ಗಾಜಿಪುರ, ಕಾಶಿ (ವಿಸಂಕೆ). ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಮಾತನಾಡುತ್ತಾ “ಪುಣ್ಯದ ಕೆಲಸದಲ್ಲಿ ಸಣ್ಣ ಪಾಲ್ಗೊಳ್ಳುವಿಕೆಯೂ ಕೂಡ ನಮ್ಮ ಅನೇಕ ತಲೆಮಾರುಗಳನ್ನು ಗೌರವಾನ್ವಿತರನ್ನಾಗಿಸುತ್ತದೆ.
ಸಿದ್ಧಪೀಠ ಹಥಿಯಾರಾಮ ಮಠಕ್ಕೆ ಭೇಟಿ ನೀಡಿರುವುದು ನನಗೆ ಅಪಾರವಾದ ಪುಷ್ಟಿಯನ್ನು ನೀಡಿದೆ. ಹೀಗೆ ದೊರೆತದ್ದನ್ನು ಲೋಕ ಕಲ್ಯಾಣದಲ್ಲಿ ಬಳಸುವುದು ಜೀವನದ ಉದ್ದೇಶವಾಗಿದೆ”ಎಂದರು.
ಬುಧವಾರ, ಕಾಶಿ ಪ್ರಾಂತ್ಯದ ಗಾಜಿಪುರ ಜಿಲ್ಲೆಯ ಸಿದ್ಧಿಪೀಠ ಹಥಿಯಾರಾಮ್ ಮಠಕ್ಕೆ ಭೇಟಿ ನೀಡಿದ ಸರಸಂಘಚಾಲಕರು ‘ಆಧ್ಯಾತ್ಮಿಕ ಜಾಗೃತಿಯಿಂದ ರಾಷ್ಟ್ರದ ಉತ್ಥಾನ’ ಎಂಬ ವಿಚಾರವನ್ನು ಕುರಿತು ಮಾತನಾಡಿದರು.
ಮಠದಲ್ಲಿರುವ ಬುಧಿಯಾ ಮಾತಾ ಮಂದಿರದಲ್ಲಿ ಸರಸಂಘಚಾಲಕರು ದರ್ಶನ-ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಮಹಂತ ಭವಾನಿನಂದನ್ ಯತಿ ಮಹಾರಾಜರು ಡಾ. ಮೋಹನ್ ಭಾಗವತ್ ಅವರಿಗೆ ಅಂಗವಸ್ತ್ರ ಹೊದಿಸಿ ಗೌರವಿಸಿದರು.
125 ವರ್ಷಗಳ ಹಿಂದೆಯೇ ಮಹರ್ಷಿ ಅರವಿಂದರು “ಸನಾತನ ಧರ್ಮದ ಉನ್ನತಿ, ಭಗವಂತನ ಸಂಕಲ್ಪವಾಗಿದೆ,ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಸನಾತನ ಧರ್ಮದ ಉನ್ನತಿ ಯಾವಾಗ ಅವಶ್ಯಕವೋ ಆಗ ಭಗವಂತನು ಹಿಂದೂ ರಾಷ್ಟ್ರದ ಭಾರತದ ಉತ್ಥಾನವನ್ನು ನೆರವೇರಿಸುತ್ತಾನೆ” ಎಂದು ಹೇಳಿದ್ದರು.ಈಗ ಆ ಸಮಯ ಬಂದಿದೆ.ಅವೆಲ್ಲವೂ ಈಗ ನಡೆಯುತ್ತಿದೆ, ವಿಧಿಯ ಸೂತ್ರದ ಪ್ರಕಾರವೇ ನಡೆಯುತ್ತಿದೆ. ವಿಧಿಯು ತನ್ನ ಕೆಲಸವನ್ನು ಮಾಡುತ್ತಿದ್ದರೆ, ಆ ಧರ್ಮದ ಕಾರ್ಯಕ್ಕೆ, ಸತ್ಕಾರ್ಯಕ್ಕೆ, ಮನುಕುಲದ ಕಲ್ಯಾಣಕ್ಕೆ ನಾವೇ ಕಾರಣರಾಗಬೇಕೇ ಹೊರತು ಚಮತ್ಕಾರವನ್ನು ನೋಡುತ್ತಾ ಕೈ ಕಟ್ಟಿ ಕೂರಬಾರದು,ಅದು ನಮ್ಮ ಕಾರ್ಯ, ಆ ಕಾರ್ಯಕ್ಕಾಗಿಯೇ ನಾವು ಹುಟ್ಟಿರುವುದು.ನಾವೂ ಕೂಡ ಅಂತಹ ಕಾರ್ಯದ ಭಾಗವಾಗವುದೇ ನಮ್ಮ ಶೌರ್ಯತನದ ಸಂಕೇತ.
