ಲೇಖಕರು: ಪೃಥ್ವೀಶ್ ಧರ್ಮಸ್ಥಳ, ವಕೀಲರು

ಭಾರತ ಜಗತ್ತಿನ ಅತ್ಯಂತ ಬೃಹತ್ ಪ್ರಜಾಪ್ರಭುತ್ವದ ರಾಷ್ಟ್ರ. ಹಲವು ಭಾಷೆ, ಜಾತಿ, ಮತ, ಪಂಗಡಗಳಿದ್ದರೂ ಅವರೆಲ್ಲರ ಯೋಗಕ್ಷೇಮವನ್ನು, ಹಕ್ಕುಗಳನ್ನು ನೀಡಿರುವ ವಿಶಿಷ್ಠವಾದ ಸಂವಿಧಾನ ನಮ್ಮದು. ಅಂತಹ ಸಂವಿಧಾನಕ್ಕೆ ಈಗ 75 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ನಾಡಿನ ಭವಿಷ್ಯವನ್ನು ನಿರ್ಮಿಸುವ ಯುವಕರು ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕಾದ ಅಗತ್ಯತೆಯನ್ನು ಅರಿಯಬೇಕಿದೆ.

ಈ ದೇಶದ ವಿಶೇಷತೆ ಏನೆಂದರೆ ಜನರು ರಾಮಾಯಣ ಓದದೆಯೇ ಅದರ ಕಥೆ ತಿಳಿದುಕೊಂಡಿರುತ್ತಾರೆ. ಮಹಾಭಾರತ – ಭಗವದ್ಗೀತೆ ಓದಿತಿಳಿಯದೆಯೇ ಅದರಲ್ಲಿನ ಪಾತ್ರಗಳು, ಸನ್ನಿವೇಶಗಳು, ಉಪಕಥೆಗಳು, ಕೃಷ್ಣನ ಉಪದೇಶಗಳನ್ನು ಅರಿತುಕೊಂಡಿರುತ್ತಾರೆ. ಪುರಾಣ – ಇತಿಹಾಸದ ಉದಾಹರಣೆಗಳನ್ನೂ ಬಲ್ಲವರಿದ್ದಾರೆ. ಅದೇ ರೀತಿ ಭಾರತದ ಸಂವಿಧಾನವನ್ನೂ, ಅದರಲ್ಲಿನ ಹಕ್ಕುಗಳ ಕುರಿತು ಪ್ರತಿಪಾದಿಸುತ್ತಾರೆ. ಕರ್ತವ್ಯಗಳೊಂದಿಗೆ ವ್ಯವಹರಿಸುತ್ತಾರೆ. ಏಕೆಂದರೆ ರಾಮಾಯಣ ಮಹಾಭಾರತದಂತೆ ಸಂವಿಧಾನವು ವ್ಯಕ್ತಿ ಮತ್ತು ರಾಷ್ಟ್ರದ ಜೀವನ ಮೌಲ್ಯವಾಗಿದೆ. ಅನೇಕ ವರ್ಷಗಳ ದಾಸ್ಯದ ಸಂಕೋಲೆ ಕಳಚಿ ಬಿದ್ದಾಗ ರಾಷ್ಟ್ರೀಯ ಹೃದಯಗಳಲ್ಲಿ ಚಿಮ್ಮಿದ ಸ್ವಾಭಿಮಾನ, ಸ್ವಾಯತ್ತತೆ, ಆತ್ಮಗೌರವ, ಜ್ಞಾನ ಮತ್ತು ನಾಡಿನ ಅಸ್ಮಿತೆಯ ದರ್ಶನವಾಗಿ ಈ ದೇಶದ ಸಂವಿಧಾನ ನಿಂತಿದೆ.
ಭಾರತದ ಸಂವಿಧಾನವು ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ಪ್ರಜೆಗೂ ತನ್ನ ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನೆನಪಿಸುವುದರ ಜೊತೆಗೆ ಗಣತಂತ್ರ ವ್ಯವಸ್ಥೆಯನ್ನು