ಬೆಂಗಳೂರು, ಫೆ.1, 2024: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಕೆ.ರಂಗರಾಜ್ ಅಯ್ಯಂಗಾರ್ (96) ಅವರು ಬೆಂಗಳೂರಿನ ರಾಮಮೂರ್ತಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ವಿದ್ಯಾ ಭಾರತಿ ಕರ್ನಾಟಕ ಪ್ರಾಂತದ ಪೂರ್ವ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಅನ್ಯಾನ್ಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಯೋಗ ಮತ್ತು ಮುದ್ರೆಗಳ ಕುರಿತು ಅಪಾರ ಜ್ಞಾನ ಹೊಂದಿದ್ದ ಇವರು ಯೋಗ ಮುದ್ರಾ ಪ್ರಪಂಚ, ಯೋಗ ಮುದ್ರೆಗಳ ವಿಜ್ಞಾನ, ಯೋಗ ಮುದ್ರೆಗಳು, ಶ್ರೀ ಗಾಯತ್ರಿ ಮಂತ್ರ – ಮುದ್ರಾ ಯೋಗ, ಯೋಗಾಸನ ಪ್ರಜ್ಞೆ : ಯೋಗಾಸನ ಮಾಲಾ ಪರಿಚಯ, ಪೂಜಾಯೋಗ ಮುದ್ರೆ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.
ಕೆ. ರಂಗರಾಜ್ ಅಯ್ಯಂಗಾರ್ ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸಂದೇಶ:
ಕೆ. ರಂಗರಾಜ್ ಅಯ್ಯಂಗಾರ್ ಅವರು ಬೆಂಗಳೂರಿನ ಹಿರಿಯ ಸ್ವಯಂಸೇವಕರಾಗಿದ್ದು, ಮಹಾನಗರದ ಕಾರ್ಯಕರ್ತರಾಗಿದ್ದರು. ಅವರು ಸದಾ ಹಸನ್ಮುಖರಾಗಿದ್ದು ಎಲ್ಲರೊಂದಿಗೂ ಆತ್ಮೀಯತೆಯನ್ನು ಬೆಳಸಿಕೊಂಡವರು.
ಬೆಂಗಳೂರಿನ ಪೂರ್ವ ಪ್ರದೇಶ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಂಘಕಾರ್ಯದ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದವರು. ಅಷ್ಟೇ ಅಲ್ಲದೆ ಶ್ರೀ ವಿಕಾಸ ವಿದ್ಯಾಕೇಂದ್ರ ಶಾಲೆ (ಪ್ರಸ್ತುತ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ) ಯನ್ನು ಸಹ ಕಟ್ಟಿ ಬೆಳಸಿದರು.
ಅಗಲಿದ ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ವಿ. ನಾಗರಾಜ
ಕ್ಷೇತ್ರೀಯ ಸಂಘಚಾಲಕ
ರಾಷ್ಟ್ರೀಯ ಸ್ವಯಂಸೇವಕ ಸಂಘ