2020ರ ವೇಳೆಗೆ ವಿಶ್ವದ ಪ್ರಮುಖ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂಬ ತಜ್ಞರ ಅನಿಸಿಕೆಗಳಿಗೆ ಪುಷ್ಠಿ ನೀಡುವಂತೆ ಹತ್ತಾರು ಸಾಮಾಜಿಕ ಪರಿವರ್ತನೆಗಳಿಗೆ ಭಾರತ ಸಾಕ್ಷಿಯಾಗುತ್ತಿದೆ. ಇದೀಗ ಶಿಕ್ಷಣ ಕ್ಷೇತ್ರದ ಸರದಿ. ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣ ೭೫ರ ಆಸುಪಾಸು ತೊನೆದಾಡುತ್ತಿದೆ. ಬಡವರಿಗೆ ಉನ್ನತ ಶಿಕ್ಷಣ ಜಟಿಲಗೊಳ್ಳುತ್ತಿರುವ ಈ ವೇಳೆಯಲ್ಲೇ ಪ್ರತಿಯೋರ್ವ ಮಗುವಿಗೂ ಶಿಕ್ಷಣ ಕಡ್ಡಾಯವಾಗಿ ಲಭ್ಯವಾಗುವ `ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ – 2009 (RTE-Right to Education) ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತೀರ್ಪಿನ ಬಹುಪಾಲು ಸ್ವಾಗತಾರ್ಹ ಅಂಶಗಳೇ ಇದ್ದರೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಕುರಿತು ವಿನಾಯಿತಿ ತೋರಿರುವುದು ಈ ಕಾಯ್ದೆಯ ಮೂಲ ಉದ್ದೇಶ ಜಾರಿಗೆ ತರುವಲ್ಲಿ ಒಂದು ತೊಡಕೇಸರಿ. ಆರೆಸ್ಸೆಸ್ನ ರಾಷ್ಟ್ರೀಯ ಮುಖಂಡ ರಾಮ್ಮಾಧವ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆರ್ಟಿಇ ಕಾಯ್ದೆಗೆ ಸಂಬಂಧಿಸಿ ಹೇಳುವುದಾದರೆ ಇದೊಂದು ಶ್ಲಾಘನೀಯ ಪ್ರಯತ್ನ ಎನ್ನಲೇಬೇಕು. ಭಾರತದ ಪ್ರತಿಯೊಂದು ಮಗುವನ್ನು ಸಾಕ್ಷರನನ್ನಾಗಿ ಮಾಡುವ ಸಾಮಾಜಿಕ ಹೊಣೆಗಾರಿಕೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕೂಡ ಭಾಗಿಗಳನ್ನಾಗಿ ಮಾಡುತ್ತಿರುವುದು ಕೂಡ ಕಾಯ್ದೆಯ ಒಂದು ಶ್ಲಾಘನೀಯ ಅಂಶವಾಗಿದೆ. ಕಾಯ್ದೆಯ ಪ್ರಕಾರ, ಸಾರ್ವಜನಿಕ ಮತ್ತು ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಎಂಬ ಭೇದವಿಲ್ಲದೆ ಪ್ರಾಥಮಿಕ ಶಿಕ್ಷಣ ನೀಡುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿನ ಸೀಟುಗಳ ಶೇ. ೨೫ರಷ್ಟನ್ನು ಬಡವರು ಮತ್ತು ಹಿಂದುಳಿದವರ ಮಕ್ಕಳಿಗೆ ಮೀಸಲಿಡಬೇಕು. ಅದರಿಂದ ೧೪ ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣವು ಅವರ ಹಕ್ಕಾಗಿದೆ. ಆದರೆ ಸುಪ್ರೀಂ ಕೋರ್ಟಿನ ತೀರ್ಪು ಒಂದು ವಿಷಯದಲ್ಲಿ ನಿರಾಶೆ ಉಂಟುಮಾಡುವಂತಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಈ ಹೊಣೆಗೆ ಹೆಗಲು ಕೊಡಬೇಕೆಂದು ಕೇಂದ್ರ ಸರ್ಕಾರ ಬಯಸಿತ್ತು; ಆದರೆ ಸುಪ್ರೀಂಕೋರ್ಟ್ ಅನುದಾನರಹಿತ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಈ ಸಾಮಾಜಿಕ ಹೊಣೆಗಾರಿಕೆಯಿಂದ ವಿನಾಯಿತಿ ನೀಡಿದೆ.
