ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ 12 ವರ್ಷಗಳ ಕಾಲ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದ, 2008ರಿಂದ ಕುಟುಂಬ ಪ್ರಬೋಧನದ ಕರ್ನಾಟಕ ಉತ್ತರ ಪ್ರಾಂತದ ಪ್ರಮುಖರಾಗಿದ್ದ ಶ್ರೀ ಪ.ರಾ. ನಾಗರಾಜ್ (62ವರ್ಷ) ವಿಧಿವಶರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಆರ್ ಎಸ್ ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸಂತಾಪ

ಪ. ರಾ. ನಾಗರಾಜರ ನಿಧನದ ಸುದ್ದಿ ಕೇಳಿ ಅತೀವ ವೇದನೆಯಾಯಿತು. ಒಬ್ಬ ನಿಷ್ಠಾವಂತ, ಸ್ನೇಹಪರ ಕಾರ್ಯಕರ್ತ ಬಂಧು ನಮ್ಮನ್ನು ಅಗಲಿಬಿಟ್ಟರು. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಸದಾ ಉತ್ಸಾಹಿಯೂ ಸಂಘವನ್ನು ಜೀವನದಲ್ಲಿ ಪಾಲಿಸುತ್ತಿದ್ದವರೂ ಆಗಿದ್ದ ನಾಗರಾಜರು ಸದಾ ನೆನಪಿನಲ್ಲಿರುತ್ತಾರೆ. ದೇವರು ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನೂ ದಿವಂಗತರ ಆತ್ಮಕ್ಕೆ ಸದ್ಗತಿಯನ್ನೂ ನೀಡಲೆಂದು ಪ್ರಾರ್ಥನೆ.

ॐ ಶಾಂತಿಃ॥

– ದತ್ತಾತ್ರೇಯ ಹೊಸಬಾಳೆ,
ಸರಕಾರ್ಯವಾಹರು,
ರಾಷ್ಟ್ರೀಯ ಸ್ವಯಂಸೇವಕ ಸಂಘ


ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಸಂತಾಪ

ಪ.ರಾ. ನಾಗರಾಜರು ಇನ್ನಿಲ್ಲ

ಇಂದು 23.7.2024 ಮಧ್ಯಾಹ್ನ 12.45 ಕ್ಕೆ ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ ಸುದ್ದಿ ಬರಸಿಡಿಲಿನಂತೆ ಎರಗಿತು. ಅತ್ಯಂತ ಆಘಾತಕಾರಿ ಸುದ್ದಿ ಇದು. ನಂಬಲು ಕಷ್ಟ ಎನಿಸುವ ಸುದ್ದಿ. ವಿಧಿಯ ಲೀಲೆಯನ್ನು ಬಲ್ಲವರಾರು.
ಪ್ರಚಾರಕರಾಗಿ ಪ್ರತಿಕೂಲ ವಾತಾವರಣದಲ್ಲಿ, ಪ್ರತಿಕೂಲ ಕ್ಷೇತ್ರದಲ್ಲಿ ಕಾರ್ಯವನ್ನು ಬಲಪಡಿಸಿದ ಶ್ರೇಯಸ್ಸು ನಾಗರಾಜರದ್ದು.

ಎಂಥ ಸವಾಲಿನ ಸಮಯದಲ್ಲೂ ವಿಚಲಿತರಾಗದೆ ಅತ್ಯಂತ ಸಮತೋಲನದಿಂದ ಕಾರ್ಯವನ್ನು ಮುನ್ನಡೆಸಿದ ನೇತೃತ್ವ ಅವರದ್ದು. ಸದಾ ನಗುನಗುತ್ತಾ ಕೆಲಸ ಮಾಡುವುದು, ಮನಸ್ಸನ್ನು ಸದಾ ಪ್ರಸನ್ನವಾಗಿಟ್ಟುಕೊಳ್ಳುವುದು, ವಿಫಲತೆಯಲ್ಲೂ ವಿಚಲಿತರಾಗದಿರುವುದು ಅವರ ವ್ಯಕ್ತಿತ್ವದ ವಿಶೇಷ ಎಂದೇ ಹೇಳಬಹುದು.

ಅವರ ಈ ವಿಶೇಷ ಶಕ್ತಿಯಿಂದಾಗಿಯೇ ಅವರು ಕಹಿಯನ್ನು ಗಂಟಲಲ್ಲಿ ಇಟ್ಟುಕೊಂಡೂ ಸಹ ನಗುನಗುತ್ತಾ ಕೆಲಸ ಮಾಡುವ ಕುಶಲತೆಯನ್ನು ಗಳಿಸಿದ್ದು.

