
ಆಗಸ್ಟ್ 23, 2023: ಇಲ್ಲಿಯವರೆಗೂ ಯಾರೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರಲಿಲ್ಲ. ಆದರೆ ನಮ್ಮ ವಿಜ್ಞಾನಿಗಳ ಸುದೀರ್ಘ ಕಠಿಣ ಪರಿಶ್ರಮದ ಕಾರಣ ಚಂದ್ರನ ದಕ್ಷಿಣ ಧ್ರುವ ವನ್ನು ತಲುಪುವ ಮೊದಲ ಸಾಧನೆ ಸಾಧ್ಯವಾಗಿದೆ. ಸಂಪೂರ್ಣ ದೇಶಕ್ಕಾಗಿ ಮಾತ್ರವಲ್ಲದೇ ವಿಶ್ವದ ಮಾನವತೆಗಾಗಿ ಈ ಸಾಧನೆ ಸಹಕಾರಿ ಎಂದು ರಾಷ್ಟ್ರೀಯ ಸ್ವಯಮಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

ಇಸ್ರೋ ಉಡಾವಣೆಗೊಳಿಸಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯ ಯಶಸ್ಸಿನ ನಂತರ ಮಾತನಾಡಿದ ಅವರು ವಸುಧೈವ ಕುಟುಂಬಕಮ್ ಎಂಬ ತನ್ನ ಸ್ನೇಹಯುತ ದೃಷ್ಟಿಯೊಂದಿಗೆ ಭಾರತ ಇಂದು ಇಡೀ ವಿಶ್ವಕ್ಕೆ ಶಾಂತಿ ಹಾಗೂ ಸಮೃದ್ಧಿಯನ್ನು ಪ್ರದಾನ ಮಾಡುವ ಕಾರ್ಯದಲ್ಲಿ ನೇತೃತ್ವವನ್ನು ವಹಿಸಿದೆ. ಅದರ ಪ್ರತೀಕವಾಗಿ ಇಂದು ನಾವೆಲ್ಲರೂ ಆನಂದದಿಂದ ಸಂಭ್ರಮಿಸುತ್ತಇರುವ ಕ್ಷಣ ಸಾಧ್ಯವಾಗಿದೆ. ನಮ್ಮ ವಿಜ್ಞಾನಿಗಳು ನಮೆಲ್ಲರಿಗೂ ಧನ್ಯತೆಯ ಭಾವವನ್ನು ಒದಗಿಸಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರು. ಹಾಗೆಯೇ ವಿಜ್ಞಾನಿಗಳಿಗೆ ಪ್ರೋತ್ಸಾಹಿಸಿದ ಸರ್ಕಾರಕ್ಕೂ ಧನ್ಯವಾದಗಳು. ಅವರೆಲ್ಲರಿಗೂ ಅಭಿನಂದನೆಗಳು ಎಂದು ಅಭಿನಂದಿಸಿದರು.

