ಉಪಭೋಗವಾದಿ ಜೀವನ ಬೇಡ
ಹುಬ್ಬಳ್ಳಿ : ಹಿಂದು ಜೀವನ ಶೈಲಿಗೂ, ಅನ್ಯ ದೇಶಗಳ ಜೀವನ ಪದ್ಧತಿಗೆ ಅಜಗಜಾಂತರ ಅಂತರವಿದೆ. ನಮ್ಮದು ಧರ್ಮ, ಸಂಸ್ಕೃತಿ, ಸಂಗಟಿತ ಜೀವನವಾದರೇ, ಕೆಲ ವಿದೇಶಗಳಲ್ಲಿ ಉಪಭೋಗವಾದಿ ಜೀವನ ನಡೆಸುತ್ತಿದ್ದಾರೆ. ಭಾರತೀಯರು ಅದರ ಬೆನ್ನು ಬೀಳುವುದು ಬೇಡ ಎಂದು ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ ಸಂಚಾಲಿಕಾ ಪ್ರಮಿಲಾ ತಾಯಿಜೀ ಮೇಢೆ ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ನಡೆದ ೧೫ ದಿನಗಳ ವಿಶ್ವಸಮಿತಿ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮುಕ್ತ ವಕ್ತಾರರಾಗಿ ಮಾತನಾಡಿದ ಅವರು, ಈ ಸತ್ಯವನ್ನು ಈಗಾಗಲೇ ಹಲವಾರು ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದರು.
ಉಪಭೋಗತಾವಧಿ ಜೀವನ ಶೈಲಿ ಅಳವಡಿಸಿಕೊಂಡ ದೇಶಗಳಲ್ಲಿ ನೆಮ್ಮದಿ ಹಾಳಾಗಿದೆ. ಆದರೆ ಭಾರತದಲ್ಲಿ ಅವಕಾಶವೇ ಇಲ್ಲ. ಕಾರಣ ಅಂಗಡಿಯಲ್ಲಿ ಮಾರಾಟವಾಗುವ ಮಿಠಾಯಿಯನ್ನು ದೇವರಿಗೆ ಅರ್ಪಿಸಿ ಪ್ರಸಾದವೆಂದು ಸ್ವೀಕರಿಸುವವರು ನಾವು. ಸದಾ ಶಾಂತಿ, ನೆಮ್ಮದಿ, ಸೇವಾ ಮನೋಭಾವ ನಮ್ಮದು ಎಂದರು.
ಮನುಷ್ಯತ್ವ ಬೋಧಿಸಬೇಕಿದೆ:
ಕಳ್ಳ ಮಾರ್ಗ ಅನುಸರಿಸಿ ಬೌದ್ಧಿಕ ವಸ್ತುಗಳ ಉತ್ಪಾದನೆ ಮಾಡಿ ಹಣ ಗಳಿಸುವ ಕಾರ್ಯ ನಡೆಯುತ್ತಿದೆ. ಅದನ್ನು ಮನಸ್ಸು ಮಾಡಿದ ಯಾವುದೇ ವ್ಯಕ್ತಿ ಮಾಡಬಹುದು. ಆದರೆ ಉತ್ತಮ ಮನುಷ್ಯನನ್ನು ರೂಪಿಸುವುದು ಕಷ್ಟ. ಅಂತಹ ಪ್ರಯತ್ನ ಮಾಡಬೇಕಿದೆ. ಅದು ರಾಷ್ಟ್ರ ಸೇವಿಕಾ ಸಮಿತಿಯ ಮೊದಲ ಗುರಿಯಾಗಿದೆ ಎಂದರು.
ಒಳ್ಳೆಯ ಮಾನವನನ್ನು ರೂಪಿಸುವ ಕಾರ್ಯ ಪರಿವಾರದಿಂದಲೇ ಆಗಬೇಕು. ಕುಟುಂಬದ ಮೇಟಿಯಾಗಿರುವ ತಾಯಿಯ ಪಾತ್ರ ದೊಡ್ಡದು. ತಾಯಿಯಿಂದ ಮಗುವಿಗೆ ದೊರೆಯುವ ಸಂಸ್ಕಾರ ಕೊಡುವ ಪಾಠ ಯುವತಿಯರಿಗೆ ನೀಡುತ್ತಿದ್ದೇವೆ. ನಮ್ಮ ಯುವತಿಯರು ಮಾತೃಗಳಾಗಿ, ಸೃಜನಶೀಲರಾಗಿ, ಸಂರಕ್ಷಕರಾಗಿ, ಸಂಗೋಪನಾ ಜವಾಬ್ದಾರಿ ಹೊರಬೇಕಿದೆ ಎಂದು ತಿಳಿಸಿದರು.
ಮಹಿಳೆಯರುಲ್ಲಿ ದೈವಿ ಶಕ್ತಿ, ಚಾರಿತ್ರ್ಯ ಶಕ್ತಿ, ಭಕ್ತಿ, ಸಮರ್ಪಣಾ ಮನೋಭಾವ ಬೆಳೆಯಬೇಕಿದೆ. ನಾವು ನಮ್ಮ ನೆಮ್ಮದಿ ಜೀವನದೊಂದಿಗೆ ಮತ್ತೊಬ್ಬರ ಒಳಿತಿನ ಬಗ್ಗೆ ವಿಚಾರ ಮಾಡಬೇಕಿದೆ. ಅಂತಹ ಪಾಠವನ್ನು ತಾಯಿಗಿಂತ ಉತ್ತಮವಾಗಿ ಕಲಿಸುವ ಗುರು ಮತ್ತೊಬ್ಬಳಿಲ್ಲ ಎಂದರು.
ಮಹಿಳೆಯನ್ನು ಹೆಣ್ಣಾಗಿ ಕಾಣುಬ ಬದಲು ತಾಯಿಯಾಗಿ ನೋಡಬೇಕಿದೆ. ದುರಾಚಾರ, ದುಷ್ಕೃತ್ಯ ಮುಖ್ಯವಾಗಿ ಭಸ್ಮಾಸುರನಂತೆ ಬೆಳೆದು ನಿಂತಿರುವ ಭ್ರಷ್ಟಾಚಾರಕ್ಕೆ ತಿಲಾಂಜಲಿ ನೀಡಬೇಕಿದೆ. ಅಂತಹ ಪಾಠವನ್ನು ಪ್ರತಿಯೊಬ್ಬರಿಗೂ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಮೀನಾ ಚಂದಾವರಕರ ಮಾತನಾಡಿ, ಒಂದು ಮರದಿಂದ ಲಕ್ಷಾಂತರ ಬೆಂಕಿಕಡ್ಡಿಗಳನ್ನು ತಯಾರಿಸಬಹುದು. ಆದರೆ ಜಗತ್ತನ್ನೇ ನಾಶಮಾಡುವ ಶಕ್ತಿ ಒಂದೇ ಒಂದು ಕಡ್ಡಿಗೆ ಇದೆ. ನಾವು ಯಾವುದೇ ಕಾರಣಕ್ಕು ಉರಿ ಹಚ್ಚುವ ಕಾರ್ಯಕ್ಕೆ ಒತ್ತು ನೀಡಬಾರದು. ಮರ ಬೆಳೆಸುವ, ಕುಟುಂಬ, ಸಂಸ್ಥೆ, ದೇಶ ಕಟ್ಟುವ ಕಾರ್ಯದಲ್ಲಿ ಮಗ್ನರಾಗಬೇಕು. ಅಂತ ಶಿಕ್ಷಣವನ್ನು ಕೊಡುವ ಸಂಸ್ಥೆ ರಾಷ್ಟ್ರ ಸೇವಿಕಾ ಸಮಿತಿ. ಅದರ ಸದಸ್ಯತ್ವ ಪಡೆದರೇ ಧನ್ಯರು ಎಂದರು.
