆಲಸವನ್ನು ಬೇಕಾದರೂ ಮಾಡಬಹುದು ಎಂದಾದರೂ ಜಾತಿ ಮಾತ್ರ ಇದೆ. ರಿಯಾಯಿತಿ ಹಾಗೂ ಚುನಾವಣೆಗಾಗಿ ಜಾತಿ ಉಳಿದುಕೊಂಡಿದೆ. ಹಾಗಾಗಿ ಜಾತಿ ವಿನಾಶದ ಅವಶ್ಯಕತೆಯಿಲ್ಲ, ಜಾತಿಯ ಮರೆವು ಅಗತ್ಯವಿದೆ. ಸಂಘದಲ್ಲಿ ನಾವು ಜಾತಿಯನ್ನು ಹೇಳುವುದೇ ಇಲ್ಲ, ದೊಡ್ಡ ಗೆರೆಯನ್ನು ಎಳೆಯುವುದರ ಮೂಲಕ ಇಲ್ಲವಾಗಿಸುತ್ತೇವೆ. ಇದನ್ನೇ ಸಮಾಜದಲ್ಲಿ ಮಾಡಿದರೆ ಆಯಿತು ಎಂದರು.


ಎಲ್ಲರೂ ಒಂದೇ ಅಲ್ಲ
ಲವ್‌ ಜಿಹಾದ್‌, ಗಜ್ವಾ ಎ ಹಿಂದ್‌ ಮುಂತಾದ ವಿಚಾರಗಳಲ್ಲಿ ಮುಸ್ಲಿಂ ಸಮುದಾಯದಿಂದ ಆಗುತ್ತಿರುವ ತೊಂದರೆಗಳಿಗೆ ಪರಿಹಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಎಲ್ಲ ಮುಸ್ಲಿಮರನ್ನೂ ಒಂದೇ ಚೌಕಟ್ಟಿಗೆ ತರಬಾರದು. ಜಿಹಾದಿ, ಗಜ್ವಾ, ಲವ್‌ ಜಿಹಾದ್‌…. ಮುಸ್ಲಿಮರಲ್ಲಿಯೂ ದೊಡ್ಡ ವರ್ಗವು ಇದು ಎನ್ನಬಹುದು. ಆದರೆ ಇದೆಲ್ಲವನ್ನೂ ತಿರಸ್ಕರಿಸಯವ ಮುಸ್ಲಿಮರೂ ಇದ್ದಾರೆ, ಅವರನ್ನು ಅರಿಯಬೇಕು, ಸಂಪರ್ಕಿಸಬೇಕು. ಮುಸ್ಲಿಂ ಸಮುದಾಯವನ್ನು ನೋಡಿದರೆ ಅಲ್ಲಿನ ಒಂದು ವರ್ಗಿದೆಲ್ಲವನ್ನೂ ತಿರಸ್ಕರಿಸುತ್ತದೆ. ಮೂಲಭೂತವಾದಿಗಳ ಸಂಖ್ಯೆಯೂ ಗಣನೀಯವಾಗಿದೆ. ಹಾಗಾಗಿ ಇಡೀ ಮುಸ್ಲಿಂ ಸಮುದಾಯವನ್ನು ಒಂದು ಚೌಕಟ್ಟಿನಲ್ಲಿ ತರಬಾರದು. ತಂತ್ರವಾಗಿಯೂ ಇದು ಸರಿಯಲ್ಲ. ಹೀಗೆ ಮಾಡುವುದರ ಮೂಲಕ ನೀವಾಗಿಯೇ ಮೂಲಭೂತವಾದಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೀರ ಎಂದರು.