ವಿಧಿ ತನ್ನ ಕೆಲಸವನ್ನು ಮಾಡುತ್ತದೆ, ಪ್ರಕೃತಿ ತನ್ನ ಚಕ್ರವನ್ನು ಪೂರ್ಣಗೊಳಿಸುತ್ತದೆ, ದೇವರ ಇಚ್ಛೆಯಿಂದ ಏನಾಗಬೇಕೋ ಅದೆಲ್ಲವೂ ಸಂಭವಿಸುತ್ತದೆ. ಭಗವಂತನ ಸಂಕಲ್ಪದಂತೆ ನಡೆಯುವ ಕಾರ್ಯಕ್ಕೆ ಕೈ ಹಾಕುವುದು ನಮ್ಮ ಕರ್ತವ್ಯ. ಪುಣ್ಯ ಕಾರ್ಯಗಳಲ್ಲಿ ತೊಡಗುವುದರಿಂದ ನಮ್ಮ ಜೀವನ ಸುಖಮಯವಾಗುತ್ತದೆ, ನಮ್ಮ ಮಾನವ ಜನ್ಮ ಸಾರ್ಥಕವಾಗುತ್ತದೆ. ರಾಮಸೇತು ನಿರ್ಮಾಣದಲ್ಲಿ ಅಳಿಲುಗಳ ಕೊಡುಗೆ ಕುರಿತು ಮಾತನಾಡಿದ ಅವರು,ಅಳಿಲುಗಳಿಗೇನಾದರೂ ಮಾತು ಬಂದಿದ್ದರೆ ರಾಮಸೇತು ನಿರ್ಮಾಣಕ್ಕೆ ತಮ್ಮ ಕುಲ ಎಷ್ಟು ಕೊಡುಗೆ ನೀಡಿದೆ ಎಂಬುದನ್ನು ತಮ್ಮ ಮುಂದಿನ ಪೀಳಿಗೆಗಳಿಗೂ ತಲುಪಿಸುವಂತೆ ಹೇಳುತ್ತಿದ್ದವು ಎಂದರು.
ಸರಸಂಘಚಾಲಕರು ಮಾತನಾಡುತ್ತಾ, ” ಈ ನಾಡಿನಲ್ಲಿ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಜೀವನವೇ ಇಂದಿಗೂ ಕಾಣಸಿಗುತ್ತದೆ.ಹಾಗೆ ನಡೆಸಿಕೊಂಡು ಬಂದ ಜೀವನವು ಮನುಷ್ಯ ಮಾತ್ರರ ಉದ್ಧಾರಕ್ಕೆ ,ಮುಕ್ತಿಗೆ ದಾರಿ ಮಾಡಿಕೊಟ್ಟಿತು.ಈ ಮೂಲಕ ಈ ದೇಶ,ದೇಶದ ಜನ ಜಗತ್ತಿನ ಯಾವುದೇ ಜನರನ್ನು, ದೇಶವನ್ನು ನೋಯಿಸಲಿಲ್ಲ,ದಂಡೆತ್ತಿ ಹೋಗಲಿಲ್ಲ. ಜಗತ್ತಿನ ತುಂಬೆಲ್ಲ ಹೋದರೂ ಸಹ, ಧ್ಯಾನವನ್ನು ತೆಗೆದುಕೊಂಡು ಹೋದರು, ನಾಗರಿಕತೆ ಮತ್ತು ಸಂಸ್ಕೃತಿಯನ್ನು ತೆಗೆದುಕೊಂಡು ಹೋದರು,ತಮ್ಮ ಹೃದಯದ ಪ್ರೀತಿಯನ್ನು ತೆಗೆದುಕೊಂಡು ಹೋದರು. ನಮ್ಮ ದೇಶವು ಜಗತ್ತನ್ನು ಒಂದು ಕುಟುಂಬವನ್ನಾಗಿ ಮಾಡಿದೆ, ಮಾರುಕಟ್ಟೆಯನ್ನಲ್ಲ. ನಾವು ಇಂತಹ ದೇಶದ ಪ್ರಜೆಗಳು, ನಾವು ಇಂತಹ ದೇಶದ ಮಕ್ಕಳು, ಆದ್ದರಿಂದ ನಾವು ಪರಸ್ಪರರನ್ನು ಸಹೋದರರಂತೆ ಕಾಣುತ್ತೇವೆ.
