ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಶ್ರೀ ಕೆ.ಪಿ. ಪ್ರದ್ಯುಮ್ನ ರವರು ಇಂದು (ಸೆಪ್ಟೆಂಬರ್ 23) ದೈವಾಧೀನರಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಪರ್ಕ ಪ್ರಮುಖರಾಗಿ, ಮೈಸೂರು ಮಹಾನಗರ ಸಂಘಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪ್ರಸ್ತುತ ಮೈಸೂರು ವಿಭಾಗ ಕಾರ್ಯಕಾರಿಣಿ ಸದಸ್ಯರಾಗಿದ್ದರು. ಗ್ರಾಮೀಣ ಭಾಗದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯು.ಪಿ.ಎಸ್.ಸಿ. (ಐ.ಎ.ಎಸ್, ಐ.ಪಿ.ಎಸ್) ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತು ಕಾರ್ಯಾಗಾರಗಳ ಮೂಲಕ ಮಾರ್ಗದರ್ಶನ ಮಾಡಿದ್ದಾರೆ.
ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಿಂದ ಬಿ.ಕಾಂ ಪದವಿ ಪಡೆದವರು. 1979ರಲ್ಲಿ ಸ್ಟೇಟ್ ಬ್ಯಾಂಕ್ ನಲ್ಲಿ ಉದ್ಯೋಗ ಪಡೆದು ಹಂತ ಹಂತವಾಗಿ ಬಡ್ತಿಹೊಂದಿ 2003 ರಿಂದ ಮುಖ್ಯ ವ್ಯವಸ್ಥಾಪಕ ಹುದ್ದೆಗೆ ಬಡ್ತಿ ಪಡೆದರು. 2010ರಲ್ಲಿ ಮೈಸೂರಿನ ಚೆಕ್ ಪ್ರೋಸೆಸಿಂಗ್ ಕೇಂದ್ರದಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದಾಗ ವ್ಯಕ್ತಿತ್ವ ವಿಕಸನ, ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ, ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗ ಸಂಪಾದಿಸಲು ಬೇಕಾದ ವ್ಯವಹಾರಿಕ ಗುಣಗಳನ್ನು ಹೊಂದುವ ತರಬೇತಿ ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿ ಮತ್ತು ಅನುಭವ ಹೊಂದಿದ್ದ ಕಾರಣ, ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು.
ಬೆಂಕಿನಲ್ಲಿದ್ದಾಗಲೇ ಕೇಂದ್ರ ಸರಕಾರ ತಮ್ಮ ಉದ್ಯೋಗಿಗಳಿಗಾಗಿ ನಡೆಸುವ ವ್ಯವಸ್ಥಿತ ತರಬೇತಿ (ಸಿಸ್ಟಮ್ಯಾಟಿಕ್ ಅಪ್ರೋಚ್ ಟ್ರೈನಿಂಗ್) ಎಂಬ 7 ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಣಿತಿ ಪಡೆದಿದ್ದರು. 2010 ಏಪ್ರಿಲ್ 1 ರಿಂದ ಇಂದಿನವರೆಗೆ ಮುಕ್ತ ತರಬೇತುದಾರ (Freelance trainer) ಆಗಿ ಪೂರ್ಣಾವಧಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವ ಮತ್ತು ಅಧ್ಯಯನ ಕೌಶಲಗಳನ್ನು ಕಲಿಸಿ ಕೊಡುವ ಕಾರ್ಯಕ್ರಮ, ಬ್ಯಾಂಕ್ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅವರಿಗೆ ಅವಶ್ಯವಾಗಿರುವ ವಿಭಿನ್ನ ಕಾರ್ಯಕ್ರಮಗಳು, ಅನೇಕ ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷಣಕಾರರಾಗಿ ಮತ್ತು ವಿಶೇಷವಾಗಿ ಸ್ವಾಭಿಮಾನಿ ಭಾರತ ಎಂಬ ಪ್ರಾಚೀನ ಭಾರತದಲ್ಲಿ ನಮ್ಮ ಋಷಿ ಮುನಿಗಳು ವೇದದಿಂದ ಹೆಕ್ಕಿತೆಗೆದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಮನಮುಟ್ಟುವಂತೆ ವಿವರಿಸುವ ಕಾರ್ಯಕ್ರಮಗಳನ್ನು ಕರ್ನಾಟಕಾದ್ಯಂತ, ದೂರದ ಮಣಿಪುರ ಮತ್ತು ನೆರೆಯ ಆಂಧ್ರ ಪ್ರದೇಶಗಳಲ್ಲೂ ನಡೆಸಿಕೊಟ್ಟಿದ್ದರು.
ಇದುವರೆಗೂ ಸುಮಾರು 1550ಕ್ಕಿಂತಲೂ ಹೆಚ್ಚು ತರಬೇತಿ ಅವಧಿಗಳನ್ನು ನಡೆಸಿಕೊಟ್ಟಿದ್ದ ಶ್ರೀ ಪ್ರದ್ಯುಮ್ನ ಅವರು ಸಾಮಾಜಿಕ ಕಾರ್ಯಕರ್ತರಾಗಿ, ಗ್ರಾಮವಿಕಾಸ, ಸೇವಾಭಾರತಿಯಲ್ಲೂ ಗುರುತಿಸಿಕೊಂಡಿದ್ದರು.
ಶ್ರೀಯುತರ ಪಾರ್ಥಿವ ಶರೀರವನ್ನು ಮೈಸೂರು ಶ್ರೀರಾಂಪುರದ ಎಸ್.ಬಿ.ಎಂ. ಕಾಲೋನಿಯಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದೆ. ಬೆಳಗ್ಗೆ 11.30 ಗಂಟೆಗೆ ಮೈಸೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಗಲಿದ ಶ್ರೀ ಪ್ರದ್ಯುಮ್ನ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ವಿ ನಾಗರಾಜ್, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್, ಮೈಸೂರು ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ.