By ರಾಜೇಶ್ ಪದ್ಮಾರ್
(This article appeared in Todays Kannnada Prabha Sept 29-2011)
‘ಸವರ್ಣೀಯ ಸಮಾಜದ ಮನಸ್ಸಿನ ಕೊಳೆಯೇ ಅಸ್ಪೃಶ್ಯತೆ. ಅದೊಂದು ಮಾನಸಿಕ ವಿಕೃತಿ. ಅಸ್ಪೃಶ್ಯತೆ ಎಂದರೆ ಸವರ್ಣೀಯರ ಈ ಸಂಕುಚಿತ ಮನೋಭಾವವನ್ನು ತೆಗೆದು ಹಾಕುವುದು’ ಎಂದು ಹೇಳಿದ್ದರು ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರ್. ಅಸ್ಪೃಶ್ಯತೆಯ ಆಚರಣೆಯನ್ನು ಬೇರು ಸಹಿತ ಕಿತ್ತೆಸೆಯಬೇಕೆಂಬುದು ಅವರ ಹಂಬಲ. ಗುರೂಜಿ ಗೋಳ್ವಲ್ಕರ್‌ರ ಪ್ರಕಾರ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಸವರ್ಣೀಯ ಸಮಾಜ, ಅಸ್ಪೃಶ್ಯತೆಗೊಳಗಾಗಿ ಕೀಳರಿಮೆಯಲ್ಲಿ ನರಳುತ್ತಿರುವವರು, ಈ ಆಚರಣೆಗಳಿಗೆ ಧಾರ್ಮಿಕ ಮಾನ್ಯತೆ ಕೊಟ್ಟಿರುವ ಮಠಾಧೀಶರು ಹಾಗೂ ಧಾರ್ಮಿಕ ನೇತಾರರು – ಈ ಮೂರೂ ಮಗ್ಗುಲುಗಳಲ್ಲಿ ಗಂಭೀರ ಪ್ರಯತ್ನ ನಡೆಸಬೇಕು. ಅದಕ್ಕೆ ಅವರು ದೇಶದುದ್ದಗಲ ಸಂಚರಿಸಿ ಆ ಪ್ರಯತ್ನಗಳಿಗೆ ವೇಗ ತುಂಬಿದರು.
ಸಾಮರಸ್ಯ ಕುರಿತ ಆರೋಗ್ಯಪೂರ್ಣ ಚರ್ಚೆಗೆ ವೇದಿಕೆಯೊದಗಿಸುತ್ತಿರುವ ದೃಶ್ಯ – ಮುದ್ರಣ ಮಾಧ್ಯಮಗಳು ಈ ನಿಟ್ಟಿನಲ್ಲಿ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಸವಾಲಿನಿಂದ ಪರಿಹಾರದತ್ತ ಮುಖ ಮಾಡುತ್ತಿರುವ ಈ ಸಾಮರಸ್ಯ ಚರ್ಚೆಗಳು ಇಂದು ನಿನ್ನೆಯದಲ್ಲದಿದ್ದರೂ, ಬದಲಾದ-ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಪರಿಷ್ಕರಣೆಗೊಳಗಾದಷ್ಟೂ ಉತ್ತಮ.
ನಿನ್ನೆ ಸೆಪ್ಟೆಂಬರ್ 28 ರ ‘ಕನ್ನಡಪ್ರಭ’ ದಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್‌ರು ’ಮಾದಾರಶ್ರೀಗಳ ಯಾತ್ರೆ ಐತಿಹಾಸಿಕ ಹೇಗಾದೀತು?’ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಲೇಖನದುದ್ದಕ್ಕೂ ಅವರು ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಅವರೊಬ್ಬರು ಸಾಮಾಜಿಕ ಹೋರಾಟಗಾರರು ಎಂಬುದು ಓದುಗರಿಗೆ ಗೊತ್ತಾಗುತ್ತದೆ. ಆದರೆ ಕೇವಲ ನಾಲ್ಕು ಪ್ರಶ್ನೆಗಳನ್ನೆತ್ತಿ ಬಿಸಾಕಿ, ಸಾಮರಸ್ಯ ಮೂಡಿಸುವ ಸಹಪಂಕ್ತಿಭೋಜನ, ಸಾಮರಸ್ಯ ನಡಿಗೆ ಇತ್ಯಾದಿ ಕಿರುಪ್ರಯತ್ನಗಳನ್ನೇ ಒಂದೇ ಏಟಿನಲ್ಲಿ ’ನಿಷ್ಪ್ರಯೋಜಕ’ ಎಂದು ಮೂದಲಿಸುವುದನ್ನು ನೋಡಿದರೆ ಇವರಿಗೆ ಸಮಸ್ಯೆ ’ಪರಿಹಾರ’ವಾಗುವುದು ಬೇಕಿಲ್ಲವೇನೋ ಅನ್ನಿಸುತ್ತೆ.