ಭಾರತದ ಪ್ರತಿಯೊಂದು ಮಗುವಿಗೆ ಪ್ರಾಥಮಿಕ ಶಿಕ್ಷಣವು ಮೂಲಭೂತ ಹಕ್ಕಾಗಿರಬೇಕು. ಈ ಉನ್ನತ ಗುರಿಯನ್ನು ಮುಂದಿಟ್ಟುಕೊಂಡು ಸಂವಿಧಾನದ ೮೬ನೇ ತಿದ್ದುಪಡಿಯನ್ನು ತರಲಾಯಿತು; ತಿದ್ದುಪಡಿ
ತರುವಾಗ ಸಂವಿಧಾನದ ೨೧ನೇ ವಿಧಿಗೆ ವಿಭಾಗ(ಸೆಕ್ಷನ್) ಎ ಯನ್ನು ಸೇರಿಸಲಾಯಿತು. ಕೇಂದ್ರದಲ್ಲಿ ಎನ್ಡಿಎ ಅಧಿಕಾರದಲ್ಲಿದ್ದಾಗ ೨೦೦೨ರಲ್ಲಿ ಈ ತಿದ್ದುಪಡಿಯನ್ನು ತರಲಾಯಿತು. ತಿದ್ದುಪಡಿಯ ಚಿಂತನೆಯನ್ನು
ನಡೆಸಿ ಚಾಲನೆ ನೀಡಿದವರು ಎನ್ಡಿಎ ಮಾನವ ಸಂಪನ್ನೂಲ ಅಭಿವೃದ್ಧಿ ಸಚಿವ ಡಾ|| ಮುರಳಿ ಮನೋಹರ ಜೋಶಿ.
ತಿದ್ದುಪಡಿಯನ್ನು ೨೦೦೨ರಲ್ಲಿ ಮಂಡಿಸಲಾಯಿತಾದರೂ ಅದನ್ನು ಕಾರ್ಯರೂಪಕ್ಕೆ ತರುವವರೆಗೆ ಎನ್ಡಿಎ ಅಧಿಕಾರದಲ್ಲಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ವಿಧಿ ೨೧ಎ ಪ್ರಕಾರ ಶಾಸನವೊಂದನ್ನು ತರುವುದಕ್ಕೆ ಪೂರ್ತಿ ಐದು ವರ್ಷಗಳನ್ನು ತೆಗೆದುಕೊಂಡಿತು; ಅದಾದ ಬಳಿಕವಷ್ಟೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೇಶದ ಮಕ್ಕಳ ಹಕ್ಕಾಯಿತು. ಹೊಸ ಕಾಯ್ದೆ `ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ – ೨೦೦೯ (ಸಂಕ್ಷಿಪ್ತವಾಗಿ ಆರ್ಟಿಇ ಕಾಯ್ದೆ) ಅಸ್ತಿತ್ವಕ್ಕೆ ಬಂತು.
ಶಿಕ್ಷಣಕ್ಕೆ ಸಂಬಂಧಿಸಿ ನಮ್ಮ ದೇಶದಲ್ಲಿ ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರ ಮಕ್ಕಳ ನಡುವೆ ಭಾರೀ ಅಂತರವಿದೆ ಎನ್ನುವುದು ಎಲ್ಲರೂ ತಿಳಿದ ವಿಷಯವಾಗಿದೆ. ಶ್ರೀಮಂತರ ಮಕ್ಕಳು ಮತ್ತು ಮಧ್ಯಮ ವರ್ಗದವರ ಮಕ್ಕಳು ಕೂಡ ಪಬ್ಲಿಕ್ ಸ್ಕೂಲ್, ಸನಿವಾಸ (ವಸತಿ) ಶಾಲೆ, ಕಾನ್ವೆಂಟ್ ಮುಂತಾಗಿ ಆಯ್ಕೆಗೆ ವಿಪುಲ ಅವಕಾಶಗಳನ್ನು ಹೊಂದಿದ್ದಾರೆ. ಬಡವರು ಮತ್ತು ಕಡಿಮೆ ಆದಾಯದ ಗುಂಪಿನವರಿಗೆ ತಮ್ಮ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿ ಆಯ್ಕೆಗೆ ಅಂತಹ ಅವಕಾಶಗಳೇ ಇಲ್ಲ. ಸರಿಯಾಗಿ ಕಾರ್ಯ ನಿರ್ವಹಿಸದಿರುವ ಸರ್ಕಾರಿ ಶಾಲಾ ವ್ಯವಸ್ಥೆ ಅಥವಾ ಯಾವುದಾದರೂ ಧಾರ್ಮಿಕ ದತ್ತಿ ಸಂಸ್ಥೆಗಳಿಂದ ಅವರು ತೃಪ್ತರಾಗಬೇಕಾಗುತ್ತದೆ.
