ಸಂದರ್ಶನ: ಡಾ. ಮೋಹನ್ ಭಾಗವತ್, ಸರಸಂಘಚಾಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಮಾನದ ವರ್ಷವನ್ನು ಸಮೀಪಿಸುತ್ತಿರುವ ಸಂದರ್ಭದಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೈದ್ಧಾಂತಿಕ ತಳಹದಿ, ದೇಶದ ಸದ್ಯದ ಸ್ಥಿತಿ ಹಾಗೂ ಭವಿಷ್ಯದ ಕುರಿತು ಮಾತನಾಡಿದ್ದಾರೆ.


ತಾವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಮತ್ತು ಸರಸಂಘಚಾಲಕರಾಗಿ, ಸಂಘದ 100 ವರ್ಷಗಳ ಪಯಣವನ್ನು ಹೇಗೆ ನೋಡುತ್ತೀರಿ?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡಗೆವಾರ್ ಅವರು ಸಂಘದ ಕೆಲಸವನ್ನು ಬಹಳ ಆಳವಾದ ಚಿಂತನೆಯ ಆಧಾರದಲ್ಲಿ ಆರಂಭಿಸಿದರು. ದೇಶದ ಮುಂದಿರುವ ಸಂಕಷ್ಟಗಳಿಗೆ ಯಾವ ಪರಿಹಾರಗಳನ್ನು ಕೈಗೊಳ್ಳಬೇಕು ಎಂಬುದನ್ನು ಪ್ರಯೋಗಗಳ ಆಧಾರದ ಮೇಲೆ ನಿರ್ಧರಿಸಲಾಯಿತು ಮತ್ತು ಆ ಕಾರ್ಯಗಳು ಯಶಸ್ವಿಯಾದವು. ಸಂಘದ ಕಾರ್ಯವಿಧಾನದಿಂದ ಸಫಲತೆ ಲಭಿಸುತ್ತದೆ ಮತ್ತು ದಾರಿಯಲ್ಲಿ ಬರುವ ಎಲ್ಲ ಅಡೆತಡೆಗಳನ್ನು ದಾಟಿ ಸಂಘ ಮುಂದುವರಿಯಬಹುದು ಎಂಬುದು ಅನುಭವದಿಂದ ಸಾಬೀತಾಗಿದ್ದು 1950ರ ವೇಳೆಗೆ. ಆನಂತರ ಸಂಘದ ದೇಶವ್ಯಾಪಿ ವಿಸ್ತರಣೆ ಮತ್ತು ಸಮಾಜದೊಳಗೆ ಸ್ವಯಂಸೇವಕರ ಸಮ್ಮಿಳನ ಪ್ರಾರಂಭವಾಯಿತು. ಮುಂದಿನ ನಾಲ್ಕು ದಶಕಗಳವರೆಗೆ ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ತಮ್ಮ ಕರ್ತೃತ್ವ, ಸ್ನೇಹಭಾವ ಮತ್ತು ಶೀಲದ ಆಧಾರದ ಮೇಲೆ ಸಮಾಜದ ವಿಶ್ವಾಸವನ್ನು ಗಳಿಸಿದರು. 1990 ನಂತರ ಈ ಚಿಂತನೆ ಮತ್ತು ತಮ್ಮ ಗುಣಸಂಪತ್ತಿನ ಆಧಾರದ ಮೇಲೆ ದೇಶವನ್ನು ಮುನ್ನಡೆಸಬಹುದು ಎಂಬುದನ್ನು ಸಾಬೀತುಪಡಿಸಿದರು. ಭವಿಷ್ಯದಲ್ಲಿ ನಮ್ಮ ಮುಂದಿರುವ ಕರ್ತವ್ಯವೆಂದರೆ, ಇದೇ ಗುಣಮಟ್ಟ ಮತ್ತು ಚಿಂತನೆಯ ಆಧಾರದಲ್ಲಿ ಸಮಾಜವು ಎಲ್ಲ ಬೇಧಗಳನ್ನು ಮರೆತು ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಬುದ್ಧಿಯಿಂದ ದೇಶಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸುವಂತೆ ಮಾಡುವುದು ಹಾಗೂ ಆ ಮೂಲಕ ದೇಶವನ್ನು ಶ್ರೇಷ್ಠವನ್ನಾಗಿಸುವುದು.


100 ವರ್ಷಗಳ ಈ ಪಯಣದಲ್ಲಿ ಸಂಘವು ಕಂಡ ಪ್ರಮುಖ ಹಂತಗಳು ಯಾವುವು?
ಆರಂಭದ ದಿನಗಳಲ್ಲಿ ಸಂಘದ ಬಳಿ ಏನೂ ಇರಲಿಲ್ಲ. ಸಂಘದ ಚಿಂತನೆಗೆ ಸಮಾಜದಲ್ಲಿ ಮಾನ್ಯತೆ ಇರಲಿಲ್ಲ, ಪ್ರಚಾರದ ಸಾಧನ ಇರಲಿಲ್ಲ. ಸಮಾಜದಲ್ಲಿ ಇದ್ದದ್ದು ಕೇವಲ ಉಪೇಕ್ಷೆ ಮತ್ತು ವಿರೋಧ. ಕಾರ್ಯಕರ್ತರೂ ಇರಲಿಲ್ಲ. ಇಷ್ಟೆಲ್ಲ ದತ್ತಾಂಶವನ್ನು ನೀವು ಕಂಪ್ಯೂಟರ್‌ಗೆ ನೀಡಿ, ಈ ರೀತಿಯ ಸ್ಥಿತಿಯಲ್ಲಿರುವ ಸಂಘಟನೆ ಭವಿಷ್ಯದಲ್ಲಿ ಏನಾಗಬಹುದು ಎಂದು ಕೇಳಿದರೆ, ‘ಅದು ಹುಟ್ಟಿದ ಕೂಡಲೆ ಕೊನೆಯುಸಿರೆಳೆಯುತ್ತದೆʼ ಎಂಬ ಭವಿಷ್ಯವಾಣಿಯನ್ನೇ ನುಡಿಯುತ್ತದೆ. ಆದರೆ ದೇಶದ ವಿಭಜನೆಯ ಸಮಯದಲ್ಲಿ ಹಿಂದೂಗಳ ರಕ್ಷಣೆಯ ಸವಾಲು ಮತ್ತು ಸಂಘದ ಮೇಲಿನ ನಿಷೇಧದ ಕಠಿಣ ಸಂಕಷ್ಟಗಳಿಂದ ಸಂಘ ಯಶಸ್ವಿಯಾಗಿ ಹೊರಬಂದಿತು ಹಾಗೂ ಸಂಘದ ಕೆಲಸ ಮುಂದುವರಿಯುತ್ತದೆ ಹಾಗೂ ಬೆಳೆಯುತ್ತದೆ ಎಂಬುದು 1950ರ ವೇಳೆಗೆ ಸಾಬೀತಾಯಿತು. ಈ ವಿಧಾನದಿಂದ ಹಿಂದೂ ಸಮಾಜವನ್ನು ಸಂಘಟಿಸಬಹುದು ಎಂಬುದು ಅರಿವಾದ ನಂತರದಲ್ಲಿ ಸಂಘದ ವಿಸ್ತರಣೆ ಇನ್ನಷ್ಟು ಹೆಚ್ಚಾಯಿತು. 1975ರ ತುರ್ತು ಪರಿಸ್ಥಿತಿಯಲ್ಲಿ ಸಂಘದ ಭಾಗವಹಿಸುವಿಕೆಯಿಂದಾಗಿ ಈ ಶಕ್ತಿಯ ಮಹತ್ವ ಸಮಾಜದ ಗಮನಕ್ಕೆ ಬಂದಿತು. ಏಕಾತ್ಮತಾ ರಥಯಾತ್ರೆ, ಕಾಶ್ಮೀರದ ಕುರಿತು ಜನಜಾಗೃತಿ, ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನ, ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಅಭಿಯಾನಗಳ ಮೂಲಕ ಮತ್ತು ಸೇವಾ ಕಾರ್ಯಗಳ ಭಾರೀ ವಿಸ್ತರಣೆಯಿಂದ ಸಮಾಜದಲ್ಲಿ ಸಂಘದ ಚಿಂತನೆ ಮತ್ತು ವಿಶ್ವಾಸಾರ್ಹ ಭಾವನೆ ಗಣನೀಯವಾಗಿ ಹೆಚ್ಚಾಯಿತು.