ಒಂದು ದೇಶದ ಆಸ್ತಿ ಅಲ್ಲಿನ ನದಿ, ಅರಣ್ಯ, ಬೆಟ್ಟ-ಗುಡ್ಡಗಳು ಸೇರಿದಂತೆ ಪ್ರಾಕೃತಿಕ ಸಂಪತ್ತುಗಳಲ್ಲ. ಮಾನವನೇ ಪ್ರಮುಖ ಆಸ್ತಿ. ಅವನಲ್ಲಿ ರಾಷ್ಟ್ರಭಕ್ತಿ, ಚಾರಿತ್ರ್ಯ, ಸಂಪ್ರಿತಿ, ಉತ್ತಮ ನಡೆ-ನುಡಿಗಳಿರಬೇಕು. ಅಂದಾಗಿ ಆತ ದೇಶದ ಆಸ್ತಿಯಾಗಲು ಸಾಧ್ಯ. ಅಂತಹ ಸಂಸ್ಕಾರವನ್ನು ತಾಯಿ ನೀಡಬೇಕು ಎಂದು ಸಲಹೆ ನೀಡಿದರು.
ನಯನಾ ದೇಸಾಯಿ, ಅಲಕಾ ಇನಾಮದಾರ, ವೇದಾ ಕುಲಕರ್ಣಿ, ಸುಲೋಚನಾ ನಾಯಕ, ಶಾಂತಕ್ಕ, ಮಂಗೇಶ ಭೇಂಡೆ, ಹರಿಬಾವು, ನಾಗಭೂಷಣ, ರವಿ, ಚಿತ್ರಾತಾಯಿ ಮತ್ತಿತರರು ಇದ್ದರು.
ನುಸುಳುಕೋರರಿಗೆ ತಡೆ ಒಡ್ಡಬೇಕು
ಪರವಾನಿಗೆ ಇಲ್ಲದೆ ಭಾರತವನ್ನು ಪ್ರವೇಶಿಸುವ ನುಸುಳುಕೋರರಿಂದ ಅಪಾಯವಿದೆ. ಬಾಂಗ್ಲಾ ದೇಶದ ಸುಮಾರು ೧೨ ಲಕ್ಷ ಜನರು ದೇಶವನ್ನು ಪ್ರವೇಶಿಸಿದ್ದಾರೆ. ಅವರ ನೆಲೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲವೆಂದು ಸಮೀಕ್ಷೆಯಿಂದ ದೃಢಪಟ್ಟಿದೆ. ಅವರು ನಮ್ಮ ದೇಶಕ್ಕೆ ಆತಂಕವಾಗಿದ್ದಾರೆ ಎಂದು ಪ್ರಮಿಲಾ ತಾಯಿಜೀ ಮೇಢೆ ಕಳವಳ ವ್ಯಕ್ತಪಡಿಸಿದರು.
ಗಡಿಯಲ್ಲಿ ಕಾವಲು ಕಾಯುವ ಯೋಧನಿಂದ ಬಂಧಿಸಲ್ಪಟ್ಟ ನುಸುಳುಕೋರರನ್ನು ಬಿಟ್ಟು ಬಿಡಿ ಎಂಬ ಆದೇಶ ಮೇಲಾಧಿಕಾರಿಗಳಿಂದ ಬರತ್ತದೆಂಬ ಮಾತುಗಳು ಕೇಳಿಬರುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು. ಉತ್ತಮ ಸೈನಿಕರನ್ನು ದೇಶಕ್ಕೆ ನೀಡುವ ಕಾರ್ಯ ತಾಯಂದಿರಿಂದಾಗಬೇಕು ಎಂದು ಸಲಹೆ ನೀಡಿದರು.
ವಿಶ್ವ ಸಮಿತಿ ಶಿಕ್ಷಾ ವರ್ಗ ೨೦೧೨ ಪಥ ಸಂಚಲನ
ಹುಬ್ಬಳ್ಳಿ: ವಯಂ ವಿಶ್ವಶಾಂತೈ ಚಿರಂ ಯತ್ನ ಶೀಲಾಃ ಎಂಬ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ೧೪ (ಜು. ೨೩ ರಿಂದ ಆ. ೫ರವರೆಗೆ) ದಿನಗಳಿಂದ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ವಿಶ್ವ ಸಮಿತಿ ಶಿಕ್ಷಾ ವರ್ಗ ೨೦೧೨ ದ ಸಮಾರೋಪ ಸಮಾರಂಭದ ಅಂಗವಾಗಿ ರವಿವಾರ ನಗರದಲ್ಲಿ ಸ್ವಯಂ ಸೇವಕಿಯರು ಪಥ ಸಂಚಲನ ನಡೆಸಿದರು.
