ಇಂದು ಜಯಂತಿ
ಸತ್ಯೇಂದ್ರನಾಥ ಟ್ಯಾಗೋರ್‌ ಅವರು ಕವಿ, ಬರಹಗಾರ, ಸಮಾಜ ಸುಧಾರಕ ಮತ್ತು ಭಾಷಾಶಾಸ್ತ್ರಜ್ಞರಾಗಿ ಪ್ರಸಿದ್ಧಿ ಪಡೆದವರು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಸತ್ಯೇಂದ್ರನಾಥ ಟ್ಯಾಗೋರ್ ಅವರು ಭಾರತದ ಮೊದಲ ಐಎಎಸ್‌ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಅಷ್ಟೇಯಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹವಾದ ಕೊಡುಗೆ ನೀಡಿದ್ದಾರೆ. ಸತ್ಯೇಂದ್ರನಾಥ ಟ್ಯಾಗೋರ್‌ ಅವರು ತಮ್ಮ ಜೀವನದುದ್ದಕ್ಕೂ ಸಮಾಜವನ್ನು ಸುಧಾರಿಸಲು ಶ್ರಮವಹಿಸಿದವರು. ಇಂದು ಅವರ ಜಯಂತಿ.


ಪರಿಚಯ
ಸತ್ಯೇಂದ್ರನಾಥ ಟ್ಯಾಗೋರ್‌ ಅವರು ಜೂನ್‌ 1 , 1842 ರಂದು ಕೊಲ್ಕತ್ತಾದ ಜೋರಾಸಾಂಕೋ ಎಂಬಲ್ಲಿ ಜನಿಸಿದರು. ಇವರ ತಂದೆ ದೇಬೇಂದ್ರನಾಥ ಟ್ಯಾಗೋರ್‌ ಮತ್ತು ಶಾರದಾ ದೇವಿ. ಟ್ಯಾಗೋರ್‌ ಅವರು ಆರಂಭಿಕ ಶಿಕ್ಷಣವನ್ನು ಕೊಲ್ಕತ್ತಾದಲ್ಲಿ ಮುಗಿಸಿದರು. ನಂತರ ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಈ ಸಮಯದಲ್ಲಿ ಅವರು ಬ್ರಹ್ಮ ಸಮಾಜದಲ್ಲಿ ತೊಡಗಿಸಿಕೊಂಡರು. ಹೀಗಾಗಿ ತಮ್ಮ ಜೀವನದುದ್ದಕ್ಕೂ ಬ್ರಹ್ಮ ಸಮಾಜದ ಆದರ್ಶಗಳನ್ನು ಬೋಧಿಸುತ್ತಿದ್ದರು. ಸತ್ಯೇಂದ್ರನಾಥ ಟ್ಯಾಗೋರ್‌ ಅವರು ಅಹಮದಾಬಾದ್‌ನಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಪಶ್ಚಿಮ ಭಾರತದಲ್ಲಿ ಕೆಲಸ ಮಾಡಿದರು.