1948 ಮತ್ತು 1975ರಲ್ಲಿ ಎರಗಿಬಂದ ಸಂಕಷ್ಟಗಳಿಂದ ಸಂಘಟನೆ ಕಲಿತ ಪಾಠಗಳೇನು?
ಈ ಎರಡೂ ನಿಷೇಧಗಳ ಹಿಂದೆ ರಾಜಕೀಯ ಉದ್ದೇಶವಿತ್ತು. ಸಂಘದಿಂದ ಯಾವುದೇ ಹಾನಿಯಿಲ್ಲ, ಬದಲಿಗೆ ಲಾಭವೇ ಇದೆ ಎನ್ನುವುದು ನಿಷೇಧ ಹೇರಿದವರಿಗೂ ತಿಳಿದಿತ್ತು. ಆದರೂ, ಇಷ್ಟು ವಿಸ್ತೃತ ಸಮಾಜದಲ್ಲಿ ಸಹಜವಾಗಿ ವಿಸ್ತಾರವಾಗುವ ಚಿಂತನೆಗಳೊಂದಿಗಿನ ಸ್ಪರ್ಧೆಯಲ್ಲಿ ತಮ್ಮ ರಾಜಕೀಯ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದ ಪಟ್ಟಭದ್ರರು ಸಂಘದ ಮೇಲೆ ನಿಷೇಧ ಹೇರಿದರು. ಮೊದಲ ನಿಷೇಧದಲ್ಲಿ ಸಂಘಕ್ಕೆ ಎಲ್ಲ ಸಂಗತಿಗಳೂ ವಿರುದ್ಧವಾಗಿದ್ದವು. ಹಾಗೆ ನೋಡಿದರೆ ಸಂಘವು ಸಂಪೂರ್ಣವಾಗಿ ಧೂಳೀಪಟವಾಗಬೇಕಿತ್ತು. ಆದರೆ ಎಲ್ಲ ವಿರೋಧದ ನಡುವೆಯೂ ಸಂಘ ಆ ನಿಷೇಧದಿಂದ ಹೊರಬಂದಿತು ಮತ್ತು ಮುಂದಿನ 15-20 ವರ್ಷಗಳಲ್ಲಿ ಪೂರ್ವಸ್ಥಿತಿಗೆ ಮರಳಿ, ಹಿಂದಿಗಿಂತಲೂ ಹೆಚ್ಚು ಮುನ್ನಡೆಯಿತು. ತಮ್ಮ ಪಾಡಿಗೆ ತಾವು ಶಾಖೆಗಳನ್ನು ನಡೆಸುವುದರಲ್ಲಷ್ಟೆ ಮಗ್ನರಾಗಿದ್ದ ಸಂಘದ ಸ್ವಯಂಸೇವಕರು ಸಮಾಜದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸಿದರು. 1948ರ ನಿಷೇಧದಿಂದ ಸಂಘಕ್ಕೆ ತನ್ನ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಲಾಭವಾಯಿತು ಮತ್ತು ಸಮಾಜದಲ್ಲಿ ಹಾಗೂ ವ್ಯವಸ್ಥೆಗಳಲ್ಲಿ ಬದಲಾವಣೆ ತರುವ ಯೋಜನೆಯೊಂದಿಗೆ ಸ್ವಯಂಸೇವಕರು ಮುಂದುವರಿದರು. ಸಂಘದ ಕೆಲಸ ಕೇವಲ ಒಂದು ಗಂಟೆಯ ಶಾಖೆಗೆ ಸೀಮಿತವಲ್ಲ, ಬದಲಿಗೆ ದಿನದ ಉಳಿದ 23 ಗಂಟೆಗಳಲ್ಲಿ ವೈಯಕ್ತಿಕ, ಕೌಟುಂಬಿಕ, ಸಾರ್ವಜನಿಕ ಮತ್ತು ಜೀವನೋಪಾಯದ ಚಟುವಟಿಕೆಗಳಲ್ಲಿ ಸಂಘದ ಸಂಸ್ಕಾರಗಳನ್ನು ಅಭಿವ್ಯಕ್ತಪಡಿಸಬೇಕು ಎನ್ನುವುದು ನಿಶ್ಚಯವಾಗಿದ್ದು ಇದೇ ಅವಧಿಯಲ್ಲಿ. 1975ರ ನಿಷೇಧದಲ್ಲಿ ಸಂಘದ ಈ ವಿಸ್ತರಿತ ಶಕ್ತಿಯ ಅನುಭವವು ಸಮಾಜಕ್ಕೆ ಆಯಿತು. ಇನ್ನು ಏನೂ ಆಗುವುದಿಲ್ಲ ಎಂದು ದೊಡ್ಡದೊಡ್ಡವರೆಲ್ಲ ನಿರಾಶೆಗೊಂಡು ಕುಳಿತಿದ್ದಾಗ, ಈ ಸಂಕಷ್ಟವು ತೊಲಗುತ್ತದೆ ಮತ್ತು ನಾವೆಲ್ಲರೂ ಸುರಕ್ಷಿತವಾಗಿ ಇದನ್ನು ಮೆಟ್ಟಿನಿಲ್ಲುವೆವು ಎಂದು ಸಾಮಾನ್ಯ ಸ್ವಯಂಸೇವಕನೂ ವಿಶ್ವಾಸದಿಂದ ಯೋಚಿಸುತ್ತಿದ್ದ. 1975ರ ತುರ್ತು ಪರಿಸ್ಥಿತಿಯಲ್ಲಿ ಸಂಘವು ತನ್ನ ಮೇಲಿನ ನಿಷೇಧವನ್ನು ಪ್ರಮುಖ ವಿಷಯವನ್ನಾಗಿಸದೆ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕೆಲಸ ಮಾಡಿತು, ಸಂಘವನ್ನು ಟೀಕಿಸುವವರೊಂದಿಗೂ ಕೈಜೋಡಿಸಿತು. ಆ ಸಮಯದಲ್ಲಿ ವಿಶೇಷವಾಗಿ ಸಮಾಜದ ಚಿಂತಕ ವಲಯದಲ್ಲಿ ಸಂಘವು ಒಂದು ವಿಶ್ವಾಸಾರ್ಹ ಚಿಂತನೆಯ ಕೇಂದ್ರವಾಗಿ ಸ್ಥಾನ ಪಡೆಯಿತು. ತುರ್ತು ಪರಿಸ್ಥಿತಿಯ ನಂತರ ಸಂಘವು ಹಲವು ಪಟ್ಟು ಬಲಿಷ್ಠವಾಗಿ ಹೊರಹೊಮ್ಮಿತು.


ಭೌಗೋಳಿಕ ಮತ್ತು ಸಂಖ್ಯಾತ್ಮಕ ದೃಷ್ಟಿಯಿಂದ ಸಂಘ ಬೆಳೆಯುತ್ತಿದೆ. ಕಾರ್ಯದ ಗುಣಮಟ್ಟ ಮತ್ತು ಸ್ವಯಂಸೇವಕರ ತರಬೇತಿ ಗುಣಮಟ್ಟದಲ್ಲೂ ಸಂಘ ಯಶಸ್ವಿಯಾಗಿದೆ. ಇದು ಹೇಗೆ ಸಾಧ್ಯವಾಯಿತು?
ಗುಣಮಟ್ಟ ಮತ್ತು ಸಂಖ್ಯೆ ಎಂಬ ಎರಡು ವಿಷಯಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸದೆಯೇ ಕೇವಲ ಗುಣಮಟ್ಟವನ್ನು ಹೆಚ್ಚಿಸುತ್ತಾಹೋದರೆ ಅಥವಾ ಗುಣಮಟ್ಟವನ್ನು ಹೆಚ್ಚಿಸದೆ ಕೇವಲ ಸಂಖ್ಯೆಯನ್ನು ಏರಿಸುತ್ತಾಹೋದರೆ ಅತ್ತ ಗುಣಮಟ್ಟವೂ ಹೆಚ್ಚುವುದಿಲ್ಲ ಇತ್ತ ಸಂಖ್ಯೆಯೂ ಉಳಿಯುವುದಿಲ್ಲ. ಇದನ್ನು ಅರಿತೇ ಸಂಘವು ಸಂಪೂರ್ಣ ಸಮಾಜವನ್ನು ಸಂಘಟಿಸಬೇಕು ಎಂಬುದರ ಮೇಲೆಯೇ ಗಮನ ಕೇಂದ್ರೀಕರಿಸಿದೆ. ಒಬ್ಬ ವ್ಯಕ್ತಿಯನ್ನು ತಯಾರು ಮಾಡುವುದು ಹೇಗೆ? ಅಂತಹ ಎಲ್ಲ ವ್ಯಕ್ತಿಗಳ ಸಮೂಹ ಅಥವಾ ಸಂಘಟನೆ ಹೇಗಿರಬೇಕು? ‘ನಾವು’ ಎಂಬ ಭಾವನೆ ಹೇಗೆ ಅಭಿವ್ಯಕ್ತಗೊಳ್ಳಬೇಕು ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಕೆಲವು ಮಾನದಂಡಗಳನ್ನು ಈಗಾಗಲೆ ನಿರ್ಧರಿಸಲಾಗಿದೆ. ಆ ಮಾನದಂಡಗಳನ್ನು ಉಳಿಸಿಕೊಂಡೇ ಸಂಖ್ಯೆಯನ್ನು ಹೆಚ್ಚಿಸಬೇಕು. ಮಾನದಂಡಗಳನ್ನು ಉಳಿಸಿಕೊಳ್ಳುವುದು ಎಂದರೆ ಜನರನ್ನು ಸಂಘಟನೆಯಿಂದ ಹೊರಗಿಡುವುದು ಎಂದರ್ಥವಲ್ಲ. ಇದಕ್ಕೆ ಒಂದು ಉದಾಹರಣೆಯಿದೆ: ಒಂದು ದೊಡ್ಡ ಸಂಘಟನೆಯ ಆರಂಭದ ದಿನಗಳಲ್ಲಿ, ಸಮಾಜವಾದಿ ಚಿಂತನೆಯ ಒಬ್ಬ ವ್ಯಕ್ತಿ ಆ ಸಂಘಟನೆಯ ಕಾರ್ಯಕರ್ತನಾಗಿ ಸೇರ್ಪಡೆಗೊಂಡ. ಅವನಿಗೋ ನಿರಂತರ ಸಿಗರೇಟ್ ಸೇದುವ ಚಟವಿತ್ತು. ಅವನು ಇದೇ ಮೊದಲ ಬಾರಿಗೆ ಸಂಘಟನೆಯ ಶಿಬಿರಕ್ಕೆ ಆಗಮಿಸಿದ. ಅಲ್ಲಿ ಸಿಗರೇಟ್ ಸೇದುವವರಿರಲಿ, ಸುಪಾರಿ ತಿನ್ನುವ ಅಭ್ಯಾಸ ಹೊಂದಿರುವವರೂ ಇರಲಿಲ್ಲ. ಹೊಸ ಕಾರ್ಯಕರ್ತ ದಿನವಿಡೀ ತವಕಿಸುತ್ತಲೇ ಇದ್ದ. ರಾತ್ರಿ ಹಾಸಿಗೆಯಲ್ಲಿ ಮಲಗಿದಾಗ ನಿದ್ದೆಯೇ ಬರಲಿಲ್ಲ. ಆಗ ಸಂಘಟನಾ ಕಾರ್ಯದರ್ಶಿಯೊಬ್ಬರು ಬಂದು, “ನಿದ್ದೆ ಬರುತ್ತಿಲ್ಲವೇ? ಹೊರಗೆ ಹೋಗಿ ಸ್ವಲ್ಪ ಓಡಾಡಿಕೊಂಡು ಬರೋಣ ಬಾ” ಎಂದು ಕರೆದರು. ಹೊರಗೆ ಕರೆದೊಯ್ದು, “ಅಗೋ ಅಲ್ಲಿ ಮುಂದಿನ ಚೌಕದಲ್ಲಿ ಸಿಗರೇಟ್ ಸಿಗುತ್ತದೆ. ಮನಸಾರೆ ಸೇದಿಕೊಂಡು ಬಾ. ಶಿಬಿರದೊಳಗೆ ಸಿಗರೇಟ್ ಸಿಗುವುದಿಲ್ಲ” ಎಂದರು. ಆ ಹೊಸ ಕಾರ್ಯಕರ್ತ ಸಂಘಟನೆಯಲ್ಲಿ ಉಳಿದುಕೊಂಡ. ತುಂಬಾ ಒಳ್ಳೆಯ ಕಾರ್ಯಕರ್ತನಾದ. ಮುಂದಿನ ದಿನಗಳಲ್ಲಿ ಸಿಗರೇಟ್ ಚಟದಿಂದಲೂ ಹೊರಗೆಬಂದ. ಸಂಘಟನೆಯನ್ನು ಆ ಪ್ರಾಂತದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ದ. ವ್ಯಕ್ತಿಯನ್ನು ಅವನು ಹೇಗಿದ್ದಾನೋ ಹಾಗೆಯೇ ಸ್ವೀಕರಿಸಬೇಕು ಎಂಬ ವಿಚಾರವನ್ನು ನಾವು ಹೊಂದಿದ್ದೇವೆ. ಹಾಗೆಯೇ ನಿಧಾನವಾಗಿ ಆತನನ್ನು ನಮಗೆ ಬೇಕಾದಂತೆ ರೂಪಿಸುವ ಸ್ನೇಹಮಯ ಕೌಶಲವನ್ನೂ ರೂಢಿಸಿಕೊಂಡಿದ್ದೇವೆ. ಈ ಧೈರ್ಯ ಮತ್ತು ಶಕ್ತಿಯನ್ನು ನಾವು ಹೊಂದಿದ್ದೇವೆ. ಇದರಿಂದಾಗಿಯೇ ಸಂಘವು ಸಂಖ್ಯೆಯ ಆಧಾರದಲ್ಲಿ ಬೆಳೆಯುವುದರ ಜತೆಗೇ ಗುಣಮಟ್ಟವನ್ನೂ ಕಾಯ್ದುಕೊಂಡಿದೆ. ಸಂಘಟನೆಯಲ್ಲಿ ಗುಣಮಟ್ಟ ಬೇಕು ಎನ್ನುವುದೇನೋ ಸರಿ. ಅದರ ಜತೆಗೆ ಸಂಪೂರ್ಣ ಸಮಾಜವನ್ನೇ ಗುಣಮಟ್ಟದಿಂದ ಕೂಡಿರುವಂತೆ ಮಾಡಬೇಕು ಎಂಬ ಅರಿವನ್ನೂ ನಾವು ಇರಿಸಿಕೊಂಡಿದ್ದೇವೆ.