ಸಮಾಜದಲ್ಲಿ ಸಾಮರಸ್ಯ ಮೂಡಿಸಲು ನಡೆಯುವ ಯಾವ ಆಂದೋಲನವಾಗಲೀ, ಆಂದೋಲನಕಾರರಾಗಲೀ ಕ್ಷಿಪ್ರ ಫಲಿತಾಂಶ ನಿರೀಕ್ಷಿಸುವುದಿಲ್ಲ. ನಾಳೆ ಬೆಳಿಗ್ಗೆಯೊಳಗೆ ಇಡೀ ಸಮಾಜವೇ ಒಂದಾಗುತ್ತದೆ, ಶತಮಾನಗಳಿಂದ ಬಂದ ಅಸ್ಪೃಶ್ಯತೆ, ಜಾತೀಯ ಮೇಲು-ಕೀಳರಿಮೆಗಳೆಲ್ಲವೂ ರಾತ್ರಿ ಬೆಳಗಾಗುವುದರೊಳಗೆ ಇಲ್ಲವಾಗುವುದೆಂಬ ಭ್ರಮೆಯೂ ಅಲ್ಲಿಲ್ಲ. ನೂರಾರು ವರ್ಷಗಳ ಹಿನ್ನೆಲೆಯ ಈ ಸಾಮಾಜಿಕ ರೋಗಗಳ ನಿವಾರಣೆಗೆ ಕನಿಷ್ಠ ಕಾಲಾವಕಾಶ ಬೇಕೇ ಬೇಕು. ಅದೆಷ್ಟು ಎಂಬುದೇ ಎಲ್ಲರ ಪ್ರಶ್ನೆ. ಆದರೂ ಸಾಮರಸ್ಯ ಬೆಸೆಯುವ ಈ ಸಾಂಕೇತಿಕ ಪ್ರಯತ್ನಗಳು ಪ್ರಾಮಾಣಿಕವಾಗಿ ಹೆಚ್ಚು ಊರು-ಮನೆ-ದೇಗುಲಗಳಲ್ಲಿ ನಡೆದಾಗಲೇ ಸಮರಸತೆ ಸಾಧ್ಯ.
ಯಾವುದೇ ಸಾಮಾಜಿಕ ಹೋರಾಟಗಾರರು ಸಾಮರಸ್ಯ ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಿ, ಯಶಸ್ವಿ ಮಾಡಬಹುದಾದರೂ ಅದರ ನೇತೃತ್ವವನ್ನು ಯಾರಾದರೊಬ್ಬ ಧಾರ್ಮಿಕ ಮುಖಂಡರೇ ವಹಿಸಬೇಕು. ಯಾಕೆಂದರೆ ಧಾರ್ಮಿಕ ಗುರುಗಳೊಬ್ಬರು ಸಮಾನತೆಯ ಮಾತನ್ನಾಡಿದಾಗ, ಆ ಮೂಲಕ ಧಾರ್ಮಿಕ ಆಚರಣೆಗಳಲ್ಲಿ ಸಾಮಾಜಿಕ ಸಮಾನತೆಯ ಆಶಯವುಳ್ಳ ಬದಲಾವಣೆ ತಂದಾಗ ಈ ಸಮಸ್ಯೆಯು ಸುಲಭವಾಗಿ ಪರಿಹಾರವಾಗುತ್ತದೆ. ಧಾರ್ಮಿಕ ಆಚರಣೆಗಳೇ ಸವರ್ಣೀಯ-ಅಸ್ಪೃಶ್ಯ ಇತ್ಯಾದಿ ಕಂದಕಗಳನ್ನು ಕಾಯ್ದುಕೊಂಡು ಬಂದಿರುವ ಕಾರಣ ಧಾರ್ಮಿಕ ಮುಖಂಡರಿಂದಲೇ ಆ ರೀತಿಯ ಶಾಶ್ವತ ಬದಲಾವಣೆಗಳನ್ನು ಅಪೇಕ್ಷಿಸಬಹುದು. ಆ ಧಾರ್ಮಿಕ ಮುಖಂಡತ್ವವನ್ನು ಪೇಜಾವರ ಶ್ರೀಗಳಾಗಲೀ, ಆದಿಚುಂಚನಗಿರಿ ಶ್ರೀಗಳಾಗಲೀ, ಸಿದ್ಧಗಂಗಾಶ್ರೀಗಳಾಗಲೀ, ಮಾದಾರ ಚೆನ್ನಯ್ಯ ಶ್ರೀಗಳಾಗಲೀ ಅಥವಾ ಯಾರೇ ಧಾರ್ಮಿಕ ನಾಯಕರು ವಹಿಸಿದರೆ ಮಾತ್ರವೇ ಈ ಪ್ರಯತ್ನಗಳಿಗೆ ಸರಿಯಾದ ಅಂತ್ಯ ಕಾಣಬಹುದು.
ದಶಕಗಳಿಂದಲೂ ದಲಿತ ಕಾಲೋನಿಗಳಿಗೆ ಭೇಟಿ ನೀಡಿ, ಅಲ್ಲಿನ ದಲಿತರ ನೋವಿಗೆ ಸ್ಪಂದಿಸುವ ಪೇಜಾವರ ಶ್ರೀಗಳ ಪ್ರಯತ್ನವನ್ನು ಸಾರಾಸಗಟಾಗಿ ’ಮನುಸಂಸ್ಕೃತಿ ಬಿತ್ತುವ’ – ’ಮನುಧರ್ಮದ ಬ್ರಾಹ್ಮಣ್ಯವನ್ನು ಪುನರುತ್ಥಾನ ಮಾಡುವ ಯತ್ನ’ ಎಂದು ಕರೆದಿರುವುದು ಸಮಂಜಸವಲ್ಲ. ಅವರು ಅಷ್ಟಾದರೂ ಮಾಡ್ತಾರಲ್ಲಾ, ಉಳಿದವರೇನು? ಎಂಬ ಪ್ರಶ್ನೆ ಮೂಡಿದ್ದರೆ ಆಶ್ಚರ‍್ಯವಿರಲಿಲ್ಲ. ಸಾಮರಸ್ಯ ಮೂಡಿಸುವ ಭರವಸೆಯ ಕಳಶ ಹೊತ್ತ ಅನೇಕರಲ್ಲಿ ಪೇಜಾವರರೂ ಒಬ್ಬರು. ಅಷ್ಟಮಠಗಳ ಒಳಗಿನ ತೀವ್ರ ವಿರೋಧಗಳ ನಡುವೆಯೂ ಪೇಜಾವರ ಶ್ರೀಗಳು ದಲಿತಕೇರಿಯ ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ. ತುಳಿತಕ್ಕೊಳಗಾದ ಸಾವಿರಾರು ಮಂದಿಯ ಸಮಾನತೆಯ ಆಶಯದ ಹಣತೆಗೆ ಸಾಂತ್ವನದ ತೈಲ ಸುರಿದಿದ್ದಾರೆ.