ಸತ್ಯೇಂದ್ರನಾಥ್‌ ಟ್ಯಾಗೋರ್‌ ಅವರಿಗೆ ಬಾಲ್ಯದಿಂದಲೂ ಐಎಎಸ್‌ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಆದರೆ ಅವರಿಗೆ ಪರೀಕ್ಷೆ ಬರೆಯವುದು ಅಷ್ಟೋಂದು ಸುಲಭದ ಕೆಲಸವಾಗಿರಲಿಲ್ಲ. ಯಾಕೆಂದರೆ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಭಾರತೀಯ ನಾಗರಿಕ ಸೇವೆಗೆ ಬ್ರಿಟಿಷ್‌ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ತದನಂತರ 19ನೇ ಶತಮಾನದ ಮಧ್ಯಭಾಗದಿಂದ ಭಾರತೀಯರಿಗೂ ಸಹ ಈ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ಈ ನಿಯಮ 1861ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ನಂತರ ಸತ್ಯೇಂದ್ರನಾಥ ಅವರು ತಮ್ಮ ಸ್ನೇಹಿತರೊಂದಿಗೆ ಪರೀಕ್ಷೆ ಬರೆಯುವುದಕ್ಕಾಗಿ ಇಂಗ್ಲೆಂಡ್‌ ಪ್ರಯಾಣ ಬೆಳೆಸಿದರು. ಆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸತ್ಯೇಂದ್ರನಾಥ ಟ್ಯಾಗೋರ್‌ ಅವರು 1863ರಲ್ಲಿ ಭಾರತದ ಮೊದಲ ಐಎಎಸ್‌ ಅಧಿಕಾರಿಯಾದರು. ಪ್ರಾಯೋಗಿಕ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಅವರು 1864ರಲ್ಲಿ ಭಾರತಕ್ಕೆ ವಾಪಸ್‌ ಆದರು. ಅವರನ್ನು ಬಾಂಬೆ ಪ್ರೆಸಿಡೆನ್ಸಿಗೆ ನೇಮಿಸಲಾಯಿತು. ಟ್ಯಾಗೋರ್‌ ಅವರು 30 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅವರು 1897ರಲ್ಲಿ ಸತಾರಾದಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದರು.


ಸಾಹಿತ್ಯ ಕೊಡುಗೆ
ಸತ್ಯೇಂದ್ರ ನಾಥ್‌ ಅವರು ಐಎಎಸ್‌ ಜೊತೆಗೆ ವಿವಿಧ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿದ್ದರು. ಸಾಹಿತ್ಯ ಪರಿಷತ್ತು ಹಾಗೂ 10 ನೇ ಬಂಗಾಳ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಟ್ಯಾಗೋರ್‌ ಅವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ಸತ್ಯೇಂದ್ರನಾಥ್ ಅವರು ಕೊಲ್ಕತ್ತಾದ ಬೆಲ್ಗಾಚಿಯಾದಲ್ಲಿ ಹಿಂದೂ ಮೇಳವನ್ನು ಸ್ಥಾಪಿಸುವಲ್ಲಿ ತೊಡಗಿದ್ದರು. ಅದಕ್ಕಾಗಿ ಅವರು ಅನೇಕ ದೇಶಭಕ್ತಿ ಗೀತೆಗಳನ್ನು ಬರೆದರು. ಅವರು ಬ್ರಹ್ಮ ಸಮಾಜದಲ್ಲಿ ಸಕ್ರಿಯರಾಗಿದ್ದರು. 1907ರಲ್ಲಿ ಅವರ ಹಿರಿಯ ಸಹೋದರ ದ್ವಿಜೇಂದ್ರನಾಥ ಟ್ಯಾಗೋರ್ ಅವರೊಂದಿಗೆ ಧಾರ್ಮಿಕ ಮಾರ್ಗದರ್ಶಿಯಾದರು. ಸತ್ಯೇಂದ್ರನಾಥ್ ಅವರು ವಿವಿಧ ಬಂಗಾಳಿ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ. ನಂತರ ಅವರು ಸಂಸ್ಕೃತದಲ್ಲಿದ್ದ ಕೃತಿಗಳನ್ನು ಬಂಗಾಳಿ ಭಾಷೆಗೆ ಅನುವಾದಿಸಿದ್ದಾರೆ. ಸುಶೀಲಾ ಓ ಬಿರ್ಸಿಂಗ, ಬೊಂಬಾಯಿ ಚಿತ್ರಾ, ನಬರತ್ನಮಾಲಾ, ಸ್ತ್ರೀಸ್ವಾಧಿನಾಥ, , ಅಮರ್ ಬಾಲ್ಯಕೋಠ, ಆತ್ಮಕೋಥಾ, ಶ್ರೀಮದ್ಭಗವದ್ಗೀತೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಸತ್ಯೇಂದ್ರನಾಥ ಟ್ಯಾಗೋರ್‌ ಅವರು ಜನವರಿ 9, 1923 ರಂದು ತಮ್ಮ 80 ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.