An article by Sri Sandeep Balakrishna in Today’s Kannada Prabha. January 10, 2013
ಬೇಜವಾಬ್ದಾರಿ ನಡೆ ಮಾಧ್ಯಮಗಳದ್ದಲ್ಲವೇ?
ಮೋಹನ್ ಭಾಗವತ್ ಅವರ ಪ್ರಕರಣ, ಭಾರತದ ಮಾಧ್ಯಮಗಳೂ ಕೂಡ ಅನೈತಿಕ ಮಾರ್ಗದಲ್ಲಿ ನಡೆಯುತ್ತಿವೆ ಎನ್ನುವುದನ್ನು ಇನ್ನೊಮ್ಮೆ ಸಾಬೀತು ಮಾಡಿದೆ. ರಾಡಿಯಾಗೇಟ್ ವಿಷಯದ ಬಗ್ಗೆ ಅವು ನಡೆದುಕೊಂಡ ರೀತಿ ನೋಡಿದಾಗ, ಅವು ಹದ್ದು ಮೀರಿ ವರ್ತಿಸುತ್ತಿವೆ ಎನ್ನುವುದು ಸಾಬೀತಾಗಿತ್ತು. ಒಂದು ಬಾರಿ ನಾಚಿಕೆ ಬಿಟ್ಟ ವ್ಯಕ್ತಿ, ಮುಂದಿನ ಬಾರಿ ಅದಕ್ಕಿಂತಲೂ ಹೀನ ಕೆಲಸಕ್ಕೆ ಮುಂದಾಗುತ್ತಾನೆ ಎನ್ನುವುದಕ್ಕೆ ಇವುಗಳ ವರ್ತನೆಯೇ ಸಾಕ್ಷಿ. ಇದೂ ಒಂದು ರೀತಿಯಲ್ಲಿ ಮಾದಕ ವ್ಯಸನದಂತೆಯೇ? ನನಗೂ ಸ್ಪಷ್ಟವಾಗಿ ಗೊತ್ತಿಲ್ಲ. ಬರ್ಖಾದತ್‌ರಂಥವರನ್ನು ಕೇಳಿದರೆ ಉತ್ತರ ದೊರಕೀತು!. ಈಗ ಮಾಧ್ಯಮಗಳ ’ಹಾಲ್ ಆಫ್ ಶೇಮ್’ನಲ್ಲಿ ಹೊಸತಾಗಿ ಸೇರ್ಪಡೆಯಾಗಿರುವುದು ಏಷಿಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಎನ್‌ಐ) ಸಂಸ್ಥೆ. ಮೋಹನ್ ಭಾಗವತ್‌ರ ಭಾಷಣವನ್ನು ತಿರುಚಿ, ತಾನು ತೋರಿಸಿದ್ದೇ ಭಾಗವತ್‌ರ ನೈಜ ದೃಷ್ಟಿಕೋನ ಎಂಬಂತೆ ಬಿಂಬಿಸಿಬಿಟ್ಟಿತು.
ಸಹಜವಾಗಿಯೇ ನಿರೀಕ್ಷಿತ ಪರಿಣಾಮಗಳು ಎದುರಾದವು. ಇಂಗ್ಲಿಷ್ ಸುದ್ದಿವಾಹಿನಿಗಳೆಲ್ಲವೂ ಈ ಸುದ್ದಿಯನ್ನು ಹಿಡಿದುಕೊಂಡು ಹುಚ್ಚೆದ್ದು ಕುಣಿದವು. ಮೊದಲೇ ತಿರುಚಲಾಗಿದ್ದ ಸುದ್ದಿಯಲ್ಲಿ ಎನ್‌ಡಿಟಿವಿ ಎನ್ನುವ ’ತಿರುಚು ತಜ್ಞ’ ಯಾವ ರೀತಿಯಲ್ಲಿ ಕೈಯಾಡಿಸಿತು ಎನ್ನುವುದಕ್ಕೆ ಇಲ್ಲೊಂದು ಚಿಕ್ಕ ಉದಾಹರಣೆ: ’ಮಹಿಳೆಯರು ಇರುವುದು ಮನೆಗೆಲಸ ಮಾಡುವುದಕ್ಕೆ’: ಆರ್‌ಎಸ್‌ಎಸ್ ಮುಖಂಡನಿಂದ ಆಘಾತಕಾರಿ ಹೇಳಿಕೆ… ಬಲಪಂಥೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ತಮ್ಮ ಹಳೆಚಾಳಿಯನ್ನು ಮುಂದುವರಿಸಿದ್ದಾರೆ. .. ಹಾಗಿದ್ದರೆ ನಿಜಕ್ಕೂ ಭಾಗವತ್ ಹೇಳಿದ್ದಾದರೂ ಏನು? ಅವರು