ರಾಂಚಿ, ಝಾರ್ಖಂಡ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ಜುಲೈ 12 ರಿಂದ 14 ರವರೆಗೆ ರಾಂಚಿಯ ಸರಳಾ ಬಿರ್ಲಾ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಎಂದು ಸರಳಾ ಬಿರ್ಲಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ತಿಳಿಸಿದರು.
ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸೇರಿದಂತೆ ದೇಶಾದ್ಯಂತ ಸಂಘದ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಅಖಿಲ ಭಾರತ ಕಾರ್ಯಕಾರಿಣಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬೈಠಕ್ ನಲ್ಲಿ ಸಂಘದ ವಿಭಿನ್ನ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಂಘವು ಪ್ರತಿವರ್ಷ ಮೂರು ಪ್ರಮುಖ ಬೈಠಕ್ ಗಳನ್ನು ನಡೆಸುತ್ತದೆ. ಆದರೆ ಈ ಬೈಠಕ್ ನಲ್ಲಿ ಇತ್ತೀಚೆಗೆ ನಡೆದ ಪ್ರಶಿಕ್ಷಣ ವರ್ಗ ಹಾಗೂ ವಿವಿಧ ವಿಷಯ ಸೇರಿದಂತೆ ಸಂಘದ ಎಲ್ಲಾ ಕಾರ್ಯವಿಭಾಗಗಳ ಕೆಲಸಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಜೊತೆಗೆ ಆರ್ ಎಸ್ ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರ ವಾರ್ಷಿಕ ಪ್ರವಾಸ ಕುರಿತೂ ಚರ್ಚಿಸಲಾಗುವುದು ಎಂದರು.
ಪ್ರಸ್ತುತ ದೇಶಾದ್ಯಂತ 73000 ಶಾಖೆಗಳು ನಡೆಯುತ್ತಿವೆ. ಮುಂಬರುವ ಶತಮಾನೋತ್ಸವದ ವರ್ಷದಲ್ಲಿ ದೇಶಾದ್ಯಂತ ಎಲ್ಲಾ ಮಂಡಲ ಸ್ಥರದಲ್ಲಿ ಕನಿಷ್ಠ ಒಂದು ಶಾಖೆಯನ್ನು ಆರಂಭಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಇದರೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳ ಸಹಯೋಗದೊಂದಿಗೆ ನಗರಗಳಲ್ಲಿ ಸಂಘದ ಸೇವಾ ಕಾರ್ಯಗಳು ನಡೆಯುವಂತೆ ಪ್ರಯತ್ನಗಳನ್ನು ಯೋಜಿಸಲಾಗುವುದು. ಈ ವರ್ಷ ಶಾರೀರಿಕ್ ವಿಭಾಗದಿಂದ ಅನೇಕ ಹೊಸ ಆಟಗಳನ್ನು ರಚಿಸಲಾಗಿದೆ. ಇದನ್ನು ಶಾಖಾ ಮಟ್ಟಕ್ಕೆ ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.
2025-26 ಶತಮಾನೋತ್ಸವ ವರ್ಷವಾಗಿದ್ದು, ಈ ವರ್ಷದಲ್ಲಿ, ಸಾಮಾಜಿಕ ಬದಲಾವಣೆಯ ಐದು ಉಪಕ್ರಮಗಳನ್ನು ಶಾಖೆ ಮಟ್ಟಕ್ಕೆ ಮತ್ತು ಸಮಾಜಕ್ಕೆ ಕೊಂಡೊಯ್ಯಲು ಯೋಜನೆಗಳನ್ನು ರೂಪಿಸಲಾಗುವುದು. ಶತಮಾನೋತ್ಸವದ ವಿಸ್ತರಣಾ ಯೋಜನೆಯನ್ನು ಪೂರ್ಣಗೊಳಿಸಲು, ದೇಶಾದ್ಯಂತ 3000 ಕಾರ್ಯಕರ್ತರು ಶತಾಬ್ದಿ ವಿಸ್ತಾರಕ್ ಆಗಿ ಎರಡು ವರ್ಷಗಳ ಸಮಯವನ್ನು ನೀಡುತ್ತಿದ್ದಾರೆ. ಮೂರು ದಿನಗಳ ಬೈಠಕ್ ನಲ್ಲಿ ಸಮಾಜದ ಸಜ್ಜನ ಶಕ್ತಿಯನ್ನು ಒಟ್ಟಿಗೆ ಜೋಡಿಸಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗಾಗಿ ಹೇಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ಚರ್ಚಿಸಲಾಗುತ್ತದೆ. ಅಲ್ಲದೆ, ಸಾಮಾಜಿಕ ಜೀವನದ ಇತರ ಅನೇಕ ವಿಷಯಗಳನ್ನು ಸಹ ಚರ್ಚಿಸಲಾಗುವುದು ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಪೂರ್ವ ಸಂಘಚಾಲಕ ದೇವವ್ರತ್ ಪಹಾನ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನರೇಂದ್ರ ಕುಮಾರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.