ಸಂಘವು ಇಂದಿಗೂ ಡಾ. ಹೆಡಗೆವಾರ್ ಮತ್ತು ಗುರೂಜಿ ಅವರ ಮೂಲ ಚಿಂತನೆಗಳಿಗೆ ಅನುಗುಣವಾಗಿ ನಡೆಯುತ್ತಿದೆ. ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಈ ಮೂಲಚಿಂತನೆಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ?


ಡಾಕ್ಟರ್‌ಜಿ, ಶ್ರೀಗುರೂಜಿ ಅಥವಾ ಬಾಳಾಸಾಹೇಬ್ ದೇವರಸ್ ಅವರ ಚಿಂತನೆಗಳು ಸನಾತನ ಪರಂಪರೆ ಅಥವಾ ಸಂಸ್ಕೃತಿಯಿಂದ ಭಿನ್ನವಾದವಲ್ಲ. ಗಾಢವಾದ ಚಿಂತನೆ ಮತ್ತು ಕಾರ್ಯಕರ್ತರು ನಡೆಸಿದ ಪ್ರಯೋಗಗಳ ನೇರ ಅನುಭವದಿಂದ ಸಂಘದ ವಿಧಾನವು ಸ್ಥಿರವಾಯಿತು ಹಾಗೂ ಅದು ಈಗಲೂ ಮುಂದುವರಿಯುತ್ತಿದೆ. ಒಂದು ಪುಸ್ತಕಕ್ಕೆ ನಿಷ್ಠೆ, ವ್ಯಕ್ತಿನಿಷ್ಠೆ ಅಥವಾ ಮೂಢನಂಬಿಕೆಗೆ ಸಂಘದಲ್ಲಿ ಸ್ಥಾನವಿಲ್ಲ. ನಾವು ತತ್ವಪ್ರಧಾನವಾಗಿದ್ದೇವೆ. ಮಹಾಪುರುಷರ ಗುಣಗಳನ್ನು, ಅವರು ತೋರಿಸಿದ ದಿಕ್ಕನ್ನು ಅನುಸರಿಸಬೇಕು, ಸರಿ. ಆದರೆ ಪ್ರತಿ ದೇಶ-ಕಾಲ-ಪರಿಸ್ಥಿತಿಯಲ್ಲಿ ತಾವೇ ದಾರಿಯನ್ನು ರೂಪಿಸಿಕೊಂಡು ನಡೆಯಬೇಕು. ಇದೆಲ್ಲಕ್ಕೂ ನಿತ್ಯ-ಅನಿತ್ಯ ವಿವೇಕ ಇರಬೇಕು. ಸಂಘದಲ್ಲಿ ನಿತ್ಯವಾದದ್ದು ಏನು? “ಹಿಂದೂಸ್ಥಾನವು ಹಿಂದೂರಾಷ್ಟ್ರವಾಗಿದೆ” ಎಂಬ ಈ ಮಾತನ್ನು ಬಿಟ್ಟು ಸಂಘದಲ್ಲಿ ಉಳಿದ ಎಲ್ಲ ವಿಚಾರಗಳೂ ಬದಲಾಗಬಹುದು ಎಂದು ಬಾಳಾಸಾಹೇಬ್ ದೇವರಸ್ ಅವರು ಒಮ್ಮೆ ಹೇಳಿದ್ದರು. ಸಂಪೂರ್ಣ ಹಿಂದೂ ಸಮಾಜವು ಈ ದೇಶದ ಉತ್ತರದಾಯಿ ಸಮಾಜ. ಈ ದೇಶದ ಸ್ವಭಾವ ಮತ್ತು ಸಂಸ್ಕೃತಿಯು ಹಿಂದೂಗಳ ಸಂಸ್ಕೃತಿ. ಆದ್ದರಿಂದಲೇ ಇದು ಹಿಂದೂ ರಾಷ್ಟ್ರ. ಈ ವಿಷಯವನ್ನು ಆಧಾರವಾಗಿಸಿಕೊಂಡು ಎಲ್ಲ ಕಾರ್ಯವನ್ನೂ ಮಾಡಬೇಕು. ಆದ್ದರಿಂದಲೇ “ನಮ್ಮ ಪವಿತ್ರವಾದ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಸಮಾಜ ಇವುಗಳನ್ನು ಸಂರಕ್ಷಿಸಿ, ಹಿಂದೂರಾಷ್ಟ್ರದ ಸರ್ವಾಂಗೀಣ ಉನ್ನತಿಯನ್ನು ಮಾಡುವುದಕ್ಕಾಗಿ ಕೆಲಸ ಮಾಡುವುದು ಎಂದು ಸ್ವಯಂಸೇವಕರ ಪ್ರತಿಜ್ಞೆಯಲ್ಲಿ ಹೇಳಲಾಗಿದೆ. ಇದರಲ್ಲಿ ‘ಹಿಂದೂ’ ಎಂಬುದರ ವ್ಯಾಖ್ಯೆ ವಿಶಾಲವಾಗಿದೆ. ಆ ಚೌಕಟ್ಟಿನೊಳಗೇ ತನ್ನ ದಿಶೆಯನ್ನು ಕಾಯ್ದುಕೊಂಡು, ದೇಶ-ಕಾಲ-ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ನಡೆಯಲು ಸಾಕಷ್ಟು ಅವಕಾಶವಿದೆ. ಸಂಘದ ಪ್ರತಿಜ್ಞೆಯಲ್ಲಿ, “ನಾನು ಸಂಘದ ಘಟಕನಾಗಿದ್ದೇನೆ” ಎಂದೂ ಹೇಳಲಾಗುತ್ತದೆ. ಘಟಕ ಎಂದರೆ ಸಂಘವನ್ನು ರೂಪಿಸುವವನು, ಸಂಘದ ಸಣ್ಣ ರೂಪ ಮತ್ತು ಸಂಘದ ಅವಿಭಾಜ್ಯ ಅಂಗ ಎಂದರ್ಥ. ಆದ್ದರಿಂದ ಪರಸ್ಪರರ ನಡುವೆ ವಿಭಿನ್ನ ಅಭಿಪ್ರಾಯಗಳಿದ್ದರೂ, ಚರ್ಚೆಯಲ್ಲಿ ಅವುಗಳ ಅಭಿವ್ಯಕ್ತಿಗೆ ಪೂರ್ಣ ಸ್ವಾತಂತ್ರ‍್ಯವಿದೆ. ಒಮ್ಮೆ ಒಮ್ಮತ ಸಾಧಿಸಿ ನಿರ್ಧಾರವಾದರೆ, ಎಲ್ಲರೂ ತಮ್ಮ-ತಮ್ಮ ಅಭಿಪ್ರಾಯವನ್ನು ಆ ನಿರ್ಧಾರದಲ್ಲಿ ವಿಲೀನಗೊಳಿಸಿ ಒಂದೇ ದಿಕ್ಕಿನಲ್ಲಿ ನಡೆಯುತ್ತಾರೆ. ಕೈಗೊಂಡ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು ಎಂಬುದು ಮನಃಸ್ಥಿತಿ. ಆದ್ದರಿಂದ ಇಲ್ಲಿ ಎಲ್ಲರಿಗೂ ಕೆಲಸ ಮಾಡುವ ಸ್ವಾತಂತ್ರ‍್ಯವಿದೆ ಮತ್ತು ಎಲ್ಲರ ದಿಕ್ಕೂ ಒಂದೇ ಆಗಿರುತ್ತದೆ. ನಿತ್ಯವಾದದ್ದನ್ನು ನಾವು ಕಾಯ್ದುಕೊಳ್ಳುತ್ತೇವೆ ಮತ್ತು ಅನಿತ್ಯವಾದದ್ದನ್ನು ದೇಶ-ಕಾಲ-ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿಕೊಂಡು ಮುನ್ನಡೆಯುತ್ತೇವೆ.


ಸಂಘವನ್ನು ಒಳಗಿನಿಂದ ಅನುಭವಿಸದೆಯೇ ಹೊರಗಿನಿಂದ ನೋಡುವವರಿಗೆ ಅದರ ಸಂರಚನೆ ಮಾತ್ರ ಕಾಣುತ್ತದೆ. ಸಂಘದ ಆಂತರ್ಯದಲ್ಲಿ ಚರ್ಚೆ-ಪರಾಮರ್ಶೆ ಮತ್ತು ಆತ್ಮಾವಲೋಕನದ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ?