ನಮ್ಮ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಗಳು ನಡೆದಿವೆಯಾದರೂ ಕಳೆದ ಕೆಲವು ದಶಕಗಳಲ್ಲಿ ಅದೇನೂ ಹೆಚ್ಚಿನ ಫಲ ನೀಡಿಲ್ಲ. ಅದ್ದೂರಿಯ ಯೋಜನೆಗಳನ್ನು ಕೈಗೊಂಡು ಭಾರೀ ಹಣವನ್ನು ವ್ಯಯಿಸಿದರೂ ಕೂಡ ಸರ್ಕಾರಿ ಶಾಲೆಗಳ ಸ್ಥಿತಿ ಈಗಲೂ ಚಿಂತಾಜನಕವಾಗಿಯೇ ಇದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತಶಿಕ್ಷಣ ಕ್ಷೇತ್ರಗಳಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ; ಖಾಸಗಿ ಶಾಲೆಗಳು ಹೊಸ ಬೋಧನ ವಿಧಾನಗಳನ್ನು ಅನುಸರಿಸುತ್ತಿವೆ; ವಿವಿಧ ಬೋಧನೋಪಕರಣಗಳು ಬಳಕೆಗೆ ಬರುತ್ತಿವೆ. ಆದರೆ ಸರ್ಕಾರಿ ಶಾಲೆಗಳು ಅರ್ಹರಾದ ಅಧ್ಯಾಪಕರು, ಕಟ್ಟಡ, ವಿದ್ಯುದ್ದೀಪ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆಯಿಂದಲೇ ಬಳಲುತ್ತಿವೆ. ಕಂಪ್ಯೂಟರ್ನಂತಹ ಬೋಧನೋಪಕರಣಗಳು ಕೆಲವು ಸರ್ಕಾರಿ ಶಾಲೆಗಳಿಗೆ ದೂರದ ಕನಸೇ ಸರಿ.
೨೦೧೧ರ ಜನಗಣತಿಯ ಪ್ರಕಾರ ಕೂಡ ನಮ್ಮ ದೆಶದ ಸಾಕ್ಷರತಾ ಪ್ರಮಾಣವು ಶೇ. ೭೩-೭೪ರ ಆಚೀಚೆ ತೊನೆದಾಡುತ್ತಿದೆ. ಶೇ. ೨೬ರಷ್ಟು ಜನ ನಿರಕ್ಷರಿಗಳೆಂದರೆ ದೇಶದ ಸುಮಾರು ೩೦ ಕೋಟಿ ಜನ ಆ ವರ್ಗಕ್ಕೆ ಸೇರುತ್ತಾರೆ; ಅಂದರೆ ಭಾರತ ಪ್ರಪಂಚದ ಅತಿದೊಡ್ಡ ನಿರಕ್ಷರಿಗಳ ನಾಡು ಎಂದಾಯಿತು.