2010ರ ಸೆಪ್ಟೆಂಬರ್ 15 ರಂದು ಮೈಸೂರಿನ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿ ನಡೆದ ಮಾದಾರ ಶ್ರೀಗಳ ಬ್ರಾಹ್ಮಣ ಬೀದಿಗಳಲ್ಲಿನ ಪಾದಯಾತ್ರೆ ಸಾಮರಸ್ಯ ತರುವ ಪ್ರಯತ್ನಗಳ ಪೈಕಿ ಬಲು ಮಹತ್ವದ್ದು.
ಸಾಮರಸ್ಯದ ಕುರಿತು ಚರ್ಚೆಯನ್ನು ಮಾತ್ರ ಮಾಡಿದರೆ ಸಾಲದು, ಆ ದಿಕ್ಕಿನಲ್ಲಿ ಪರಿಹಾರದ ಪ್ರಯತ್ನಗಳನ್ನು ಮಾಡಬೇಕು. ಮಾದಾರ ಶ್ರೀಗಳ ಪಾದಯಾತ್ರೆ ಅದೆಂತು ಯಶಸ್ವಿಯಾದೀತು? ಬ್ರಾಹ್ಮಣ ಸಮಾಜದ ಪ್ರಮುಖರು ಮಾದಿಗ ಸಮುದಾಯದ ಸ್ವಾಮೀಜಿಗೆ ಪಾದಪೂಜೆ ಮಾಡುವರೇ? ನಿಜಕ್ಕೂ ಬ್ರಾಹ್ಮಣರಲ್ಲಿ ಈ ರೀತಿಯ ಬದಲಾವಣೆ ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರಗತಿಪರ ಹೋರಾಟಗಾರರು ಮಾಡಿದ್ದರು. (ಕುತೂಹಲವನ್ನು ಸಾಕ್ಷೀಕರಿಸಲು ಕೆ.ಪಿ.ಸಿದ್ಧಯ್ಯನವರಂತಹ ಹೋರಾಟಗಾರರೂ ಕೃಷ್ಣಮೂರ್ತಿಪುರಂ ಬಡಾವಣೆಗೆ ಆಗಮಿಸಿದ್ದರು). ಅಲ್ಲಿ ಬ್ರಾಹ್ಮಣ ಸಮಾಜದಲ್ಲಾದ ಪರಿವರ್ತನೆಯನ್ನು ಸ್ವಾಗತಿಸಬೇಕು. ಸಾಮರಸ್ಯ ಹೋರಾಟಗಾರರಿಗೆಲ್ಲ ಆ ಪಾದಯಾತ್ರೆ ಐತಿಹಾಸಿಕ ಎಂದೇ ಎನಿಸಿತ್ತು. ಅದನ್ನು ’ಐತಿಹಾಸಿಕ’ ಎಂದು ಘೋಷಿಸಿದ್ದೇ ಮೈಸೂರಿನ ಎಲ್ಲಾ ಮಾಧ್ಯಮಗಳು. ಜಾತಿವ್ಯವಸ್ಥೆ, ಆರೋಪ-ಪ್ರತ್ಯಾರೋಪಗಳಲ್ಲೇ ಕಾಲಕಳೆಯುತ್ತಿದ್ದ ವೇಳೆಯಲ್ಲೇ ಈ ರೀತಿಯ ಪ್ರಯತ್ನವೊಂದರ ಕುರಿತು ರಾಜ್ಯದ ಎಲ್ಲಾ ಪತ್ರಿಕೆಗಳು ಔಟ್‌ಲುಕ್ ಸೇರಿದಂತೆ ರಾಷ್ಟ್ರೀಯ ಪತ್ರಿಕೆಗಳೂ ವರದಿ ಮಾಡಿತ್ತು.