ಪಾಶ್ಚಿಮಾತ್ಯ ಮಾದರಿಯ ಆಧುನಿಕತೆಯ ಬಗ್ಗೆ ಮಾತನಾಡುತ್ತಾ, ’ಮದುವೆಯ (ಅವರ ಅಭಿಪ್ರಾಯವಲ್ಲ) ’ಆಧುನಿಕ’ ವ್ಯಾಖ್ಯಾನದಲ್ಲಿ, ಹೆಂಡತಿಯಾದವಳು ಗಂಡನ ಸೇವೆ ಮಾಡಿಕೊಂಡಿರುವ ಒಪ್ಪಂದಕ್ಕೆ ಒಳಪಟ್ಟಿರುತ್ತಾಳೆ. ಗಂಡ ಆಕೆಯ ಯೋಗಕ್ಷೇಮ ನೋಡಿಕೊಳ್ಳಬೇಕು. ಒಂದು ವೇಳೆ ಇಬ್ಬರಲ್ಲಿ ಒಬ್ಬರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸೋತರೆ, ಆಧುನಿಕ ಮದುವೆ ಒಪ್ಪಂದದ ಪ್ರಕಾರ ಅತೃಪ್ತರು ಈ ಒಪ್ಪಂದವನ್ನು ಮುರಿದು, ಇನ್ನೊಬ್ಬರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು’ ಎಂದಿದ್ದರು.
ಆದರೆ ಈ ಸುದ್ದಿಯನ್ನು ಹೇಗೆ ವರದಿ ಮಾಡಲಾಯಿತು ಮತ್ತು ಮಾಧ್ಯಮಗಳಲ್ಲಿ ಈ ಸುದ್ದಿ ಎಷ್ಟೊಂದು ವೇಗವಾಗಿ ಹರಿದಾಡತೊಡಗಿತು ಎನ್ನುವುದನ್ನೊಮ್ಮೆ ನೆನಪಿಸಿಕೊಳ್ಳಿ. ಅಲ್ಲದೆ ಮೋಹನ್ ಭಾಗವತ್‌ರ ಪರವಾಗಿ ಮಾತನಾಡಿದ ಆರ್‌ಎಸ್‌ಎಸ್‌ನ ವಕ್ತಾರ ರಾಮ್‌ಮಾಧವ್ ಹೇಳಿಕೆಯನ್ನು ಎಷ್ಟೊಂದು ಜಾಗೃತಿಯಿಂದ ಈ ಮಾಧ್ಯಮಗಳು ತಮ್ಮ ಸುಳ್ಳು ಸುದ್ದಿಯ ವಾಕ್ಯವೃಂದದಡಿಯಲ್ಲಿ ಹೂತುಹಾಕಿಬಿಟ್ಟವೋ ನೋಡಿ. ’ಉಗುಳಿ ಓಡಿಹೋಗುವ ಪತ್ರಿಕೋದ್ಯಮ’ ಇಂತಹ ಕೆಲಸ ಮಾಡಿಕೊಂಡೇ ಬದುಕುಳಿದಿದೆ. ಆದರೆ ತಮ್ಮ ವಿರುದ್ಧ ಟ್ವಿಟರ್ ಮತ್ತು ಮತ್ತಿನ್ನಿತರ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಜ್ವಾಲಾಮುಖಿ ಏಳಲಿದೆ ಎನ್ನುವುದು ಮಾಧ್ಯಮ ಮಂದಿಗೆ ಗೊತ್ತಿರಲಿಲ್ಲ. ಈ ಮೀಡಿಯಾ ರಾಕ್ಷಸರು ಆರ್‌ಎಸ್‌ಎಸ್ ಅನ್ನು ಏಕಿಷ್ಟು ದ್ವೇಷಿಸುತ್ತಾರೆ ಎನ್ನುವುದನ್ನು ಕೇವಲ ಅವರ ಹಿನ್ನೆಲೆಯನ್ನು ನೋಡಿ ತಿಳಿದುಕೊಳ್ಳಲಾಗದು. ಸತ್ಯವೇನೆಂದರೆ ಈ ನ್ಯೂಸ್ ಚಾನೆಲ್ಲುಗಳಿಗೆ ನಿಯತ್ತೆಂಬುದೇ ಇಲ್ಲ. ಪರ್ವತದಷ್ಟು ಸಾಕ್ಷಿಯನ್ನು ನೀವು ಅವರೆದುರಿಗಿಡಿ, ಆದರೂ ಅವರ ಕಣ್ಣು ಅದನ್ನು ನಿರ್ಲಕ್ಷಿಸುತ್ತದೆ. ಆರ್‌ಎಸ್‌ಎಸ್‌ನ ವಿರುದ್ಧದ ಅವರ ದ್ವೇಷಕ್ಕೆ ಮುಖ್ಯ ಕಾರಣ ಮುಖ್ಯವಾಗಿ ಭಯ!