ಮುನ್ನಡೆಸಲು ದಾರಿದೀಪದಂತೆ ಕಾರ್ಯನಿರ್ವಹಿಸುತ್ತದೆ. ಅದರ ಮೂಲಕ ಈ ನಾಡಿನ ಅಂತಿಮ ವ್ಯಕ್ತಿಯೂ ಧೈರ್ಯವಾಗಿ ತಮ್ಮ ಹಕ್ಕನ್ನು ಪಾಲಿಸುವ ಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ರಾಷ್ಟ್ರನಿರ್ಮಾಣಕ್ಕೆ ಮುಖ್ಯವಾಗಿ ಯುವಜನತೆಯು ಸಂವಿಧಾನ ನೀಡುವ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಭಾರತೀಯ ಸನಾತನ ಸಂಸ್ಕೃತಿಯ ಪ್ರತಿರೂಪದಂತೆ ಸಂವಿಧಾನವನ್ನು ರಚಿಸಲಾಗಿದ್ದು, ಈ ನೆಲದ ಆದರ್ಶ ಪುರುಷರಾದ ರಾಮ-ಕೃಷ್ಣ-ಬುದ್ಧರು ಮತ್ತು ಋಷಿ-ಮುನಿಗಳು ನೀಡಿದ ಸಂದೇಶಗಳೇ ಸಾಮಾಜಿಕ ಜವಾಬ್ದಾರಿಯಾಗಿ ಸಂವಿಧಾನದಲ್ಲಿ ಕಾಣಬಹುದು. ಸಂವಿಧಾನ ನೀಡಿರುವ ಹಕ್ಕುಗಳಲ್ಲಿ ಸಮಾನತೆಯ ಹಕ್ಕು. ಸ್ವಾತಂತ್ರ್ಯದ ಹಕ್ಕು, ಕಡ್ಡಾಯ ಶಿಕ್ಷಣದ ಹಕ್ಕು, ಸಾಂಸ್ಕೃತಿಕ ಹಕ್ಕು, ಧಾರ್ಮಿಕ ಹಕ್ಕುಗಳು ಪ್ರಮುಖವಾಗಿದ್ದು, ಇವೆಲ್ಲವೂ ಈ ರಾಷ್ಟ್ರದ ಜನ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆಗಿದೆ.
ಒಬ್ಬ ವ್ಯಕ್ತಿಯ ಹುಟ್ಟು, ಆತನ ಬಣ್ಣ, ಹುಟ್ಟಿದ ಜಾಗ, ಹುಟ್ಟಿದ ಜಾತಿ, ಲಿಂಗ, ಆಡುವ ಭಾಷೆ, ಉಡುಗೆ-ತೊಡುಗೆಯಿಂದ ಆತನನ್ನು ಅವಮಾನಿಸುವುದು ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯವಾಗಿ ಬಿಡುತ್ತದೆ. ಇತ್ತೀಚಿಗೆ ಕೊಪ್ಪಳದ ಮರಕುಂಬಿ ಪ್ರಕರಣದ ಕುರಿತಾಗಿ ಕೋರ್ಟ್ ನೀಡಿದ ತೀರ್ಪು ನಮಗೆ ತಿಳಿದಿರಬಹುದು. ಆದ್ದರಿಂದ ಯುವಜನತೆಯು ಸಾಮಾಜಿಕ ಪಿಡುಗುಗಳಿಂದ ಮೇಲೆದ್ದು ಸಮಾಜ ಮತ್ತು ವ್ಯಕ್ತಿಗಳ ಮಧ್ಯೆ ಸೇತುವೆಯಂತೆ ಕೆಲಸಮಾಡಬೇಕಿದೆ. ಸಮಾಜದಲ್ಲಿ ನಡೆಯುವ ಅಸಮಾನತೆ ಮತ್ತು ಶೋಷಣೆಯ ವಿರುದ್ಧವಾಗಿ ಹೋರಾಡಲು ಸಂವಿಧಾನವನ್ನು ಧ್ವನಿಯಾಗಿಸಿಕೊಳ್ಳಬೇಕು.