ಇದಾಗಿ ಒಂದು ವರ್ಷಕ್ಕೆ, ಮೊನ್ನೆ ಸೆಪ್ಟೆಂಬರ್ 15ಕ್ಕೆ ಮತ್ತೊಂದು ಕಾರ್ಯಕ್ರಮ. 2010ರಲ್ಲಿ ಸವರ್ಣೀಯ ಸಮಾಜದ ಮಂದಿ ಮಾದಿಗರನ್ನು ತಮ್ಮ ಮನೆಗೆ ಸ್ವಾಗತಿಸಿದಾಗ, ಇದೆಲ್ಲಾ ಆಟಾಟೋಪ, ಈ ಸವರ್ಣೀಯರು ಮಾದಿಗರ ಮನೆಯಲ್ಲಿ ಸಹಪಂಕ್ತಿ ಭೋಜನ ಮಾಡಿಯಾರೇ? ಎಂಬುದೂ ಪ್ರಗತಿಪರರ ಪ್ರಶ್ನೆಯಾಗಿತ್ತು. ಮೈಸೂರಿನ ಗಾಂಧಿನಗರದ ೨೫ಕ್ಕೂ ಹೆಚ್ಚು ಮಾದಿಗ-ದಲಿತರ ಮನೆಗಳ ಅನ್ನದ ಸವಿಯನ್ನುಂಡ ಸವರ್ಣೀಯ ಸಮಾಜದ ಪ್ರಮುಖರು ಸಾಮರಸ್ಯ ಹೋರಾಟಕ್ಕೆ ಮಹತ್ವದ ಮೈಲಿಗಲ್ಲನ್ನೊದಗಿಸಿದರು. ಮಾದಿಗ ಸಮುದಾಯದ ನೂರಾರು ಮಂದಿಯ ಸಂತಸವನ್ನು ಹೇಗೆ ವರ್ಣಿಸಿದರೂ ಕಡಿಮೆಯೇ. ಮೈಸೂರಿನ ಮೇಯರ್ ಪುಷ್ಪಲತಾ, ಕಾಂಗ್ರೆಸ್ ಶಾಸಕ ಅಮರೇಶ್, ಸಚಿವ ರಾಮ್‌ದಾಸ್, ಆರೆಸ್ಸೆಸ್‌ನ ವೆಂಕಟರಾಮ್, ’ಅಹಿಂದ’ದ ಡಾ|| ಪೂರ್ಣಾನಂದ ಸೇರಿದಂತೆ ಅನೇಕರು ಜೊತೆಗೂಡಿದ್ದ ಈ ಸಹಪಂಕ್ತಿಭೋಜನಕ್ಕೆ ನೇತೃತ್ವವೊದಗಿಸಿದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ’ಬಸವ ತತ್ವದ ವಿರುದ್ಧ’ ಎನ್ನುವ ಮಾತು ಖಂಡಿತಾ ಸರಿಯಲ್ಲ.
ನಾಸಿಕ್‌ನ ಕಾಳಾರಾಮ್ ಮಂದಿರದ ಹೋರಾಟ ಇರಬಹುದು, ಮೈಸೂರಿನ ಕೃಷ್ಣಮೂರ್ತಿಪುರಂ ಇರಬಹುದು, ಡಾ|| ಅಂಬೇಡ್ಕರ್ ನೇತೃತ್ವ ಇರಬಹುದು. ಮಾದಾರ ಶ್ರೀಗಳ ನೇತೃತ್ವ ಇರಬಹುದು, ಇಲ್ಲಿರುವ ಆಶಯ ಮಾತ್ರ ಒಂದೇ. ಸವರ್ಣೀಯ ಸಮಾಜದ ಮೇಲರಿಮೆ ಹಾಗೂ ತಥಾಕಥಿತ ಅಸ್ಪೃಶ್ಯರೆನಿಸಿಕೊಂಡವರ ಕೀಳರಿಮೆ – ಇವೆರಡನ್ನೂ ಹೋಗಲಾಡಿಸಿ ಪರಸ್ಪರರ ಅಂತರವನ್ನು ಕಡಿಮೆ ಮಾಡುವುದೇ ಈ ಪ್ರಯತ್ನಗಳ ಉದ್ದೇಶ. ಕರ್ನಾಟಕದಲ್ಲಿ ಈ ತೆರದ ಪ್ರಯತ್ನಗಳು ಬಹುಶಃ ದೊಡ್ಡ ಪ್ರಮಾಣದಲ್ಲಿ ಮೊದಲ ಬಾರಿಗೆ ಆಗುತ್ತಿರುವಾಗ, ಇವುಗಳನ್ನು ತೆರೆದ ಮನಸ್ಸಿನಿಂದಲೇ ಸ್ವಾಗತಿಸಬೇಕು. ಏಕೆಂದರೆ ಸಾಮರಸ್ಯಕ್ಕೆ ಬೇಕಾಗಿರುವುದು ತೆರೆದ ಮನಸ್ಸು ಹಾಗೂ ನಿಷ್ಕಲ್ಮಶ ಹೃದಯ.