ಇದಕ್ಕಾಗಿ ಸಂಘದಲ್ಲಿ ಒಂದು ವಿಧಾನವನ್ನು ರೂಪಿಸಲಾಗಿದೆ. ಇದರಲ್ಲಿಯೇ ಉದ್ದೇಶ ಮತ್ತು ಆಶಯವೂ ನಿಶ್ಚಿತವಾಗಿದೆ. ಆದರೆ ಅವುಗಳನ್ನು ನೀಡುವ ವಿಧಾನವು ವಿಭಿನ್ನವಾಗಿರಬಹುದು. ಹೊರಗಿನ ಸಂರಚನೆಯು ಬದಲಾಗಬಹುದು, ಆದರೆ ಆ ಸಂರಚನೆಯೊಳಗಿನ ವಿಷಯವು ಸ್ಥಿರವಾಗಿದೆ. ಪರಿಸ್ಥಿತಿಯ ಜೊತೆಗೆ ಮನಃಸ್ಥಿತಿಯೂ ಮುಖ್ಯ. ಆದ್ದರಿಂದ ನಮ್ಮ ತರಬೇತಿಗಳಲ್ಲಿ ದೇಶದ ಸ್ಥಿತಿ, ಸವಾಲುಗಳು ಮುಂತಾದ ಹಲವಾರು ಚಿಂತನೆಗಳಿರುತ್ತವೆ. ಇದರ ಜೊತೆಗೆ, ವಿವಿಧ ಸಂದರ್ಭಗಳಲ್ಲಿ ಸ್ವಯಂಸೇವಕನು ಹೇಗಿರಬೇಕು, ಸಂಘಟನೆಯು ಯಾವ ಗುಣಗಳ ಆಧಾರದ ಮೇಲೆ ರೂಪಿತವಾಗಿದೆ, ತನ್ನಲ್ಲಿ ಆ ಗುಣಗಳನ್ನು ಬೆಳೆಸಿಕೊಳ್ಳಲು ಏನು ಮಾಡುತ್ತೇವೆ ಎಂಬ ವಿಷಯಗಳ ಬಗ್ಗೆಯೂ ಚಿಂತನೆ ನಡೆಯುತ್ತದೆ. ಪ್ರಾರ್ಥನೆಯಲ್ಲಿ ನಮ್ಮ ಸಾಮೂಹಿಕ ಸಂಕಲ್ಪವನ್ನು ಮತ್ತು ಪ್ರತಿಜ್ಞೆಯಲ್ಲಿ ಪ್ರತಿ ಸ್ವಯಂಸೇವಕನ ವೈಯಕ್ತಿಕ ಸಂಕಲ್ಪವನ್ನು ಪ್ರತಿದಿನ ಸ್ಮರಿಸಲಾಗುತ್ತದೆ. ಸ್ವಯಂಸೇವಕ ಎಂದರೆ ಸ್ವಯಂ ಕಾರ್ಯಪ್ರವೃತ್ತನಾಗುವವನು ಎಂದರ್ಥ. ಸಂಘದ ಘಟಕ ಎಂಬ ಪದದ ಅರ್ಥವೆಂದರೆ, “ನಾನು ಹೇಗಿರುವೆನೋ, ಸಂಘವೂ ಹಾಗೆಯೇ ಇದೆ; ಸಂಘವು ಹೇಗಿರುವುದೋ, ನಾನೂ ಹಾಗೆಯೇ ಇದ್ದೇನೆ” ಎನ್ನುವುದು. ಸಮುದ್ರದ ಪ್ರತಿ ಹನಿಯೂ ಸಮುದ್ರದಂತಿರುತ್ತದೆ ಮತ್ತು ಎಲ್ಲ ಹನಿಗಳಿಂದಲೇ ಸಮುದ್ರ ರೂಪುಗೊಳ್ಳುತ್ತದೆಯಲ್ಲ, ಹಾಗೆಯೆ. ಈ ‘ಒಂದು’ ಮತ್ತು ‘ಪೂರ್ಣ’ದ ಸಂಬಂಧವು ಸಂಘದಲ್ಲಿ ಆರಂಭದಿಂದಲೂ ಹಸಿರಾಗಿಯೇ ಉಳಿದಿದೆ. ಇಲ್ಲಿ ಸ್ವಯಂಸೇವಕನ ಆತ್ಮಾವಲೋಕನವು ನಿರಂತರವಾಗಿ ನಡೆಯುತ್ತದೆ. ಯಶಸ್ಸಿನ ಶ್ರೇಯಸ್ಸು ಸಂಪೂರ್ಣ ಸಂಘಕ್ಕೆ ಸಲ್ಲುತ್ತದೆ. ಹಿನ್ನಡೆಯ ಸ್ಥಿತಿಯಲ್ಲಾದರೆ, “ಯಾವ ಹಂತದಲ್ಲಿ ನನ್ನ ಪ್ರಯತ್ನದಲ್ಲಿ ಕೊರತೆಯಾಯಿತು” ಎಂದು ಪ್ರತಿ ಸ್ವಯಂಸೇವಕ ಚಿಂತನೆ ನಡೆಸುತ್ತಾನೆ. ಸ್ವಯಂಸೇವಕರ ತರಬೇತಿ ಎಂದರೆ ಇದೇ.
ಸಮಾಜ ಬದಲಾಗಿದೆ, ಜೀವನಶೈಲಿ ಬದಲಾಗಿದೆ. ಇಂತಹ ಸಂದರ್ಭದಲ್ಲಿ ಸಂಘದ ದೈನಂದಿನ ಶಾಖೆಯ ಮಾದರಿಯು ಎಷ್ಟು ಪರಿಣಾಮಕಾರಿಯಾಗಿದೆ? ಅಥವಾ ಈ ಮಾದರಿಗೆ ಯಾವುದಾದರೂ ಪರ್ಯಾಯ ವ್ಯವಸ್ಥೆಯಿದೆಯೇ?


ಶಾಖೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪರ್ಯಾಯವಿರಬಹುದು, ಮತ್ತು ಅದನ್ನು ನಾವು ಸ್ವೀಕರಿಸುತ್ತೇವೆ. ಆದರೆ, ಒಟ್ಟಿಗೆ ಸೇರುವುದು, ಸದ್ಗುಣಗಳ ಸಾಮೂಹಿಕ ಆಚರಣೆ, “ನಾವು ಮಾತೃಭೂಮಿಗಾಗಿ ಕಾರ್ಯ ಮಾಡುತ್ತಿದ್ದೇವೆ, ಪರಮವೈಭವಕ್ಕಾಗಿ ಕಾರ್ಯ ಮಾಡುತ್ತಿದ್ದೇವೆ” ಎನ್ನುವಂತಹ ಭಾವನೆ, ಪರಸ್ಪರರ ಭೇಟಿ, ಒಬ್ಬರಿಗೊಬ್ಬರು ಸಹಕಾರ ನೀಡುವಂತಹವು ಶಾಖೆಯ ಮೂಲ ತತ್ವಗಳು. ಇವುಗಳಿಗೆ ಪರ್ಯಾಯವಿಲ್ಲ. ಸಾಮಾನ್ಯ ವ್ಯಕ್ತಿಯು ಇತರರೊಡನೆ ಸಂಪರ್ಕಕ್ಕೆ ಬರುವವರೆಗೂ ಸಾಮಾನ್ಯನೇ ಆಗಿರುತ್ತಾನೆ. ಇತರರ ಸಂಪರ್ಕಕ್ಕೆ ಬಂದ ನಂತರ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಕಾರ್ಯವನ್ನು ಮಾಡುತ್ತಾನೆ, ಅಸಾಮಾನ್ಯ ತ್ಯಾಗವನ್ನೂ ಮಾಡುತ್ತಾನೆ. ಆದರೆ, ಇದಕ್ಕೆ ಒಂದು ವಾತಾವರಣವಿರಬೇಕು ಮತ್ತು ಆ ವಾತಾವರಣದೊಂದಿಗೆ ಆತ ಸಂಪರ್ಕದಲ್ಲಿರಬೇಕು. ಮಾದರಿ ಮತ್ತು ಸ್ನೇಹಭಾವವೇ ಬದಲಾವಣೆಯ ಮೂಲಗಳು; ಬೇರೆ ಯಾವುದೂ ಅಲ್ಲ. ವಿಶ್ವದಲ್ಲಿ ಎಲ್ಲಿಗೆ ಹೋಗಿ ನೋಡಿದರೂ, ಅಲ್ಲಿ ಬದಲಾವಣೆಯಾದಾಗ ಒಂದು ಮಾದರಿಯಿರುತ್ತದೆ. ಅದೆಂದರೆ, “ಮೊದಲು ತನ್ನನ್ನು ಬದಲಾಯಿಸಿಕೊಳ್ಳಬೇಕು, ಅದನ್ನು ನೋಡಿ ಜನರಲ್ಲಿ ಬದಲಾವಣೆಯಾಗುತ್ತದೆ”. ದೂರದಲ್ಲೆಲ್ಲೋ ಇದ್ದುಕೊಂಡು ಕಾರ್ಯವನ್ನು ಮಾಡಲಾಗದು. ಒಡನಾಟವಿರಬೇಕು, ಸನಿಹದಲ್ಲಿರಬೇಕು. ನಮ್ಮಲ್ಲಿ ಅನೇಕ ಮಹಾಪುರುಷರು ಇದ್ದಾರೆ. ಅವರನ್ನು ಅರಿತಿದ್ದೇವೆ, ಅವರ ಬಗ್ಗೆ ಶ್ರದ್ಧೆ, ಗೌರವವಿದೆ. ಆದರೆ, ನಾನು ಯಾರ ಸಹವಾಸದಲ್ಲಿರುತ್ತೇನೆಯೋ ಹಾಗೆಯೇ ನಡೆಯುತ್ತೇನೆ. ನನ್ನ ಸ್ನೇಹಿತನಾದರೂ, ನನಗಿಂತ ಸ್ವಲ್ಪ ಒಳ್ಳೆಯವನಾದರೆ ಅವನನ್ನೇ ಅನುಸರಿಸುತ್ತೇನೆ. ಇದು, ಬದಲಾವಣೆಯು ನಡೆಯುವುದರ ಸಾಮಾನ್ಯ ವಿಧಾನ. ಈ ಮಾದರಿಯಲ್ಲಿ ಎಲ್ಲಿಯೂ ಬದಲಾವಣೆ ಕಂಡಿಲ್ಲ. ಶಾಖೆಯಲ್ಲಿನ ಕಾರ್ಯಕ್ರಮಗಳು, ಸಮಯ ಬದಲಾಗುತ್ತದೆ, ಉಡುಪು ಬದಲಾಗುತ್ತದೆ. ಶಾಖೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮೊದಲಿನಿಂದಲೂ ಅವಕಾಶವಂತೂ ಇದ್ದೇ ಇದೆ. ಆದ್ದರಿಂದಲೇ ಹೇಳಿದ್ದು, ಶಾಖೆಗೆ ಪರ್ಯಾಯ ಮಾದರಿಯಿಲ್ಲ ಎಂದು. ಶಾಖೆ ಎಂದಿಗೂ ಅಪ್ರಸ್ತುತವಾಗುವುದಿಲ್ಲ. ಇಂದು ನಮ್ಮ ಶಾಖೆಯ ಮಾದರಿಯ ಬಗ್ಗೆ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜನರು ಬಂದು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನಾವೂ ಈ ಕುರಿತು ಚಿಂತನೆ ನಡೆಸುತ್ತೇವೆ. ಬೇರೆ ಯಾವುದಾದರೂ ಪರ್ಯಾಯವಿದೆಯೇ ಎಂದು ಚರ್ಚಿಸುತ್ತೇವೆ. ಇಂತಹ ಚಿಂತನೆಗಳಲ್ಲಿ ನಾನು ಇದುವರೆಗೆ 6-7 ಬಾರಿ ಭಾಗವಹಿಸಿದ್ದೇನೆ. ಆದರೆ ನಾವು ಕೈಗೊಳ್ಳಬೇಕಿರುವ ಕಾರ್ಯಕ್ಕೆ ಅನುಗುಣವಾದ ಪರ್ಯಾಯವು ಇನ್ನೂ ಸಿಕ್ಕಿಲ್ಲ.

