ಇಂದು ಜಯಂತಿ


ಸಾಲಿಗ್ರಾಮ ಕೃಷ್ಣರಾಮಚಂದ್ರರಾವ್ ಅವರು ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸರು. ಇವರು ಭಾರತೀಯ ಲೇಖಕ , ಸಂಸ್ಕೃತ ವಿದ್ವಾಂಸ ಮತ್ತು ಮನೋವಿಜ್ಞಾನದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದವರು. ಇವರು ಬರೆದಿರುವಂತಹ ಪುಸ್ತಕಗಳು ತತ್ವ್ತಶಾಸ್ತ್ರ, ಕಲೆ, ಸಂಗೀತ ಲೋಕಕ್ಕೆ ಸಂಬಂಧಿಸಿದವುಗಳಾಗಿದ್ದವು. ಇಂದು ಅವರ ಜಯಂತಿ.


ಪರಿಚಯ
ಎಸ್.ಕೆ ರಾಮಚಂದ್ರರಾವ್‌ ಅವರು ಸೆಪ್ಟೆಂಬರ್ 4, 1925 ರಂದು ಹಾಸನದಲ್ಲಿ ಜನಿಸಿದರು. ತಂದೆ ಶ್ರೀ ಕೃಷ್ಣ ನಾರಾಯಣರಾವ್ ಹಾಗೂ ತಾಯಿ ಕಮಲಾಬಾಯಿ. ಅವರು ತಮ್ಮ ಬಾಲ್ಯವನ್ನು ಬೆಂಗಳೂರಿನಲ್ಲಿ ಕಳೆದರು. ರಾಮಚಂದ್ರರಾವ್‌ ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಅವರ ತಾತನವರಾದ ನಾರಾಯಣರಾವ್ ನಿವೃತ್ತರಾದ ನಂತರ ವಿದ್ವಾಂಸರಾದ ಅಗ್ನಿಹೋತ್ರಿ ಯಜ್ಞವಿಟ್ಠಲಾಚಾರ್ ಅವರಿಂದ ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಅದಾದ ಒಂದು ವರ್ಷದಲ್ಲಿ ಅವರಿಗೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ದರ್ಶನ ದೊರಕಿ, ಅವರ ಬದುಕಿನಲ್ಲಿ ಹೊಸದಾದ ಬೆಳಕನ್ನ ತಂದುಕೊಟ್ಟಿತ್ತು. ನಂತರ ಅವರು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. 1949ರಲ್ಲಿ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.


ವೃತ್ತಿ
ಎಸ್‌ .ಕೆ ರಾಮಚಂದ್ರರಾವ್‌ ಅವರು ಮೊದಲು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರ ಅವರು ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. 1954 ರಿಂದ 1965 ರವರೆಗೆ ಅವರು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನಲ್ಲಿ (ಈಗ ನಿಮ್ಹಾನ್ಸ್‌ )ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದರು .
ಅವರು ನಿಮ್ಹಾನ್ಸ್‌ ನಲ್ಲಿದ್ದಾಗ ಭಾರತದಲ್ಲಿ ಸೈಕಲಾಜಿಕಲ್‌ ಥಾಟ್‌ ಅಭಿವೃದ್ಧಿ ಎಂಬ ಪುಸ್ತಕವನ್ನು ಬರೆದರು. ಥೀಮ್ಯಾಟಿಕ್‌ ಅಪರ್ಸೆಪ್ಷನ್‌ ಟೆಸ್ಟ್‌ (ಟಿಎಟಿ) ಕಾರ್ಡ್‌ಗಳ ಭಾರತೀಯ ಆವೃತ್ತಿಯನ್ನು ಸಹ ರಚಿಸಿದರು. ಜೊತೆಗೆ ಅವುಗಳ ಆಧಾರದ ಮೇಲೆ ಪ್ರಯೋಗ ನಡೆಸಿದರು. ಅವರು ಮನೋವಿಜ್ಞಾನದ ಅಧ್ಯಯನದ ಮೇಲೆ ಪ್ರಭಾವ ಬೀರಿದ ಭಾರತೀಯ ತತ್ವಶಾಸ್ತ್ರದ ಅಂಶಗಳನ್ನು ಸೇರಿಸಲು ನಿಮ್ಹಾನ್ಸ್‌ನಲ್ಲಿ ಕಲಿಸಿದ ಪಠ್ಯಕ್ರಮವನ್ನು ಪರಿಷ್ಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.