‘ಸವರ್ಣೀಯ ಸಮಾಜದ ಮನಸ್ಸಿನ ಕೊಳೆಯೇ ಅಸ್ಪೃಶ್ಯತೆ. ಅದೊಂದು ಮಾನಸಿಕ ವಿಕೃತಿ. ಅಸ್ಪೃಶ್ಯತೆ ಎಂದರೆ ಸವರ್ಣೀಯರ ಈ ಸಂಕುಚಿತ ಮನೋಭಾವವನ್ನು ತೆಗೆದು ಹಾಕುವುದು’ ಎಂದು ಹೇಳಿದ್ದರು ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರ್. ಅಸ್ಪೃಶ್ಯತೆಯ ಆಚರಣೆಯನ್ನು ಬೇರು ಸಹಿತ ಕಿತ್ತೆಸೆಯಬೇಕೆಂಬುದು ಅವರ ಹಂಬಲ. ಗುರೂಜಿ ಗೋಳ್ವಲ್ಕರ್‌ರ ಪ್ರಕಾರ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಸವರ್ಣೀಯ ಸಮಾಜ, ಅಸ್ಪೃಶ್ಯತೆಗೊಳಗಾಗಿ ಕೀಳರಿಮೆಯಲ್ಲಿ ನರಳುತ್ತಿರುವವರು, ಈ ಆಚರಣೆಗಳಿಗೆ ಧಾರ್ಮಿಕ ಮಾನ್ಯತೆ ಕೊಟ್ಟಿರುವ ಮಠಾಧೀಶರು ಹಾಗೂ ಧಾರ್ಮಿಕ ನೇತಾರರು – ಈ ಮೂರೂ ಮಗ್ಗುಲುಗಳಲ್ಲಿ ಗಂಭೀರ ಪ್ರಯತ್ನ ನಡೆಸಬೇಕು. ಅದಕ್ಕೆ ಅವರು ದೇಶದುದ್ದಗಲ ಸಂಚರಿಸಿ ಆ ಪ್ರಯತ್ನಗಳಿಗೆ ವೇಗ ತುಂಬಿದರು. 1966 – ಪ್ರಯಾಗದಲ್ಲಿ, 1969 ರಲ್ಲಿ ಉಡುಪಿಯಲ್ಲಿ ನಡೆದ ಸರ್ವ ಮಠಾಧಿಪತಿಗಳ ಸಮ್ಮೇಳನದಲ್ಲಿ ’ಅಸ್ಪೃಶ್ಯತೆಯ ಆಚರಣೆಗಳಿಗೆ ಧರ್ಮದ ಸಮ್ಮತಿ ಇಲ್ಲ’ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಡುಪಿ ಸಮ್ಮೇಳನದ ಅಧ್ಯಕ್ಷತೆಯನ್ನು ಅಸ್ಪೃಶ್ಯರೆನಿಸಿದ್ದ ಸಮಾಜದಲ್ಲಿ ಹುಟ್ಟಿದ, ಅಂದಿನ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ಶ್ರೀ ಭರಣಯ್ಯನವರು ವಹಿಸಿದ್ದರು. ಗುರೂಜಿ ಗೋಳ್ವಲ್ಕರ್ ಹಾಗೂ ಪೇಜಾವರ ಶ್ರೀಗಳ ನೇತೃತ್ವದ ಈ ಐತಿಹಾಸಿಕ ಕಾರ‍್ಯಕ್ರಮ ಸಾಮರಸ್ಯದ ಹೋರಾಟಕ್ಕೆ ಹೊಸ ಬಾಗಿಲನ್ನೇ ತೆರೆಯಿತು. ಚರ್ಚೆಯೊಂದರಲ್ಲಿ ಮಾತನಾಡುತ್ತಾ ’ಜಗದ್ಗುರುಗಳಾದ ನಿಮ್ಮ ಜಗತ್ತಿನಲ್ಲಿ ಅಸ್ಪೃಶ್ಯರು, ವಂಚಿತರು, ವನವಾಸಿಗಳು ಇದ್ದಾರೇನು? ಅವರ‍್ಯಾರೂ ಇಲ್ಲದ ಪುಟ್ಟ ಜಗತ್ತಿಗೇಕೆ ಜಗದ್ಗುರುಗಳಾಗುತ್ತೀರಿ? ಸಮಾಜದ ಎಲ್ಲರನ್ನು ತೆರೆದ ಬಾಹುಗಳಲ್ಲಿ ಅಪ್ಪಿಕೊಂಡು ನೈಜ ಜಗದ್ಗುರುಗಳಾಗಿರಿ’ ಎಂಬ ಖಚಿತ ಅಭಿಪ್ರಾಯ ಹೇಳಿದ್ದರು ಗೋಳ್ವಲ್ಕರ್.
ಮಾದಾರ ಶ್ರೀಗಳು ಮಾಡಿದ – ಮಾಡುತ್ತಿರುವ ಪ್ರಯತ್ನಗಳಿಗೆ ಅಪಸ್ವರ ಎತ್ತಿರುವುದು ವಿಪರ‍್ಯಾಸವೇ ಸರಿ. ಹಿಂದೆಂದಿಗಿಂತಲೂ ಪರಿಸ್ಥಿತಿ ತಿಳಿಯಾಗುವ ಈ ಆಶಾಸ್ಪದ ಸನ್ನಿವೇಶದಲ್ಲೂ ಪ್ರಗತಿಪರ ಎನಿಸಿಕೊಂಡವರು ತಮ್ಮ ಚಿಂತನೆ-ವಾದಗಳನ್ನು ಕಾಲದ ಪ್ರಗತಿಯೊಂದಿಗೆ ತಾಳೆಹಾಕಬೇಕಾಗಿದೆ. ಅಪ್‌ಡೇಡ್ ಆಗದ ಹಳೇ ವಾದಗಳನ್ನೇ ಹೇಳಿದರೆ ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಎಂತು ಸಾಧ್ಯ? ಕೇವಲ ಮಾತು, ಲೇಖನ ಘೋಷಣೆ, ವಿರೋಧ ಮಾಡುವುದಷ್ಟೇ ನಮ್ಮ ಕೆಲಸ ಎಂದು ಭಾವಿಸಿರುವ ಮಂದಿಯೆಲ್ಲಾ ಮತ್ತೊಮ್ಮೆ ಪ್ರಾಮಾಣಿಕ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಧುನಿಕ ಯುವಜನತೆಯ ಅಂತರಾಳದಲ್ಲಿ ಕುಡಿಯೊಡೆಯುತ್ತಿರುವ ಸಹಜ ಸ್ನೇಹ-ಬಾಂಧವ್ಯಗಳನ್ನು ಸಂಶಯದಿಂದ ನೋಡುವುದು ಬೇಡ. ಸಹಪಂಕ್ತಿ ಭೋಜನವೇ ಇರಲಿ, ಸಾಮರಸ್ಯ ಯಾತ್ರೆಯೇ ಇರಲಿ, ಪೇಜಾವರ – ಮಾದಾರ ಶ್ರೀಗಳೇ ಇರಲಿ, ಇಲ್ಲಿ ವ್ಯಕ್ತಿ-ಕಾರ‍್ಯಕ್ರಮಗಳು ಕೇವಲ ಸಾಂಕೇತಿಕ, ಆಶಯಕ್ಕೆ ಮಾತ್ರ ಮನ್ನಣೆ.
-ರಾಜೇಶ್ ಪದ್ಮಾರ್, ಬೆಂಗಳೂರು
ಉಪನ್ಯಾಸಕ