ಆರ್‌ಎಸ್‌ಎಸ್ ಇದುವರೆಗೂ ಮಾಡಿಕೊಂಡು ಬಂದಿರುವ ಸಮಾಜಸೇವೆಗೆ ಮಾಧ್ಯಮಗಳು ಯಾವಾಗಲೂ ಜಾಣ ಕುರುಡು ಪ್ರದರ್ಶಿಸಿವೆ. ಆರ್‌ಎಸ್‌ಎಸ್ ಅಸ್ತಿತ್ವದಲ್ಲಿರುವುದೇ ಹಿಂಸಾಚಾರ ಹುಟ್ಟುಹಾಕಲು ಮತ್ತು ಅಲ್ಪಸಂಖ್ಯಾತರ ಎದೆಯಲ್ಲಿ ನಡುಕ ಹುಟ್ಟಿಸಲು ಎನ್ನುವಂತೆ ಅದನ್ನು ಬಿಂಬಿಸಲಾಗುತ್ತಿದೆ. ಇವರುಗಳು ಹೇಳುವುದನ್ನು ಕೇಳಿದರೆ ಭಾರತವನ್ನು ಉಗ್ರ ಹಿಂದೂ ರಾಷ್ಟ್ರವನ್ನಾಗಿ ಮಾಡಿ ಎಣೆಯಿಲ್ಲದ ದಬ್ಬಾಳಿಕೆ ನಡೆಸುವ ದಿನಕ್ಕಾಗಿ ಅದು ಕಾಯುತ್ತಿದೆಯೇನೋ ಅನ್ನಿಸುತ್ತದೆ! ಆದರೆ ಈ ರೀತಿಯ ಬ್ರಾಂಡಿಂಗ್‌ನಿಂದಾಗಿ ಮೀಡಿಯಾಗಳಿಗಂತೂ ಲಾಭವಾಗಿದೆ. ಈಗಂತೂ ವಿದ್ಯಾವಂತ ಭಾರತೀಯರಿಗೆ ಆರ್‌ಎಸ್‌ಎಸ್‌ನ ಹೆಸರೇ ಲೇವಡಿಯ ವಿಷಯವಾಗಿ ಹೋಗಿದೆ. ಆದರೆ ಅದು ದೇಶಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಮಾತ್ರ ಎಲ್ಲಿಯೂ ಚರ್ಚೆಯಾಗುವುದಿಲ್ಲ.