ಆರ್ಟಿಇ ಯೋಜನೆಯ ಅನುಷ್ಠಾನದಲ್ಲಿ ಕೆಲವು ತೊಡಕುಗಳಿರುವುದು ನಿಜ. ಆಂಧ್ರಪ್ರದೇಶದಲ್ಲಿ ೧೯೮೦ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು ಯೋಜನೆಯೊಂದನ್ನು ಕಾರ್ಯಗತಗೊಳಿಸಿದರು. ಅದರ ಪ್ರಕಾರ ರಾಜ್ಯದ ಎಲ್ಲ ಹೊಟೇಲ್ಗಳು ಸರ್ಕಾರ ನಿಗಡಿಪಡಿಸಿದ ದರದಲ್ಲಿ ಊಟ-ತಿಂಡಿಗಳನ್ನು ಕೊಡಬೇಕಿತ್ತು. ಬಡವರಿಗೆ ಕೈಗೆಟಕುವ ದರದಲ್ಲಿ ಆಹಾರ ಪದಾರ್ಥಗಳು ಸಿಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಆಯಾ ಪದಾರ್ಥದ ದರ ಮತ್ತು ಪ್ರಮಾಣವನ್ನು ಸರ್ಕಾರ ನಿಗದಿಪಡಿಸಿತ್ತು – ಉದಾಹರಣೆಗೆ ನಿರ್ದಿಷ್ಟ ತೂಕದ ಇಂತಿಷ್ಟು ಇಡ್ಲಿಗಳನ್ನು ಎರಡೂ ರೂ. ಗೆ ಮಾರಬೇಕು ಇತ್ಯಾದಿ. ಆರಂಭದಲ್ಲಿ ಊಟ-ತಿಂಡಿ ಅಗ್ಗಕ್ಕೆ ಸಿಕ್ಕಿತೆಂದು ಎಲ್ಲರಿಗೂ ಖುಷಿಯಾಯಿತು. ಆದರೆ ಬಹುಬೇಗ ಹೋಟೇಲ್ ಮಾಲೀಕರು ಅವರದೇ ಒಂದು ಹೊಸ ಯೋಜನೆಯನ್ನು ಪ್ರಕಟಿಸಿದರು. ಅದರಂತೆ ಹೊಟೇಲ್ಗಳಲ್ಲಿ ಎರಡು ಬಗೆಯ ತಿಂಡಿಗಳು ಗ್ರಾಹಕರಿಗೆ ಲಭ್ಯವಾದವು – ಒಂದು ಸರ್ಕಾರ ಸೂಚಿಸಿದ ಮಾದರಿಯ ತಿಂಡಿ-ತೀರ್ಥಗಳು, ಇನ್ನೊಂದು ಮಾಮೂಲಾದ ತಿಂಡಿ-ತೀರ್ಥಗಳು. ಈ ರೀತಿಯಲ್ಲಿ ಪ್ರತಿಯೊಂದು ಹೊಟೇಲಿಗೆ ಹೋಗುವ ಗ್ರಾಹಕರಲ್ಲಿ ಎರಡು ವರ್ಗಗಳು ನಿರ್ಮಾಣಗೊಂಡರು.
ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವಾಗ ಕೂಡ ಅಂತಹ ಸಮಸ್ಯೆಗಳು ತಲೆದೋರಬಹುದು. ಬಡವರ ಮತ್ತು ಶ್ರೀಮಂತರ ಮಕ್ಕಳು ಒಂದೇ ಶಾಲೆಗೆ ಹೋದಾಗ ಅವರು ಪರಸ್ಪರ ಬೆರೆಯಬಹುದೆ? ಹೇಗೆ ಬೆರೆಯಬಹುದು? ಅದರಿಂದ ಮಕ್ಕಳ ಮಟ್ಟದಲ್ಲಿ ನಮ್ಮ ಸಮಾಜದಲ್ಲಿನ ವರ್ಗ ವಿಭಜನೆ ಕೊನೆಗೊಳ್ಳಬಹುದೆ? ಅಥವಾ ತರಗತಿಗಳ ಮಟ್ಟದಲ್ಲೇ ವರ್ಗ ವಿಭಜನೆಯನ್ನು ಆರಂಭಿಸಿದಂತಾಗಬಹುದೆ? ಅವರು ಧರಿಸುವ ಸಮವಸ್ತ್ರದಿಂದ ಆರಂಭಿಸಿ, ಅವರು ಶಾಲೆಗೆ ತರುವ ಊಟ-ತಿಂಡಿ, ಅವರು ಬಳಸುವ ಕಾಗದ-ಪುಸ್ತಕ-ಪೆನ್ನು ಇವುಗಳೆಲ್ಲ ವಿಭಿನ್ನವಾಗಿರುವಾಗ ಅವರು ಸಮಾನ ನೆಲೆಯಲ್ಲಿ ಪರಸ್ಪರ ಬೆರೆಯುವುದು ಹೇಗೆ ಎಂಬ ಕುರಿತು ಮುಂದೆ ಅನುಷ್ಠಾನದ ಹಂತದಲ್ಲಿ ಪರಿಹಾರ ಕಂಡುಕೊಳ್ಳಬೇಕಾದೀತು. ಏನಿದ್ದರೂ ಸಾಮಾಜಿಕ ಪರಿವರ್ತನೆಯ ಯಾವುದೇ ಪ್ರಯತ್ನದ ವೇಳೆ ಅಂತಹ ತೊಡಕುಗಳು ಎದುರಾಗುವುದು ಸಹಜ; ಮತ್ತು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಅಂತಹ ಮೌಲ್ಯಗಳನ್ನು ರೂಢಿಸುವ ಮೂಲಕ ಸರ್ವಸಮಭಾವದ ವಾತಾವರಣವನ್ನು ನಿರ್ಮಿಸಲು ನಮಗೆ ಸಾಧ್ಯವಾಗಬಹುದು.
