
ಬೆಂಗಳೂರು: ಸ್ವಾಮಿ ವಿವೇಕಾನಂದರು ಜಗತ್ತಿನ ಒಳಿತಿಗಾಗಿ ಕರೆಕೊಟ್ಟವರು. ಇಂದು ವಿಶ್ವದ ಒಳಿತಿಗಾಗಿ ಶ್ರಮಿಸಬೇಕಾದ ಯುವಕರಿಗೆ ಸ್ವಾಮಿ ವಿವೇಕಾನಂದರ ಸಂದೇಶ ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ ಎಂದು ನವದೆಹಲಿಯ ಜೆಎನ್ ಯು ಪ್ರೊ. ಅನ್ಶು ಜೋಶಿ ಹೇಳಿದರು.
ಸಮರ್ಥ ಭಾರತದ ವತಿಯಿಂದ 11ನೇ ವರ್ಷದ ‘ಬಿ ಗುಡ್ ಡು ಗುಡ್’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ಆನ್ ಲೈನ್ ಉಪನ್ಯಾಸ ಸರಣಿಯ ಮೂರನೇ ದಿನ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಸಕಲ ವಿಷಯಗಳ ಕುರಿತು ಬೆಳಕು ಚೆಲ್ಲಿದ ಮಹಾನ್ ಮೇಧಾವಿ. ವಿಕಸಿತ ಭಾರತದಿಂದ ಹಿಡಿದು, ವಿಶ್ವಬಂಧುತ್ವದವರೆಗೂ ತಮ್ಮ ಚಿಂತನೆಗಳನ್ನು ತಿಳಿಸಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ, ವೈಚಾರಿಕವಾಗಿ, ಆಧ್ಯಾತ್ಮಿಕವಾಗಿ ಯುವಕರು ಸಬಲರಾಗಬೇಕು ಎಂದು ಅವರು ತಿಳಿಸಿದ್ದಾರೆ ಎಂದು ನುಡಿದರು.

ಯುವಜನತೆಗೆ ನಿಸ್ವಾರ್ಥಿಗಳಾಗಬೇಕು. ನಿಸ್ವಾರ್ಥಿಗಳಾದ ವ್ಯಕ್ತಿಗಳು ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು. ಉತ್ತಮ ಆರೋಗ್ಯವನ್ನು ಉಳ್ಳವರು, ಉತ್ತಮ ಚಿಂತನೆಯನ್ನು ಹೊಂದಬಲ್ಲರು ಎಂಬ ಮಾತಿನಂತೆ ಜವಾಬ್ದಾರಿಯನ್ನು ಹೊತ್ತಂತಹ ವ್ಯಕ್ತಿಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಗುರಿ ತಲುಪುವವರೆಗೂ ನಿಲ್ಲದಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ವಿವೇಕಾನಂದರು ತಿಳಿಸಿದ್ದಾರೆ ಎಂದರು.
ಏಕ ಭಾರತ ಶ್ರೇಷ್ಠ ಭಾರತ ಎಂದು ನಾವು ಸಂಬೋಧಿಸುತ್ತೇವೆ. ನಮ್ಮ ನಾಡಿನಲ್ಲಿ ವಿವಿಧತೆ ಹಲವಿರಬಹುದು. ಆದರೆ ನಾವು ಭಾರತೀಯರು ಎಂಬ ಭಾವವನ್ನು ಮರೆಯಬಾರದು. ನಾವೆಲ್ಲೇ ಇದ್ದರೂ ಈ ರಾಷ್ಟ್ರ ನಮ್ಮದು ಎಂಬ ಭಾವದಿಂದ ಕಾರ್ಯಪ್ರವೃತ್ತರಾಗಿ ಭಾರತವನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯಬೇಕು. ವಸುಧೈವ ಕುಟುಂಬಕಂ ಎಂಬುದನ್ನು ಜಗಕೆ ಸಾರಿದ ನಾವು ನಮ್ಮಲ್ಲಿ ಏಕತೆಯನ್ನು ಕಾಪಾಡಿಕೊಳ್ಳಬೇಕು. ಮುಂದಿನ ಪೀಳಿಗೆ ಈ ಭಾವವನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಪಟ್ಟರು.