ಹಿರಿಯ ಕಾರ್ಮಿಕ ಮುಖಂಡ, ಉದ್ಯಮಿ, ಸಾಹಿತಿ ಶ್ರೀ ಮಂಗಲ್ಪಾಡಿ ನಾಮ್ ದೇವ್ ಶೆಣೈ ಅವರು ಇಂದು (11-06-2014) ಮುಂಜಾನೆ ಮಣಿಪಾಲದ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ . ಅವರಿಗೆ 75 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯ ನಿಮಿತ್ತ ಅವರನ್ನು ಮಣಿಪಾಲದ ಕೆ.ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂಲತಃ ಮಂಗಲ್ಪಾಡಿಯವರಾದ ನಾಮದೇವ್ ಶೆಣೈ ಅವರು ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಮಾಡಿದ್ದರು. ಕಾರ್ಪೋರೇಶನ್ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ ಅವರು ದೇಶದ ನಾನಾ ಕಡೆಗಳಲ್ಲಿ ಕೆಲಸ ಮಾಡಿದ ಅನುಭವವಿದ್ದವರು. ಜೊತೆಗೆ ಬ್ಯಾಂಕ್ ನೌಕರರ ಶ್ರೇಯೋಭಿವ್ರದ್ಧಿಗಾಗಿ ಶ್ರಮಿಸಿದ್ದರು. ಕಾರ್ಪೋರೇಶನ್ ಬ್ಯಾಂಕ್ ಎಂಪ್ಲಾಯಿಸ್ ಗಿಲ್ಡ್ ಗೆ ಜೀವ ತುಂಬಿಸಿದ್ದರು.
ಅಖಿಲ ಭಾರತೀಯ ಮಜ್ದೂರ್ ಸಂಘದ ಅಂಗಸಂಸ್ಥೆಯಾದ ಎನ್ ಒ ಬಿ ಡಬ್ಲ್ಯೂನ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು.
ಉದ್ಯೋಗದಿಂದ ನಿವ್ರತ್ತರಾದ ನಂತರ ಮಂಗಳೂರಿನ ವಿ.ಟಿ ರಸ್ತೆಯಲ್ಲಿ ವಿವೇಕ್ ಟ್ರೇಡರ್ಸ್ ಎಂಬ ಆಯುರ್ವೇದ ಔಷಧ ಮಳಿಗೆಯನ್ನು ಆರಂಭಿಸಿದ ಶೆಣೈ ಅವರು ಆಯುರ್ವೇದ ಔಷಧಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದರು. ಅವರು ಕೇವಲ ಒಬ್ಬ ಮಾರಾಟಗಾರರಾಗದೆ ಆಯುರ್ವೇದದ ಬಗ್ಗೆ ಜಾಗ್ರತಿಯನ್ನೂ ಮೂಡಿಸುತ್ತಿದ್ದರು. ಕೊಡಿಕಲ್ ಜಿ . ಎಸ್ . ಬಿ ಸಭಾದ ಸ್ಥಾಪಕ ಅಧ್ಯಕ್ಷರಾಗಿದ್ದು ಸೇವೆ ಸಲ್ಲಿಸಿದ್ಧು ,ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿಯೂ ಆಯುರ್ವೇದ ಪ್ರಚಾರವನ್ನು ಮಾಡುತ್ತಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ರಾಗಿ ಕೊಂಕಣಿ ಮಾತ್ರ ಭಾಷೆ ಯ ಏಳಿಗೆಗಾಗಿ ಶ್ರಮವಹಿಸಿದ್ದರು , ಶ್ರೀಯುತರು ತಮ್ಮ ಅನಾರೋಗ್ಯದ ಸಮಯದಲ್ಲೂ ನಾನಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಭುವನೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ರಾಗಿದ್ದರು. ಸದಾ ಅಧ್ಯಯನ ಕೈಗೊಳ್ಳುತ್ತಿದ್ದ ಶೆಣೈ ಅವರು ಇತ್ತೀಚೆಗೆ ತಾವು ಹಲವು ವರ್ಷ ಕೆಲಸ ಮಾಡಿದ ಮಧುರೈನಲ್ಲಿ ನಿವೇಶನವೊಂದನ್ನು ಖರೀದಿಸಿ ಕನ್ನಡಿಗರಿಗೆ ಛತ್ರವನ್ನು ಕಟ್ಟಲು ಅಡಿಗಲ್ಲನ್ನೂ ಕೂಡ ಇಟ್ಟಿದ್ದರು. ಶ್ರೀಯುತರು ಪತ್ನಿ, ಓರ್ವ ಪುತ್ರ ಮತ್ತು ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