ಪುತ್ರಭಾವನೆ ಸನಾತನವಾದದ್ದು
ಹಿಂದೂಯಿಸಂ ಎಲ್ಲರನ್ನೂ ಒಳಗೊಳ್ಳುತ್ತದೆ, ಆದರೆ ಹಿಂದುತ್ವ ಪ್ರತ್ಯೇಕಿಸುತ್ತದಲ್ಲ ಎಂಬ ಪ್ರಶನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಈ ಪ್ರಶ್ನೆ ಮಾಡುವವರು ಮೊದಲನೆಯದಾಗಿ ಅವರ ಮನಸ್ಸನ್ನು ವಸಾಹತು ಪ್ರಭಾವದಿಂದ ಮುಕ್ತಗೊಳಿಸಿಕೊಳ್ಳಬೇಕು. ಹಿಂದುತ್ವ ಎನ್ನುವುದು ಪ್ರತ್ಯೇಕಿಸುತ್ತದೆ ಎನ್ನುವುದು ತಪ್ಪು. ಇದನ್ನು ನಮ್ಮ ಮನಸ್ಸಿನಲ್ಲಿ ಬಿತ್ತಲಾಗಿದೆ. ಇಸಂ ಎನ್ನುವುದು ಯಾವಾಗಲೂ ಒಳಗೊಳ್ಳುವುದಲ್ಲ, ಅದು ಪ್ರತ್ಯೇಕಿಸುವುದು. ಯಾವುದೇ ಒಂದು ಪೂಜಾ ಪದ್ಧತಿಯನ್ನು ಹಿಂದೂ ಎನ್ನಲಾಗುತ್ತದೆಯೇ? ಈಶ್ವರನನ್ನು ಒಪ್ಪದಿದ್ದರೂ, ಒಂದೇ ಪೂಜಾ ವಿಧಾನವನ್ನು ಒಪ್ಪುವವರೂ, ದೇವರನ್ನೇ ನಂಬದವರೂ ಹಿಂದೂಗಳೇ ಅಲ್ಲವೇ? ಎಲ್ಲ ರೀತಿಯ ವೈವಿಧ್ಯತೆಯನ್ನೂ ಗೌರವಿಸುವ, ಸ್ವೀಕರಿಸುವ ಮೂಲಕ ಏಕತೆಯನ್ನು ಸಾಧಿಸುವ ಸ್ವಭಾವದ ಹೆಸರೇ ಹಿಂದೂ. ಅದನ್ನು ನೀವು ಪ್ರತ್ಯೇಕತೆ ಎನ್ನುತ್ತೀರ? ಇಡೀ ಪ್ರಪಂಚದಲ್ಲಿ ವಿಭಜನೆ ಉಂಟುಮಾಡಿದ ಇಸಂ ಅನ್ನು ಒಳಗೊಳ್ಳುವಿಕೆ ಎನ್ನುತ್ತೀರ? ಮತ್ತೊಮ್ಮೆ ಆಲೋಚಿಸಿ ಎಂದರು.
ಭೂಮಿ ಹಾಗೂ ಪುತ್ರ ಎನ್ನುವ ಭಾವನೆಯು ವಸಾಹತು ಪ್ರಭಾವ ಎಂಬ ಪ್ರಶ್ನೆಗೂ ಕಠಿಣವಾಗಿ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಭೂಮಿತಾಯಿ ಹಾಗೂ ಭಾರತ ಮಾತೆ ಎನ್ನುವುದು ವಸಾಹತು ಸೃಷ್ಟಿ ಅಲ್ಲ. ವಂದೇಮಾತರಂ ಅನ್ನು ಬ್ರಿಟಿಷರು ನಿಷೇಧಿಸಿದ್ದರಲ್ಲ? ಅದು ಅವರದ್ದೇ ಸೃಷ್ಟಿಯಾಗಿದ್ದರೆ ಪ್ರೋತ್ಸಾಹಿಸಬೇಕಿತ್ತಲ್ಲ? ಏಕೆ ನಿಷೇಧಿಸಿದರು? ವೇದಕಾಲದಿಂದಲೂ ಭಾರತ ಎಂಬ ಉಲ್ಲೇಖವಿದೆ. ಕಾಳಿದಾಸ ಭಾರತವನ್ನು ಸ್ತುತಿಸಿದ್ದಾನೆ. ಪೃಥ್ವೀ ಸೂಕ್ತದಲ್ಲಿ ಮಾತಾ ಭೂಮಿಃ, ಪುತ್ರೋಃ ಪೃಥಿವ್ಯಾಹ ಎಂದಿದೆ…. ಭೂಮಿಯನ್ನು ವಿಷ್ಣುಪತ್ನಿ ಎಂದೇ, ನಮ್ಮ ತಾಯಿ ಎಂದೇ ಆರಾಧಿಸಿದ್ದೇವೆ. ಭೂಮಿ ತಾಯಿ ಎನ್ನುವುದು ವಸಾಹತು ಪರಿಕಲ್ಪನೆಯಲ್ಲ, ಶುದ್ಧ ಸನಾತನ ಮೌಲ್ಯ. ವಸಾಹತು ಇತಿಹಾಸಕ್ಕೆ ಹೋಗಬೇಡಿ, ಅದರಿಂದ ಹೊರಬನ್ನಿ. ಮೊದಲು ನೀವು ಯಾರು ಎನ್ನುವುದನ್ನು ಅರಿತುಕೊಳ್ಳಿ. ನೀವು ಏನಾಗಿರಬೇಕೊ ಅದು ಆಗಿ, ಆಗ ಮಾತ್ರ ಭಾರತವನ್ನು ಅರಿಯುತ್ತೀರಿ ಎಂದರು.