ಸಂವಿಧಾನ ತನಗೆ ನೀಡಿರುವ ಜವಾಬ್ದಾರಿ ಕೇವಲ ಹಕ್ಕು-ಕರ್ತವ್ಯಗಳ ನಿರ್ವಹಣೆ ಮಾತ್ರವಲ್ಲದೆ, ಸಮಾಜ ನಿರ್ಮಾಣದ ಕಾರ್ಯವನ್ನು ಉಲ್ಲೇಖಿಸಲಾಗಿದೆ. ರಾಷ್ಟ್ರದ ಏಳಿಗೆ, ಅಭಿವೃದ್ಧಿ, ಸಾರ್ವಭೌಮತ್ವ, ಗೌರವ, ಸ್ವಾಭಿಮಾನದ ರಕ್ಷಣೆ ಮತ್ತು ಅದನ್ನು ಕಾಪಾಡಿಕೊಳ್ಳುವುದು ಹಾಗೂ ಈ ಮೂಲಕ ಇತರರಲ್ಲಿ ಜಾಗೃತಿಗೊಳಿಸಬಹುದು. ನಮ್ಮ ವೇದ – ಪುರಾಣಗಳಲ್ಲಿ ಹೇಳಿರುವಂತೆಯೇ ನಮ್ಮ ಪರಿಸರ, ಸುತ್ತಲಿನ ವಾತಾವರಣ, ಅರಣ್ಯ, ನದಿ, ಪ್ರಾಣಿ – ಸಂಕುಲಗಳನ್ನು ಪ್ರೀತಿಸಿ ಪೋಷಿಸುವುದು ಸಂವಿಧಾನದ ಜವಾಬ್ದಾರಿಯಾಗಿರುತ್ತದೆ.


ಭಾರತದ ಸಂವಿಧಾನ ನಮಗೆ ನೀಡಿರುವ ಅತೀ ದೊಡ್ಡ ಶಕ್ತಿ ಎಂದರೆ ಮತದಾನದ ಹಕ್ಕು. ಯಾವುದೇ ಲಿಂಗ ತಾರತಮ್ಯವಿಲ್ಲದೇ ಈ ನಾಡಿನ ಭವಿತವ್ಯಕ್ಕೆ ತಮ್ಮ ಮತಗಳ ಮೂಲಕ ಎಲ್ಲಾ ನಾಗರಿಕರೂ ಶ್ರಮಿಸಬಹುದು ಎನ್ನುವುದನ್ನು ಎಲ್ಲರಿಗೂ ನೀಡಿದ ಮತದಾನದ ಹಕ್ಕು ತಿಳಿಸಿಕೊಡುತ್ತದೆ. ಸಕ್ರಿಯ ಪೌರತ್ವದ ಕಾರಣದಿಂದ ಯಶಸ್ವಿ ಪ್ರಜಾಪ್ರಭುತ್ವದ ಆಚರಣೆ ಸಾಧ್ಯ ಎಂಬ ಪ್ರಾಜ್ಞರ ನುಡಿಯಂತೆ ಮತದಾನದಲ್ಲಿ ಭಾಗವಹಿಸುವುದಲ್ಲದೆ, ಆಯಾ ಹಂತದ ಸರ್ಕಾರಗಳ ಅಗತ್ಯ ಚರ್ಚೆಗಳಲ್ಲಿ ಭಾಗವಹಿಸಬಹುದು, ಕಾನೂನು ರಚನೆಗಳಲ್ಲಿ ಪಾಲು ಪಡೆಯಬಹುದು, ನಾವು ಮತದಾನ ಮಾಡುವುದು ನಮ್ಮ ಹಕ್ಕು ಎಂದಾದರೆ ಇತರರನ್ನು ಮತದಾನಕ್ಕೆ ಪ್ರೇರೇಪಿಸುವುದು ಖಂಡಿತವಾಗಿಯೂ ನಮ್ಮ ಜವಾಬ್ದಾರಿಯೇ ಆಗಿರುತ್ತದೆ.

