
ಬೆಂಗಳೂರು: ಸ್ಪರ್ಧೆಯಲ್ಲಿ ಗೆಲುವು ಅಥವಾ ಸೋಲು ಮುಖ್ಯವಲ್ಲ, ಭಾಗವಹಿಸುವುದು ಪ್ರಮುಖವಾಗಿರುತ್ತದೆ. ತಮ್ಮಲ್ಲಿರುವ ಪ್ರತಿಭೆಗಳನ್ನು, ಸಾಮರ್ಥ್ಯವನ್ನು ಪ್ರದರ್ಶಿಸಲು ಸಮರ್ಥ ಭಾರತ ಹಾಗೂ ಮಿಥಿಕ್ ಸೊಸೈಟಿ ಸಂಸ್ಥೆಗಳು ಸ್ಪರ್ಧೆಗಳ ಮೂಲಕ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಇಂತಹ ಅವಕಾಶಗಳ ಮೂಲಕ ಅವರಲ್ಲಿನ ಸೃಜನಶೀಲತೆಯನ್ನು ಹೆಚ್ಚಿಸಿ ಭಾರತವನ್ನು ಉನ್ನತ ಸ್ಥಾನಕ್ಕೆ ತಲುಪಿಸಲು ಯುವ ಶಕ್ತಿಯನ್ನು ತಯಾರು ಮಾಡುತ್ತಿದೆ ಎಂದು ಮಿಥಿಕ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಕೆ.ಎಸ್ ಶ್ರೀಧರ್ ಹೇಳಿದರು.

ಅವರು ನೃಪತುಂಗ ರಸ್ತೆಯ ಮಿಥಿಕ್ ಸೊಸೈಟಿಯಲ್ಲಿ ನಡೆದ ವಿವೇಕಾನಂದ ಜಯಂತಿಯ ಪ್ರಯುಕ್ತ ಮಿಥಿಕ್ ಸೊಸೈಟಿ ಹಾಗೂ ಸಮರ್ಥ ಭಾರತದ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಂಟಿಯಾಗಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಈ ರಾಷ್ಟ್ರದ ಸಕಾರಾತ್ಮಕ ವಿಚಾರಗಳನ್ನು ಸಮಾಜಕ್ಕೆ ತಿಳಿಸಲು, ಭಾರತವನ್ನು ಸಮರ್ಥವಾಗಿರಿಸಲು ವಿವೇಕಾನಂದರ ಉತ್ತಮನಾಗು ಉಪಕಾರಿಯಾಗು ಎಂಬ ಪರಿಕಲ್ಪನೆಯನ್ನು ಅಭಿಯಾನದ ಮೂಲಕ ಸಾರುತ್ತಿರುವ ಸಮರ್ಥ ಭಾರತವು ಇಂದು ಸಮಾಜದ ಒಳಿತಿನ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಈ ರೀತಿಯಾದ ಪ್ರಬಂಧ ಸ್ಪರ್ಧೆಯು ಒಂದಾಗಿದ್ದು,ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವಂತಹ ಕೆಲಸವನ್ನು ನಡೆಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ ಡಿ ಚಂದನ ವಾಹಿನಿ ನಿರೂಪಕಿ ಚೇತನಾ ರಾಜೇಂದ್ರ ಅವರು ಮಾತನಾಡಿ ಈ ಸ್ಪರ್ಧೆಯ ಮೂಲಕ ನಿಮ್ಮ ಜೀವನದಲ್ಲಿ ವಿವೇಕಾನಂದರ ಅಧ್ಯಯನದ ಪ್ರಾರಂಭವಾಗಿದೆ. ಅದರ ಮುಂದುವರಿಕೆ ನಿಮ್ಮ ಯಶಸ್ಸಿಗೆ ಕಾರಣವಾಗಲಿದೆ. ಅವರ ಚಿಂತನೆಗಳನ್ನು ಹಾಗೂ ಭಾರತದ ಅಧ್ಯಯನವನ್ನು ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಒಬ್ಬ ಯೋಧನಾಗುವುದರಲ್ಲಿ ಸಂಶಯವಿಲ್ಲ. ಅವುಗಳ ಮೂಲಕ ಕಲಿತ ಉತ್ತಮ ವಿಚಾರಗಳಿಂದ ನಾವು ಸಮಾಜದಲ್ಲಿ ತೊಡಗಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಎನ್ ಎಂ ಐ ಟಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮರ್ಥಭಾರತ ಹಾಗೂ ಮಿಥಿಕ್ ಸೊಸೈಟಿ ಸದಸ್ಯರು ಉಪಸ್ಥಿತರಿದ್ದರು.








