ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ।ಮೋಹನ್ ಭಾಗವತ್ ಅವರು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ಪುತ್ತಿಗೆ ಮಠದ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಭಗವದ್ಗೀತೆಯ ಸಂದೇಶವನ್ನು ಸಾರುವ ‘ಅನುಭವ ಮಂಟಪ’ ಎಂಬ ಎಕ್ಸ್ ಪೀರಿಯನ್ಸ್ ಥಿಯೇಟರ್ ಅನ್ನು ಉದ್ಘಾಟಿಸಿದರು. ಈ ಸಂದರ್ಭ ಸಹಸರಕಾರ್ಯವಾಹ ಮುಕುಂದ ಸಿ ಆರ್ ಉಪಸ್ಥಿತರಿದ್ದರು.

ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಸರಸಂಘಚಾಲಕರ ಸನಾತನ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ನೀಡಿದ ಮಹೋನ್ನತ ಸೇವೆಯನ್ನು ಪರಿಗಣಿಸಿ ‘ಹಿಂದು ಸಾಮ್ರಾಟ್’ ಎಂಬ ಬಿರುದು ಹಾಗೂ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸಹಿತ ಸನ್ಮಾನಿಸಿ ಶ್ರೀ ಕೃಷ್ಣ ಮುಖ್ಯಪ್ರಾಣರ ಪ್ರಸಾದವಿತ್ತು ಅನುಗ್ರಹಿಸಿದರು.

ಶ್ರೀಕೃಷ್ಣನ ದರ್ಶನದ ಬಳಿಕ ಡಾ. ಮೋಹನ್ ಭಾಗವತ್ ಅವರು ಗೀತಾಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಶ್ರೀಗಳು ಅಲ್ಲಿನ ಗೀತಾಶಿಲಾ ಲೇಖನ ಧ್ಯಾನ ಮಂದಿರ, ವಾದಿರಾಜ ಸಂಶೋಧನ ಮಂದಿರಗಳನ್ನು ಪರಿಚಯಿಸಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು. ತಮ್ಮ ಚತುರ್ಥ ಪರ್ಯಾಯಾವಧಿಯ ಅತ್ಯಂತ ದೂರದೃಷ್ಟಿಯ ‘ಕೋಟಿ ಗೀತಾಲೇಖನ ಯಜ್ಞ’ದ ಕುರಿತೂ ವಿವರಿಸಿದರು. ಗೀತೋತ್ಸವ ಸಂದರ್ಭದಲ್ಲಿಯೇ ಆಗಮಿಸಿದ ಡಾ ಭಾಗವತರಿಗೆ ಗೀತಾಲೇಖನ ಯಜ್ಞದ ದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿದರು.

ವರ್ತಮಾನದಲ್ಲಿ ದೇಶ ಮತ್ತು ಬಾಂಗ್ಲಾ ಮೊದಲಾದೆಡೆಗಳಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ವಿದ್ಯಮಾನಗಳ ಕುರಿತಾಗಿಯೂ ಈರ್ವರೂ ಗಹನ ಚರ್ಚೆ ನಡೆಸಿದರು. ಸನಾತನ ಧರ್ಮದ ರಕ್ಷಣೆ, ಪೋಷಣೆ, ಸಂವರ್ಧನೆಯ ವಿಚಾರದಲ್ಲಿ ಪ್ರತಿಯೊಬ್ಬ ಹಿಂದು ಶೂನ್ಯ ಸಹಿಷ್ಣುವಾಗಿರಬೇಕು ಮತ್ತು ಸಮಸ್ತ ಸಾಧು ಸಂತ ಸಮಾಜ ಹಿಂದೆಂದಿಗಿಂತಲೂ ಹೆಚ್ಚು ಸಮರ್ಥವಾಗಿ ಸಮಾಜಕ್ಕೆ ಧಾರ್ಮಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಮಾರ್ಗದರ್ಶನ ನೀಡಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.

ಶತಮಾನದ ಹೊಸ್ತಿಲಲ್ಲಿರುವ ಸಂಘವು ದೇಶದಲ್ಲಿ ಸನಾತನ ಧರ್ಮದ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ನೀಡುತ್ತಿರುವ ಕೊಡುಗೆಗಳ ಬಗ್ಗೆ ಅತೀವ ಪ್ರಶಂಸೆ ವ್ಯಕ್ತಪಡಿಸಿದ ಶ್ರೀಗಳು ಸಂಘವಿಲ್ಲದಿದ್ದರೆ ಹಿಂದೂಗಳು ದೇಶದಲ್ಲಿ ಮತ್ತಷ್ಟು ಬವಣೆಗಳನ್ನು ಅನುಭವಿಸಬೇಕಾದ ಸಂಭವ ಇತ್ತು. ಆದರೆ ಡಾ.ಕೇಶವ ಬಲಿರಾಮ ಹೆಡಗೇವಾರರಿಂದ ಡಾ. ಮೋಹನ್ ಭಾಗವತ್ ರವರೆಗೂ ಸಂಘವನ್ನು ಮುನ್ನಡೆಸಿದ ಸಮಸ್ತ ನೇತಾರರೂ ತಮ್ಮ ರಾಷ್ಟ್ರೀಯ ಬದ್ಧತೆ ಹಾಗೂ ತ್ಯಾಗಪೂರ್ಣ ಬದುಕಿನಿಂದ ಅಸಂಖ್ಯ ಜನರಲ್ಲಿ ರಾಷ್ಟ್ರ ಭಕ್ತಿಯ ತೇಜಸ್ಸನ್ನು ಜಾಗೃತಗೊಳಿಸಿದ ಪರಿ ಅನನ್ಯ ಮತ್ತು ಅದ್ಭುತ ಎಂದೂ ಬಣ್ಣಿಸಿದರು‌.

ವರ್ತಮಾನದ ಸಂಕೀರ್ಣ ಸ್ಥಿತಿಯಲ್ಲಿ ಭಾಗವತರಂಥವರ ಮತ್ತು ಸಂಘ ಶಕ್ತಿಯ ಅನಿವಾರ್ಯತೆ ಇದೆ . ಬಹುಕಾಲ ಅವರ ಸೇವೆ ಮಾರ್ಗದರ್ಶನಗಳು ದೇಶಕ್ಕೆ ಲಭಿಸುವಂತಾಗಲಿ ಎಂದು ಹಾರೈಸಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರಿಂದಲೂ ಭಾಗವತ್ ಆಶೀರ್ವಾದ ಪಡೆದರು.

RSS Sarasanghachalak Dr Mohan Bhagwat visited Sri Krishna Matha at Udupi, Karnataka and cordially met Pujya Sri Sugunendra Theertha Swaini. Bhagwat ji inaugurated an experience theatre ‘Anubhava Mantapam’ to deliver message of Bhagavadgeeta. RSS Sahsarakaryavah Mukunda CR, others were present on the occasion.

Leave a Reply

Your email address will not be published.

This site uses Akismet to reduce spam. Learn how your comment data is processed.