ರಾಮಚಂದ್ರರಾವ್‌ ಅವರು 1965ರಲ್ಲಿ ನಿಮ್ಹಾನ್ಸ್‌ ತೊರೆದು ಬೆಂಗಳೂರಿನ ವಿವಿಧ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಮನೋವಿಜ್ಞಾನ, ಇಂಡಾಲಜಿ, ತತ್ವ್ತಶಾಸ್ತ್ರ, ಸಮಾಜಕಾರ್ಯ ಮತ್ತು ಶಿಕ್ಷಣ ಕೋರ್ಸ್‌ ಗಳ ಉಪನ್ಯಾಸ ಮತ್ತು ಬೋಧನೆ ಮಾಡಿದರು.


ಎಸ್. ಕೆ ರಾಮಚಂದ್ರ ರಾವ್ ಅವರು 35 ವರ್ಷಗಳಿಗೂ ಹೆಚ್ಚು ಕಾಲ ಭಗವದ್ಗೀತೆ, ಉಪನಿಷತ್ತು, ಶಿವ ಸೂತ್ರ, ಬ್ರಹ್ಮ ಸೂತ್ರ, ಪತಂಜಲಿ ಯೋಗ ಸೂತ್ರ, ಶಿಲ್ಪಶಾಸ್ತ್ರ, ತ್ರಿಪುರ ರಹಸ್ಯ, ಭಾರತೀಯ ತತ್ವಶಾಸ್ತ್ರ, ಆಗಮ-ಶಾಸ್ತ್ರ, ದರ್ಶನ ಶಾಸ್ತ್ರ ಮುಂತಾದ ಅಮೂಲ್ಯ ವಿಷಯಗಳ ಬಗ್ಗೆ ತರಬೇತಿ ನೀಡಿದರು. ಅವರು ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ ಮತ್ತು ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದರು. ಕರ್ನಾಟಕ ರಾಜ್ಯದ ‘ಆಗಮ ಬೋರ್ಡ್’, ಸಂಸ್ಥೆಯಲ್ಲಿ ಸಹ ಅವರು ಸೇವೆ ಸಲ್ಲಿಸಿದರು. ತಿರುಮಲ ತಿರುಪತಿ ದೇವಸ್ಥಾನದ ಸಲಹಾ ಸಮಿತಿಯಲ್ಲೂ ಅವರ ಸೇವೆ ಸಂದಿತ್ತು.


ಸಾಹಿತ್ಯದ ಕೊಡುಗೆ
ಅವರು ಪ್ರಾಚೀನ ಭಾರತೀಯ ಗ್ರಂಥಗಳು ಮತ್ತು ಅಪರೂಪದ ಹಸ್ತಪ್ರತಿಗಳ ಮೇಲೆ ಸಂಶೋಧನೆಯನ್ನು ನಡೆಸಿದ್ದಾರೆ. ಸಂಸ್ಕೃತದಲ್ಲಿ ಅನೇಕ ನಾಟಕಗಳನ್ನು ರಚಿಸಿದರು. ಅವರು ಪಾಲಿಯಲ್ಲಿ ಸುಮಂಗಲಾ-ಗಾಥಾ ಎಂಬ ಗ್ರಂಥವನ್ನು ಬರೆದಿದ್ದಾರೆ. ಇದನ್ನು ʼದಿ ಲೈಟ್ ಆಫ್ ದಿʼ ಧಮ್ಮ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ .


ಪ್ರಶಸ್ತಿ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮುಂಬೈನ ಸ್ವಾಮಿ ಗಂಗೇಶ್ವರಾನಂದಜೀ ಟ್ರಸ್ಟ್ ಅವರಿಗೆ ‘ವೇದರತ್ನ’ಎಂಬ ಗೌರವ ನೀಡಿದೆ. ಅವರಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಎಸ್.ಕೆ ರಾಮಚಂದ್ರರಾವ್‌ ಫೆಬ್ರವರಿ 2, 2006 ರಂದು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.