ರಾಷ್ಟ್ರೀಯ ಸ್ವಯಂಸೇವಕ ಸಂಘದ 5ನೇ ಸರಸಂಘಚಾಲಕರಾಗಿದ್ದ ಶ್ರೀ ಸುದರ್ಶನ್ ಜೀ2012ಸೆಪ್ಟೆಂಬರ್ 15ರಂದು ಬೆಳಿಗ್ಗೆ 6.30ಕ್ಕೆ ಛತ್ತೀಸ್ ಗಡದ ರಾಯ್ಪುರದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಸಂಸ್ಕಾರ 16ರಂದು ಮಧ್ಯಾಹ್ನ 3.30ಕ್ಕೆ ನಾಗಪುರದಲ್ಲಿ ನಡೆಯಲಿದೆ.
ಶ್ರೀ ಸುದರ್ಶನ್ಜಿ
ಸುದರ್ಶನ್ಜೀಯವರ ಪೂರ್ಣ ಹೆಸರು ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್. ಕುಪ್ಪಹಳ್ಳಿ ಮಂಡ್ಯದ ಸಮೀಪದ ಒಂದು ಗ್ರಾಮ. ಸುದರ್ಶನ್ಜೀಯವರ ಹಿರಿಯರು ಕರ್ನಾಟಕದವರು. ೧೯೩೧ರ ಮಾರ್ಚ್ ೧೮ರಂದು ಆಗಿನ ಮಧ್ಯಪ್ರದೇಶ ಪ್ರಾಂತದ ರಾಯ್ಪುರದಲ್ಲಿ ಜನನ. ೯ನೇ ವಯಸ್ಸಿನಿಂದ ಸಂಘದ ಶಾಖೆಗೆ ಬರಲು ಪ್ರಾರಂಭ. ಟೆಲಿಕಮ್ಯೂನಿಕೇಶನ್ ತಂತ್ರಜ್ಞಾನದ ವಿಷಯದಲ್ಲಿ ಸಾಗರ್ ವಿಶ್ವವಿದ್ಯಾಲಯದಿಂದ ಬಿ. ಎ. (ಆನರ್ಸ್) ಪದವೀಧರ. ೧೯೫೪ರಿಂದ ಸಂಘದ ಪ್ರಚಾರಕರು. ರಾಯಗಢ ಜಿಲ್ಲೆಯಲ್ಲಿ ಸಂಘದ ಪ್ರಚಾರಕರಾಗಿ ಕಾರ್ಯಾರಂಭ. ೧೯೬೪ರಲ್ಲಿ ೩೩ ವರ್ಷ ವಯಸ್ಸಿನಲ್ಲಿ ಮಧ್ಯಭಾರತ ಪ್ರಾಂತಪ್ರಚಾರಕರಾಗಿ ಜವಾಬ್ದಾರಿ. ೧೯೬೯ರಿಂದ ವಿವಿಧ ಕ್ಷೇತ್ರಗಳ ಅಖಿಲಭಾರತೀಯ ಸಮನ್ವಯಕಾರ / ಪ್ರಭಾರಿಯಾಗಿ ಜವಾಬ್ದಾರಿ ನಿರ್ವಹಿದರು. ೧೯೭೭ರಿಂದ ಪೂರ್ವಾಂಚಲದ ರಾಜ್ಯಗಳಲ್ಲೂ ಎರಡು ವರ್ಷಗಳ ಕಾಲ ಸಂಘಕಾರ್ಯ ವಿಸ್ತಾರಕ್ಕಾಗಿ ಕೆಲಸ ಮಾಡಿರುವ ಅನುಭವಿ. ೧೯೭೯ರಲ್ಲಿ ಅಖಿಲಭಾರತೀಯ ಶಾರೀರಿಕ ಪ್ರಮುಖರಾಗಿ ಜವಾಬ್ದಾರಿ. ತದನಂತರ ಅಖಿಲಭಾರತೀಯ ಬೌದ್ಧಿಕ್ ಪ್ರಮುಖರಾಗಿಯೂ ಮಾರ್ಗದರ್ಶನ ಮಾಡಿದ್ದಾರೆ. ಅಖಿಲಭಾರತೀಯ ಸ್ತರದಲ್ಲಿ ಶಾರೀರಿಕ ಪ್ರಮುಖ ಮತ್ತು ಬೌದ್ಧಿಕ್ ಪ್ರಮುಖ ಜವಾಬ್ದಾರಿಗಳೆರಡನ್ನೂ ಸಮರ್ಥವಾಗಿ ನಿರ್ವಹಿಸಿದ ಅಪರೂಪದ ಬಹುಮುಖೀ ವ್ಯಕ್ತಿತ್ವ ಸುದರ್ಶನ್ಜೀಯವರದ್ದು. ೧೯೯೦ರಲ್ಲಿ ಸಂಘದ ಸಹ ಸರಕಾರ್ಯವಾಹರಾಗಿ ಜವಾಬ್ದಾರಿ. ೨೦೦೦ನೇ ಇಸವಿ ಮಾರ್ಚ್ ೧೦ರಂದು ರಜ್ಜೂ ಭೈಯ್ಯಾ ಅವರಿಂದ ಸರಸಂಘಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡರು. ಅನಾರೋಗ್ಯದ ಕಾರಣದಿಂದ ೨೦೦೯ನೇ ಇಸವಿ ಮಾರ್ಚ್ ೨೧ರಂದು ಸರಸಂಘಚಾಲಕಸ್ಥಾನದಿಂದ ಸ್ವಯಂ ನಿವೃತ್ತರಾಗಿ, ಪ. ಪೂ. ಡಾ| ಮೋಹನ್ಜೀ ಭಾಗವತ್ ಅವರಿಗೆ ಸರಸಂಘಚಾಲಕ ಜವಾಬ್ದಾರಿ ವಹಿಸಿಕೊಟ್ಟರು. ಸಂಘಟನೆಗಳಲ್ಲಿ ಯುವಕರಿಗೆ ನಾಯಕತ್ವ ಕೊಡಬೇಕು, ಹಿರಿಯರು ಹಿಂದಿನಿಂದ ಅವರಿಗೆ ಮಾರ್ಗದರ್ಶನ ಮಾಡಬೇಕು ಎಂಬ ವ್ಯಾವಹಾರಿಕ ಸಂಗತಿಯನ್ನು ತಮ್ಮ ಸ್ವಂತ ಮೇಲ್ಪಂಕ್ತಿಯಿಂದ ತೋರಿಸಿಕೊಟ್ಟರು.
ಸುದರ್ಶನ್ಜಿಯವರದ್ದು ತೀಕ್ಷ್ಣ ಬುದ್ಧಿ, ವಿವಿಧ ವಿಷಯಗಳಲ್ಲಿ ಆಳವಾದ ಅಧ್ಯಯನ, ಪಾಂಡಿತ್ಯ, ಅತ್ಯಂತ ತಾರ್ಕಿಕ ವಿಷಯ ಮಂಡನೆ, ಮಾತಿನಲ್ಲಿ ಹಾಸ್ಯಪ್ರಜ್ಞೆ; ಈ ಕಾರಣಗಳಿಂದ ಅವರ ಬೌದ್ಧಿಕ್, ಸಾರ್ವಜನಿಕ ಭಾಷಣ, ಪತ್ರಿಕಾ ಸಂದರ್ಶನಗಳೆಲ್ಲ ಅತ್ಯಂತ ಬೋಧಪ್ರದ, ಸಮಾಜಕ್ಕೆ ಸೂಕ್ತ ಮಾರ್ಗದರ್ಶನ. ಸ್ವದೇಶೀ ವಿಚಾರದ ಅತ್ಯಂತ ಪ್ರಬಲ ಪ್ರತಿಪಾದಕರಾಗಿದ್ದರು. ಹಿಂದುತ್ವ, ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕತೆ, ರಾಷ್ಟ್ರೀಯತೆ, ಸಾಮಯಿಕ ಸಮಸ್ಯೆಗಳಿಗೆ ಸಂಘಕಾರ್ಯದಿಂದ ಪರಿಹಾರ ಹೇಗೆ ಸಾಧ್ಯ ಎಂಬಿತ್ಯಾದಿ ವಿಷಯಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ, ತರ್ಕಬದ್ಧವಾಗಿ ಮನಮುಟ್ಟುವಂತೆ ಮಾತನಾಡುವ ಪ್ರತಿಭೆ ಸಾಧನೆ ಅವರಲ್ಲಿತ್ತು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಂಧುಗಳಲ್ಲೂ ರಾಷ್ಟ್ರೀಯ ಭಾವ ಬೆಳೆಸಿ ಅವರನ್ನೂ ನಮ್ಮ ಸಾಂಸ್ಕೃತಿಕ ಧಾರೆಯಲ್ಲಿ ಸಮರಸಗೊಳಿಸುವ ಪ್ರಯತ್ನವನ್ನು ಮಾಡಲು ಮುನ್ನುಡಿ ಹಾಕಿಕೊಟ್ಟಿದ್ದಾರೆ. ಅತ್ಯಂತ ಸರಳ ಜೀವನ, ವಿನಯಪೂರ್ವಕ ನಡನಳಿಕೆ. ಸರಸಂಘಚಾಲಕ ಸ್ಥಾನದಿಂದ ನಿವೃತ್ತಿಯ ನಂತರ ತಾನೊಬ್ಬ ಸಾಮಾನ್ಯ ಸ್ವಯಂಸೇವಕ ಎಂಬುದನ್ನು ವ್ಯವಹಾರದಲ್ಲಿ ನಡೆದು ತೋರಿದವರು. ಕಾರ್ಯಕ್ರಮಗಳಲ್ಲಿ ಉಳಿದೆಲ್ಲ ಸ್ವಯಂಸೇವಕರಂತೆ ನೆಲದಲ್ಲೇ ಕುಳಿತು ಭಾಗವಹಿಸುತ್ತಿದ್ದರು. ಅನಾರೋಗ್ಯದ ನಡುವೆಯೂ ಸಂಘದ ಅಪೇಕ್ಷೆಯಂತೆ ಎಲ್ಲ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಸುದರ್ಶನ್ಜಿಯವರದ್ದು ರಾಷ್ಟ್ರ ಸಮರ್ಪಿತ ಜೀವನ. ೧೯೫೪ರಿಂದ ಕೊನೆಯ ಉಸಿರಿನವರೆಗೆ ೫೮ವರ್ಷಗಳ ಕಾಲ ತನ್ನೆಲ್ಲ ಪ್ರತಿಭೆ ಪರಿಶ್ರಮಗಳನ್ನೂ ಸಂಘಕಾರ್ಯಕ್ಕೆ ಸಮರ್ಪಿಸಿ ತಾಯಿ ಭಾರತಿಯ ಸೇವೆಗೈದ ಸಾರ್ಥಕ ಚೇತನ. ಅವರ ಜೀವನ ನಮಗೆ ಪ್ರೇರಣಾ ಸ್ರೋತ. ಅವರ ದಾರಿಯಲ್ಲೇ ನಡೆದು, ಸಂಘದ ಧ್ಯೇಯೋದ್ದೇಶಗಳನ್ನು ಸಾಧಿಸಲು ಇನ್ನೂ ಹೆಚ್ಚಿನ ಪರಿಶ್ರಮವಹಿಸಿ ಕೆಲಸ ಮಾಡುವುದೇ ಅವರಿಗೆ ನಾವು ಸಲ್ಲಿಸಬೇಕಾದ ಕಾರ್ಯಾಂಜಲಿ, ಅದುವೇ ನಿಜವಾದ ಶ್ರದ್ಧಾಂಜಲಿ.