ಬೆಂಗಳೂರು ಆಗಸ್ಟ್, 24 : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಆಗಸ್ಟ್ 23 ರಂದು ಉದ್ಘಾಟನೆಗೊಂಡ ಎರಡು ದಿನಗಳ ರಾಷ್ಟ್ರಾಭಿಮಾನಿ ಸೇವಾಸಕ್ತರ ಸಮಾವೇಶ ಇಂದು ಸಮಾರೋಪಗೊಂಡಿತು. ಸಮಾರೋಪ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಪಾಲ್ಗೊಂಡರು.
ಅವರ ವಕ್ತವ್ಯದ ಸಾರಾಂಶ:
ಸಮರ್ಥ ಭಾರತ ಸಮಾವೇಶದಲ್ಲಿ ಪಾಲ್ಗೊಂಡ ಉತ್ಸಾಹಿ ಸೇವಾಸಕ್ತರನ್ನು ಕಂಡು, ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ನಂಬಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕತರ ನಂಬಿಕೆ ಬಲಗೊಂಡಿದೆ. ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆ ಒಳ್ಳೆಯ ದಿನಗಳು ದೈವ ಕೃಪೆಯಿಂದಲೋ ಸರಕಾರಿ ಕಾರ್ಯದಿಂದಲೋ ಅಥವಾ ಸಮಾಜ ಸುಧಾರಕರ ಸೇವೆಯಿಂದಲೋ ಮಾತ್ರ ಬರುವುದಲ್ಲ. ಈ ದೇಶದ ಸಾಮಾನ್ಯ ಜನರಲ್ಲಿ ನಾವು ಸಮರ್ಥ ಭಾರತ ಕಟ್ಟಬೇಕೆಂದು ಸಂಕಲ್ಪ ಮೂಡದಿರುವವರೆಗೆ ಉಳಿದೆಲ್ಲ ಪ್ರಯತ್ನಗಳು ವ್ಯರ್ಥ. ನಮ್ಮೆಲ್ಲರ ಶಕ್ತಿ ಸೇರಿದ್ದರೆ ಈ ದೇಶದ ಮುಖಚಿತ್ರವನ್ನು ಬದಲಿಸಬಲ್ಲೆವು ಎನ್ನುವ ವಿಶ್ವಾಸ ಜನಸಾಮಾನ್ಯರಲ್ಲಿ ಬರಬೇಕು.
ಪ್ರತಿಯೊಬ್ಬರಲ್ಲೂ ಸಮಾಜಹಿತ ಕೆಲಸಗಳನ್ನು ಮಾಡುವ ಆಸಕ್ತಿ ಇರುತ್ತದೆ. ಆದರೆ ಅವರಲ್ಲಿ ತಾನೊಬ್ಬ ಮಾತ್ರ ಏನು ಮಾಡಬಲ್ಲೆ? ಎಂಬ ಅವಿಶ್ವಾಸವಿರುತ್ತದೆ. ಅವರಿಗೆ ಅನುಕೂಲಕರ ವಾತಾವರಣ, ಸಹಕಾರದ ಅಗತ್ಯವಿದೆ.
೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು. ಆದರೆ ಈ ಸಂಗ್ರಾಮದಲ್ಲಿ ಅತಿ ದೊಡ್ಡ ಪಾಠವನ್ನು ಕಲಿತವರು ಬ್ರಿಟಿಷರು. ಆದ್ದರಿಂದಲೇ ಅವರು ಮುಂದಿನ ೯ ದಶಕಗಳ ಕಾಲ ಭಾರತವನ್ನು ಆಳುವಲ್ಲಿ ಸಫಲರಾದರು. ಆ ಯುದ್ಧದ ನಂತರದ ಕಾಲದಲ್ಲಿ ಒಂದು ಗುಂಪಿನ ಜನ ಕ್ರಾಂತಿಕಾರಿ ಮಾರ್ಗವನ್ನು ತುಳಿದರು. ಉಗ್ರ ಹೋರಾಟ ಪಾರ್ಣಾರ್ಪಣೆ ತ್ಯಾಗಗಳ ಮೂಲಕ ದೇಶವನ್ನು ಬ್ರಿಟಿಷ್ ಮುಕ್ತಗೊಳಿಸುವ ಪ್ರಯತ್ನ ನಡೆಸಿದರು. ಇನ್ನೊಂದು ಗುಂಪಿನ ಜನ ಸಮಾಜ ಸುಧಾರಣೆಯ ಮೂಲಕ ದೇಶವನ್ನು ಜಾಗೃತಗೊಳಿಸುವ ಪ್ರಯತ್ನಪಟ್ಟರು. ಈ ಎರಡೂ ಮಾರ್ಗಗಳಲ್ಲಿ ಕಾರ್ಯಮಾಡಿ ಅನುಭವ ಹೊಂದಿದ ಡಾ|| ಹೆಡಗೆವಾರ್ರು ಬ್ರಿಟಿಷರನ್ನು ಭಾರತದಿಂದ ಓಡಿಸುವುದರ ಜೊತೆಗೆ ಅವರು ಯಾಕೆ ಭಾರತವನ್ನು ಆಳಬಲ್ಲವರಾದರು? ಅದಕ್ಕೆ ಏನು ಕಾರಣ? ಸಾವಿರಾರು ವರ್ಷಗಳ ಶ್ರೇಷ್ಠ ಪರಂಫರೆ-ಇತಿಹಾಸ ಹೊಂದಿರುವ ಈ ದೇಶ ಬ್ರಿಟಿಷರ ಗುಲಾಮಗಿರಿಗೆ ಒಳಗಾದುದ್ದು ಹೇಗೆ? ಎಂದು ಪ್ರಶ್ನಿಸಿಕೊಂಡರು.
ಆತ್ಮಶ್ರದ್ಧೆ. ಆತ್ಮವಿಶ್ವಾಸವಿಲ್ಲದ ಸಮಾಜ ವಿದೇಶಿಯರ ಎದುರಿಗೆ ಮಂಡಿಯೂರಿ ಗುಲಾಮವಾಯಿತು. ಆದ್ದರಿಂದ ಈ ದೇಶದ ಜನತೆಯಲ್ಲಿ ಆತ್ಮವಿಶ್ವಾಸ ತುಂಬಬೇಕಾದ ಅಗತ್ಯವಿದೆ. ಇದು ಒಂದೆರಡು ದಿನಗಳ ಕೆಲಸವಲ್ಲ. ಪ್ರೀತಿ ವಿಶ್ವಾಸ ಪಾರಿವಾರಿಕ ಆತ್ಮೀಯತೆಯೊಂದಿಗೆ ಸತತ ಪ್ರಯತ್ನಗಳಿಂದ ಇದು ಸಾಧ್ಯ ಎಂದು ಕಂಡುಕೊಂಡ ಡಾ|| ಹೆಡಗೆವಾರ್ ದೇಶಭಕ್ತ ಸಾಮರ್ಥ್ಯಶೀಲ ವ್ಯಕ್ತಿಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಿದರು. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಟ್ಟಿಗೆ ನಾಂದಿಯಾಯಿತು. ಈ ದೇಶದ ಅಂತಶ್ರದ್ಧೆಯನ್ನು ಬಡಿದೆಬ್ಬಿಸಿ, ಅದು ಸದಾ ಕಾಲ ಜಾಗೃತವಾಗಿ ಸಕ್ರಿಯವಾಗಿ ಇರುವಂತೆ ಮಾಡುವುದು, ಈ ದೇಶದ ಜನತೆಗೆ ವೈಶ್ವಿಕ ಪ್ರಜ್ಞೆಯನ್ನು ಬೆಳೆಸುವುದು ಸಂಘದ ಧ್ಯೇಯವಾಗಿದೆ.
ಸಮಾಜವು ಸದಾ ಜಾಗೃತವಾಗಿರಬೇಕು. ಪ್ರಕೃತಿ ವಿಕೋಪದಲ್ಲಿ ಜಾಗೃತಿ, ಯುದ್ಧಕಾಲದಲ್ಲಿ ಜಾಗೃತಿ, ಚುನಾವಣೆ ಬಂದಾಗ ಜಾಗೃತಿ – ಇಂತಹ ತಾತ್ಕಾಲಿಕ ಜಾಗೃತಿಯಿಂದ ದೇಶದ ಉನ್ನತಿ ಸಾಧ್ಯವಿಲ್ಲ. ಬುದ್ಧ, ಚಾಣಕ್ಯ, ಸ್ವಾಮೀ ವಿವೇಕಾನಂದ, ಗಾಂದಿಜೀಯವರಂತಹ ಎಷ್ಟೋ ಜನ ಮಹಾಪುರುಷರು ಜನಿಸಿದರೂ ಭಾರತ ಇನ್ನೂ ಏಕೆ ಜಾಗೃತವಾಗಿಲ್ಲ? ಭಾರತ ವೈಶ್ವಿಕ ಪಾತ್ರ ವಹಿಸಬೇಕು. ಹಾಗಾಗಬೇಕಾದರೆ ಭಾರತ ತನ್ನ ಕಾಲ ಮೇಲೆ ತಾನು ನಿಲ್ಲಬೇಕು. ಅದನ್ನು ಸಾಧಿಸಬಲ್ಲ ಸಮಥ ವ್ಯಕ್ತಿಗಳನ್ನು ನಿರ್ಮಿಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾಡುತ್ತಿದೆ. ಸಂಘದ ಸ್ವಯಂಸೇವಕರು ಒಂದೂವರೆ ಲಕ್ಷಕ್ಕೂ ಅಧಿಕ ಸೇವಾಚಟುವಟಿಕೆಗಳನ್ನು ಸಮಾಜವನ್ನು ಸೇರಿಸಿಕೊಂಡು ನಡೆಸುತ್ತಿದ್ದಾರೆ. ಸಂಘದ ಸ್ವಯಂಸೇವಕರು ಸಮಾಜದಲ್ಲಿ ಆತ್ಮವಿಶ್ವಾಸ ಬೆಳೆಸುವ, ಅಸ್ಪೃಶ್ಯತೆ, ಅಸಮಾನತೆಗಳನ್ನು ಹೊಡದೋಡಿಸುವ ಕೆಲಸಗಳಲ್ಲಿ ಜೋಡಿಸಿಕೊಂಡಿದ್ದಾರೆ.
ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಜೀವನದ ಕೇಂದ್ರ ಸ್ಥಾನದಲ್ಲಿದೆ. ಇದು ಯಾವುದೇ ರಾಜಕೀಯ ಸಾಧನೆಯಿಂದಲೋ, ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯವಾದುದಲ್ಲ. ಇದು ಲಕ್ಷಾಂತರ ಸ್ವಯಂಸೇವಕರ, ಅವರ ಪರಿವಾರದ ಪ್ರಯತ್ನ ಮತ್ತು ತ್ಯಾಗಗಳಿಂದ ಸಾಧ್ಯವಾದುದು. ಸಮಾಜಹಿತಕ್ಕಾಗಿ ಶ್ರಮಿಸುವ ಸಾಮರ್ಥ್ಯವನ್ನು ಸಂಘದ ಶಾಖೆಗಳಲ್ಲಿ ಕಲಿಸಿಕೊಡಲಾಗುತ್ತದೆ.
ಹೊರಗೆ ನಿಂತು ನೋಡುವುದಲ್ಲ; ಒಳಗೆ ಬಂದು ಸಂಘವನ್ನು ಕಾಣಬೇಕು. ಸಮಾಜದಲ್ಲಿರುವ ಸಜ್ಜನ ಶಕ್ತಿಯನ್ನು ಸಕ್ರಿಯಗೊಳಿಸುವ ಮತ್ತು ಸಂಘಟಿತಗೊಳಿಸುವ ಕೆಲಸಕ್ಕೆ ನಾವೆಲ್ಲ ತೊಡಗಿಕೊಳ್ಳಬೇಕು. ನಾವು ಕೇವಲ ಪ್ರಶ್ನೆ ಕೇಳುವವರಾಗಬಾರದು. ಪ್ರಶ್ನೆಗೆ ಉತ್ತರವಾಗಬೇಕು. ಶ್ರೇಷ್ಠ ದೇಶದ ಚಿಕ್ಕದೀಪಗಳಾಗಿ ನಮ್ಮ ಸುತ್ತಲಿನ ಕತ್ತಲೆಯನ್ನು ಕಳೆಯುವಂತವರಾಗಬೇಕು. ನಮ್ಮೆಲ್ಲರ ಪ್ರಯತ್ನದಿಂದ ಸಮರ್ಥ ಭಾರತ, ಆಧ್ಯಾತ್ನ ಭಾರತ. ಸಮೃದ್ಧ ಭಾರತ ನಿರ್ಮಾಣವಾಗಬೇಕು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹರಾದ ಶ್ರೀ ತಿಪ್ಪೆಸ್ವಾಮಿಯವರು ಪರಿಚಯಿಸಿದರು. ಮಾನ್ಯ ಸಂಘಚಾಲಕರಾದ ಶ್ರೀ ಮ. ವೆಂಕಟರಾಮು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಮೂಹಿಕ ಸಾಂಘಿಕ ಗೀತೆ ಹಾಗೂ ಉಪವಿಷ್ಠ ವ್ಯಾಯಾಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ನಿನ್ನೆ (ಆಗಸ್ಟ್ ೨೩ ಭಾನುವಾರ) ಬೆಳಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಭೌದ್ಧಿಕ್ ಪ್ರಮುಖ್ ಶ್ರೀ ಭಾಗಯ್ಯನವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಸುಮಾರು ೫೦೦೦ಕ್ಕೂ ಅಧಿಕ ಸೇವಾಸಕ್ತರು ಪಾಲ್ಗೊಂಡರು. ಎರಡು ದಿನಗಳ ಕಾಲ ನಡೆದ ಸಮಾವೇಶದಲ್ಲಿ ವಿವಿಧ ಸೇವಾಸಂಘಟನೆಗಳನ್ನು ಹಾಗೂ ಅವುಗಳ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪರಿಚಯ ನೀಡಲಾಯಿತು.