ಸಂಘವು ಬುಡಕಟ್ಟು ಸಮುದಾಯಗಳ ಪ್ರದೇಶಗಳಲ್ಲಿ ಹೇಗೆ ಬೆಳೆಯುತ್ತಿದೆ?
ಬುಡಕಟ್ಟು ಸಮುದಾಯಗಳ ಪ್ರದೇಶಗಳಲ್ಲಿ ಸಂಘದ ಮೊದಲ ಕೆಲಸವೆಂದರೆ ಬುಡಕಟ್ಟು ಬಂಧುಗಳನ್ನು ಸಶಕ್ತಗೊಳಿಸುವುದು, ಅವರ ಸೇವೆ ಮಾಡುವುದು ಎನ್ನುವುದಾಗಿತ್ತು. ನಂತರದ ದಿನಗಳಲ್ಲಿ, ಅವರ ಹಿತಾಸಕ್ತಿಗಳ ರಕ್ಷಣೆಗಾಗಿ ಪ್ರಯತ್ನಿಸುವುದೂ ಇದರೊಟ್ಟಿಗೆ ಸೇರಿಕೊಂಡಿತು. ಈಗ ನಮ್ಮ ಬುಡಕಟ್ಟು ಸಮಾಜವು ಬೇರೆಯವರ ಮುಂದಾಳತ್ವದಿಂದ ನಡೆಯುತ್ತಿದೆ. ತಮ್ಮ ಸಮಾಜದ ಕುರಿತು ಚಿಂತನೆ ನಡೆಸುವ ಮತ್ತು ಸಂಪೂರ್ಣ ರಾಷ್ಟ್ರೀಯ ಜೀವನದ ಒಂದು ಅಂಗವೆಂದು ತಿಳಿದುಕೊಂಡು ಅವರನ್ನು ಮುಂದಕ್ಕೆ ಕೊಂಡೊಯ್ಯುವ ನಾಯಕತ್ವವು ಬುಡಕಟ್ಟು ಸಮಾಜದಿಂದಲೇ ಎದ್ದುಬರಬೇಕೆಂದು ನಾವು ಬಯಸುತ್ತೇವೆ. ಈ ಪ್ರದೇಶಗಳಲ್ಲಿ ಕೆಲಸ ಮಾಡುವ ಸ್ವಯಂಸೇವಕರ ಸಂಖ್ಯೆ ಹೆಚ್ಚುತ್ತಿದೆ. ಬುಡಕಟ್ಟು ಸಮಾಜವೆಂದರೇನು, ಅವರ ಬೇರುಗಳು ಎಲ್ಲಿವೆ, ಬುಡಕಟ್ಟು ಸಮಾಜದ ಮಹಾಪುರುಷರು, ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ ಬುಡಕಟ್ಟು ನಾಯಕರು… ಈ ಎಲ್ಲ ವಿಷಯಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುತ್ತಾ, ಕ್ರಮೇಣ ರಾಷ್ಟ್ರೀಯ ಸ್ವರದಲ್ಲಿ ಮಾತನಾಡುವ, ಕೊಡುಗೆ ನೀಡುವ ಕಾರ್ಯಕರ್ತರು ಮತ್ತು ನಾಯಕತ್ವವು ಅಲ್ಲಿ ಎದ್ದುನಿಲ್ಲುವಂತೆ ಮಾಡುವ ಪ್ರಯತ್ನ ನಡೆದಿದೆ. ಈಶಾನ್ಯದ ಜೊತೆಗೆ ಇತರ ಬುಡಕಟ್ಟು ಪ್ರದೇಶಗಳಲ್ಲಿ ಸಂಘದ ಶಾಖೆಗಳು ಹೆಚ್ಚುತ್ತಿವೆ.

ಭಾರತದ ನೆರೆಯ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾಗುತ್ತಿದೆ. ಮಾನವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವವರು ಹಿಂದೂಗಳ ಬಗ್ಗೆಯೂ ಅಂತಹ ಕಾಳಜಿಯನ್ನು ತೋರಿಸುತ್ತಿದ್ದಾರೆಯೇ? ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲೂ ಈ ವಿಷಯಕ್ಕೆ ಒತ್ತುನೀಡಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಹಿಂದೂ ಸಮಾಜವು ಸಶಕ್ತವಾದಾಗ ಮಾತ್ರವೇ ಹಿಂದೂಗಳ ಕುರಿತು ಕಾಳಜಿಯು ವ್ಯಕ್ತವಾಗುತ್ತದೆ. ಏಕೆಂದರೆ ಹಿಂದೂ ಸಮಾಜ ಮತ್ತು ಭಾರತ ದೇಶವು ಒಂದಕ್ಕೊಂದು ಬೆಸೆದುಕೊಂಡಿವೆ. ಉತ್ತಮವಾದ ಹಿಂದೂ ಸಮಾಜವು ಭಾರತವನ್ನು ಉತ್ತಮ ದೇಶವನ್ನಾಗಿಸುತ್ತದೆ. ತಾವು ಹಿಂದೂಗಳೆಂದು ಕರೆದುಕೊಳ್ಳದವರನ್ನೂ ಒಡಗೂಡಿಸಿಕೊಂಡು ನಡೆಯಬಹುದು. ಏಕೆಂದರೆ ಅವರೂ ಹಿಂದೊಮ್ಮೆ ಹಿಂದೂಗಳೇ ಆಗಿದ್ದರು. ಭಾರತದ ಹಿಂದೂ ಸಮಾಜವು ಸಾಮರ್ಥ್ಯವಂತವಾದರೆ, ವಿಶ್ವದಾದ್ಯಂತದ ಹಿಂದೂಗಳಿಗೆ ಸ್ವಾಭಾವಿಕವಾಗಿ ಸಾಮರ್ಥ್ಯದ ಅರಿವಾಗುತ್ತದೆ. ಈ ಕೆಲಸ ನಡೆಯುತ್ತಿದೆಯಾದರೂ ಇನ್ನೂ ಪೂರ್ಣಗೊಂಡಿಲ್ಲ. ಕ್ರಮೇಣ ಆ ಸ್ಥಿತಿಯು ಬರುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆದ ದೌರ್ಜನ್ಯಕ್ಕೆ ಈ ಬಾರಿ ತೋರಿದ ಆಕ್ರೋಶದ ಪ್ರಕಟೀಕರಣವು ಈ ಹಿಂದೆ ಎಂದೂ ಆಗಿರಲಿಲ್ಲ. ಅಷ್ಟೇ ಅಲ್ಲ, ಅಲ್ಲಿನ ಹಿಂದೂಗಳು ತಾವು ಓಡಿಹೋಗುವುದಿಲ್ಲ, ಬದಲಿಗೆ ಅಲ್ಲಿಯೇ ಉಳಿದು ತಮ್ಮ ಹಕ್ಕುಗಳನ್ನು ಪಡೆಯುವುದಾಗಿ ಹೇಳಿದ್ದಾರೆ. ಈಗ ಹಿಂದೂ ಸಮಾಜದ ಆಂತರಿಕ ಸಾಮರ್ಥ್ಯವು ಹೆಚ್ಚುತ್ತಿದೆ. ಸಂಘಟನೆಯು ಬೆಳವಣಿಗೆ ಆಗುತ್ತಿದ್ದರೆ ಅದರ ಪರಿಣಾಮವು ಸ್ವಾಭಾವಿಕವಾಗಿ ಮುನ್ನೆಲೆಗೆ ಬರುತ್ತದೆ. ಅಲ್ಲಿಯವರೆಗೆ ಹೋರಾಡುತ್ತಲೇ ಇರಬೇಕು. ವಿಶ್ವದ ಎಲ್ಲೆಡೆಯೂ ಹಿಂದೂಗಳಿರುವ ಜಾಗದಲ್ಲಿ, ಹಿಂದೂ ಸಂಘಟನೆಯಾಗಿ, ತನ್ನ ವ್ಯಾಪ್ತಿಯಲ್ಲಿದ್ದುಕೊಂಡು ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡುವೆವು. ಸಂಘ ಇರುವುದೇ ಅದಕ್ಕಾಗಿ. “ಧರ್ಮ, ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸಿ ರಾಷ್ಟ್ರದ ಸರ್ವಾಂಗೀಣ ಉನ್ನತಿಗೆ” ಕೆಲಸ ಮಾಡುತ್ತೇವೆ ಎನ್ನುವುದೇ ಸ್ವಯಂಸೇವಕರ ಪ್ರತಿಜ್ಞೆಯಲ್ಲವೇ?


ಜಾಗತಿಕ ವ್ಯವಸ್ಥೆಯಲ್ಲಿ ಸೈನಿಕ ಶಕ್ತಿ, ರಾಷ್ಟ್ರೀಯ ಭದ್ರತೆ, ಆರ್ಥಿಕ ಶಕ್ತಿಯು ತನ್ನದೇ ಆದ ಮಹತ್ವವನ್ನು ಹೊಂದಿವೆ. ಸಂಘವು ಇದರ ಬಗ್ಗೆ ಏನು ಆಲೋಚಿಸುತ್ತದೆ?
ಶಕ್ತಿವಂತರಾಗಬೇಕಾದ ಅನಿವಾರ್ಯತೆ ಇದೆ. ‘ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್’—ನಮ್ಮನ್ನು ಯಾರೂ ಗೆಲ್ಲಲಾಗದಂತಹ ಸಾಮರ್ಥ್ಯ ಇರಬೇಕು ಎನ್ನುವ ಮಾತುಗಳು ಸಂಘದ ಪ್ರಾರ್ಥನೆಯಲ್ಲೇ ಇದೆ. ನಮಗೆ ಸ್ವಂತ ಎಷ್ಟು ಶಕ್ತಿ ಇದೆಯೋ ಅದಷ್ಟೇ ನಿಜವಾದ ಶಕ್ತಿ. ಭದ್ರತೆಯ ವಿಷಯದಲ್ಲಿ ನಾವು ಯಾರ ಮೇಲೂ ಅವಲಂಬಿತರಾಗಿರಬಾರದು, ನಾವೇ ನಮ್ಮ ಭದ್ರತೆಯನ್ನು ಮಾಡಿಕೊಳ್ಳಬೇಕು. ಇಡೀ ವಿಶ್ವವೇ ಒಟ್ಟಾಗಿ ಬಂದರೂ ನಮ್ಮನ್ನು ಗೆಲ್ಲಲಾಗದಂತಹ ಸಾಮರ್ಥ್ಯವಂತರಾಗಿರಬೇಕು. ಏಕೆಂದರೆ ವಿಶ್ವದಲ್ಲಿ ಕೆಲವು ದುಷ್ಟ ಜನರಿದ್ದಾರೆ, ಅವರು ಸ್ವಭಾವದಿಂದಲೇ ಆಕ್ರಮಣಕಾರಿಯಾಗಿರುತ್ತಾರೆ. ಸಜ್ಜನ ವ್ಯಕ್ತಿಯು ಕೇವಲ ಸಜ್ಜನತೆಯಿಂದ ಸುರಕ್ಷಿತನಾಗಿರುವುದಿಲ್ಲ. ಸಜ್ಜನತೆಯ ಜೊತೆಗೆ ಶಕ್ತಿಯೂ ಬೇಕು. ಕೇವಲ ಶಕ್ತಿಯಿದ್ದರೆ ಅದು ದಿಕ್ಕುತಪ್ಪಿ ಹಿಂಸೆಗೆ ಕಾರಣವಾಗಬಹುದು. ಆದ್ದರಿಂದ ಶಕ್ತಿಯ ಜೊತೆಗೆ ಸನ್ನಡತೆಯೂ ಬೇಕು. ಈ ಎರಡರ ಆರಾಧನೆಯನ್ನು ನಾವು ಮಾಡಬೇಕು. ಭಾರತವು ಅಜೇಯವಾಗಿರಬೇಕು. ‘ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್’ ಎಂಬಂತಹ ಸಾಮರ್ಥ್ಯವಿರಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ದುಷ್ಟ ಶಕ್ತಿಗಳನ್ನು ಬಲವಂತವಾಗಿಯಾದರೂ ನಾಶಪಡಿಸಬೇಕು. ಆದರೆ ಸನ್ನಡತೆಯ ಸ್ವಭಾವವಿದ್ದರೆ, ರಾವಣನನ್ನು ನಾಶಮಾಡಿ, ಆ ಸ್ಥಾನದಲ್ಲಿ ವಿಭೀಷಣನನ್ನು ರಾಜನನ್ನಾಗಿ ಮಾಡಿ ಹಿಂದಿರುಗುತ್ತೇವೆ. ವಿಶ್ವದ ಮೇಲೆ ನಮ್ಮ ಛಾಪು ಮೂಡಲಿ ಎಂಬ ಕಾರಣಕ್ಕಾಗಿ ನಾವು ಇದೆಲ್ಲವನ್ನೂ ಮಾಡುತ್ತಿಲ್ಲ. ಎಲ್ಲರ ಜೀವನವೂ ಆರೋಗ್ಯಪೂರ್ಣವಾಗಲಿ, ಎಲ್ಲರೂ ಸಾಮರ್ಥ್ಯವಂತರಾಗಲಿ ಎಂಬ ಕಾರಣಕ್ಕಾಗಿ ಮಾಡುತ್ತಿದ್ದೇವೆ. ಶಕ್ತಿವಂತರಾಗಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ದುಷ್ಟ ಜನರ ದುಷ್ಟತೆಯ ಅನುಭವವನ್ನು ನಾವು ನಮ್ಮ ಎಲ್ಲ ಗಡಿಗಳಲ್ಲಿಯೂ ಎದುರಿಸುತ್ತಿದ್ದೇವೆ.