ಯುವನಾಯಕತ್ವಕ್ಕಾಗಿ ಸಂವಿಧಾನ:
ಸಂವಿಧಾನದ ಜ್ಞಾನವು ಯುವನಾಯಕತ್ವವನ್ನು ಸೃಷ್ಟಿಸುತ್ತದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜಸೇವೆಯ ಮೂಲಕ ಪಾರದರ್ಶಕ ನಾಯಕತ್ವ ಸಂವಿಧಾನದಲ್ಲಿದೆ. ಸಂವಿಧಾನದ 13ನೇ ವಿಧಿಯು ಹೇಳುವಂತೆ ಯಾವೊಬ್ಬ ವ್ಯಕ್ತಿಯು ಕಾನೂನುಗಿಂತ ಮಿಗಿಲಲ್ಲ. ಏಕೆಂದರೆ ಸಂವಿಧಾನ ಮತ್ತು ಕಾನೂನು ಯಾವುದೇ ವ್ಯಕ್ತಿ ಕೇಂದ್ರಿತವಾಗಿಲ್ಲ ಬದಲಾಗಿ ತತ್ತ್ವ ಕೇಂದ್ರಿತವಾಗಿದೆ. ಹಾಗಾಗಿ ಇದನ್ನ ‘ರೂಲ್ ಆಫ್ ಲಾ’ ಎಂದು ಗುರುತಿಸುತ್ತಾರೆ. ಕೆಲವೊಂದು ಸಾಮಾಜಿಕ ನ್ಯಾಯಕ್ಕಾಗಿ, ಕೆಲವು ವರ್ಗಗಳನ್ನು ಸಮಾಜದ ಮೇಲಿನ ಹಂತಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಏಳಿಗೆಗಾಗಿ 15 ಮತ್ತು 16ನೇ ವಿಧಿಯಲ್ಲಿ ಮೀಸಲಾತಿಯ (Reservation) ಉಲ್ಲೇಖವನ್ನು ಕೂಡ ಕಾಣಬಹುದು. ಯುವ ಸಮುದಾಯ ತಪ್ಪು ಮತ್ತು ಕೆಟ್ಟ ದಾರಿ ಹಿಡಿಯಬಾರದೆನ್ನುವ ಉದ್ದೇಶದಿಂದ ಸತ್ಯ ಮತ್ತು ಪಾರದರ್ಶಕತೆಯ ಅಡಿಪಾಯದಲ್ಲಿ ಸಾಂವಿಧಾನಿಕ ತತ್ತ್ವಗಳನ್ನು ಜೋಡಿಸಲಾಗಿದೆ, ಇತರರನ್ನು ತಪ್ಪು ದಾರಿಗೆ ಎಳೆಯುವುದು, ತಪ್ಪು ಮಾಹಿತಿ ನೀಡುವುದು, ಸಮಾಜ ಹಿತಕ್ಕೆ ಮಾರಕವಾಗುವ ಸಂಗತಿಗಳನ್ನು ಬದಿಗಿಟ್ಟು ಸಂಪೂರ್ಣ ಜ್ಞಾನಕ್ಕಾಗಿ ಯುವಜನತೆ ಸಂವಿಧಾನದ ಕಡೆಗೆ ಮುಖಮಾಡಬೇಕಿದೆ. ಈ ದೇಶದಲ್ಲಿ ಯಾವುದೇ ಹೊಸ ಕಾನೂನು ನಿಯಮಗಳು ಜಾರಿಯಾದರೂ ಅದು ಸಂವಿಧಾನಬದ್ಧವಾಗಿರಬೇಕು ಮತ್ತು ಸಂವಿಧಾನದ ಹಿತ ಕಾಪಾಡುವಂತಿರಬೇಕು. ದೇಶದ ಯಾವುದೇ ಕೋರ್ಟ್- ಕಛೇರಿ, ಸರಕಾರಿ ಕೇಂದ್ರಗಳೇ ಆಗಲಿ ಸಂವಿಧಾನದ ಆಶಯದಂತೆಯೇ ಕಾರ್ಯ ನಿರ್ವಹಿಸಬೇಕಿದೆ. ಯಾವುದೇ ಕಾನೂನು ಸಂವಿಧಾನ ಆಶಯದ ವಿರುದ್ಧವಾಗಿ ಹೋಗುವಂತಿಲ್ಲ.