ದೇಶದ ಬಡಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೂಡ ಜವಾಬ್ದಾರಿ ಇದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ವಿವಿಧ ಕಾರಣಗಳಿಗಾಗಿ ಆ ಸಂಸ್ಥೆಗಳು ಆರ್ಟಿಇ ಕಾಯ್ದೆಯನ್ನು ವಿರೋಧಿಸಲು ನಿರ್ಧರಿಸಿರುವುದು ದುರದೃಷ್ಟಕರ. ಎಲ್ಲರೂ ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದರು ಎನ್ನುವಂತಿಲ್ಲ; ಹಲವರಿಗೆ ಸರ್ಕಾರ ಈ ಕಾಯ್ದೆಯ ನೆಪದಲ್ಲಿ ತಮ್ಮ ಕಾರ್ಯನಿರ್ವಹಣೆಯ ನಡುವೆ ಅನಗತ್ಯ ಹಸ್ತಕ್ಷೇಪ ನಡೆಸಬಹುದೆನ್ನುವ ಆತಂಕವಿದೆ.
ಸುಪ್ರೀಂಕೋರ್ಟ್ ತನ್ನ ತ್ರಿಸದಸ್ಯ ಸಾಂವಿಧಾನಿಕ ಪೀಠದ ಮೂಲಕ ಆರ್ಟಿಇ ಕಾಯ್ದೆಯನ್ನು ಎತ್ತಿಹಿಡಿಯಿತೆನ್ನುವುದು ಸಮಾಧಾನ ತರುವ ಸಂಗತಿಯಾಗಿದೆ. ಸರ್ಕಾರಿ, ಖಾಸಗಿ, ಅನುದಾನಿತ, ಅನುದಾನರಹಿತ ಎಂಬ ಭೇದವಿಲ್ಲದೆ ಎಲ್ಲ ಶಿಕ್ಷಣ ಸಂಸ್ಥೆಗಳು ತಮ್ಮ ಸೀಟುಗಳಲ್ಲಿ ಶೇ. ೨೫ರಷ್ಟನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದವರಿಗೆ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಇದೇ ಶೈಕ್ಷಣಿಕ ವರ್ಷದಿಂದಲೇ ಆರ್ಟಿಇ ಕಾಯ್ದೆ ಜಾರಿಗೆ ಬರಬೇಕೆಂದು ಕೂಡ ಸುಪ್ರೀಂಕೋರ್ಟ್ ಸೂಚಿಸಿದೆ; ಅಂದರೆ ರಾಜ್ಯ ಸರ್ಕಾರಗಳು ಕಾಯ್ದೆಯ ಅನುಷ್ಠಾನಕ್ಕೆ ಶೀಘ್ರವೇ ನಿಯಮಗಳನ್ನು ರೂಪಿಸಬೇಕಾಗಿದೆ.