ಯಾವುದೇ ನೈಸರ್ಗಿಕ ವಿಪತ್ತುಗಳ ಉದಾಹರಣೆಯನ್ನೇ ತೆಗೆದುಕೊಳ್ಳಿ. ನೆರೆ, ಬರ, ಭೂಕಂಪ, ಸುನಾಮಿ… ಯಾವುದೇ ಇರಲಿ, ಆರ್‌ಎಸ್‌ಎಸ್‌ನ ಸ್ವಯಂಸೇವಕರು ಆ ಸ್ಥಳಕ್ಕೆ ಎಲ್ಲರಿಗಿಂತ ಮುಂಚಿತವಾಗಿ ತಲುಪಿ ಕಷ್ಟದಲ್ಲಿರುವವರ ನೆರವಿಗೆ ಮುಂದಾಗುತ್ತಾರೆ. ಆ ಸಮಯದಲ್ಲಿ ಅವರು ತಮ್ಮ comfort ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಮಾಧ್ಯಮಗಳು ಎಂದಾದರೂ ಈ ಕುರಿತು ವರದಿ ಮಾಡುತ್ತವೆಯೇ? ಇದು ಅವರ ಅಪ್ರಾಮಾಣಿಕತೆಯನ್ನು ತೋರಿಸುವುದಿಲ್ಲವೇ? ಆರ್‌ಎಸ್‌ಎಸ್‌ನ ಪ್ರಮುಖ ಶಕ್ತಿಯೆಂದರೆ ಅದರ ಸ್ವಯಂಸೇವಕರು. ಇವರುಗಳೆಲ್ಲಾ ದೇಶಕ್ಕಗಿ ಸ್ವಹಿತವನ್ನು ಮರೆತವರು. ಇವರುಗಳಲ್ಲಿ ಸಾವಿರಾರು ಕಾರ್ಯಕರ್ತರು ಆರಂಕಿಯ ಸಂಬಳ ಪಡೆಯುವಷ್ಟು ಅರ್ಹತೆ ಹೊಂದಿದ್ದರೂ ಕೊನೆಗೂ ಅವರು ಆಯ್ಕೆ ಮಾಡಿಕೊಂಡದ್ದು ದೇಶಸೇವೆಯನ್ನು.
ಈ ನಿಸ್ವಾರ್ಥ ಸೇವೆಯೇ ಅವರುಗಳಿಗೆ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಭದ್ರವಾದ ಸ್ಥಾನ ಒದಗಿಸಿಕೊಟ್ಟಿದೆ. ಹಾಗಾಗೇ ಎಎನ್‌ಐ ಮತ್ತು ಅದೇ ಮನಸ್ಥಿತಿಯ ಸುದ್ದಿ ವಾಹಿನಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಮಾಣದಲ್ಲಿ ವಿರೋಧದ ಅಲೆಯೆದ್ದಿರುವುದು. ದೇಶಕ್ಕಾಗಿ ಜೀವನ ಮುಡಿಪಿಟ್ಟಿರುವ ಇಷ್ಟೊಂದು ಪ್ರಮಾಣದ ಜನರನ್ನು ಆರ್‌ಎಸ್‌ಎಸ್‌ನಂತೆ ಪ್ರಪಂಚದ ಇನ್ನಾವುದೇ ಸಂಸ್ಥೆಗೆ ಹುಟ್ಟುಹಾಕಲು, ಬೆಸೆಯಲು ಸಾಧ್ಯವಾಗಿದೆಯೇ?! ಒಂದು ವೇಳೆ ಅದು ದುರ್ಬಲ ಸಂಘವಾಗಿದ್ದರೆ ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಸರ್ಕಾರಗಳ ನಿರಂತರ ದಾಳಿಗೆ ಮೆತ್ತಗಾಗಿ ಇಷ್ಟು ಹೊತ್ತಿಗಾಗಲೇ ನೆಲಕಚ್ಚಿರುತ್ತಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಈ ಸಂಘ ತನ್ನ ಜೀವನದ ಅತ್ಯಂತ ಘೋರ ಸಮಯವನ್ನು ಎದುರಿಸಿತು. ಆದರೂ ಆಗಿನ ಸರಸಂಘಚಾಲಕರು ತಮ್ಮ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ’ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಿಬಿಡಿ. ಎಷ್ಟಿದ್ದರೂ ಅವರು ನಮ್ಮವರಲ್ಲವೇ?’ ಎಂದು ಹೇಳಿ ದೊಡ್ಡತನ ಮೆರೆದಿದ್ದರು!