ಬೆಳಗ್ಗೆ ೧೧ ಕ್ಕೆ ನಗರದ ಶ್ರೀ ಮೂರುಸಾವಿರ ಮಠದ ಆವರಣದಿಂದ ಪ್ರಾರಂಭಗೊಂಡ ಪಥ ಸಂಚಲನಕ್ಕೆ ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ ಸಂಚಾಲಿಕಾ ಪ್ರಮಿಲಾ ತಾಯೀಜಿ ಮೇಢೆ ಚಾಲನೆ ನೀಡಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಶಿಕ್ಷಾರ್ಥಿಗಳು ಸಮಿತಿಯ ಸಮವಸ್ತ್ರಗಳಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಕೈಯಲ್ಲಿ ಲಾಠಿ ಹಿಡಿದು ಸ್ವಯಂ ಸೇವಕರು ತಮ್ಮ ಸಹಪಾಠಿಗಳು ಘೋಷ್ ವಾದನಕ್ಕೆ ಲಯಬದ್ಧ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ಭಾರತೀಯ ಸಾಂಸ್ಕೃತಿಕ ವೈಭವನ್ನು ಪ್ರದರ್ಶಿಸಿದರು.
ಸಂಸ್ಥಾಪಕಿಯರ ಭಾವಚಿತ್ರ ಮೆರವಣಿಗೆ
ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಸ್ವಯಂ ಸೇವಕಿಯರ ಹಿಂದೆ ಸಾಲಂಕೃತವಾಗಿ ಹೊರಟ ತೆರೆದ ವಾಹನದಲ್ಲಿ ದೇವಿ ಭಾರತ ಮಾತೆಯ ಭಾವಚಿತ್ರದೊಂದಿಗೆ ವಿಶ್ವಸಮಿತಿ ಸ್ಥಾಪಕರಾದ ಲಕ್ಷ್ಮೀಬಾಯಿ ಕೇಳಕರ್, ತಾಯಿಜೀ ಸರಸ್ವತೀಬಾಯಿ ಆಪ್ಟೆ ಭಾವಚಿತ್ರಗಳನ್ನು ಮೆರವಣಿಗೆ ನಡೆಯಿತು.
ಕರ್ನಾಟಕ ಸೇರಿದಂತೆ ಮಹರಾಷ್ಟ್ರ, ಆಧ್ರಪ್ರದೇಶಗಳಿಂದ ಶಿಕ್ಷಾ ಸಮಿತಿಯ ಕಾರ್ಯಕರ್ತರು ಸೇರಿದಂತೆ ಒಟ್ಟು ೫೨೦ ಶಿಕ್ಷಾರ್ಥಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಮಠದ ಆವರಣದಿಂದ ಹೊರಟ ಪಥಸಂಚಲನ ಬೆಳಗಾವಿ ಗಲ್ಲಿ, ನ್ಯೂ ಮೈಸೂರ ಸ್ಟೋರ‍್ಸ್, ದುರ್ಗದಬೈಲ್, ಕೊಪ್ಪಿಕರ ರೋಡ, ಚೆನ್ನಮ್ಮಾ ವರ್ತುಲ ಸುತ್ತುವರೆದು ಹಾಗೂ ಹಳೆ ಬಸ್ ನಿಲ್ದಾಣ ಎದುರಿನಿಂದ ಹಾಯ್ದು ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಂಡಿತು.
ಸಮಿತಿ ಮುಖ್ಯ ವಕ್ತಾರ ಪ್ರಮಿಲಾ ತಾಯಿಜೀ ಮೇಢೆ, ಸರ್ವಾಽಕಾರಿ ಅಲಕಾ ಇನಾಮದಾರ, ವರ್ಗ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಶಾಂತಕ್ಕಾ ಮುಂತಾದವರು ಇದ್ದರು.