
ಬೆಂಗಳೂರು: ಸಂಸ್ಕಾರ ಭಾರತೀಯ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ವತಿಯಿಂದ “ಕೃಷ್ಣಾರ್ಜುನ (ಗಯ ಚರಿತ್ರೆ)” ಯಕ್ಷಗಾನ ಪ್ರಸಂಗವನ್ನು ಇಲ್ಲಿನ ಕತ್ತರಿಗುಪ್ಪೆ ಮುಖ್ಯರಸ್ತೆ, ಐಟಿಐ ಬಡಾವಣೆಯ ಶ್ರೀ ಕೃಷ್ಣ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಏಪ್ರಿಲ್ 22ರಂದು ಏರ್ಪಡಿಸಿಲಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ರುಕ್ಮಾಂಗದ ನಾಯ್ಡು ರವರು ಘನ ಉಪಸ್ಥಿತಿಯನ್ನು ವಹಿಸಿದ್ದರು. ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತದ ಸಹ ಮಹಾಮಂತ್ರಿಗಳಾದ ಶ್ರೀಪತಿ ಅವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀಮತಿ ವೇದಾಭಟ್ ರವರು ವೇದಿಕೆಯನ್ನು ಅಲಂಕರಿಸಿದ್ದರು.
ಖ್ಯಾತ ಯಕ್ಷಗಾನ ಕಲಾವಿದರಾದ ಕೇಶವ ಹೆಗಡೆ, ಎ ಪಿ ಪಾಠಕ್, ಗಣೇಶ್ ಗಾಂವ್ಕರ್ ಹಿಮ್ಮೇಳದ ಸಾರಥ್ಯವನ್ನು ವಹಿಸಿದ್ದರು. ಮುಮ್ಮೇಳದಲ್ಲಿ ಕೆ. ಜಿ.ಮಂಜುನಾಥ, ಅಶೋಕ ಭಟ್ಟ, ಉದಯ ಹೆಗಡೆ, ಸದಾಶಿವ ಭಟ್ಟ, ಅಂಬರೀಶ ಭಟ್ಟ, ಪ್ರಶಾಂತ ವರ್ಧನ, ಕುಮಾರಿ ಇಳಾ ಇವರು ಪಾತ್ರದ ಪ್ರೇಕ್ಷಕರ ಮನಗೆದ್ದರು.
ಸುಮಾರು 250ಕ್ಕೂ ಹೆಚ್ಚು ಕಲಾಭಿಮಾನಿಗಳು ಪ್ರಸಂಗವನ್ನು ವೀಕ್ಷಿಸಿದ್ದಲ್ಲದೇ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಮುಂದಿನ ದಿನಗಳಲ್ಲಿ ಉಳಿಸಿ ಬೆಳೆಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಂಘಟನೆಯು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದಕ್ಕಾಗಿ ಅನೇಕ ಹಿರಿಯರು, ಕಲಾ ಪೋಷಕರು ತುಂಬು ಹೃದಯದಿಂದ ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ನಾಡಿನ ಬಹುಶೃತ ವಿದ್ವಾಂಸರಾದ ಡಾ. ಎಸ್.ಆರ್. ಲೀಲಾ ಅವರು ಹಾಗೂ ಹಿರಿಯ ಪ್ರಚಾರಕರಾದ ಪ.ರಾ.ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.

ಸಂಸ್ಕಾರ ಭಾರತಿ ಸಂಘಟನೆಯ ಕುರಿತು: ಸಂಘಟನೆಯು ಕಲೆ ಹಾಗೂ ಸಾಹಿತ್ಯಕ್ಕಾಗಿ ಸಮರ್ಪಿತವಾದ ಅಖಿಲ ಭಾರತೀಯ ಸಂಘಟನೆ. ಕಲೆ ವಿಲಾಸಕ್ಕಾಗಿ ಅಲ್ಲ ಆತ್ಮ ವಿಕಾಸಕ್ಕಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರಾದ್ಯಂತ ನಾಲ್ಕು ದಶಕಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಕಲಾವಿದರು, ಕಲಾರಸಿಕರು ಹಾಗೂ ಕಲಾ ಪೋಷಕರನ್ನು ಒಳಗೊಂಡಂತೆ ಕಲಾ ವಲಯದಲ್ಲಿ ಅನೇಕ ವಿಧದ ಕಲಾ ಪ್ರಕಾರಗಳನ್ನು ಸಮಾಜಕ್ಕೆ ತಲುಪಿಸುವ ಕೊಂಡಿಯಾಗಿದೆ.
ಸಂಸ್ಕಾರ ಭಾರತೀ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಪ್ರತಿ ತಿಂಗಳು ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.