
ಮೈಸೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ.) ಹಾಗೂ ಶ್ರೀ ಜನಜಾಗರಣ ಟ್ರಸ್ಟ್, ಮೈಸೂರು ಇವರ ವತಿಯಿಂದ ಮೈಸೂರಿನ ಮಾಧವಕೃಪಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಕಾ. ಶ್ರೀ ನಾಗರಾಜ್ ವಿರಚಿತ ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಗ್ರಂಥ “ವಿಜಯೀ ಮಹಾರಾಜಾಧಿರಾಜ “ ಪುಸ್ತಕವು ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು ರಾಮಣ್ಣ ಅವರು ಸಾವಿರಾರು ರಾಜರು ಬಂದು ಹೋದರೂ ಇಂದಿಗೂ ಕಂಗೊಳಿಸುತ್ತಿರುವವರು ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರ ಸಾಮ್ರಾಜ್ಯ ವಿಸ್ತರಿಸಿ ಹಿಂದವಿ ಸಾಮ್ರಾಜ್ಯ ಸ್ಥಾಪಿಸಿದ ವೀರಗಾಥೆಯನ್ನು, ವಿದೇಶಿ ಮೊಗಲರ ವಿರುದ್ಧ ಮೆರೆದ ಶೌರ್ಯ, ಸಾಹಸವನ್ನು, ಶಿವಾಜಿ ಮಹಾರಾಜರು ನೀಡಿದ ಜೀವನಮೌಲ್ಯಗಳನ್ನು ವಿವರವಾಗಿ ಲೇಖಕರು ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಶೌರ್ಯ, ದೇಶಭಕ್ತಿ ಮತ್ತು ರಾಜತಾಂತ್ರಿಕ ಚಾಣಕ್ಯತನದ ಪ್ರತೀಕ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷರಾದ ಸುಬ್ರಹ್ಮಣ್ಯ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಮೊಗಲರ ಆಳ್ವಿಕೆಯಲ್ಲಿ ಭಾರತದ ಸಾಮಾನ್ಯ ಜನರ ಜೀವನವು ಅತ್ಯಂತ ನಿರಾಶಯದಾಯಕ ಭಾವನೆಯಲ್ಲಿ ಇದ್ದಾಗ ಸ್ಫೂರ್ತಿಯಾಗಿ ಬಂದವರು ಛತ್ರಪತಿ ಶಿವಾಜಿ ಮಹಾರಾಜರು. ಧರ್ಮ, ಸಂಸ್ಕೃತಿ ದಾಸ್ಯಕ್ಕೆ ಒಳಗಾದಾಗ ಜನಸಾಮಾನ್ಯರಿಗೆ ಪ್ರಕಾಶಮಾನವಾಗಿ ಬಂದವರು ಛತ್ರಪತಿ ಶಿವಾಜಿ ಮಹಾರಾಜರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಲೇಖಕರಾದ ಕಾ. ಶ್ರೀ ನಾಗರಾಜ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ರಾಜ್ಯ ಸಂಪರ್ಕ ಪ್ರಮುಖ್ ರಂಗನಾಥ್ ಉಪಸ್ಥಿತರಿದ್ದರು.