ಆದರೆ ಸುಪ್ರೀಂ ಕೋರ್ಟಿನ ತೀರ್ಪು ಒಂದು ವಿಷಯದಲ್ಲಿ ನಿರಾಶೆ ಉಂಟುಮಾಡುವಂತಿದೆ. ಎಲ್ಲ ಶಿಕ್ಷಣ ಸಂಸ್ಥೆಗಳು ಈ ಹೊಣೆಗೆ ಹೆಗಲು ಕೊಡಬೇಕೆಂದು ಕೇಂದ್ರ ಸರ್ಕಾರ ಬಯಸಿತ್ತು; ಆದರೆ ಸುಪ್ರೀಂಕೋರ್ಟ್ ಅನುದಾನರಹಿತ ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಈ ಸಾಮಾಜಿಕ ಹೊಣೆಗಾರಿಕೆಯಿಂದ ವಿನಾಯಿತಿ ನೀಡಿದೆ. ಮೂವರಲ್ಲಿ ಓರ್ವ ನ್ಯಾಯಾಧೀಶರಂತೂ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆರ್ಟಿಇ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಅಭಿಪ್ರಾಯಪಟ್ಟರು. ಆದರೆ ಪೀಠದ ಬಹುಸಂಖ್ಯಾತರು (ಇಬ್ಬರು) ಅದನ್ನು ವಿರೋಧಿಸಿ ಅಲ್ಪಸಂಖ್ಯಾತರ ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಹೊರಗಿಟ್ಟರೆ ಸಾಕು; ಅವರು ತಮ್ಮ ಸೀಟುಗಳ ಶೇ. ೨೫ರಷ್ಟನ್ನು ಬಡಮಕ್ಕಳಿಗೆ ನೀಡಬೇಕಾಗಿಲ್ಲ ಎಂದು ಹೇಳಿದರು. ಗೌರವಾನ್ವಿತ ನ್ಯಾಯಾಧೀಶರು ತುಂಬ ತಾಂತ್ರಿಕವಾದ ಅಂಶವನ್ನು ಆಧರಿಸಿ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ; ಆದ್ದರಿಂದ ಈ ರೀತಿ ವಿನಾಯಿತಿ ನೀಡಿದಾಗ `ಮೂಲಭೂತ ಸ್ವರೂಪ’ವನ್ನೇ ಬದಲಿಸಿದಂತಾಗುತ್ತದೆ ಎಂಬ ನೆಲೆಯಲ್ಲಿ ಅದಕ್ಕೆ ಆಕ್ಷೇಪ ಸಲ್ಲಿಸಬಹುದಾಗಿದೆ. ಸುಪ್ರೀಂಕೋರ್ಟ್ ತಾಂತ್ರಿಕ ಅಂಶಗಳನ್ನು ಮೀರಿ, ಸಂವಿಧಾನದ ಆಶಯವನ್ನು ಗಮನದಲ್ಲಿರಿಸಿಕೊಳ್ಳುವುದು ಉತ್ತಮ ಎನಿಸುತ್ತದೆ.
ಆರ್ಟಿಇ ಕಾಯ್ದೆಯನ್ನು ಜಾರಿಗೊಳಿಸಿದರೆ ಅಲ್ಪಸಂಖ್ಯಾತರ ಸಂಸ್ಥೆಗಳ `ಮೂಲಭೂತ ಸ್ವರೂಪ’ಕ್ಕೆ ಧಕ್ಕೆಯುಂಟಾಗುತ್ತದೆ ಎನ್ನುವ ವಾದವೇ ಚರ್ಚಾಸ್ಪದ; ಏಕೆಂದರೆ ಆಡಳಿತವನ್ನು ಯಾರು ನಡೆಸುತ್ತಾರೆ ಎಂಬುದರ ಮೂಲಕ ಸಂಸ್ಥೆ ಅಲ್ಪಸಂಖ್ಯಾತವೋ ಅಲ್ಲವೋ ಎಂದು ನಿರ್ಧರಿಸಲಾಗುತ್ತದೆ; ಕಾನೂನಿನ ಪ್ರಕಾರ ಆಡಳಿತ ಮಂಡಳಿಯ ಬಹುಸಂಖ್ಯಾತ ಸದಸ್ಯರು ಅಲ್ಪಸಂಖ್ಯಾತರಾಗಿದ್ದಾಗ ಆ ಸಂಸ್ಥೆ ಅಲ್ಪಸಂಖ್ಯಾತ ಸಂಸ್ಥೆ ಎನಿಸುತ್ತದೆ. ನಿಜವೆಂದರೆ, ಬಹಳಷ್ಟು ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅಲ್ಪಸಂಖ್ಯಾತೇತರ ಸಮುದಾಯದವರಾಗಿರುತ್ತಾರೆ.
ನಮ್ಮ ಸಂವಿಧಾನದ ೨೯ ಮತ್ತು ೩೦ನೇ ವಿಧಿಗಳು ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಕೆಲವು ರಿಯಾಯಿತಿಗಳನ್ನು ನೀಡುತ್ತವೆ ಎನ್ನುವ ಒಂದು ಮಾಮೂಲಿ ವಾದವನ್ನು ಹಿಡಿದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಇಂತಹ ತೀರ್ಪು ನೀಡಿದರೆನಿಸುತ್ತದೆ. ಆದರೆ ಆ ವಿಧಿಗಳು `ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ’ ಪ್ರತೀಕವಾಗಿ ಸೇರಿಸಲ್ಪಟ್ಟಿವೆ. ಆರ್ಟಿಇ ಕಾಯ್ದೆ ಕೂಡ ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯಬಯಸುತ್ತದೆ. ಹಾಗಿರುವಾಗ ಅದು ಸಂವಿಧಾನದ ೨೯ ಮತ್ತು ೩೦ನೇ ವಿಧಿಗಳಿಗೆ ವಿರುದ್ಧವಾಗುವುದು ಹೇಗೆ? ಹೆಚ್ಚೆಂದರೆ ನ್ಯಾಯಾಲಯ ಅಲ್ಪಸಂಖ್ಯಾತರ ಅನುದಾನರಹಿತ ಸಂಸ್ಥೆಗಳು ತಮ್ಮಲ್ಲಿನ ಶೇ.೨೫ ಸೀಟುಗಳನ್ನು ಅಲ್ಪಸಂಖ್ಯಾತರಲ್ಲಿನ ಬಡವರು ಮತ್ತು ಹಿಂದುಳಿದವರಿಗೆ ನೀಡಬೇಕು ಎನ್ನಬಹುದಿತ್ತು. ಹೀಗಿರುವಾಗ ೨೯ ಮತ್ತು ೩೦ನೇ ವಿಧಿಗಳ ನೆಪದಲ್ಲಿ
ಅವರಿಗೆ ಈ ವಿನಾಯಿತಿ ನೀಡುವುದು ತಪ್ಪು ನಿರ್ಧಾರ ಎನಿಸುತ್ತದೆ; ಮತ್ತು ಇದನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬಹುದಾಗಿದೆ.
ಇದೇ ವೇಳೆ ಅಲ್ಪಸಂಖ್ಯಾತರ ಸಂಸ್ಥೆಗಳ ಸ್ಪಂದನರಾಹಿತ್ಯ ಮತ್ತು ಬೇಜವಾಬ್ದಾರಿ ವರ್ತನೆಕೂಡ ಬಯಲುಗೊಂಡಂತಾಗಿದೆ. ಆರ್ಟಿಇ ಕಾಯ್ದೆಯನ್ನು ಅವು ನ್ಯಾಯಾಲಯದಲ್ಲಿ ಉಗ್ರವಾಗಿ ವಿರೋಧಿಸಿದವು; ಇತರ ಖಾಸಗಿ ಸಂಸ್ಥೆಗಳಿಗಿಂತ ಭಿನ್ನವಾಗಿ ತಮ್ಮನ್ನು ವಿನಾಯಿತಿಗೊಳಿಸುವಂತೆ ನ್ಯಾಯಾಲಯವನ್ನು ಒಪ್ಪಿಸುವಲ್ಲಿ ಕೂಡ ಯಶಸ್ವಿಯಾದವು. ದೇಶದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬಡವರು ಮತ್ತು ಹಿಂದುಳಿದವರು ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆಂದು ಹೇಳುವುದಕ್ಕೆ ವಿಶೇಷ ಪಾಂಡಿತ್ಯವೇನೂ ಬೇಕಾಗದು. ನಿಜವೆಂದರೆ, ಇದೇ ಅಲ್ಪಸಂಖ್ಯಾತ ನಾಯಕರು ಹಲವು ಬಾರಿ ಸುಪ್ರೀಂಕೋರ್ಟಿನ ಮುಂದೆ ನಿಂತು, ತಮ್ಮಲ್ಲಿ ಬಡವರು ತುಂಬ ಸಂಖ್ಯೆಯಲ್ಲಿದ್ದಾರೆ, ಅವರಿಗೆ ಪರಿಶಿಷ್ಟ ಜಾತಿಯವರಿಗೆ ನೀಡುವಂಥವೇ ಮೀಸಲಾತಿ ಮತ್ತಿತರ ಸವಲತ್ತುಗಳನ್ನು ನೀಡಬೇಕೆಂದು ವಾದಿಸಿದ್ದಿದೆ. ಆರ್ಟಿಇ ಕಾಯ್ದೆಗೆ ಸಂಬಂಧಿಸಿ ಅವರು ಪಡೆದ ವಿನಾಯಿತಿಯನ್ನು ಗಮನಿಸಿದರೆ, ತಮ್ಮ ಸಮುದಾಯದ ಬಡವರ ಬಗೆಗೆ ಅವರಿಗೆ ಯಾವ ಕಾಳಜಿಯೂ ಇಲ್ಲ; ತಮ್ಮದೇ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವಲ್ಲಿ ಕೈಜೋಡಿಸಬೇಕೆಂದು ಅವರಿಗೆ ಅನ್ನಿಸುವುದೇ ಇಲ್ಲ; ಜವಾಬ್ದಾರಿಯಿಂದ ನುಳುಚಿಕೊಳ್ಳುವುದೇ ಅವರಿಗೆ ಮುಖ್ಯವಾಗುತ್ತದೆ ಎನಿಸದಿರದು. ಅಲ್ಪಸಂಖ್ಯಾತರ ನಾಯಕರ ನಿಜಬಣ್ಣ ಇಲ್ಲಿ ಬಯಲಾಗಿದೆ; ಅವರಿಗೆ ಸಂಖ್ಯೆಯಷ್ಟೇ ಮುಖ್ಯ; ಸಮುದಾಯದವರ ಸಾಮಾಜಿಕ ಸ್ಥಿತಿಗತಿಗಳಲ್ಲ ಎಂಬುದು ಸ್ಪಷ್ಟವಾಗಿದೆ.