ಭಾರತ ಬೆಳೆಯುವ ಜೊತೆಗೆ ಜಗತ್ತನ್ನು ಬೆಳೆಸುತ್ತಿದೆ. ಹಾಗೂ ಭಾರತ ಭೌತಿಕ ಮತ್ತು ಆಧ್ಯಾತ್ಮಿಕವಾದ ಪ್ರಗತಿಯ ಆಧಾರದ ಮೇಲೆ ವಿಶ್ವವನ್ನು ಮುನ್ನಡೆಸಲಿದೆ ಎಂಬ ಮಾತು ಈಗ ಸತ್ಯವಾಗುತ್ತಿದೆ. “ಜ್ಞಾನ ಮತ್ತು ವಿಜ್ಞಾನದ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸೋಣ. ನೀಲಿ ಆಕಾಶದ ರೂಪಕ್ಕೆ ಹೊಸ ಭಾಷ್ಯ ಬರೆಯಲು ಮುಂದಾಗೋಣ. ಭೋಗದ ವಾತಾವರಣದಲ್ಲಿ ತ್ಯಾಗದ ಸಂದೇಶವನ್ನು ನೀಡೋಣ. ದಾಸ್ಯದ ಘನವಾದ ಮೋಡಗಳಿಂದ ಸುಖದ ವರ್ಷಧಾರೆಯಾಗುವಂತೆ ಮಾಡೋಣ” – ಈ ಉದ್ಧೇಶವನ್ನು ಸಾಕಾರಗೊಳಿಸಲು ಇದೀಗ ಇಡೀ ರಾಷ್ಟ್ರಕ್ಕೆ ಆತ್ಮವಿಶ್ವಾಸ ಹೆಚ್ಚಾಗಿದೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ವಾಸ್ತವವಾಗಿ ಅಮೃತ ವರ್ಷವಾಗಿಸುವ ಕ್ಷಣವನ್ನು ನಾವೆಲ್ಲರೂ ಕಣ್ತುಂಬಿಕೊಳ್ಳುವಂತಾಗಿದೆ. ಅದಕ್ಕಾಗಿ ನಾವು ಧನ್ಯ. ಈಗ ನಾವು ನಮ್ಮ ಕರ್ತವ್ಯಕ್ಕಾಗಿ ಮುಂದುವರೆಯುವ ಅಗತ್ಯವಿದೆ. ಪ್ರಗತಿ ಸಾಧಿಸಲು ಅವಶ್ಯಕವಾದ ಸಾಮರ್ಥ್ಯ, ಕಲಾ ಕೌಶಲ್ಯಗಳು, ದೃಷ್ಟಿ ಎಲ್ಲವೂ ನಮ್ಮ ಬಳಿ ಇದೆ ಎನ್ನುವುದನ್ನು ಚಂದ್ರಯಾನ-3 ರ ಯಶಸ್ಸು ಸಾಬೀತುಪಡಿಸಿದೆ. ನಾನು ಮತ್ತೊಮ್ಮೆ ಎಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ಹೃದಯಾಂತರಾಳದಿಂದ ಭಾರತ್ ಮಾತಾ ಕೀ ಜೈ ಹೇಳುತ್ತೇನೆ ಎಂದರು.
ಡಾ.ಮೋಹನ್ ಭಾಗವತ್ ಅವರು ಚಂದ್ರಯಾನ-3ರ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳು ಮತ್ತು ವ್ಯವಸ್ಥೆಯನ್ನು ಅಭಿನಂದಿಸಿದ ವೀಡಿಯೋ ತುಣುಕು:
ಚಂದ್ರಯಾನ – 3: ಚಂದ್ರನ ಕುರಿತು ಅರಿಯುವ ಭಾರತದ ಮೂರನೇ ಪ್ರಯತ್ನ ಚಂದ್ರಯಾನ – 3 ಆಗಿದೆ. 2008ರಲ್ಲಿ ಚಂದ್ರಯಾನ -1ರ ಮೂಲಕ ಆರ್ಬಿಟರ್ ಅನ್ನು ಚಂದಿರನ ಕಕ್ಷೆಗೆ ಸೇರಿಸಲು ಇಸ್ರೋ ಯಶಸ್ವಿಯಾಗಿತ್ತು. 2019ರಲ್ಲಿ ಚಂದ್ರಯಾನ -2ರ ಮೂಲಕ ಚಂದ್ರನ ದಕ್ಷಿಣ ಧ್ರುವವನ್ನು ಅರಿಯುವ ಪ್ರಯತ್ನದಲ್ಲಿ ಶೇ.97 ಸಫಲವಾಗಿದ್ದು ಚಂದ್ರನ ಮೇಲಿಳಿಸಬೇಕಾಗಿದ್ದ ವಿಕ್ರಮ್ ಲ್ಯಾಂಡರ್ ಕೊನೆಯ 2 ಕಿ.ಮೀ. ಅಂತರದಲ್ಲಿರುವಾಗ ಸಾಫ್ಟ್ ಲ್ಯಾಂಡ್ ಆಗದೆ ಕ್ರ್ಯಾಶ್ ಲ್ಯಾಂಡ್ ಆಗಿತ್ತು.

ಆದರೆ ಕಳೆದ ನಾಲ್ಕು ವರ್ಷಗಳಿಂದ ಚಂದ್ರಯಾನ-2 ರಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧಪಡಿಸಲಾಗಿದ್ದ ಚಂದ್ರಯಾನ – 3 ಅನ್ನು ಜುಲೈ 14, 2023ರಂದು ಉಡಾವಣೆ ಮಾಡಲಾಗಿತ್ತು. ಅದೇ ದಿನ ಭೂಮಿಯ ಕಕ್ಷೆಯನ್ನು ಸೇರಿದ್ದ ಉಪಗ್ರಹ, 5 ಬಾರಿ ಭೂಮಿಯನ್ನು ಸುತ್ತುವರಿದು, ಆಗಸ್ಟ್ 1 ರಂದು ಚಂದ್ರನ ಕಕ್ಷೆಯತ್ತ ಪಯಣ ಬೆಳೆಸಿ, ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ತಲುಪಿತ್ತು. ಆಗಸ್ಟ್ 17ರಂದು ವಿಕ್ರಂ ಲ್ಯಾಂಡರ್, ಪ್ರೊಪಲ್ಷನ್ ಮಾಡ್ಯುಲ್ ನಿಂದ ಬೇರ್ಪಟ್ಟು ತನ್ನ ಸ್ವಂತ ಬಲದೊಂದಿಗೆ ಚಂದ್ರನ ಸ್ಪರ್ಶಕ್ಕೆ ಮುಂದಾಗಿತ್ತು. ಕೊನೆಗೆ ಅಗಸ್ಟ್ 23ರಂದು ಸಂಜೆ 5.44ರಿಂದ ಸಂಜೆ 6.04ರ ವರೆಗಿನ ಚಂದ್ರನ ಮೇಲೆ ಇಳಿಯುವ ಇಪ್ಪತ್ತು ನಿಮಿಷಗಳ ಕಠಿಣ ಪ್ರಕ್ರಿಯೆಯನ್ನು ಸುಗಮವಾಗಿ ನಿಭಾಯಿಸಿ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಜಗತ್ತಿನ ಏಕೈಕ ರಾಷ್ಟ್ರ ಭಾರತ ಎಂಬ ಹೆಗ್ಗಳಿಕೆಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.