ಹಿಂದುವಾಗಿದ್ದರಿಂದಲೇ ಸೆಕ್ಯುಲರ್‌
ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುವ ಸೆಕ್ಯುಲರ್‌ ಹಿಂದೂಗಳನ್ನು ಹೇಗೆ ಸರಿಪಡಿಸುವುದು ಎಂಬ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ಪಶ್ಚಿಮದಲ್ಲಿ ರಾಜ ಹಾಗೂ ಪೋಪ್‌ ನಡುವೆ ಉಂಟಾದ ಸಂಘರ್ಷಕ್ಕೆ ಪರಿಹಾರವಾಗಿ ಸೆಕ್ಯುಲರಿಸಂ ಹುಟ್ಟುಕೊಂಡಿತು. ಹಿಂದೂ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ ಒಂದು ನಡವಳಿಕೆ. ಆ ನಡವಳಿಕೆಯಿಂದ ಯಾರೇ ಸರ್ಕಾರ ನಡೆಸಿದರೂ ಆ ಸರ್ಕಾರವೂ ಸೆಕ್ಯುಲರ್‌ ಆಗಿರುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶಗಳು ಸೆಕ್ಯುಲರ್‌ ಆಗಿವೆಯೇ? ಭಾರತ ಮಾತ್ರ ಏಕೆ ಸೆಕ್ಯುಲರ್‌ ಆಯಿತು? ಏಕೆಂದರೆ ನಮ್ಮ ಸಂವಿಧಾನದ ಕರ್ತೃಗಳು ಹಿಂದೂಗಳೇ ಆಗಿದ್ದರು, ಅದಕ್ಕಾಗಿ. ಹಾಗಾಗಿ, ನೈಜ ಹಿಂದೂಗಳನ್ನು ಸರಿಪಡಿಸಬೇಕಾದ ಅಗತ್ಯವಿಲ್ಲ. ಹಿಂದೂಗಳು ಎಂದಿಗೂ ಸೆಕ್ಯುಲರ್‌ ಆಡಳಿತಕ್ಕೇ ಮುಂದಾಗುತ್ತಾರೆ.


ದ್ರಾವಿಡ ರಾಜಕಾರಣಿಗಳು
ತಮಿಳುನಾಡಿನಲ್ಲಿ ಹಿಂದೂ ರಾಷ್ಟ್ರವನ್ನು ಪ್ರಚಾರ ಮಾಡುವುದು ಹೇಗೆ ಎಂಬ ಕುರಿತು ಪ್ರತಿಕ್ರಿಯೆ ನೀಡಿದ ಮೋಹನ್‌ ಭಾಗವತ್‌ ಅವರು, ಹಿಂದೂ ರಾಷ್ಟ್ರಕ್ಕೆ ಪ್ರಚಾರ ಬೇಕೆನ್ನಿಸುವುದಿಲ್ಲ. ತಮಿಳುನಾಡಿನಲ್ಲಿಯೂ ಬೇಕಿಲ್ಲ. ದ್ರಾವಿಡಿಯನ್‌ ಪಕ್ಷಗಳೇನೋ ಇವೆ, ಆದರೆ ಅವರು ದೇವಸ್ಥಾನಕ್ಕೆ ಹೋಗುವುದಿಲ್ಲವೇ? ಪೂಜೆಯನ್ನು ಹೊರತುಪಡಿಸಿದರೂ ಪೊಂಗಲ್‌ ಆಚರಣೆ ಮಾಡುವುದಿಲ್ಲವೇ? ಬಾಯಿಮಾತಿಗಾದರೂ, ನಮಗೆ ಎಲ್ಲ ಮತಗಳೂ ಒಂದೇ ಎನ್ನುವುದಿಲ್ಲವೇ? ನಮಗೆ ಎಲ್ಲ ಮತಗಳೂ ನಮಗೆ ಸಮಾನವಾದವು ಎಂದು ಯಾರು ಹೇಳುತ್ತಾರೋ, ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕ್‌ವರೆಗೆ, ಪಶ್ಚಿಮದಿಂದ ಪೂರ್ವದವರೆಗೆ ಇಡೀ ಭೂಮಿಯಲ್ಲಿ ಅಂಥವರು ಯಾರೇ ಇದ್ದರೂ, ಎಲ್ಲೇ ಇದ್ದರೂ ಅವರೆಲ್ಲರೂ ತಮ್ಮ ನಡವಳಿಕೆಯಿಂದ ನಿಸ್ಸಂಶಯವಾಗಿ ಹಿಂದೂಗಳೆ. ಕೆಲವರು ಈ ಶಬ್ದವನ್ನು ತಿಳಿದಿರುತ್ತಾರೆ, ಕೆಲವರು ತಿಳಿದಿರುವುದಿಲ್ಲ ಅಷ್ಟೆ. ದ್ರಾವಿಡ ರಾಜಕಾರಣಿಗಳನ್ನೂ ಹಿಂದೂಗಳಾಗಿಯೇ ಕಾಣಿ, ಅವರೂ ಹಿಂದೂಗಳು ಎಂದು ತಿಳಿದೇ ವ್ಯವಹರಿಸಿ, ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೀರಿ, ಚೆನ್ನಾಗಿ ನಿರ್ವಹಣೆ ಮಾಡಬಲ್ಲೆವು. ಅವರು ಸಹಜವಾಗಿ ಹಿಂದೂಗಳಾಗಿಯೇ ರೂಪಿತರಾಗಿದ್ದಾರೆ, ಎಲ್ಲಿಯೂ ಹೋಗುವುದಿಲ್ಲ, ಆತಂಕ ಬೇಡ ಎಂದರು.


ಹಿಂದೂರಾಷ್ಟ್ರ ಸಾಕಾರ ಸಾಧ್ಯ
ಭಾರತದ ಯುವಕರ ಮನವೊಲಿಸಿ ಶೀಘ್ರದಲ್ಲಿ ಹಿಂದೂರಾಷ್ಟ್ರವಾಗಿಸಲು ಯಾವ ಪ್ರಯತ್ನ ಮಾಡಬೇಕೆಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಭೂಮಿಯಿಂದ ಚಂದ್ರನನ್ನು ಸಂಪರ್ಕಕಿಸಲು ಎಷ್ಟು ಮೀನುಗಳು ಬೇಕು ಎಂದು ವಿಜ್ಞಾನಿಯೊಬ್ಬರನ್ನು ಪ್ರಶ್ನಿಸಿದಾಗ, ಸಾಕಷ್ಟು ಉದ್ದವಿದ್ದರೆ ಒಂದೇ ಮೀನು ಸಾಕು ಎಂದು ಉತ್ತರಿಸಿದರಂತೆ. ಹಾಗೆಯೇ, 142 ಕೋಟಿ ಜನರು ಮನಸ್ಸಿಟ್ಟು ದೇಶದ ಕೆಲಸವನ್ನು ಮಾಡಲು ಮುಂದಾದರೆ ನಾಳೆ ಬೆಳಗ್ಗೆಯೇ ಹಿಂದೂ ರಾಷ್ಟ್ರ ಸಾಕಾರವಾಗುತ್ತದೆ. ಹಾಗೆ ಮಾಡದೇ ಇದ್ದರೆ, ಎಷ್ಟು ಸಮಯ ಬೇಕಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಅದು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಮಗಿದೆ, ಅದು ಪೂರ್ಣವಾಗುವವರೆಗೂ ಮುಂದುವರಿಸುತ್ತೇವೆ ಎಂದರು.


ಸ್ವಚ್ಛತೆ ಹಾಗೂ ಸಂಘ
ಸಂಘವು ಯಾವುದಾದರೂ ಶಾಲೆಯಲ್ಲಿ ಶಿಬಿರ ನಡೆಸಲು ಸ್ಥಳ ಕೇಳಿದರೆ ಸಂತೋಷದಿಂದ ಒಪ್ಪುತ್ತಾರೆ. ಏಕೆಂದರೆ ನಾವು ಎಲ್ಲಿ ಶಿಬಿರ ಮಾಡುತ್ತೇವೆಯೋ ಆ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೇವೆ. ಶಾಖೆಯಲ್ಲೂ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಹಾಗಾಗಿಯೇ ಗಾಂಧೀಜಿಯವರ ನಂತರ ಅನೇಕ ವರ್ಷಗಳ ನಂತರ ನಮ್ಮ ಪ್ರಧಾನಿಗಳಿಂದಲೇ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದರು. ಏಕೆಂದರೆ ಅವರು ಶಾಖೆಯ ಮೂಲಕ ಬಂದವರಾದ್ಧರಿಂದ ಅವರ ಮನದಲ್ಲಿ ಈ ಮೌಲ್ಯಗಳಿವೆ. ಈಗಂತೂ ಪಂಚಪರಿವರ್ತನೆ ಮೂಲಕ ಈ ಮೌಲ್ಯಗಳನ್ನು ಸಾರ್ವಜನಿಕವಾಗಿ ಕೈಗೆತ್ತಿಕೊಳ್ಳುತ್ತಿದ್ದೇವೆ. ಕುಟುಂಬ ಪ್ರಬೋಧನೆ, ಪರ್ಯಾವರಣೆಯಲ್ಲಿ ಇದನ್ನೇ ಮಾಡುತ್ತೇವೆ ಎಂದರು.


ಕಾರ್ಯಕ್ರಮದ ವೇದಿಕೆಯಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್‌. ಉಮಾಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಸರಕಾರ್ಯವಾಹ ಮುಕುಂದ ಸಿ.ಆರ್‌., ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್‌ ಮಂಗೇಶ್‌ ಬೇಂಢೆ, ಅಖಿಲ ಭಾರತೀಯ ಸಂಪರ್ಕ ಪ್ರಮುಖ್‌ ರಾಮಲಾಲ್‌, ಅಖಿಲ ಭಾರತೀಯ ಪ್ರಚಾರ ಪ್ರಮುಖ್‌ ಸುನಿಲ್‌ ಅಂಬೇಕರ್‌, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್‌ ಸುಧೀರ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಸಸ್ಯಾಹಾರ-ಮಾಂಸಾಹಾರ
ಬೀಫ್‌ ರಫ್ತು ಹಾಗೂ ಸಸ್ಯಾಹಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಭಾರತದಿಂದ ರಫ್ತು ಮಾಡುವ ಬೀಫ್‌ನಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸುತ್ತದೆ. ಆದರೆ ಮಾಂಸವನ್ನಾದರೂ ಏಕೆ ರಫ್ತು ಮಾಡಬೇಕು ಎಂಬ ಪ್ರಶ್ನೆಯಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಸಸ್ಯಾಹಾರವನ್ನು ಪ್ರೋತ್ಸಾಹಿಸಬೇಕು ಎಂದರೆ ಬಹಳಷ್ಟು ಪ್ರಕ್ರಿಯೆ ನಡೆಯಬೇಕಾಗುತ್ತದೆ. ಏಕೆಂದರೆ ನಮ್ಮ ಹಿಂದೂ ಸಮಾಜದಲ್ಲಿ ಶೇ.72 ಜನರು ಮಾಂಸಾಹಾರ ಸೇವಿಸುತ್ತಾರೆ. ಬಂಗಾಳ, ಅಸ್ಸಾಂ, ಒಡಿಶಾದಲ್ಲಿ ಮೀನನ್ನು ಮಾಂಸಾಹಾರ ಎಂದು ಹೇಳುವುದಿಲ್ಲ. ಅದು ನೀರಿನ ಫಲ ಎನ್ನುತ್ತಾರೆ.


ಮಹಿಳೆಯರಿಗೆ ಅವಕಾಶ ಅನಿವಾರ್ಯ
ಮಹಿಳೆಯರಿಗೆ ಅವಕಾಶಗಳ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ಪುರುಷರು-ಮಹಿಳೆಯರ ಪಾತ್ರ ಸಮಾನ ಹಾಗೂ ಪರಸ್ಪರ ಪೂರಕವಾದದ್ದು ಎನ್ನುವುದು ನಮ್ಮ ದೃಷ್ಟಿ. ದೇಹರಚನೆಯಲ್ಲಿ ವ್ಯತ್ಯಾಸ ಬಿಟ್ಟರೆ ಬೌದ್ಧಿಕವಾಗಿ ಯಾವ ವ್ಯತ್ಯಾಸವೂ ಇಲ್ಲ. ಯಾರು ಮೇಲು, ಯಾರು ಕೀಲು ಎನ್ನುವುದು ಸರಿಯಾದ ಚರ್ಚೆ ಅಲ್ಲ ಎನ್ನುವುದನ್ನು ಮೊದಲು ಅರಿಯಬೇಕು. ಮಹಿಳೆಯರನ್ನು ದೇವಿಯಾಗಿ ನೋಡಬೇಕೆ ಅಥವಾ ದಾಸಿಯಾಗಿ ನೋಡಬೇಕೆ? ಜಗಜ್ಜನನಿಯಾಗಿ ನೋಡೋಣ, ಆದರೆ ಆಕೆಯನ್ನು ಜಾಗೃತಗೊಳಿಸೋಣ, ಎಲ್ಲ ಮಟ್ಟದಲ್ಲೂ ಆಕೆಗೆ ಸಮಾನ ಅವಕಾಶಗಳನ್ನು ನೀಡೋಣ. ಮಹಿಳೆಯರು ಸಮಾನವಾಗಿ ಭಾಗವಹಿಸದೇ ಭಾರತದ ಏಳಿಗೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಮಹಿಳೆಯ ಕಾರಣಕ್ಕೇ ಪುರುಷರು ಏಳಿಗೆ ಕಾಣುತ್ತಿದ್ದಾರೆ. ತಾಯಿಯೇ ಮೊದಲ ಗುರು, ತಾಯಿಯೇ ಮಾನವತೆಯ ಕರ್ತೃ ಎಂದರು.


ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಹೇಗೆ? ರಾಜಕೀಯ ಹೊರತಾದ ವ್ಯವಸ್ಥೆ ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ಪಕ್ಷರಹಿತ ವ್ಯವಸ್ಥೆ ಎನ್ನುವುದು ಒಂದು ಮಾದರಿ, ಆದರೆ ಅದು ಸುಸ್ಥಿರವಾಗುವುದು ಕಷ್ಟ. ಪಕ್ಷ ಎಂದರೆ ವಿಭಿನ್ನ ಅಭಿಪ್ರಾಯ. ಹೆಚ್ಚು ಜನರಿದ್ದಾಗ ಹೆಚ್ಚು ಅಭಿಪ್ರಾಯಗಳಿರುತ್ತವೆ. ಇವೆರಡರ ನಡುವೆ ಸಹಮತಿ ಏರ್ಪಾಡಾಗಬೇಕು. ಬಹುಮತವಲ್ಲ, ಸಹಮತಿಯೆಡೆಗೆ ಸಾಗಬೇಕು. ಇಂದಿನ ಸನ್ನಿವೇಶದಲ್ಲಿ ಒಳ್ಳೆಯ ರಾಜಕಾರಣ ಎನ್ನುವುದು ವಿರೋಧಾಭಾಸದ ವಿಚಾರವಾಗಿದೆ. ಆದರೆ ಯಾವಾಗಲೂ ಹೀಗೆ ಇರಲಿಲ್ಲ. ಮೊದಲಿಗೆ ಮಾನವರ ಆಲೋಚನೆಯ ಗುಣಮಟ್ಟ ಉನ್ನತವಾಗಿರಬೇಕು. ಇದೀಗ ಸಮಾಜದ ಗುಣಮಟ್ಟ ಕಡಿಮೆ ಇರುವುದರಿಂದ ನಾಯಕರೂ ಅಂಥವರೇ ದೊರಕುತ್ತಿದ್ದಾರೆ. ಉತ್ತಮ ಸಮಾಜದಿಂದ ಮಾತ್ರ ಉತ್ತಮ ರಾಜಕಾರಣ ಸಾಧ್ಯ. ಹೀಗಾದಾಗ ಭ್ರಷ್ಟಾಚಾರ ತನ್ನಷ್ಟಕ್ಕೆ ತಾನೇ ಕೊನೆಯಾಗುತ್ತದೆ.
ವೋಕಿಸಂ ಅರಿವು ಮುಖ್ಯ. ಲೆಫ್ಟ್‌, ವೋಕಿಸಂ, ಜಿಹಾದ್‌ನಿಂದ ಹೊರಗಿನ ಹಿಂದೂಗಳನ್ನು ರಕ್ಷಿಸುವುದು ಹೇಗೆ ಎಂಬ ಕುರಿತು ಪ್ರತಿಕ್ರಿಯಿಸಿದ ಮೋಹನ್‌ ಭಾಗವತ್‌ ಅವರು, ವೋಕಿಸಂ, ನ್ಯೂ ಲೆಫ್ಟ್‌, ಡೀಪ್‌ ಸ್ಟೇಟ್‌, ಕಲ್ಪಚರಲ್‌ ಮಾರ್ಕ್ಸಿಸಂ, ಎನ್ನುವುದರ ಕುರಿತು ಇನ್ನೂ ಅಧ್ಯಯನ ನಡೆಯಬೇಕು. ವಿಫಲ ಎಡ ವಿಚಾರವು ತನ್ನ ಪ್ರಭಾವವನ್ನು ವಿಶ್ವದಲ್ಲಿ ಮತ್ತೆ ಮೂಡಿಸಲು ಪ್ರಯತ್ನಿಸುತ್ತಿದೆ. ಸಾರ್ವಜನಿಕ ಚರ್ಚೆಯನ್ನು ಭ್ರಷ್ಟಗೊಳಿಸಲು ಮುಂದಾಗುತ್ತಾರೆ. ಯುವ ಪೀಳಿಗೆಯನ್ನು ಗೊಂದಲಗೊಳಿಸುತ್ತಾರೆ. ನಾವು ಬೌದ್ಧಿಕ ಕ್ಷತ್ರಿಯರನ್ನು ಸಿದ್ಧಗೊಳಿಸಬೇಕು. ಇದೆಲ್ಲದರ ಕುರಿತು ಯುವ ಪೀಳಿಗೆಯನ್ನು ಜಾಗೃತಗೊಳಿಸಬೇಕು ಎಂದರು.