ಆ ಸಮುದಾಯಗಳ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುವಂತಹ ಮುಖ್ಯ ವಿಷಯದಲ್ಲಿ ಸುಪ್ರೀಂಕೋರ್ಟ್ ಅವರಿಗೆ ವಿನಾಯಿತಿ ನೀಡಿದ್ದು ಖೇದಕರ. ದೇಶದ ಬಹಳಷ್ಟು ದುಬಾರಿ ಶಾಲೆಗಳನ್ನು ನಡೆಸುವವರು ಅಲ್ಪಸಂಖ್ಯಾತರು ಎನ್ನುವುದು ಎಲ್ಲರೂ ತಿಳಿದ ವಿಷಯವಾಗಿದೆ. ಅವರು ತಮ್ಮ ಸಮುದಾಯದ ಬಡಮಕ್ಕಳಿಗೆ ಶಿಕ್ಷಣ ಕೊಡುತ್ತಿಲ್ಲ, ಬದಲಾಗಿ ಆಕಾಶದೆತ್ತರದ ಶುಲ್ಕ ನೀಡಬಲ್ಲ ಬಹುಸಂಖ್ಯಾತ ಸಮುದಾಯದ ಶ್ರೀಮಂತರ ಮಕ್ಕಳೇ ಅವರ ಗುರಿ.
ಸುಪ್ರೀಂ ಕೋರ್ಟ್ನ ತೀರ್ಪಿನಿಂದಾಗಿ ಅವರು ಅವರ ದಂಧೆಯನ್ನು ಮುಂದುವರಿಸಲು ಅನುಕೂಲವಾಗಿದೆ, ಅಲ್ಪಸಂಖ್ಯಾತ ಸಮುದಾಯದ ಬಡ ಮತ್ತು ಹಿಂದುಳಿದ ಮಕ್ಕಳು ಅಲ್ಪಸಂಖ್ಯಾಕೆತೇತರರು ನಡೆಸುವ ಶಾಲೆಗಳನ್ನು ಆಶ್ರಯಿಸಬೇಕಾಗಿದೆ. ಅವರದನ್ನು ಯಾವುದೇ ಮನಃಕಷಾಯವಿಲ್ಲದೆ ನಡೆಸುತ್ತಾರೆ; ಏಕೆಂದರೆ ಅದು ಈ ದೇಶ ನಡೆದು ಬಂದದಾರಿ. ಆದರೆ ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಡವರು ಒಂದು ಮಾತನ್ನು ಅರ್ಥೈಸಿಕೊಳ್ಳಬೇಕು; ಅದೆಂದರೆ ತಮ್ಮ ಉದ್ಧಾರದ ಪ್ರಶ್ನೆ ಬಂದಾಗ ತಮ್ಮ ನಾಯಕರು ಎನಿಸಿಕೊಂಡವರಿಗೆ ಯಾವುದೇ ಸಹಾನುಭೂತಿ ಅಥವಾ ಹೊಣೆಗಾರಿಕೆ ಇಲ್ಲ ಎಂಬುದು. ಇದು ಆರ್ಟಿಇ ಕಾಯ್ದೆ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಒಂದು ಪ್ರಮುಖ ಅರ್ಥ.