ಯೋಗ ವಿಷಯದ ಶಿಕ್ಷಕರಾಗಿ ಅವರದ್ದು ವಿಶೇಷ ಯೋಗದಾನ.

ದಶಕಕ್ಕೂ ಹೆಚ್ಚು ಕಾಲ ಪ್ರಚಾರಕರಾಗಿ ನಿವೃತ್ತರಾದ ನಂತರ ಗೃಹಸ್ಥ ಜೀವನವನ್ನು ಪ್ರವೇಶಿಸಿದ ನಾಗರಾಜರು ಐಸ್ ಕ್ರೀಮ್ ತಯಾರಿಕೆಯ ಕ್ಷೇತ್ರದಲ್ಲೂ ನಂ 1 ಎನಿಸಿದ್ದು ನಿಜಕ್ಕೂ ಅವರು ಸವ್ಯಸಾಚಿ ಎಂಬುದನ್ನು ತೋರಿಸಿಕೊಟ್ಟರು. ಪ್ರಚಾರಕ ಜೀವನಕ್ಕೆ ಮಾತ್ರವಲ್ಲ, ಗೃಹಸ್ಥ ಜೀವನದಲ್ಲೂ ಯಶಸ್ವಿಯಾಗಿ ತೋರಿಸಿದರು. ಅಷ್ಟು ಮಾತ್ರವಲ್ಲ, ಉದ್ಯೋಗದಲ್ಲಿ ಯಶಸ್ಸಿನ ತುದಿಯಲ್ಲಿದ್ದಾಗಲೇ ಅದನ್ನು ತೊರೆದು ಮತ್ತೆ ವಾನಪ್ರಸ್ಥಿಯಾಗಿಯೂ ಅವರು ಯಶಸ್ವಿಯಾಗಿದ್ದು ಅವರ ಬಹುಮುಖಿ ವ್ಯಕ್ತಿತ್ವದ ಪರಿಚಾಯಿಕೆ.

ಅಧ್ಯಾತ್ಮದ ಅಡಿಪಾಯವಿಲ್ಲದೆ ಇಂಥ ಬದುಕು ನಡೆಸುವುದು ಸಾಧ್ಯವಿಲ್ಲ.

ಇಂಥ ಸಮರ್ಪಿತ ಬದುಕು, ವೈವಿಧ್ಯಮಯ ಭೂಮಿಕೆಯಲ್ಲಿ ಯಶಸ್ವಿಗೊಳಿಸಿದ ನಾಗರಾಜರು ನಮ್ಮ ಕಣ್ಣ ಮುಂದೆ ಹಿಮಾಲಯದಷ್ಟು ಎತ್ತರಕ್ಕೆ ಬೆಳೆದು, ನಮಗೆಲ್ಲರಿಗೂ ಅನುಕರಣೆಗೆ ಯೋಗ್ಯ ವ್ಯಕ್ತಿತ್ವವಾದರು.

ಅವರ ಸ್ಮೃತಿಗೆ ನನ್ನ ಶತ ಕೋಟಿ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತಿರುವೆ.ನಾವೂ ಅವರಂತಾಗುವ ಪ್ರಯತ್ನ ಮಾಡೋಣ ಇದೇ ಮಿತ್ರನಾಗಿ ನನ್ನ ವಿನಮ್ರ ನಿವೇದನೆ.

ಅವರಿಗೆ ಸದ್ಗತಿ ಸಿಗಲಿ.

ಅವರ ಅಕಾಲಿಕ, ಆಕಸ್ಮಿಕ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬವೂ ಸೇರಿದಂತೆ ನಮಗೆಲ್ಲರಿಗೂ ಭಗವಂತ ನೀಡಲಿ ಎಂದು ಅಶ್ರು ತುಂಬಿದ ಕಂಗಳಿಂದ ಪ್ರಾರ್ಥಿಸುವೆ.

ಓಂ ಶಾಂತಿಃ ಶಾಂತಿಃ ಶಾಂತಿಃ

ಕೃಷ್ಣಾರ್ಪಣಮಸ್ತು

– ಶಂಕರಾನಂದ,ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ , ಭಾರತೀಯ ಶಿಕ್ಷಣ ಮಂಡಲ.

Leave a Reply

Your email address will not be published.

This site uses Akismet to reduce spam. Learn how your comment data is processed.