ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಭಾರತೀಯ ಜನತಾ ಪಕ್ಷ ಕರ್ನಾಟಕ ಇದರ ಮಾಜಿ ಉಪಾಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಶಿವಮೊಗ್ಗದ ಶ್ರೀ ಭಾನುಪ್ರಕಾಶ್ ಮತ್ತೂರು (68 ವರ್ಷಗಳು) ನಿಧನರಾಗಿದ್ದಾರೆ.

ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಕುರಿತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿತ್ತು. ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಭಾನುಪ್ರಕಾಶ್ ಅವರು ಪ್ರತಿಭಟನೆಯಲ್ಲಿ ನಿರತರಾಗಿದ್ದಾಗಲೇ ಹೃದಯಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿರುವ ಇವರು ತಾಲೂಕು ಕಾರ್ಯವಾಹ, ಜಿಲ್ಲಾ ಶಾರೀರಿಕ ಪ್ರಮುಖ್ ಮೊದಲಾದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಭಾರತೀಯ ಕಿಸಾನ್ ಸಂಘದಲ್ಲೂ ಕಾರ್ಯನಿರ್ವಹಿಸಿದ್ದರು. ಭಾನುಪ್ರಕಾಶ್ ಅವರು 2001ರಿಂದ 2005ರ ಅವಧಿಯಲ್ಲಿ ಗಾಜನೂರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರು 2005ರಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಬಂಗಾರಪ್ಪ ಅವರ ಎದುರು ಸ್ಪರ್ಧೆಗೆ ನಿಂತಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು.

ಗಣ್ಯರ ಸಂತಾಪ: ಶ್ರೀ ಭಾನುಪ್ರಕಾಶ್ ಮತ್ತೂರು ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಬಿ.ಆರ್., ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಸಂತಾಪ ಸೂಚಿಸಿದ್ದಾರೆ.


ಭಾನುಪ್ರಕಾಶ್ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. ನಂಬಲಾಗದ ಆಘಾತ. ಒಬ್ಬ ಉತ್ಸಾಹಿ, ಆದರ್ಶಪ್ರಾಯ, ಸಂಘಟಕ ನೇತೃತ್ವ ಗುಣಗಳ ಕಾರ್ಯಕರ್ತ ಮಿತ್ರ ಬದುಕಿನ ಹಾದಿ ಮುಗಿಸಿಬಿಟ್ಟರು!
ॐ ಶಾಂತಿಃ॥ – ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ


ಸಹಸ್ರಾರು ಜನರಿಗೆ ಆಶ್ರಯ ನೀಡಿದ ಆಲದ ಮರವೊಂದು ಧರೆಗುರುಳಿತು. ಓಂ ಶಾಂತಿಃ ಶಾಂತಿಃ ಶಾಂತಿಃ. – ಬಿ. ಎಲ್. ಸಂತೋಷ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ಬಿಜೆಪಿ


ಹೇ ರಾಮ್! ಇದೇನಿದು ಆಘಾತಕರ ಸುದ್ದಿ. ಕಾರ್ಯ ಮಾಡುತ್ತಲೇ ಕಾರ್ಯಕ್ಕಾಗಿ ಸಮರ್ಪಿತರಾದರು.
ಪ್ರಿಯ ಭಾನು ರವರಿಗೆ ಸದ್ಗತಿ ಸಿಗಲಿ ಮತ್ತು ಅವರ ಈ ಅಕಾಲಿಕ, ಆಕಸ್ಮಿಕ ಮಹಾಪ್ರಸ್ಥಾನ ದ ದುಃಖವನ್ನು ಎದುರಿಸುವ ಶಕ್ತಿ ಭಗವಂತ ಅವರ ಕುಟುಂಬ, ಬಂಧು -ಮಿತ್ರರಿಗೆಲ್ಲ ಕೊಡಲಿ ಎಂದು ಭಾರವಾದ ಹೃದಯದಿಂದ ವಿನಮ್ರನಾಗಿ ಪ್ರಾರ್ಥಿಸುವೆ. ಓಂ ಶಾಂತಿಃ.                  -ಶಂಕರಾನಂದ ಬಿ. ಆರ್., ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ, ಭಾರತೀಯ ಶಿಕ್ಷಣ ಮಂಡಲ


ಶ್ರೀಯುತ ಭಾನುಪ್ರಕಾಶ್ ರ ಆತ್ಮಕ್ಕೆ ಸದ್ಗತಿ ದೊರೆಯಲಿ. ಕುಟುಂಬದ ಎಲ್ಲಾ ಸದಸ್ಯರಿಗೂ ಹಿರಿಯರ ಅನಿರೀಕ್ಷಿತ ಹಾಗೂ ಅಕಾಲಿಕ ಅಗಲಿಕೆಯ ದು:ಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ.

– ಜಿ.ಎಸ್.ಉಮಾಪತಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರು

Leave a Reply

Your email address will not be published.

This site uses Akismet to reduce spam. Learn how your comment data is processed.