ಇಂದು ಶೇ 97ರಷ್ಟು ಜಗತ್ತಿನ ಬೌದ್ಧರು ಏಷ್ಯಾ ಖಂದಲ್ಲೇ ಇದ್ದಾರೆ. ಅಲ್ಲದೆ ಭೂತಾನ್, ಮೈಯನ್ಮಾರ್, ಥಾಯ್ಲಾಂಡ್ ಮತ್ತು ಶ್ರೀ ಲಂಕಾಗಳಂತೂ ಬೌದ್ಧ ಧರ್ಮವನ್ನ ತಮ್ಮ ರಾಷ್ಟ್ರೀಯ ಮೌಲ್ಯಗಳ ಅಡಿಪಾಯವನ್ನಾಗಿಸಿಕೊಂಡು ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟಿಕೊಂಡಿದ್ದಾರೆ.
ಭಾರತವಂತೂ ಸ್ವಾತಂತ್ರ್ಯ ಬಂದ ನಂತರದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಸೇನೆಯ ಬಲದ ಆಧಾರದ ಮೇಲಲ್ಲ ಬದಲಾಗಿ ಸಾಂಸ್ಕೃತಿಕ ಹಾಗು ಐತಿಹಾಸಿಕ ಸಂಬಂಧಗಳ ಆಧಾರದ ಮೇಲೆ ನೀತಿ ನಿರೂಪಣೆಯನ್ನು ಕಟ್ಟಿಕೊಳ್ಳುವಲ್ಲಿ ಅತ್ಯಂತ ಉತ್ಸುಕತೆಯನ್ನು ಹೊಂದಿದೆ.
ಮೋದಿ ಸರಕಾರದ ವಿದೇಶಾಂಗ ನೀತಿಯನ್ನು ಸೂಚಿಸುವ ಐದು ತತ್ತ್ವಗಳನ್ನು ನೋಡಿದಾಗ ‘ಸಂಸ್ಕೃತಿ ಏವಂ ಸಭ್ಯತಾ’ ಎನ್ನುವ ಕುರಿತು ಬಹಳ ಮಹತ್ವವನ್ನು ನೀಡಲಾಗುತ್ತದೆ ಅಂದರೆ ವಿದೇಶಾಂಗ ನೀತಿ ನಿರೂಪಣೆಗಳ ದೃಷ್ಟಿಯಿಂದ ಭಾರತ ತನ್ನ ಐತಿಹಾಸಿಕ ಮತ್ತು ಸಾಂಸ್ಕೃತಿಕವಾದದ ಮೇಲೆ ಅವಲಂಬನೆಗೊಂಡಿರುವುದಲ್ಲದೆ ಅನ್ಯನ್ಯ ದೇಶಗಳ ಜೊತೆಗೆ ತನ್ನ ‘ಸಾಫ್ಟ್ ಪವರ್ ಸ್ಟ್ರಾಟಜಿ’ಯ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ.
ಹಾಗೆ ನೋಡಿದರೆ ಬೌದ್ಧ ಧರ್ಮದ ತವರು ಭಾರತ,ಸ್ವತಃ ಭಗವಾನ್ ಬುದ್ಧ ತನ್ನ ಚರಣಸ್ಪರ್ಶದಿಂದ ಪಾವನಗೊಳಿಸಿದ ನಾಡು.ಅಷ್ಟು ಮಾತ್ರವೇ ಅಲ್ಲದೆ ಬೌದ್ಧ ಧರ್ಮದ ಅನೇಕ ತೀರ್ಥಗಳು ಅಂದರೆ ಗಯಾ,ಸಾರಾನಾಥ,ನಲಂದಾಗಳು ಭಾರತದಲ್ಲಿದೆ.ಮತ್ತು ಈ ತೀರ್ಥಗಳ ಕುರಿತಾಗಿ ಜಗತ್ತಿನಾದ್ಯಂತ ನೆಲೆಸಿರುವ ಬೌದ್ಧರಿಗೆ ಅತ್ಯಂತ ಶ್ರದ್ಧೆ ನೆಲೆಗೊಂಡಿದೆ.ಇದೇ ನಿಟ್ಟಿನಲ್ಲಿ ಬೌದ್ಧ ಧರ್ಮವನ್ನು ತಮ್ಮ ರಾಷ್ಟ್ರೀಯ ಅಸ್ಮಿತೆಯನ್ನಾಗಿ ಮಾಡಿಕೊಂಡಿರುವ ಅನೇಕ ದೇಶಗಳಿಗೆ ಭಾರತ ಶ್ರದ್ಧಾಕೇಂದ್ರ,ಕೇವಲ ರಾಜನೀತಿಯ ದೃಷ್ಟಿಯಿಂದಲ್ಲದೆ ಮಾನಸಿಕವಾಗಿ, ಸಾಂಸ್ಕೃತಿಕವಾಗಿ ಭಾರತದೊಂದಿಗೆ ಅನೇಕ ಶತಮಾನಗಳಿಂದ ಬಂಧವನ್ನು ಬೆಸೆದುಕೊಂಡಿರುವುದನ್ನು ನಾವು ಕಾಣಬಹುದು.
ಕೇವಲ ಪುರಾತನ ಬಂಧಗಳಷ್ಟೇ ಅಲ್ಲದೆ ಭಾರತವು ಪ್ರಸ್ತುತ ಬೌದ್ಧ ಧರ್ಮಕ್ಕೆ ಆಶ್ರಯವಾಗಿ, ಪೋಷಕ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.ಭಾರತವು ಬೇರೆ ಬೇರೆ ದೇಶಗಳಿಂದ ವಲಸಿಗರಾಗಿ, ಶರಣಾರ್ಥಿಗಳಾಗಿ ಬಂದವರಿಗೆ ನೆಲೆಯಾಗಿದೆ.ಅದರಲ್ಲೂ ಪ್ರಮುಖವಾಗಿ ಚೀನಾದ ಆಕ್ರಮಣಕ್ಕೆ ತುತ್ತಾದ ದಲೈಲಾಮಾ ಮತ್ತಿತರ ಬೌದ್ಧ ಮಿಷನರಿಗಳನ್ನು ಚೀನಾದ ವಕ್ರ ದೃಷ್ಟಿಯಿದ್ದಾಗ್ಯೂ ರಕ್ಷಣೆ ಮಾಡಿದೆ.
ಚೀನಾ ತನ್ನ ಬುದ್ಧಿಸಂನ ಮೌಲ್ಯಗಳು ಮತ್ತು ತಿರುಚಿದ ತತ್ತ್ವಗಳನ್ನಷ್ಟೇ ತನಗೆ ಬೇಕಾದಂತೆ ಅಳವಡಿಸಿಕೊಂಡು ಬುದ್ಧನ ಎಲ್ಲ ತತ್ತ್ವಗಳನ್ನು ಗಾಳಿಗೆ ತೂರಿ ದಲೈಲಾಮರನ್ನು ವಲಸೆ ಹೋಗುವಂತೆ ಮಾಡಿದ್ದರೆ ಭಾರತ ತನ್ನ ಬೌದ್ಧರನ್ನ ತನ್ನ ವಜ್ರ ಮುಷ್ಠಿಯಲ್ಲಿಟ್ಟು ಕಾಪಾಡಿದೆ.
ಬರೀ ಕಾಪಾಡುವುದು ಮಾತ್ರವಲ್ಲ 1952ರಿಂದ ಇಲ್ಲಿಯವರೆಗೆ ಭಾರತದಲ್ಲಿ ಅನೇಕ ದೊಡ್ಡ ಬೌದ್ಧ ಸಮ್ಮೇಳನಗಳು ನಡೆದಿದ್ದು ಸಾವಿರಾರು ಲಕ್ಷಾಂತರ ಸಂಖ್ಯೆಯ ಬೌದ್ಧರು ಸುಮಾರು ನಲವತ್ತು ದೇಶಗಳಿಂದ ಭಾಗವಹಿಸಿದ್ದಾರೆ.
ಅಷ್ಟು ಮಾತ್ರವೇ ಅಲ್ಲ ಸಾಮರಸ್ಯದ ಸಲುವಾಗಿ ಅನೇಕ ದೇಶಗಳ ಸಹಭಾಗಿತ್ವದಲ್ಲಿ ನಲಂದಾ ವಿಶ್ವವಿದ್ಯಾಲಯದ ಮೂಲಕ ‘Hindu-Buddhist Initiative on Conflict Avoidance’,ನ ಅಭಿಯಾನಗಳು ಆರಂಭಗೊಂಡಿದ್ದು ಇಡಿಯ ಏಷ್ಯಾದಲ್ಲಿನ ನಾಗರೀಕತೆಯಲ್ಲಿ ಮತ್ತೆ ಭಾರತದ ನೇತೃತ್ವದಲ್ಲಿ ಏಷ್ಯಾ ಕೇಂದ್ರಿತವಾದ ಸಾಂಸ್ಕೃತಿಕ ಪುನರುತ್ಥಾನದ ಪರ್ವಕ್ಕೆ ಮುನ್ನುಡಿಯಾಗಲಿದೆ.
ಪರಸ್ಪರ ಸಹಕಾರ,ಅಭಿವೃದ್ಧಿಗೆ ಒತ್ತು ನೀಡುತ್ತಾ ವೈರತ್ವವನ್ನು ತೆಗೆದುಹಾಕಿ,ಅಧಿಪತ್ಯವನ್ನು ನಡೆಸದೆ ಬೌದ್ಧ ಧರ್ಮಕ್ಕೂ ಮತ್ತು ಭಾರತಕ್ಕೂ ಬಲವರ್ಧನೆಯಾಗುವ ನಿಟ್ಟಿನಲ್ಲಿ ,ಹಾಗು ಹೊಸ ಶತಮಾನದ ಸವಾಲುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ವಿದೇಶಾಂಗ ನೀತಿಯ ನಿರೂಪಣೆ ಇಂದಿನ ದಿನಮಾನದ ಅಗತ್ಯತೆ ಹಾಗು ಆದ್ಯತೆ.ಇದನ್ನೇ ಚಿಂತಕರಾದ ದೀನ್ದಯಾಳ್ ಉಪಾಧ್ಯಾಯರು ಸಾಂಸ್ಕೃತಿಕ ರಾಷ್ಟ್ರವಾದ ಎಂದು ಕರೆದದ್ದು.
ಭಾರತವು,ಚೀನಾದ ಆಕ್ರಮಣಕಾರಿ ನೀತಿಗಳಿಗೆ ತಕ್ಕ ಉತ್ತರ ನೀಡುವ ಸಲುವಾಗಿ,ಏಷ್ಯಾದ ಇತರ ದೇಶಗಳೊಟ್ಟಿಗೆ ತಮ್ಮ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ,ತಮ್ಮ ಪ್ರಾದೇಶಿಕ ಮತ್ತು ಜಾಗತಿಕ ಬಲಾಬಲಗಳ ಸಮೀಕರಣದ ಹಾದಿಯನ್ನು ಸುಗಮಗೊಳಿಸುವ ಕಡೆಗೆ ಸಹಾಯಕವಾಗುವಂತೆ ಭಾರತವು ಬೌದ್ಧ ರಾಷ್ಟ್ರಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ ಪುರಾತನವಾದ ಸಾಂಸ್ಕೃತಿಕ ಪರಿವಾರವನ್ನು ಒಟ್ಟಾಗಿಸಿಕೊಂಡು ಮುನ್ನಡೆಯುವ ಕಡೆಗೆ ಭಾರತ ಹೆಜ್ಜೆ ಹಾಕಿದಾಗ ಜಗತ್ತು ಶಾಂತಿಯ ಕಡೆಗೆ ಮತ್ತೊಂದು ಹೆಜ್ಜೆ ಹತ್ತಿರವಾಗುತ್ತದೆ.
Prashant Vaidyaraj,editor, Samvada world