ನಮ್ಮಲ್ಲಿ ಹಲವಾರು ಭಾಷೆ, ಜಾತಿ, ಪಂಥಗಳಿವೆ, ಆದರೆ ನಾವು ಅದನ್ನು ಭೇದವೆಂದು ಪರಿಗಣಿಸುವುದಿಲ್ಲ. ಇದು ನಮ್ಮ ವೈಶಿಷ್ಟ್ಯತೆ ಎಂದು ನಾವು ಹೇಳುತ್ತೇವೆ,ನಾವೆಲ್ಲರೂ ಒಂದೇ ಉದ್ಯಾನದ ಬಣ್ಣಬಣ್ಣದ ಹೂವುಗಳಂತೆ, ಎಲ್ಲರೂ ಒಂದೇ ಮಣ್ಣಿನಿಂದ ಜೀವನದ ರಸವನ್ನು ಪಡೆದಿದ್ದೇವೆ.
ಸಿದ್ಧಪೀಠ ಶ್ರೀ ಹಥಿಯಾರಾಮ ಮಠದ ಯಾತ್ರೆ ಸಂಪನ್ನವಾದ ಸಂದರ್ಭದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ‘ಬಲಿದಾನ ದಿನ’ದಂದು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುಗಳಿಗೆ ಗೌರವ ಸಲ್ಲಿಸಿದರು.
ಅಲ್ಲದೆ ಜಿಲ್ಲೆಯ ಬಲಿದಾನಿ ಯೋಧರಿಗೆ ನಮನ ಸಲ್ಲಿಸಿದ ಅವರು, ಅವರ ಬಂಧುಗಳಿಗೆ ಹಾಗೂ ಪ್ರತಿನಿಧಿಗಳಿಗೆ ಅಂಗವಸ್ತ್ರ ನೀಡಿ ಗೌರವಿಸಿದರು.ಇದರಲ್ಲಿ ಪರಮವೀರ ಚಕ್ರ ವಿಜೇತ ವೀರ ಅಬ್ದುಲ್ ಹಮೀದ್ ಅವರ ಪುತ್ರ ಜೈನುಲ್ ಬಾಸರ್, ಮಹಾವೀರ ಚಕ್ರ ವಿಜೇತ ರಾಮಉಗ್ರಹ ಪಾಂಡೆ ಪುತ್ರಿ ಸುನೀತಾ ಪಾಂಡೆ, ಬಲಿದಾನಿ ಪರಸನಾಥ್ ಸಿಂಗ್ ಅವರ ಪುತ್ರ ಸಚೀಂದ್ರ ಸಿಂಗ್, ಬಲಿದಾನಿ ರಾಮಚಂದ್ರ ಮಿಶ್ರಾ ಅವರ ಪತ್ನಿ ರಾಮಲಾಲಿ ದೇವಿ ಮತ್ತು ಬಲಿದಾನಿ ರಿತೇಶ್ವರ ರೈ ಅವರ ಪ್ರತಿನಿಧಿ ರಾಮನಾರಾಯಣ ರೈ ಅವರನ್ನು ಸನ್ಮಾನಿಸಿದರು.