ಬೆಂಗಳೂರು: ಸ್ವ॥ ಕೃ. ನರಹರಿ ಅವರು ತಮ್ಮ ಜೀವನದಲ್ಲಿ ನಡೆ ನುಡಿಯಲ್ಲಿ ಮೇಲ್ಪಂಕ್ತಿಯಾಗುವಂತೆ ಬದುಕಿದವರು. ಆದರ್ಶ ಸ್ವಯಂಸೇವಕರಷ್ಟೇ ಅಲ್ಲದೇ ಸಾಮಾಜಿಕ ಕಾರ್ಯದ ಮೇರುಪರ್ವತವೇ ಆದವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಕಾರದ ಆಧಾರದ ಮೇಲೆ ಜೀವನವನ್ನು ತೇಯ್ದ ಚೇತನ ಶ್ರೀ ಕೃ. ನರಹರಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ವತಿಯಿಂದ ಜಯನಗರದ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಸಂಘ ಒಂದು ಸಂಕಲ್ಪ. ಸಂಘಕ್ಕಾಗಿ ತೊಟ್ಟ ಸಂಕಲ್ಪದ ಸಾಕಾರಕ್ಕಾಗಿ ನಿಲ್ಲುವ ದೃಢತೆ ನರಹರಿಯವರಲ್ಲಿತ್ತು. ಸಂಘಟನೆ ಹೇಳಿದ್ದನ್ನು ಅವರು ಪಾಲಿಸಿದರು. ಅದಕ್ಕೆ ಬೇಕಾದ ಕೌಶಲವನ್ನು ಬೆಳೆಸಿಕೊಂಡರು. ಸಂಘಕ್ಕೆ ಪ್ರವೇಶ ಸುಲಭ. ಆದರೆ ಸಂಘವೇ ನಮ್ಮಲ್ಲಿ ಪ್ರವೇಶವಾಗುವುದು ಬಹಳ ಕಷ್ಟ. ಆದರೆ ನರಹರಿಯವರಲ್ಲಿ ಸಂಘವೇ ಪ್ರವೇಶ ಮಾಡಿತ್ತು. ಸಂಘ ಹೇಳಿದ ಯಾವುದೇ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ನರಹರಿಯವರು ಆ ಕ್ಷೇತ್ರದಲ್ಲಿ ಸಂಘದ ಯೋಚನೆಗೆ ತಕ್ಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದರು ಎಂದು ಅವರು ನುಡಿದರು.

ನರಹರಿಯವರದ್ದು ಮೇರುಸದೃಶ ವ್ಯಕ್ತಿತ್ವ. ಮನಸ್ಸಿನಲ್ಲಿ ನಮ್ರತೆ ಇತ್ತು, ಅಹಂಕಾರ ಸುಳಿಯಲಿಲ್ಲ. ರಾಷ್ಟ್ರ, ಶಿಕ್ಷಣ, ಸಂಘಟನೆಯಲ್ಲಿ ತಮ್ಮ ಕರ್ತವ್ಯವನ್ನು ಕರಿತು ಅವಿರತ ಪ್ರಯತ್ನವನ್ನು ವಹಿಸಿ ಯೋಜಿತವಾಗಿ ಜವಾಬ್ದಾರಿಗಳ ನಿರ್ವಹಣೆ ಮಾಡಿದರು. ಅವರ ಜೀವನ ತುಂಬ ಯೋಜಿತವಾಗಿ ಕಡೆದ ಶಿಲ್ಪ. ಆದರೆ ಆತ್ಮೀಯತೆಯ ಸುಗಂಧವನ್ನು ಆ ಶಿಲ್ಪಕ್ಕೆ ಅವರು ತುಂಬಿದ್ದರು ಎಂದು ತಿಳಿಸಿದರು.
ಅವರ ವ್ಯಕ್ತಿತ್ವದ ಮೂಲಕ ಸಂಘದ ಅನೇಕ ಕಟ್ಟಡಗಳ ಇಟ್ಟಿಗೆಗಳು, ಅನೇಕ ಸಂಸ್ಥೆಗಳ ಲೆಕ್ಕಪುಸ್ತಕಗಳು, ವರ್ಗಗಳಲ್ಲಿ ನುಡಿಸುವ ಘೋಷ್ ವಾದ್ಯಗಳು, ಸಂಘದ ವರ್ಗಗಳ ವ್ಯವಸ್ಥೆಯಲ್ಲಿ ನರಹರಿಯವರ ಹೆಸರು ಉಲ್ಲೇಖವಾಗದೇ ಪೂರ್ಣವಾಗುವುದಕ್ಕೆ ಸಾಧ್ಯವಿಲ್ಲ. ಅವರು ಅಜಾತಶತ್ರು. ವಿಧಾನ ಪರಿಷತ್ ಸದಸ್ಯನಾಗಿ, ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು. ವಿಚಾರಧಾರೆಗೆ ಬದ‍್ಧರಾಗಿದ್ದರು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಇನ್ನೊಂದು ವಿಚಾರಧಾರೆಯವರನ್ನು ವಿರೋಧಿಸಲಿಲ್ಲ. ನ್ಯಾಯದ ಪಥದಿಂದ, ಧರ್ಮದ ಮಾರ್ಗದಿಂದ ವಿಚಲಿತನಾಗದೇ ಮುಂದುವರೆಯುವವನು ಧೀರನೆಂದು ಭರ್ತೃಹರಿ ಹೇಳುತ್ತಾನೆ. ನರಹರಿಯವರು ಅಂತಹ ಒಬ್ಬ ಧೀರ ಎಂದು ಅಭಿಪ್ರಾಯಪಟ್ಟರು.

ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ವಿ.ಶಾಂತಾಕುಮಾರಿ, ಶಿಕ್ಷಣತಜ್ಞ ⁠ಡಾ॥ ಎವಿಎಸ್ ಮೂರ್ತಿ, ಜನಸೇವಾ ವಿಶ್ವಸ್ಥ ಮಂಡಳಿಯ ಗೌರವ ಕಾರ್ಯದರ್ಶಿ ನಿರ್ಮಲ್ ಕುಮಾರ್ , ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ನಾರಾಯಣ ಲಾಲ್ ಗುಪ್ತಾ, ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷ ಸಂದೀಪ್ ಬೂದಿಹಾಳ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಸೇರಿದಂತೆ ಅನೇಕ ಗಣ್ಯರು, ಶಿಕ್ಷಣತಜ್ಞರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು ಭಾಗವಹಿಸಿದರು. Ji

Leave a Reply

Your email address will not be published.

This site uses Akismet to reduce spam. Learn how your comment data is processed.