ಭಾರತದಲ್ಲಿ ಭಾಷಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯಿದೆ. ಇದರ ಹಿನ್ನೆಲೆಯಲ್ಲಿ ಸಂಘವು ಎಲ್ಲರನ್ನೂ ಹೇಗೆ ಒಳಗೊಳ್ಳುತ್ತದೆ?
ಇದಕ್ಕೆ ಉತ್ತರ ಬೇಕೆಂದರೆ ಸಂಘದೊಳಗೆ ಬಂದು ನೋಡಬೇಕು. ಎಲ್ಲ ಭಾಷೆಗಳ, ಧರ್ಮ, ಪಂಥಗಳ ಜನರು ತುಂಬಾ ಆನಂದದಿಂದ ಒಟ್ಟಿಗೆ ಸಂಘದಲ್ಲಿ ಕೆಲಸ ಮಾಡುತ್ತಾರೆ. ಸಂಘದ ಗೀತೆಗಳು ಕೇವಲ ಹಿಂದಿಯಲ್ಲಿರುವುದಿಲ್ಲ, ಅನೇಕ ಭಾಷೆಗಳಲ್ಲಿವೆ. ಪ್ರತಿ ಭಾಷೆಯಲ್ಲೂ ಸಂಘದ ಗೀತೆಗಳನ್ನು ಹಾಡುವ ಗಾಯಕರು, ಗೀತೆಗಳನ್ನು ರಚಿಸುವ ಕವಿಗಳು, ಸಂಗೀತ ಸಂಯೋಜಕರಿದ್ದಾರೆ. ಆದರೂ, ಸಂಘದ ಶಿಕ್ಷಣ ವರ್ಗಗಳಲ್ಲಿ ಕೊಡಲಾಗುವ ಮೂರು ಗೀತೆಗಳನ್ನು ಭಾರತದಾದ್ಯಂತ ಎಲ್ಲರೂ ಹಾಡುತ್ತಾರೆ. ಎಲ್ಲರೂ ತಮ್ಮ-ತಮ್ಮ ವಿಶಿಷ್ಟತೆಯನ್ನು ಕಾಯ್ದುಕೊಂಡು, ರಾಷ್ಟ್ರೀಯತೆಯನ್ನು ಗೌರವಿಸುತ್ತಾ, ಸಂಪೂರ್ಣ ಸಮಾಜದ ಏಕತೆಯ ಅರಿವನ್ನು ರಕ್ಷಿಸಿಕೊಂಡು ನಡೆಯುತ್ತಿದ್ದಾರೆ. ಇದೇ ಸಂಘ. ಇಷ್ಟು ವಿವಿಧತೆಯಿಂದ ಕೂಡಿರುವ ಸಮಾಜವನ್ನು ಒಂದು ದಾರದಲ್ಲಿ ಪೋಣಿಸಬೇಕಾಗಿರುವ ದಾರವನ್ನು ನೀಡುವುದೇ ನಮ್ಮ ಕೆಲಸ.
ಸಂಘವು ಸಾಮಾಜಿಕ ಸಾಮರಸ್ಯದ ಬಗ್ಗೆ ಮಾತನಾಡುತ್ತದೆ ಮತ್ತು ಅದಕ್ಕಾಗಿ ಕೆಲಸವನ್ನೂ ಮಾಡುತ್ತದೆ. ಆದರೆ ಕೆಲವರು ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಈ ಎರಡರ ನಡುವಿನ ವ್ಯತ್ಯಾಸವನ್ನು ನೀವು ಹೇಗೆ ನೋಡುತ್ತೀರಿ?
ಸಮಾನತೆ ಎನ್ನುವುದು ಆರ್ಥಿಕವಾಗಿ, ರಾಜಕೀಯವಾಗಿರುವುದರ ಜತೆಗೆ ಸಾಮಾಜಿಕ ಸಮಾನತೆಯೂ ಬರಬೇಕು. ಇಲ್ಲದಿದ್ದರೆ ಆರ್ಥಿಕ, ರಾಜಕೀಯ ಸಮಾನತೆಗೆ ಅರ್ಥವಿರುವುದಿಲ್ಲ. ಬಂಧುಭಾವವೇ ಸಾಮರಸ್ಯ. ಸ್ವಾತಂತ್ರ‍್ಯ ಮತ್ತು ಸಮತೆಯ ಆಧಾರವೇ ಬಂಧುಭಾವ. ಸ್ವಾತಂತ್ರ‍್ಯವಿಲ್ಲದ ಸಮತೆಯು ಸಂಕುಚಿತತೆಯನ್ನು ತರುತ್ತದೆ, ಮತ್ತು ಸಮಾನತೆಯು ಶಾಶ್ವತವಾಗಿರಬೇಕಾದರೆ ಬಂಧುಭಾವದ ಆಧಾರ ಬೇಕು. ಈ ಬಂಧುಭಾವವೇ ಸಾಮರಸ್ಯ. ಇದು ಸಮಾನತೆಯ ಮೊದಲ ಹೆಜ್ಜೆ. ಜಾತಿಭೇದ, ಅಸ್ಪೃಶ್ಯತೆಯ ವಿರುದ್ಧ ಕಾನೂನಿದ್ದರೂ ಅಸಮಾನತೆಯು ಹೋಗಿಲ್ಲ. ಏಕೆಂದರೆ ಅಸಮಾನತೆಯು ನಿಜವಾಗಿ ಜೀವಂತವಾಗಿರುವುದು ಮನಸ್ಸಿನಲ್ಲಿ. ಮೊದಲಿಗೆ ಅಸಮಾನತೆಯನ್ನು ಮನಸ್ಸಿನಿಂದ ತೆಗೆಯಬೇಕು. ಎಲ್ಲರೂ ನಮ್ಮವರೇ, ಆದ್ದರಿಂದಲೇ ನಾವೆಲ್ಲರೂ ಸಮಾನರಾಗಿದ್ದೇವೆ ಎಂದು ಒಪ್ಪಿಕೊಳ್ಳಬೇಕು. ನೋಡಲು ನಾವ್ಯಾರೂ ಏಕರೂಪವಾಗದಿದ್ದರೂ ಪರಸ್ಪರರಿಗಾಗಿಯೇ ಇದ್ದೇವೆ. ನಾವೆಲ್ಲರೂ ಸ್ನೇಹದಲ್ಲಿ ಬಂಧಿತರಾಗಿದ್ದೇವೆ. ಇದೇ ಸಾಮರಸ್ಯ. ಪ್ರೇಮಭಾವ, ಬಂಧುಭಾವವೇ ಸಾಮರಸ್ಯ.


ಸಂಘದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುರಿತು ಆಗಾಗ ಸವಾಲುಗಳು ಏಳುತ್ತಿರುತ್ತವೆ. ಇದರ ಬಗ್ಗೆ ನೀವು ಏನು ಹೇಳುತ್ತೀರಿ?


ಮಹಿಳೆಯರಲ್ಲಿ ವ್ಯಕ್ತಿನಿರ್ಮಾಣ ಮತ್ತು ಸಮಾಜ ಸಂಘಟನೆಯ ಕೆಲಸವನ್ನು ರಾಷ್ಟ್ರ ಸೇವಿಕಾ ಸಮಿತಿಯ ಮೂಲಕವೇ ಮಾಡಬೇಕೆಂದು 1933ರ ಸುಮಾರಿಗೆ ನಿರ್ಧಾರವಾಯಿತು. ಅದೇ ಈಗಲೂ ನಡೆಯುತ್ತಿದೆ. ಮಹಿಳೆಯರ ನಡುವೆಯೂ ಸಂಘವೇ ಕಾರ್ಯ ಮಾಡಲಿ ಎಂದು ರಾಷ್ಟ್ರ ಸೇವಿಕಾ ಸಮಿತಿಯು ಹೇಳುವವರೆಗೂ ನಾವು ಆ ಕಾರ್ಯಕ್ಕೆ ಹೋಗುವುದಿಲ್ಲ. ಎರಡನೇಯದಾಗಿ, ಸಂಘದ ಶಾಖೆಯ ಕಾರ್ಯಕ್ರಮಗಳು ಪುರುಷರಿಗಾಗಿಯೇ ಇವೆ. ಕಾರ್ಯಕ್ರಮಗಳನ್ನು ನೋಡಲು ಮಹಿಳೆಯರು ಬರುತ್ತಿದ್ದಾರೆ. ಆದರೆ ಸಂಘದ ಕೆಲಸವು ಕೇವಲ ಪುರುಷ ಕಾರ್ಯಕರ್ತರಿಂದಷ್ಟೇ ನಡೆಯುವುದಿಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕು. ಸ್ವಯಂಸೇವಕನ ತಾಯಿ-ತಂಗಿ-ಪತ್ನಿಯ ಸಹಕಾರದಿಂದಲೇ ಸಂಘ ನಡೆಯುತ್ತಿರುವುದು. ಸಂಘದ ಸ್ವಯಂಸೇವಕನ ಮನೆಯಲ್ಲಿ ಎಷ್ಟು ಮಹಿಳೆಯರಿದ್ದಾರೋ, ಅಷ್ಟೂ ಮಹಿಳೆಯರು ಸಂಘದಲ್ಲಿದ್ದಾರೆ ಎಂದೇ ಅರ್ಥ. ವಿವಿಧ ಸಂಘಟನೆಗಳಲ್ಲಿ (ಸಂಘ ಪರಿವಾರ) ಮಹಿಳೆಯರು ಸಂಘದ ಸ್ವಯಂಸೇವಕರ ಜೊತೆಗೇ ಕೆಲಸ ಮಾಡುತ್ತಾರೆ. ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಸಕ್ರಿಯ ಭಾಗವಹಿಸುವಿಕೆಯಿದೆ. ಮೊದಲ ಬಾರಿಗೆ ಭಾರತದ ಮಹಿಳಾ ಜಗತ್ತಿನ ವಿಶಾಲ ಸಮೀಕ್ಷೆಯನ್ನು ಮಾಡಿದವರು ಇದೇ ಮಹಿಳೆಯರು. ಈ ಸಮೀಕ್ಷೆಯನ್ನು ಸರ್ಕಾರವೂ ಸ್ವೀಕರಿಸಿದೆ. ಕಳೆದ ವರ್ಷ ದೇಶಾದ್ಯಂತ ಮಹಿಳಾ ಸಮ್ಮೇಳನಗಳನ್ನು ಮಹಿಳೆಯರೇ ಆಯೋಜಿಸಿದ್ದಾರೆ, ಇದರಲ್ಲಿ ಲಕ್ಷಾಂತರ ಮಹಿಳೆಯರು ಭಾಗವಹಿಸಿದ್ದಾರೆ. ಈ ಎಲ್ಲ ಕಾರ್ಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಮತ್ತು ಸಹಕಾರವಿತ್ತು. ಮಹಿಳೆಯರ ಉದ್ಧಾರವನ್ನು ಪುರುಷರು ಮಾಡಲಾಗದು, ಮಹಿಳೆಯರೇ ತಮ್ಮ ಉದ್ಧಾರವನ್ನು ಮಾಡಿಕೊಳ್ಳಲು ಸಶಕ್ತರು ಎಂದು ನಾವು ನಂಬಿದ್ದೇವೆ. ಮಹಿಳೆಯರು ಸಬಲರಾದಾಗ ಎಲ್ಲರ ಉದ್ಧಾರವೂ ಆಗುತ್ತದೆ.