ಹಿಂದೆ ಚೀನಾ ದೇಶವನ್ನು ಯಂಗ್ ಚೀನಾ ಎಂದು ಕರೆಯುತ್ತಿದ್ದರು ಮತ್ತು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಚೀನಾ ದೇಶದಲ್ಲಿದ್ದರು. ಆದರೆ ಇಂದು ಭಾರತವನ್ನು ಯಂಗ್ ಇಂಡಿಯಾ ಎಂದು ಗುರುತಿಸುತ್ತಾರೆ. ಒಟ್ಟು ಜನಸಂಖ್ಯೆಯ ಶೇಕಡಾ 65ರಷ್ಟು ದುಡಿಯುವ ವರ್ಗ ನಮ್ಮ ದೇಶದಲ್ಲಿದ್ದಾರೆ. ಇವರೆಲ್ಲರನ್ನು ಭವಿಷ್ಯದ ನಾಯಕರನ್ನಾಗಿ ರೂಪುಗೊಳಿಸಲು ಸಾಂವಿಧಾನಿಕ ತತ್ತ್ವಗಳಿಂದ ಮಾತ್ರ ಸಾಧ್ಯ. ಯುವಕರು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಬೆಳೆಯಲು ಸಂವಿಧಾನದಲ್ಲಿ ಹೇಳಿರುವ ರಾಜ್ಯ ನಿರ್ದೇಶಕ ತತ್ವಗಳನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಸಾಮಾನ್ಯ ಪ್ರಜೆಯಿಂದ ಹಿಡಿದು ಈ ರಾಷ್ಟ್ರದ ಪ್ರಥಮ ಪ್ರಜೆಯವರೆಗೂ ಪ್ರತಿಯೊಬ್ಬರೂ ಮಾಡಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಂವಿಧಾನ ನೆನಪಿಸುತ್ತದೆ. ಸಂವಿಧಾನ ವಿಧಿ 17 ರಲ್ಲಿ ಅಸ್ಪೃಶ್ಯತೆ ಕುರಿತಾಗಿ ವಿವರಿಸಲಾಗಿದ್ದು ಪ್ರಸ್ತುತ ಭಾರತ ಬೆಳೆಯುತ್ತಿರುವ ವೇಗಕ್ಕೆ ಈ ರೀತಿಯ ಆಚರಣೆ ಬಹುದೊಡ್ಡ ಪಿಡುಗಾಗಿ ಕಾಡಬಹುದು. ವಿದ್ಯಾವಂತ ಯುವ ಸಮುದಾಯವು ಇವೆಲ್ಲವನ್ನು ಮೆಟ್ಟಿ ಮುಂದುವರಿಯಬೇಕು.