ನ್ಯಾಯಾಂಗ ಸುಧಾರಣೆ
ನ್ಯಾಯಾಂಗ ಸುಧಾರಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ನ್ಯಾಯಾಂಗದಲ್ಲಿ ಸುಧಾರಣೆ ಆಗಬೇಕು ಎಂದು ಸ್ವತಃ ಮುಖ್ಯ ನ್ಯಾಯಮೂರ್ತಿಗಳೇ ಹೇಳಿದ್ದಾರೆ. ಅನೇಕರೂ ಈ ಬಗ್ಗೆ ಧ್ವನಿಯೆತ್ತಿದ್ದಾರೆ. ಗಂಭೀರವಾದ ಪರಿವರ್ತನೆಗಳೇ ಆಗಬೇಕಿದೆ. ಆದರೆ ಅದಕ್ಕಾಗಿ ಬಹಳ ಅರ್ಥಪೂರ್ಣವಾದ ಚಟುವಟಿಕೆ ಕಾಣಿಸುತ್ತಿಲ್ಲ. ಇದಕ್ಕಾಗಿ ಹೊರಗಿನ ಬೆಂಬಲ ಬೇಕೆಂದು ನನಗನ್ನಿಸುವುದಿಲ್ಲ. ನ್ಯಾಯಾಂಗವು ಸಂವಿಧಾನದ ಒಂದು ಅಂಗವಾಗಿ ತಾನೇ ಮುಕ್ತವಾಗಿ ಆಲೋಚಿಸಬೇಕು ಎಂದರು.

ನಾವೇನು ಮಾಡಬೇಕು?
ಸಾರ್ವಜನಿಕರು ದೇಶದ ಒಳಿತಿಗೆ ಹೇಗೆ ತೊಡಗಿಸಿಕೊಳ್ಳಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ್‌ ಭಾಗವತ್‌ ಅವರು, ದೇಶಭಕ್ತಿ, ಪ್ರಾಮಾಣಿಕತೆ, ಅನುಶಾಸನೆ, ಉತ್ಕೃಷ್ಟತೆ, ಸಾಮೂಹಿಕತೆಯೇ ಆರ್‌ಎಸ್‌ಎಸ್‌ ಮೌಲ್ಯ. ಈ ಮೌಲ್ಯಗಳನ್ನು ನಿಮ್ಮ ಕೆಲಸದಲ್ಲಿ ಹೊಂದಿಸಿಕೊಳ್ಳಿ. ಈ ಮೌಲ್ಯಗಳನ್ನು ಕಲಿಯಬೇಕೆಂದರೆ ಶಾಖೆಯನ್ನು ಸೇರಿಕೊಳ್ಳಿ. ಅದಕ್ಕೆ ಸಮಯವಿಲ್ಲದಿದ್ದರೆ, ಎಷ್ಟು ಸಮಯ ನೀಡಬಹುದು, ಯಾವ ಕ್ಷೇತ್ರದಲ್ಲಿ ಕಾರ್ಯ ಮಾಡಬಹುದು ಎನ್ನುವುದನ್ನು ತಿಳಿಸಿದರೆ ಅದಕ್ಕೆ ಅನುಗುಣವಾದ ಕೆಲಸ ನಾವು ನೀಡಬಹುದು. If you have a team we have a theme. If you have a theme, we have a team.
ದೇಶ ಕಟ್ಟುವ ಕೆಲಸವನ್ನು ಯಾರಿಗೂ ಗುತ್ತಿಗೆ ನೀಡಬೇಡಿ. ಸಂಘಕ್ಕೂ ಯಾವುದನ್ನೂ ಗುತ್ತಿಗೆ ನೀಡಬೇಡಿ. ಯಾವುದೇ ದೇವರು, ಅವತಾರ, ವಿಚಾರ, ಮಹಾಪುರುಷ, ಪಕ್ಷ, ಸಂಘಟನೆಯು ಈ ದೇಶವನ್ನು ಉದ್ಧಾರ ಮಾಡಲಾಗುವುದಿಲ್ಲ. ಸಮಾಜವೇ ಈ ಕಾರ್ಯವನ್ನು ಕೈಗೆತ್ತಿಕೊಂಡರೆ ಎಲ್ಲ ವಿಚಾರಗಳೂ ಸಹಕಾರಕ್ಕೆ ಬರುತ್ತವೆ. ಸಮಾಜ ಮಲಗಿದರೆ ಇವೆಲ್ಲವೂ ವಿಫಲವಾಗುತ್ತದೆ ಎಂದರು.


ಯುವಜನತೆ ಮತ್ತು ದೇಶ
• ತಂತ್ರಜ್ಞಾನವು ತಾನೇತಾನಾಗಿ ಹಾಳು ಮಾಡಲು ಹೋಗುವುದಿಲ್ಲ. ನಮ್ಮ ಮೇಲೆ ಅವಲಂಬಿತವಾಗಿದೆ. ಮೊಬೈಲಿನಿಂದ ಅದರಿಂದ ಸಾಕಷ್ಟು ಉಪಯೋಗವಿದೆ, ಅಪಾಯವೂ ಇದೆ. ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಮೊಬೈಲನ್ನು ಉಪಕಾರಿಯಾಗಿಯೂ ಬಳಸಬಹುದು. ಪೋಷಕರು ತಮ್ಮ ನಡವಳಿಕೆಯಿಂದ ಮಕ್ಕಳಿಗೆ ಕಲಿಸಬೇಕು.
• ಮಕ್ಕಳು ನಮ್ಮೆದುರು ತೆರೆದುಕೊಳ್ಳಬೇಕೆ ವಿನಃ ಹೆದರಿ ಮುದುಡಿಕೊಳ್ಳಬಾರದು. ನಮ್ಮನ್ನು ಅವರು ಗೌರವಿಸಬೇಕು ಸರಿ, ಅದಕ್ಕಿಂತಲೂ ಹೆಚ್ಚಾಗಿ ಪ್ರೀತಿಸಬೇಕು. ಈ ರೀತಿ ಮಕ್ಕಳನ್ನು ತರಬೇತಿ ನೀಡಿದರೆ ತಂತ್ರಜ್ಞಾನ ಬಳಕೆಯ ಶಿಸ್ತನ್ನೂ ಕಲಿಸಬಹುದು.
• ಯಾವುದೇ ರೀತಿಯ ಬಾಹ್ಯ ಸ್ಟಿಮ್ಯುಲೇಷನ್‌, ಅದರಲ್ಲೂ ದುರಭ್ಯಾಸ ಆಗುವಂತಹದ್ದನ್ನು ತಪ್ಪಿಸಬೇಕು. ಯುವ ಪೀಳಿಗೆಗೆ ಈ ಜಾಗೃತಿ ಮೂಡಿಸಬೇಕು. ಮನೆಯಲ್ಲಿ ಸಂಸ್ಕಾರದ ವಾತಾವರಣ ನಿರ್ಮಾಣ ಮಾಡಬೇಕು. ಮಕ್ಕಳು ನೋಡುತ್ತಾ ಕಲಿಯುತ್ತಾರೆ. ಮೂಲಭೂತ ಸಂಸ್ಕಾರಗಳು ಗಟ್ಟಿಯಾಗಿದ್ದರೆ, ಕೆಲವೊಮ್ಮೆ ಅವರು ಹಾದಿ ತಪ್ಪಬಹುದು, ಆದರೆ ಒಂದಲ್ಲಾ ಒಂದು ದಿನ ವಾಪಸಾಗುತ್ತಾರೆ, ಅದು ನಿಶ್ಚಿತ.
• ಭಾರತವು ಹಿಂದೂರಾಷ್ಟ್ರ ಎನ್ನುವುದನ್ನು ಹೊರತುಪಡಿಸಿ ಸಂಘದಲ್ಲಿ ಯಾವುದೇ ಬದಲಾವಣೆಗಳು ಸಾಧ್ಯವಿದೆ. ಯುವಪೀಳಿಗೆ ಎಲ್ಲಿರುತ್ತದೆಯೋ ಅಲ್ಲಿಗೆ ಹೋಗುತ್ತೇವೆ, ಅವರಿಗೆ ಯಾವ ವಿಚಾರ ಆಸಕ್ತಿಕರವಾಗಿದೆಯೋ ನಾವೂ ಅದನ್ನು ಕಲಿಯುತ್ತೇವೆ, ಅಲ್ಲಿ ಅಂತಹ ಆಕರ್ಶಕವಾಗಿದ್ದು ಏನಿದೆ ಎಂದು ನೋಡುತ್ತೇವೆ. ತೃತೀಯ ಲಿಂಗಿಗಳು ಸೇರಿ ಯಾರು ಬೇಕಾದರೂ ಶಾಖೆಗೆ ಬರಬಹುದು.
• ಸ್ವಾರ್ಥದಿಂದ ಯುವಕರಲ್ಲಿ ವಿದೇಶಿ ವ್ಯಾಮೋಹ ಹೆಚ್ಚುತ್ತಿದೆ. ಅರವಿಂದರು, ಸುಭಾಶ್‌ಚಂದ್ರಬೋಸರು ವಿದೇಶದಲ್ಲಿ ಕೆಲಸ ಮಾಡುವ ಅವಕಾಶವಿದ್ದರೂ ತ್ಯಜಿಸಿ ದೇಶಸೇವೆಯಲ್ಲಿ ತೊಡಗಿದರು. ಆ ಇಚ್ಛೆಯನ್ನು ಯುವಕರಲ್ಲಿ ಉತ್ತೇಜಿಸಬೇಕಿದೆ. ಹಿಮ್ಮುಖ ಚಲನೆಯೂ ಆಗುತ್ತಿದೆ, ಕೆಲವರು ವಾಪಸಾಗುತ್ತಿದ್ದಾರೆ.

ವಿಶ್ವ ಸಂವಾದ ಕೇಂದ್ರ ಕರ್ನಾಟಕ
9.11.2025

Leave a Reply

Your email address will not be published.

This site uses Akismet to reduce spam. Learn how your comment data is processed.