ಸಂಘದ ಶತಮಾನದ ವರ್ಷದಲ್ಲಿ ಪಂಚ ಪರಿವರ್ತನೆಯ ಸಂಕಲ್ಪವನ್ನು ಕೈಗೊಳ್ಳಲಾಗಿದೆ. ಯಾವುದರ ಆಧಾರದಲ್ಲಿ ಇವುಗಳನ್ನು ಅನುಷ್ಠಾನಗೊಳಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವ ಕಾರ್ಯಯೋಜನೆಯನ್ನು ರೂಪಿಸಲಾಗಿದೆ?


ನಡವಳಿಕೆಯ ಬದಲಾವಣೆಗೆ ಬೇಕಾಗಿರುವುದು ಮನಸ್ಸಿನ ಭಾವನೆ. ಯಾವ ಕೆಲಸ ಮಾಡುವುದರಿಂದ ಮನಸ್ಸಿನ ಭಾವನೆ ಬದಲಾಗುತ್ತದೆಯೋ, ಸ್ವಭಾವವು ರೂಪಾಂತರಗೊಳ್ಳುತ್ತದೆಯೋ, ಆ ಕೆಲಸವನ್ನು ನೀಡಬೇಕು. ಆಗ ಜೀವನವೂ ಸರಿಯಾಗುತ್ತದೆ. ಆದ್ದರಿಂದ ಪಂಚ ಪರಿವರ್ತನೆಯ ಮಾತನ್ನು ಹೇಳುತ್ತಿದ್ದೇವೆ.
೧. ಮೊದಲನೆಯದಾಗಿ ಸಾಮರಸ್ಯದ ಮಾತು. ನಮ್ಮ ಸಮಾಜದಲ್ಲಿ ಪ್ರೀತಿ ಹೆಚ್ಚಬೇಕು. ನಮ್ಮ ಸಮಾಜವು ವಿವಿಧ ಸ್ವರೂಪದಲ್ಲಿದೆ, ವಿವಿಧ ಸ್ಥಿತಿಗಳಲ್ಲಿದೆ, ವಿವಿಧ ಭೌಗೋಳಿಕ ಪ್ರದೇಶಗಳಲ್ಲಿದೆ. ಇಲ್ಲಿ ಅನೇಕ ಸಮಸ್ಯೆಗಳಿವೆ. ಒಬ್ಬರಿಗೆ ರೂಪಿಸಿದ ನಿಯಮ ಇನ್ನೊಬ್ಬರಿಗೂ ಸರಿಯಾಗಿ ಹೊಂದುತ್ತದೆ ಎನ್ನುವಂತಿಲ್ಲ. ಇದು ವಿಶಾಲವಾದ ದೇಶ. ಇಂತಹ ಸನ್ನಿವೇಶದಲ್ಲಿ, ಎಲ್ಲರೂ ಸುರಕ್ಷಿತವಾಗಿರುವಂತಹ ವ್ಯವಸ್ಥೆಯನ್ನು ರೂಪಿಸಿದರೆ ಪ್ರೀತಿಯೂ ಹೆಚ್ಚುತ್ತದೆ. ಸಾಮಾಜಿಕ ಸಾಮರಸ್ಯವನ್ನು ಮಾತನಾಡುವುದಷ್ಟೇ ಅಲ್ಲ, ಅದರ ಆಚರಣೆಯನ್ನು ಮಾಡಬೇಕು. ಸಮಾಜದ ಹೊರಗೆ ಎಷ್ಟೇ ಬೇಧಭಾವವಿರಲಿ, ನಾವು ಮಾತ್ರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನನ್ನ ಹಾಗೂ ಕುಟುಂಬಕ್ಕೆ ಸಂಬಂಧಿಸಿ ಎಲ್ಲ ರೀತಿಯ ಸ್ನೇಹಿತರಾಗಿರಬೇಕು. ನಮ್ಮ ಪ್ರಭಾವವಿರುವ ಕಡೆಗಳಲ್ಲಿ ದೇವಾಲಯ, ನೀರು, ಸ್ಮಶಾನ ಎಲ್ಲರಿಗೂ ಸಮಾನವಾಗಿರಬೇಕು. ಈ ಕಾರ್ಯ ಆರಂಭವಾಗಿದೆ, ಮುಂದುವರಿಸಬೇಕಾಗಿದೆ.
೨. ಎರಡನೆಯದು, ಕುಟುಂಬ ಪ್ರಬೋಧನ. ಜಗತ್ತಿಗೆ ಶಾಂತಿಯನ್ನು ನೀಡುವ ವಿಷಯಗಳು ಸಾಂಪ್ರದಾಯಿಕ ಸಂಸ್ಕಾರಗಳಿಂದ ಲಭಿಸುತ್ತವೆ. ಆ ವಿಷಯಗಳು ನಮ್ಮ ಕುಲಾಚಾರಗಳಲ್ಲಿವೆ ಹಾಗೂ ದೇಶದ ರೀತಿನೀತಿಯಲ್ಲಿಯೂ ಇವೆ. ಇವುಗಳ ಬಗ್ಗೆ ಒಂದೆಡೆ ಕಲೆತು ಚರ್ಚೆ ಮಾಡಿ, ಒಮ್ಮತವೇರ್ಪಡಿಸಿ ಕುಟುಂಬದ ಆಚರಣೆಗೆ ತರಬೇಕು. ಇದೇ ಕುಟುಂಬ ಪ್ರಬೋಧನ.
೩. ಮೂರನೆಯದು ಪರಿಸರ ಸಂರಕ್ಷಣೆ. ಪರಿಸರ ಸಂರಕ್ಷಣೆಗಾಗಿ ಆಂದೋಲನಗಳೇನೋ ನಡೆಯುತ್ತಿವೆ. ಆದರೆ, ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ವ್ಯರ್ಥವಾಗಿ ನೀರು ಸೋರಿಕೆಯಾಗುತ್ತಿದೆ ಎಂದು ಚಿಂತಿಸುವುದೇ ಇಲ್ಲ. ಮೊದಲು ಈ ಕೆಲಸವನ್ನು ಮಾಡಬೇಕು. ಮರಗಳನ್ನು ನೆಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು, ನೀರನ್ನು ಉಳಿಸಬೇಕು. ಈ ಮೂಲಭೂತ ಕೆಲಸಗಳನ್ನು ಮಾಡುವುದರಿಂದ ಪರಿಸರದ ಕುರಿತು ತಿಳುವಳಿಕೆ ಬರುತ್ತದೆ, ಮುಂದಿನ ಹೆಜ್ಜೆಗಳನ್ನು ಆಲೋಚಿಸಲು ಮುಂದಾಗುತ್ತಾರೆ.
೪. ನಾಲ್ಕನೆಯದು ಸ್ವ. ನಮ್ಮ ‘ಸ್ವʼತ್ವದ ಆಧಾರದ ಮೇಲೆ ನಮ್ಮ ಜೀವನಕ್ರಮ ಇರಬೇಕು. ನಮ್ಮೆಲ್ಲರಿಗೆ ಸೇರಿದ ‘ಸ್ವ’ದ ಆಧಾರದಲ್ಲೇ ನಡೆಯಬೇಕು. ಮನೆಯಲ್ಲಿ ಭಾಷೆ, ಉಡುಗೆ, ಆಹಾರ, ಭಜನೆ ಇವೆಲ್ಲವೂ ನಮ್ಮತನದ ಆಧಾರದಲ್ಲೇ ಇರಬೇಕು. ಮನೆಯ ಹೊರಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಬೇಕು. ಮನೆಯೊಳಗೆ ನಾವೇ ಇದ್ದೇವಲ್ಲ? ಇದರಿಂದಲೇ ಸಂಸ್ಕಾರಗಳೂ ಉಳಿಯುತ್ತವೆ. ಸ್ವಾವಲಂಬಿ ದೇಶವಾಗಬೇಕಾದರೆ, ಸಾಧ್ಯವಾದಷ್ಟೂ ನಮ್ಮ ದೇಶದ ವಸ್ತುಗಳನ್ನೇ ಬಳಸಬೇಕು. ಇದರರ್ಥ ಅಂತಾರಾಷ್ಟ್ರೀಯ ವ್ಯಾಪಾರವನ್ನು ನಿಲ್ಲಿಸಬೇಕು ಎಂದರ್ಥವಲ್ಲ. ಅದಕ್ಕೊಂದು ಸಮತೋಲನವಿದೆ. ನನ್ನ ದೇಶದ ವಸ್ತುವಿನಿಂದಲೇ ಕೆಲಸವಾಗುತ್ತದೆ ಎಂದರೆ ಅದರಲ್ಲೇ ನಡೆಸುತ್ತೇನೆ. ದೇಶಕ್ಕೆ ಅತ್ಯಗತ್ಯವಾಗಿರುವ, ಜೀವನಾವಶ್ಯ ವಸ್ತುವಿದ್ದರೆ ಹೊರದೇಶದಿಂದ ಪಡೆಯಬಹುದು. ಆದರೆ ಇದನ್ನು ಬೇರೆಯವರ ಒತ್ತಡಕ್ಕೆ ಮಣಿದಲ್ಲ, ನಮ್ಮ ಅಗತ್ಯಕ್ಕೆ ಅನುಗುಣವಾಗಿ ಪಡೆಯಬೇಕು. ‘ಸ್ವ’ತ್ವದ ಆಚರಣೆಯಲ್ಲಿ ಈ ಎಲ್ಲ ವಿಷಯಗಳು ಒಳಗೊಳ್ಳುತ್ತವೆ.
೫. ಐದನೆಯದು ನಾಗರಿಕ ಶಿಷ್ಟಾಚಾರ. ಕಾನೂನು, ಸಂವಿಧಾನ, ಸಾಮಾಜಿಕ ಸಭ್ಯತೆಯ ಪಾಲನೆಯೇ ನಾಗರಿಕ ಶಿಷ್ಟಾಚಾರ.
ಶತಾಬ್ದಿ ವರ್ಷದಲ್ಲಿ ಈ ಐದು ವಿಷಯಗಳನ್ನು ಸ್ವಯಂಸೇವಕರು ತಮ್ಮ ಜೀವನದಲ್ಲಿ ಪಾಲಿಸುತ್ತಾರೆ. ಶತಾಬ್ದಿ ವರ್ಷವು ಪೂರ್ಣಗೊಂಡ ನಂತರ ಈ ಅಂಶಗಳನ್ನು ಶಾಖೆಗಳ ಮೂಲಕ ಸಮಾಜಕ್ಕೆ ಕೊಂಡೊಯ್ಯುತ್ತಾರೆ. ಈ ಆಚರಣೆಯು ಸಾರ್ವತ್ರಿಕವಾದರೆ ಅದೇ ರೀತಿಯ ವಾತಾವರಣವೂ ರೂಪುಗೊಳ್ಳುತ್ತದೆ. ವಾತಾವರಣವು ರೂಪುಗೊಂಡರೆ ಬದಲಾವಣೆ ಆಗುತ್ತದೆ. ಅಲ್ಲಿಂದ ಇನ್ನೂ ಅನೇಕ ವಿಷಯಗಳು ಮುಂದುವರಿದುಕೊಂಡುಹೋಗುತ್ತವೆ. ಇಂತಹ ಆಲೋಚನೆಯಿದೆ. ಏನಾಗುತ್ತದೆ ಮುಂದೆ ನೋಡೋಣ.