ಅಭಿವ್ಯಕ್ತಿ ಸ್ವಾತಂತ್ರ್ಯ ಮಿತಿಯಲ್ಲಿರಲಿ:
ಯುವಜನತೆ ವಿದ್ಯಾವಂತರಾದ ಕೂಡಲೇ ನನಗೆ ಸ್ವಾತಂತ್ರ್ಯವಿದೆ, ನನಗೆ ಹಕ್ಕುಗಳಿವೆ. ನನ್ನಲ್ಲಿ ಕಾನೂನು ಶಕ್ತಿಯಿದೆ, ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವಿದೆ ಎಂದು ಹೇಳುವುದು ಸಂವಿಧಾನಾತ್ಮಕವಾದುದ್ದೆ! ಭಾರತದ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು 19(1)(ಎ)ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ತನಗೆ ಹಕ್ಕು ಇದೆ ಎಂದ ಮಾತ್ರಕ್ಕೆ ತಾನು ಆಡಿದ್ದು ಮಾಡಿದ್ದೆಲ್ಲ ಸಿಂಧು ಆಗಲಾರದು. ಸಂವಿಧಾನ ಹಕ್ಕುಗಳನ್ನು ನೀಡುವುದರ ಜೊತೆಗೆ ಕೆಲವೊಂದು ಮಿತಿಗಳನ್ನೂ ಜೋಡಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆಯ ವಿಚಾರ ಬಂದಾಗ, ಸಾರ್ವಜನಿಕ ಕ್ರಮಗಳಲ್ಲಿ, ಸಾಮಾಜಿಕ ನೀತಿಯಲ್ಲಿ, ನ್ಯಾಯಾಯುತ ಪ್ರಕ್ರಿಯೆಯಲ್ಲಿ, ಧಾರ್ಮಿಕ ನಂಬಿಕೆಗಳ ವಿಚಾರ ಬಂದಾಗ ಯುವಜನತೆ ವಿಚಾರಗಳನ್ನು ವಿಶ್ಲೇಷಿಸಿ ತಮ್ಮ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಬಹುದು. ಸಂವಿಧಾನ ಓದಿನ ಕುರಿತಾಗಿ ಇಂದು ಸಮಾಜ ಜಾಗೃತ ಆಗಬೇಕಿದೆ, ಶಾಲಾ ಕಾಲೇಜುಗಳು ತಮ್ಮ ಪಠ್ಯಗಳಲ್ಲಿ ಸಂವಿಧಾನದ ಪ್ರಾರಂಭಿಕ ಜ್ಞಾನವನ್ನು ನೀಡಬೇಕು, ಮಾಧ್ಯಮ, ದೃಶ್ಯ, ಅಕ್ಷರ ಮಾಧ್ಯಮಗಳು ಇದರ ಕುರಿತಾದ ಧನಾತ್ಮಕ ಸಂಗತಿಗಳನ್ನು ಬಿತ್ತರಿಸಬೇಕು. ಒಬ್ಬ ಪ್ರಜೆಯನ್ನು ನಾಗರಿಕ ಶಿಷ್ಟಾಚಾರ ಪಾಲಿಸುವಂತೆ ಮಾಡುವುದೇ ನಾವು ಸಂವಿಧಾನಕ್ಕೆ ನೀಡುವ ಗೌರವವಾಗಿದೆ.