ಭಾಗವತ್‌ರ ಖಾಕಿ ಚೆಡ್ಡಿಯ ಬಗ್ಗೆ ಗೇಲಿ ಮಾಡಿ ಅವರ ವ್ಯಕ್ತಿತ್ವವನ್ನು ಅಳೆಯಲು ಮುಂದಾಗುವ ವರದಿಗಾರರಿಗೆ ನಾವೂ ಹಾಗೇ ಗೇಲಿ ಮಾಡಬಹುದಲ್ಲವೇ? ಅವರ ತಂದೆಯದ್ದೋ, ಸೋದರಿಯದ್ದೋ ಅಥವಾ ತಾಯಿಯದ್ದೋ ಉಡುಗೆಯ ಬಗ್ಗೆ ಕುಹಕವಾಡಿದರೆ ಅವರು ಸುಮ್ಮನಿರುತ್ತಾರಾ? ’ಅವರ ಬಗ್ಗೆ ನೀನು ಹೀಗೆ ಮಾತಾಡುವೆ ಅಂತ ನನಗೆ ಮೊದಲೇ ಗೊತ್ತಿತ್ತು’ ಎಂದು ನಾಚಿಕೆಯಿಲ್ಲದೆ ನುಣುಚಿಕೊಂಡುಬಿಡುತ್ತಾರೆ.
ಆರ್‌ಎಸ್‌ಎಸ್ ಅನ್ನು ಉಗ್ರ ಸಂಸ್ಥೆಯಂತೆ ಬಿಂಬಿಸುತ್ತಿರುವ ಮಾಧ್ಯಮಮಂದಿಯ ವೈಯಕ್ತಿಕ ಜೀವನವನ್ನೇ ಒಮ್ಮೆ ನೋಡಿ. ಅಲ್ಲಿ ತುಂಬಿರುವುದು ಬರೀ ಕೊಳಕು ಮಾತ್ರ. ಕಾಂಗ್ರೆಸ್ ಪರ ಪ್ರಚಾರ ಮಾಡುವುದು, ಭೂ ಕಬಳಿಕೆ, ಮೋದಿಯನ್ನು ಕಿತ್ತೆಸೆಯಬೇಕೆಂದು ಪದೇ ಪದೇ ಬೊಬ್ಬಿಡುವುದು ಇವರುಗಳ ನೈತಿಕತೆ! ಅರ್ಧ ದಿನವಾದರೂ ಭಾಗವತ್‌ರಂತೆ ಇವರುಗಳಿಗೆ ಬದುಕಲು ಸಾಧ್ಯವೇ? ಆದರೂ ನೈತಿಕತೆಯ ಉತ್ತುಂಗವನ್ನು ತಲುಪಿದವರಂತೆ ವರ್ತಿಸುತ್ತಾ ಆರ್‌ಎಸ್‌ಎಸ್, ಭಾಗವತ್‌ರನ್ನು ಹೀಗಳೆಯುತ್ತಾರೆ. ಇವರು ಯಾವ ಪ್ರಪಂಚದಲ್ಲಿ ಬದುಕುತ್ತಿದ್ದಾರೋ ತಿಳಿಯುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಇದನ್ನೆಲ್ಲಾ ಸಹಿಸಿಕೊಳ್ಳುತ್ತಾ ಕುಳಿತುಕೊಂಡಿದ್ದೇವಲ್ಲ, ನಾವ್ಯಾವ ದುಃಸ್ವಪ್ನದಲ್ಲಿ ಬುದಕುತ್ತಿದ್ದೇವೆಯೋ ತಿಳಿಯದು. ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಆ ಪ್ರಶ್ನೆಗಳು ಸತ್ಯ ಮತ್ತು ಪ್ರಾಮಾಣಿಕೆಯ ತಳಹದಿಯನ್ನು ಹೊಂದಿರಬೇಕು. ಆರ್‌ಎಸ್‌ಎಸ್‌ನ ಸೈದ್ಧಾಂತಿಕ ಮತ್ತು ಬೌದ್ಧಿಕ ವೈಫಲ್ಯಗಳೇನೇ ಇದ್ದರೂ, ಅದರಂತಹ ನಿಸ್ವಾರ್ಥ ದೇಶಸೇವಾ ಮನೋಭಾವ ಪ್ರಪಂಚದಲ್ಲಿ ಯಾರಿಗೂ ಇರಲಿಕ್ಕಿಲ್ಲ. ಅದನ್ನು ಪ್ರಶ್ನಿಸುವುದಕ್ಕೆ ಸಾಧ್ಯವೂ ಇಲ್ಲ. ಹೊರಗಿನವನಾದ ನಾನೇ ಈ ಮಾತನ್ನು ಹೇಳುತ್ತಿದ್ದೇನೆ!
**************
Click and Read:
Article on RSS in Kannada Prabha Jan-10-2013
Find English version on: