Raichur Oct 7: ಸೇವಾ ಭಾರತಿ ಸಂಸ್ಥೆಯ ಕಾರ‍್ಯ ಸ್ತುತ್ಯಾರ್ಹವಾದ್ದು. ಅವರು ತಾಲೂಕಿನ ಅಪ್ರಾಳ ಗ್ರಾಮದಲ್ಲಿ ಆಸ್ತಕಿವಹಿಸಿ ಮನೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿ ಮಳೆಹಾನಿಗೊಳಗಾದ ನಿರಾಶ್ರಿತ ಕುಟುಂಬದವರಿಗೆ ಶಾಶ್ವತ ನೆಲೆಯಂತಹ ಕಾರ‍್ಯ ಮಾಡಿದ್ದು, ಅದಕ್ಕಾಗಿ ಅವರು ಅಭಿನಂದನಾರ್ಹರು ಎಂದು ಶಾಸಕ ಕೆ ಶಿವನಗೌಡ ನಾಯಕ ಹೇಳಿದರು.
ದೇವದುರ್ಗ ತಾಲೂಕಿನ ಅಪ್ರಾಳ ಗ್ರಾಮದಲ್ಲಿ ಸೇವಾ ಭಾರತಿ ವತಿಯಿಂದ52 ಮನೆಗಳ ಹಸ್ತಾಂತರ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2 ವರ್ಷದ ಹಿಂದೆ ಇಲ್ಲಿ ನೆರೆಯಿಂದಾಗಿ ಮನೆ ಮಠಗಳನ್ನು ಕಳೆದುಕೊಂಡು ಸೂರಿಲ್ಲದೇ ಪರಿತಪಿಸುತ್ತಿದ್ದ ಜನರಿಗೆ ಸರಕಾರ ಶಾಶ್ವತ ಸೂರುಗಳನ್ನು ನಿರ್ಮಿಸಲು ದಾನಿಗಳನ್ನು ಗುರುತಿಸಿ, ಅವರಿಗೆ ಅಗತ್ಯ ಸೌಕರ‍್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇದು ದೇಶದಲ್ಲಿಯೇ ಮಾದರಿಯಾಗಿದೆ ಎಂದರು. ಸಾವಿರಾರು ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸುವ ಕಾರ‍್ಯದಲ್ಲಿ ಸೇವಾ ಸಂಸ್ಥೆಗಳು, ಸರಕಾರ, ಹೆಚ್ಚು ಮುರ್ತುವಜಿ ವಹಿಸಿದ್ದು, ಇದೊಂದು ಅವಿಸ್ಮರಣೀಯವಾದ ಕಾರ್ಯವಾಗಿದೆ ಎಂದವರು ಹೇಳಿದರು.
ವೆಂಕಟೇಶ ಸಾಗರ ಅವರು ಮಾತನಾಡಿ ಆರ.ಎಸ್.ಎಸ್ ನಿಂದ ಬೆಳೆದು ಸಂಸ್ಥೆ ಸೇವಾ ಭಾರತಿ 1999 ರಲ್ಲಿ ಹುಬ್ಬಳ್ಳಿಯಲ್ಲಿ ಹುಟ್ಟಿ, ಅನಾಥಾಲಯ,ವಿದ್ಯಾವಿಕಾಸ, ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಶ್ರಮವಹಿಸಿದೆ. ಗದಗ ಹೋಳೆ ಆಲೂರುಗಳಲ್ಲಿ ಕಾರವಾರ, ರಾಯಚೂರು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣದಂತಹ ಕಾರ‍್ಯ ಕೈಗೆತ್ತಿಕೊಂಡಿದೆ ಎಂದರು. ೨೦ ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಮನೆಗಳ ನಿರ್ಮಾಣದ ಕಾರ‍್ಯಕ್ಕೆ ಚಾಲನೆ ನೀಡಿದೆ ಎಂದು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವಿವರ ನೀಡಿದರು.
ಬೆಂಗಳೂರಿನ ಮಾಜಿ ಎಂ.ಎಲ್.ಸಿ ಕೆ ನರಹರಿ ಮಾತನಾಡಿ ಗುಲಾಬಿ ಕಂಪಿನಂತೆ ನಮ್ಮ ಜೀವನ ಸಾಗಿಸಬೇಕು. ಇತರರ ಜೀವನಕ್ಕೆ ಒಳ್ಳೆಯದನ್ನು ಮಾಡುವ ಭರದಲ್ಲಿ ನಮ್ಮ ಜೀವನಕ್ಕೆ ಸ್ವಲ್ಪ ತೊಂದರೆಯಾದರೂ ಸೇವಾ ಮನೋಭಾವ ಮನುಷ್ಯನದ ಜೀವನದಲ್ಲಿ ಸಾರ್ಥಕತೆಯನ್ನು ನೆನಪಿಸುತ್ತದೆ ಎಂದರು.
ಕಾರ‍್ಯಕ್ರಮದಲ್ಲಿ ಶಾಸಕರು, ಹಾಗೂ ಗಣ್ಯರು ಸಾಂಕೇತಿಕವಾಗಿ ಮನೆಗಳ ಹಸ್ತಾಂತರ ಪತ್ರಗಳನ್ನು ವಿತರಿಸಿದರು. ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಕಾಶ ಪಾಟೀಲ, ತಾಪಂ ಅಧ್ಯಕ್ಷರಾದ ಲಕ್ಷಣ ರಾಥೋಡ, ಗ್ರಾಮ ಪಂಚಾಯತ ಉಪಾಧ್ಯಕ್ಷ ಮಹಾದೇವಪ್ಪ, ಅಪರ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್, ವೆಂಕಟೇಶ ಸಾಗರ, ದಿನೇಶ ಹೆಗಡೆ, ಪ್ರಕಾಶಚಂದ ಕಾಂಕರಿಯಾ, ತಹಶೀಲ್ದಾರ ಮಲ್ಲಿಕಾರ್ಜುನ, ಸಹಾಯಕ ಆಯುಕ್ತರಾದ ಉಜ್ವಲಘೋಷ್, ಜಿ.ಪಂ. ನರಸಿಂಗರಾವ ಮುತಾಲಿಕ ಅವರಲ್ಲದೆ ಹಲವು ಗಣ್ಯರು ಮಾತೆಯರು, ಮಹನೀಯರು ಮಕ್ಕಳು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು