Davanagere Jan 12, 2015: RSS Unit of Davanagere Nagar organised Taruna Sangama, a youth gathering held at Governmrnt Boys Highschool Grounds at Davanagere in Karnataka on Sunday evening. RSS Karnataka Dakshin Pranth Sah Karyavah Prof BV Sreedhar Swamy addressed the gathering. Swayamsevaks performed physical exercises, Surya Namaskar, Ghosh the RSS Bandset etc. Former president of Lawyers Association V Thimmesh, Nagar Sanghachalak GT Suresh were on the dais.
‘ಜೀವನ ಸಮಾಜಕ್ಕಾಗಿಯೇ ಹೊರತು ಸ್ವಂತಕ್ಕಾಗಿ ಅಲ್ಲ’: ಆರ್‌ಎಸ್‌ಎಸ್‌ನ ತರುಣ ಸಂಗಮದಲ್ಲಿ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀಧರಸ್ವಾಮಿ
ದಾವಣಗೆರೆ: ಮಾನವತಾವಾದಿ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳನ್ನು ಮೈಗೂಡಿಸಿಕೊಂಡವರೇ ರಾಷ್ಟ್ರೀಯ ಸ್ವಯಂಸೇವಕರು. ಈ ಜೀವನ ಸಮಾಜಕ್ಕಾಗಿಯೇ ಹೊರತು ಸ್ವಂತಕ್ಕಾಗಿ ಅಲ್ಲ ಎಂಬ ಶರಣತತ್ವವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ದೃಷ್ಟಿಕೋನ ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀಧರಸ್ವಾಮಿ ವ್ಯಾಖ್ಯಾನಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ತರುಣ ಸಂಗಮದ ಅಂಗವಾಗಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಅವರು ಬೌದ್ಧಿಕ್ ನೀಡಿದರು.
ಆಧುನಿಕ ಯುಗದಲ್ಲಿ ಮಕ್ಕಳು ಉನ್ನತ ಪದವಿ ಗಳಿಸಬೇಕೆಂಬ ಭರದಲ್ಲಿ ಅತಿಮುಖ್ಯವಾದ ಚಾರಿತ್ರ್ಯವೇ ಗೌಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಪ್ರತಿಪಾದಿಸಿದ ಪಂಚಶೀಲಗಳನ್ನೇ ಸಂಘವೂ ಪಾಲಿಸುತ್ತಿದೆ. ಸ್ವಯಂಸೇವಕರು ಶರಣರಂತೆ ಸಮಾಜಕ್ಕಾಗಿ ಬದುಕುವವರು. ಸ್ವಾಮಿ ವಿವೇಕಾನಂದರ ಪರಿಕಲ್ಪನೆಯ ಸ್ವಯಂಸೇವಕರೂ ಇವರೇ ಎಂದು ನುಡಿದರು.
ಮಲ್ಯಗಳ ಕೊರತೆಯಿಂದ ಇಂದು ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಜತಿಯ ಭಾವನೆಯಿಂದ ಸಮಾಜ ವಿಘಟನೆಯಾಗುತ್ತಿದೆ. ಸಮಾಜ ಸಶಕ್ತವಾದರೆ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಜ್ಜನ ಶಕ್ತಿಗಳು ಒಂದಾದರೆ ದುಷ್ಟಕೂಟದ ಆಟ ನಡೆಯುವುದಿಲ್ಲ. ಆದ್ದರಿಂದ ಸಮಾಜದಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದೆ. ಆದ್ದರಿಂದ ಹಿಂದೂ ಸಮಾಜ ಸಂಘಟನೆಯೊಂದಿಗೆ ಸಾಮರ್ಥ್ಯ, ಚಾರಿತ್ರ್ಯ ನಿರ್ಮಾಣ ಕೆಲಸವನ್ನು ಸಂಘ ಮಾಡುತ್ತಿದೆ ಎಂದರು.
ಸಮಾಜಕ್ಕಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಸಂಸ್ಕಾರವನ್ನು ಸಂಘ ನೀಡುತ್ತಿದೆ. ಹಾಗಾಗಿಯೇ ಸಮಾಜದಲ್ಲಿ ಸಂಘದ ಬಗ್ಗೆ ಅಪಾರ ಗೌರವವಿದೆ. ತಮ್ಮ ಮಕ್ಕಳಿಗೆ ಶ್ರೀರಾಮ, ಶ್ರೀಕೃಷ್ಣನ ವೇಷ ತೊಡಿಸುವ ಅದೇ ತಾಯಂದಿರು ಮಕ್ಕಳನ್ನು ಸಂಘದ ಗಣವೇಷದಲ್ಲಿ ನೋಡುವುದನ್ನು ಇಷ್ಟಪಡುತ್ತಿದ್ದಾರೆ. ನಾವೆಲ್ಲರೂ ವಿಶಾಲ ಹಿಂದೂ ಪರಿವಾರಕ್ಕೆ ಸೇರಿದವರು ಎಂಬ ಮನೋಭಾವವೇ ಈ ಉತ್ಸಾಹಕ್ಕೆ ಕಾರಣ. ಸಂಘವು ಕಳೆದ ೯ ದಶಕಗಳಿಂದ ಸಮಾಜದಲ್ಲಿನ ಅಭೂತಪೂರ್ವ ಪರಿವರ್ತನೆಗೆ ಕಾರಣವಾಗಿದೆ. ಸಮಾಜದಲ್ಲಿ ಏಕೀಭಾವ ಜಗೃತಗೊಳಿಸಿ, ಅದಕ್ಕೆ ಶಕ್ತಿ ತುಂಬುವ ಮೂಲಕ ಸಮಗ್ರ ವಿಕಾಸದ ನಿಟ್ಟಿನಲ್ಲಿ ಸಂಘ ಸಾಗುತ್ತಿದೆ ಎಂದು ನುಡಿದರು.
ಎಲ್ಲರಲ್ಲೂ ಸದ್ಭಾವನೆ ಮೂಡಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆಗ ಮಹಿಳಾ ದೌರ್ಜನ್ಯ ಸೇರಿದಂತೆ ಯಾವುದೇ ಹಿಂಸಾಕೃತ್ಯಕ್ಕೂ ಅವಕಾಶವಾಗದೆ, ಜಗತ್ತು ಸುಂದರವಾಗುತ್ತದೆ. ಆದ್ದರಿಂದಲೇ ಒಳ್ಳೆಯವನಾಗಿರು-ಒಳ್ಳೆಯದನ್ನು ಮಾಡು ಎಂಬ ಸಂದೇಶದೊಂದಿಗೆ ವಿವೇಕ್ ಬ್ಯಾಂಡ್ ಅಭಿಯಾನವನ್ನು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12ರಿಂದ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆ, ನಶಾಮುಕ್ತಿ, ಆರೋಗ್ಯ, ಶಿಕ್ಷಣ ಹೀಗೆ ಯಾವುದಾದರೊಂದು ಒಳ್ಳೆಯ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಸಮಾಜವನ್ನು ಕಾಡುತ್ತಿರುವ ಸವಾಲುಗಳಿಗೆ ಉತ್ತರ ರೂಪದಲ್ಲಿ ಸೇವಾ ಕಾರ್ಯ ಕೈಗೊಳ್ಳಿ. ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ದೇಶದ ಹಿತರಕ್ಷಣೆಯು ಸಂಘದ ಕೆಲಸ ಮಾತ್ರವಲ್ಲ, ದೇಶವನ್ನು ಪೂಜಿಸುವ ಪ್ರತಿಯೊಬ್ಬರ ಕರ್ತವ್ಯವೂ ಹೌದು. ಸಂಘದ ಕಾರ್ಯಕ್ಕೆ ಕೈಜೋಡಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಸಮಾಜದ ಸರ್ವಾಂಗೀಣ ಪ್ರಗತಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ದೇಶಭಕ್ತಿಯ ಸುಗಂಧವನ್ನು ಎಲ್ಲೆಡೆ ಹರಡಿ. ದೇಶವನ್ನು ಕಾಡುತ್ತಿರುವ ಸವಾಲುಗಳ ಪರಿಹಾರಕ್ಕೆ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಯಂಸೇವಕರಿಂದ ಧ್ವಜವಂದನೆ, ಉಪವಿಷ್ಟ ವ್ಯಾಯಾಮ, ಸೂರ್ಯ ನಮಸ್ಕಾರ, ಸ್ಥಿರದಲ್ಲಿ ಘೋಷ್ ಪ್ರದರ್ಶನ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿ. ತಿಮ್ಮೇಶ್ ವಹಿಸಿದ್ದರು. ನಗರ ಸಂಘಚಾಲಕ ಜಿ.ಟಿ. ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕಾರ್ಯವಾಹ ಅರುಣ ಗುಡ್ಡದಕೇರಿ ವರದಿ ಮಂಡಿಸಿದರು. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ವಂದಿಸಿದರು.