
ಹೆಗ್ಗಡದೇವನಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಗ್ಗಡದೇವನಕೋಟೆಯ ಯುಗಾದಿ ಉತ್ಸವ ಶ್ರೀ ಆದಿಚುಂಚನಗಿರಿ ಸಭಾಭವನದ ಆವರಣದಲ್ಲಿ ನಡೆಯಿತು. ಪದ್ಮಶ್ರೀ ಪುರಸ್ಕೃತ ಸೋಮಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಪ್ರಚಾರಕ ನಂದೀಶ್ ಅವರು ಬೌದ್ಧಿಕ್ ನೀಡಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ ಅವರು ವನವಾಸಿ ಕಲ್ಯಾಣ ಆಶ್ರಮದ ಕೆಲಸ ಅದ್ಬುತವಾದದ್ದು. ವನವಾಸಿ ಕಲ್ಯಾಣದ ಬಗ್ಗೆ ನನಗೆ ತಪ್ಪು ಕಲ್ಪನೆ ಇತ್ತು. ಆದರೆ ಒಳ ಹೊಕ್ಕು ನೋಡಿದಾಗ ಅದರ ಮಹತ್ತರದ ಕೆಲಸ ತಿಳಿಯಿತು. ಇಂದು ಅದರ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದರು.

ವಸವಾಸಿ ಕಲ್ಯಾಣ ಆಶ್ರಮದ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ವನ್ಯಜೀವಿ ಸಂರಕ್ಷಣೆ, ಪಶ್ಚಿಮ ಘಟ್ಟ ಉಳಿಸುವ ಪ್ರಯತ್ನಗಳು ಸೇರಿದಂತೆ ಹಲವು ಹೋರಾಟಗಳನ್ನು ಮಾಡಿದ್ದೇವೆ. ಆ ಸಂದರ್ಭದಲ್ಲಿ ಹಲವು ಆಮಿಷಗಳು ಬಂದಿದ್ದವು. ಆದರೆ ಅವುಗಳಿಗೆ ಬಲಿಯಾಗದೆ ಇಟ್ಟುಕೊಂಡ ಧ್ಯೇಯಕ್ಕಾಗಿ ಕೆಲಸ ಮಾಡಿದೆ. ಇಂದು ನಮ್ಮ ಹೋರಾಟಗಳ ಫಲವಾಗಿ ಅನೇಕ ಕಾಯ್ದೆಗಳು ಇಂದು ರಚನೆಯಾಗುತ್ತಿವೆ ಎಂದರು.


ಭಾರತದಲ್ಲಿ ಹುಟ್ಟಿದ ನಾವು ಧನ್ಯರು. ಭಾರತ ಇಂದು ಬದಲಾಗುತ್ತಿದೆ. ಇವತ್ತು ರಾಷ್ಟ್ರಪತಿ ಭವನದಲ್ಲಿ ಎಲ್ಲಾ ಜನಾಂಗದವರಿಗೂ ಮುಕ್ತ ಪ್ರವೇಶ ಇದೆ. ಹಿಂದೆ ಕಷ್ಟ ಇತ್ತು ಎಂದು ನುಡಿದರು.