ಮುಂದಿನ 25 ವರ್ಷಗಳಿಗೆ ಸಂಘವು ಯಾವ ದೃಷ್ಟಿಯನ್ನು ಹೊಂದಿದೆ?
ಸAಪೂರ್ಣ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ದೇಶವನ್ನು ಪರಮವೈಭವದಿಂದ ಸಂಪನ್ನಗೊಳಿಸುವುದು. ಹೇಳದೇ ಉಳಿದ ಮತ್ತೊಂದು ವಿಷಯವೆಂದರೆ ಸಂಪೂರ್ಣ ವಿಶ್ವವನ್ನು ಇದೇ ರೀತಿ ಮಾಡುವುದು. ಇದೇನು ಹೊಸದಲ್ಲ. ಡಾ. ಹೆಡಗೆವಾರ್ ಅವರ ಕಾಲದಿಂದಲೇ ಈ ದೃಷ್ಟಿಯಿದೆ. “ಭಾರತದ ಸಂಪೂರ್ಣ ಸ್ವಾತಂತ್ರ‍್ಯವೇ ನಮ್ಮ ಗುರಿಯಾಗಿದೆ ಮತ್ತು ಸ್ವತಂತ್ರ ಭಾರತವು ವಿಶ್ವದ ಇತರೆ ದೇಶಗಳನ್ನು ಬಂಡವಾಳಶಾಹಿಯ ಕಪಿಮುಷ್ಠಿಯಿಂದ ಮುಕ್ತಗೊಳಿಸುತ್ತದೆ” ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೇಳಬೇಕೆಂದು ಅವರು 1920ರಲ್ಲಿ ಒಂದು ಪ್ರಸ್ತಾವನೆಯನ್ನು ಮಂಡಿಸಿದ್ದರು.


ಇದೀಗ ಸಂಘಕ್ಕೆ ೧೦೦ ವರ್ಷಗಳಾಗಿವೆ ಮತ್ತು ದೇಶದ ಸ್ವಾತಂತ್ರ‍್ಯದ ೧೦೦ ವರ್ಷಗಳು ೨೦೪೭ರಲ್ಲಿ ಪೂರ್ಣಗೊಳ್ಳಲಿದೆ. ಭಾರತವು ವಿಶ್ವಗುರುವಾಗುವುದು ಹೇಗೆ? ಈ ಸಮಯದಲ್ಲಿ ಕೆಲವರು ವಿವಿಧ ರೀತಿಯಲ್ಲಿ ಭಿನ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರಲ್ಲ? ಇವೆಲ್ಲವನ್ನೂ ನೀವು ಹೇಗೆ ನೋಡುತ್ತೀರಿ?


ವಿಷಯಗಳನ್ನು ಗ್ರಹಿಸುವ ನಮ್ಮ ಪ್ರಕ್ರಿಯೆಯಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಚಿಂತನೆ ಮಾಡಿದ್ದೇವೆ. ಆತ್ಮವಿಸ್ಮೃತಿ, ಸ್ವಾರ್ಥ ಮತ್ತು ಭೇದ ಈ ಮೂರು ವಿಷಯಗಳ ವಿರುದ್ಧ ಹೋರಾಡುತ್ತಲೇ ನಾವು ಮುಂದೆ ಸಾಗುತ್ತಿದ್ದೇವೆ. ಇದೇ ಕಾರಣದಿಂದಾಗಿ ಇಂದು ಸಮಾಜದ ವಿಶ್ವಾಸವನ್ನು ಗಳಿಸಿದ್ದೇವೆ. ಈ ಪ್ರಕ್ರಿಯೆಯೇ ಭವಿಷ್ಯದಲ್ಲೂ ಮುಂದುವರಿಯುತ್ತದೆ. ಸ್ನೇಹಭಾವದ ಆಧಾರದಲ್ಲಿ ಸಮಾಜದ ಎಲ್ಲ ಜನರೂ ಒಂದೇ ಮನಃಸ್ಥಿತಿಗೆ ಬರುತ್ತಾರೆ. ಒಂದು ಮತ್ತು ಒಂದು ಸೇರಿದರೆ ಎರಡಾಗದೆ ಹನ್ನೊಂದಾಗುತ್ತದೆ! ಭಾರತವನ್ನು ಸಂಘಟಿತ ಮತ್ತು ಶಕ್ತಿಯುತವಾಗಿಸುವ ಕಾರ್ಯವು 2047ರವರೆಗೆ ಎಲ್ಲೆಡೆ ವ್ಯಾಪಿಸಿರುತ್ತದೆ, ಮತ್ತೂ ಮುಂದುವರಿಯುತ್ತದೆ. ಸಾಮರಸ್ಯಭರಿತ, ಶಕ್ತಿಯುತ ಭಾರತದ ಕೊಡುಗೆಯನ್ನು ವಿಶ್ವದ ಎಲ್ಲರೂ ನೋಡುತ್ತಾರೆ, ಈ ಮಾದರಿಯನ್ನು ಅನುಕರಿಸಲು ಮುಂದಾಗುತ್ತಾರೆ. “ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೋಡಿ ವಿಶ್ವದ ಇತರ ದೇಶಗಳ ಜನರು ಆ ದೇಶದಲ್ಲಿ ತಮ್ಮದೇ ಆದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸುತ್ತಾರೆ. ಇದರಿಂದ ಇಡೀ ವಿಶ್ವದ ಜೀವನದಲ್ಲಿ ಬದಲಾವಣೆ ಆಗುತ್ತದೆ” ಎಂದು 1992ರಲ್ಲಿ ನಮ್ಮ ಒಬ್ಬ ಹಿರಿಯ ಕಾರ್ಯಕರ್ತರು ಹೇಳಿದ್ದರು. ಈ ಪ್ರಕ್ರಿಯೆಯು 2047ರ ನಂತರ ಆರಂಭವಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಮತ್ತೆ 100 ವರ್ಷಗಳು ಬೇಕಾಗಿಲ್ಲ. 20-30 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ.


ಶತಮಾನದ ವರ್ಷದಲ್ಲಿ ಹಿಂದೂ-ಹಿತೈಷಿಗಳ ಸಮುದಾಯ, ಸಂಘದ ಶುಭಚಿಂತಕರ ಸಮುದಾಯ, ಈ ರಾಷ್ಟ್ರದ ಹಿತಚಿಂತಕರ ಸಮುದಾಯಕ್ಕೆ ನಿಮ್ಮ ಸಂದೇಶವೇನು?


ಹಿಂದೂ ಸಮಾಜವು ಈಗ ಎಚ್ಚರಗೊಳ್ಳಲೇಬೇಕು. ಎಲ್ಲ ಬೇಧಗಳನ್ನು ಮತ್ತು ಸ್ವಾರ್ಥವನ್ನು ಮರೆತು, ಹಿಂದುತ್ವದ ಶಾಶ್ವತ ಮೌಲ್ಯಗಳ ಆಧಾರದ ಮೇಲೆ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಜೀವನೋಪಾಯದ ಜೀವನವನ್ನು ರೂಪಿಸಿಕೊಂಡು, ಶಕ್ತಿಯುತ, ನೀತಿಯುತ ಮತ್ತು ಎಲ್ಲ ರೀತಿಯಲ್ಲೂ ವೈಭವದಿಂದ ಸಂಪನ್ನವಾದ ಭಾರತವನ್ನು ನಿರ್ಮಿಸಬೇಕು. ವಿಶ್ವವು ಹೊಸ ಮಾರ್ಗಕ್ಕಾಗಿ ಕಾತರಿಸುತ್ತಿದೆ. ಅದನ್ನು ನೀಡುವುದು ಭಾರತಕ್ಕೆ, ಅಂದರೆ ಹಿಂದೂ ಸಮಾಜಕ್ಕೆ ದೇವರೇ ವಹಿಸಿದ ಕರ್ತವ್ಯ. ಕೃಷಿ ಕ್ರಾಂತಿಯಾಗಿದೆ, ಕೈಗಾರಿಕಾ ಕ್ರಾಂತಿಯಾಗಿದೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ರಾಂತಿಯಾಗಿದೆ. ಈಗ ಧರ್ಮ ಕ್ರಾಂತಿಯ ಅಗತ್ಯವಿದೆ. ನಾನು ರಿಲೀಜನ್ನಿನ ಬಗ್ಗೆ ಹೇಳುತ್ತಿಲ್ಲ. ಸತ್ಯ, ಶೀಲ, ಕರುಣೆ ಮತ್ತು ತಪಸ್ಸಿನ ಆಧಾರದ ಮೇಲೆ ಮಾನವ ಜೀವನದ ಪುನರ್ ರಚನೆಯಾಗಬೇಕು. ವಿಶ್ವಕ್ಕೆ ಇದರ ಅಗತ್ಯವಿದೆ ಮತ್ತು ಭಾರತವೇ ಅದರ ಅಗ್ರೇಸರನಾಗಬೇಕು. ಇದು ಅನಿವಾರ್ಯ. ಸಂಘದ ಕೆಲಸದ ಮಹತ್ವವನ್ನು ನಾವೆಲ್ಲರೂ ಅರಿಯಬೇಕು, ‘ನಾನು ಮತ್ತು ನನ್ನ ಕುಟುಂಬ’ದ ಚೌಕಟ್ಟಿನಿಂದ ಹೊರಬಂದು, ತಮ್ಮ ಜೀವನವನ್ನೇ ಮಾದರಿಯಾಗಿಸಿಕೊಂಡು ಸಕ್ರಿಯವಾಗಿ ಎಲ್ಲರ ಜೊತೆಗೆ ಮುನ್ನಡೆಯಬೇಕು. ಇದರ ಅಗತ್ಯತೆಯಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.