ಈ ನೆಲದ ಸಂಸ್ಕೃತಿಯಂತೆ ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಸಹಬಾಳ್ವೆ ಮತ್ತು ರಾಷ್ಟ್ರೀಯ ಒಗ್ಗೂಡುವಿಕೆ. ಬಡವ- ಬಲ್ಲಿದ, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಮೇಲ್ಟಾತಿ-ಕೀಲ್ದಾತಿ ಎನ್ನುವ ಧಾರ್ಮಿಕ ಸ್ವಾತಂತ್ರ್ಯದ ಉಲ್ಲೇಖವನ್ನು ಸಂವಿಧಾನ ವಿಧಿ 25 ರಿಂದ 28ರ ತನಕ ವಿವರಿಸಲಾಗಿದೆ. ಆದ್ದರಿಂದ ಸಂವಿಧಾನ ಈ ನೆಲದ ಮೂಲ ಸಂಸ್ಕೃತಿಯ ಕೈಗನ್ನಡಿಯಾಗಿದೆ. ರಾಷ್ಟ್ರೀಯ ಪುರುಷರ ಜೀವನದ ಸಂಗತಿಗಳು ಮತ್ತು ಅವರು ನಡೆದ ದಾರಿಯನ್ನೇ ಆಧಾರವಾಗಿಟ್ಟುಕೊಂಡು ಸಂವಿಧಾನದ ಮೂಲಕ ಹೊರತರಲಾಗಿದೆ. ಇಂದು ಸಂವಿಧಾನ ಎನ್ನುವುದು ಬರೇ ಕಾನೂನುಗಳ ಸಂತೆಯಲ್ಲ ಅದು ಸಾಮಾಜಿಕ ಜೀವನ ಮೌಲ್ಯವಾಗಿದೆ. ಅದಕ್ಕಾಗಿಯೇ ಮೂಲ ಸಂವಿಧಾನದಲ್ಲಿ ಈ ನಾಡಿನ ಮೌಲ್ಯಗಳ ಮೂರ್ತರೂಪವೇ ಆದ ಶ್ರೀರಾಮ ಮತ್ತು ಶ್ರೀಕೃಷ್ಣರ ಚಿತ್ರಗಳನ್ನು ನೀಡಿರುವುದು. ಅವರುಗಳು ತೋರಿದ ಮಾರ್ಗವನ್ನೇ ಪಾಲಿಸುತ್ತಾ ರಾಷ್ಟ್ರಧರ್ಮವನ್ನು ಉಳಿಸುವುದಕ್ಕಾಗಿ ಸಂವಿಧಾನವನ್ನು ರಚಿಸಲಾಗಿದೆ.


ಭಾರತದ ಸಂವಿಧಾನ – ಇದು ನನ್ನ ಸಂವಿಧಾನ ಎನ್ನುವ ಭಾವನೆ ಈ ನೆಲದ ಪ್ರತಿ ಪ್ರಜೆಗೂ ಬರಬೇಕು. ಸ್ವಾತಂತ್ರ್ಯ, ಸಮತೆ, ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಸತ್ತಾತ್ಮಕತೆ, ಗಣರಾಜ್ಯ ವ್ಯವಸ್ಥೆಯನ್ನು ಒಪ್ಪಿಕೊಂಡು ಈ ವಿಶಾಲ ಸಂವಿಧಾನವನ್ನು 26 ಜನವರಿ 1950ರಂದು ನಮ್ಮದಾಗಿಸಿಕೊಂಡಿದ್ದೇವೆ. ಅಂತಹ ಶ್ರೇಷ್ಠವಾದ ಸಂವಿಧಾನವನ್ನು ಪಡೆದು ಇಂದಿಗೆ 75 ವರ್ಷಗಳು ಸಂದಿವೆ. ಭಾರತ ಸ್ವಾತಂತ್ರ್ಯಗೊಂಡು 100ನೇ ವರ್ಷ ಆಚರಿಸುವ ಹೊತ್ತಿಗೆ ಸಂವಿಧಾನವನ್ನು ನಿಜ ರೀತಿಯಲ್ಲಿ ಅರ್ಥೈಸಿಕೊಂಡು, ಅದಕ್ಕನುಸಾರವಾಗಿ ಜೀವನವನ್ನು ಸಾಗಿಸುವ ಮೂಲಕ ಸಮರ್ಥ ರಾಷ್ಟ್ರವನ್ನು ಕಟ್ಟುವ ಪ್ರಯತ್ನಗಳಾಗಬೇಕು.

(ಪುಂಗವ ಪಾಕ್ಷಿಕದ ಡಿಸೆಂಬರ್ 1, 2024ರ ಸಂಚಿಕೆಯ ಮುಖಪುಟ ಲೇಖನ)

Leave a Reply

Your email address will not be published.

This site uses Akismet to reduce spam. Learn how your comment data is processed.