29 ಜುಲೈ 2018, ಬೆಂಗಳೂರು: ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ಒಂದು ವಿಶೇಷ ಸಂಭ್ರಮ ಕಳೆಗಟ್ಟಿತ್ತು. ಭಾನುವಾರದ ಚುಮುಚುಮು ಮುಂಜಾನೆಯಲ್ಲಿ ಬೆಳಿಗ್ಗಿನ ಹಕ್ಕಿಗಳ ಚಿಲಿಪಿಲಿಯೊಂದಿಗೆ ನೂರಾರು ತರುಣರ ಮಾತುಕತೆ ಸದ್ದು ಗದ್ದಲ ಸೇರಿತ್ತು. ಆರೆಸ್ಸೆಸ್ಸಿನ ಹೆಬ್ಬಾಳ ಭಾಗದ “ಸೇವಾ ಸಾಂಘಿಕ್” ಪ್ರಯುಕ್ತ ಗಿಡ ನೆಡುವ ಸಂಭ್ರಮಕ್ಕೆ ಸ್ವಯಂಸೇವಕರು ಸೇರಿದ್ದರು . ಬೆಳಿಗ್ಗೆ ಎಂದಿನಂತೆ ಸಾಂಘಿಕ್ಕಿಗೆ ಬಂದ ತರುಣರು, ಬಾಲಕರು ತಾವು ಮಾತ್ರ ಬರದೇ ಹೊಸ ಸ್ನೇಹಿತರನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರು. ಸಾಂಘಿಕ್ ಬಳಿಕ ಎಲ್ಲರೂ ಪಶು ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸೇರಿದರು.
ನಿನ್ನೆಯೇ ಗುಂಡಿ ತೋಡುವ ಕೆಲಸ ಮುಗಿದಿತ್ತು. ಕೇವಲ ಮೂರು ಘಂಟೆಗಳಲ್ಲಿ ಹೆಬ್ಬೇವು, ಅಗಸೆಯಂತಹ 500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಶ್ರಮದಾನ ಮುಗಿಸಿದಾಗ ಈ ಸ್ವಯಂಸೇವಕರ ಮುಖದಲ್ಲಿನ ಸಂತೃಪ್ತಿ, ಆಯಾಸವನ್ನು ಮರೆಸುವಂತಿತ್ತು. ಇವರೆಲ್ಲರ ಅಚ್ಚುಕಟ್ಟಿನ ಸೇವಾಕಾರ್ಯಕ್ಕೆ ಸಾಕ್ಷಿಯಾದವರು ಕಾಲೇಜಿನ ಪಶುವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ। ಚಂದ್ರಶೇಖರಮೂರ್ತಿ, ಐ ವಿ ಆರ್ ಐ ವಿಜ್ಞಾನಿ ಡಾ। ಗಣೇಶ್, ಅರಣ್ಯ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಶ್ರೀ ಅಣ್ಣಯ್ಯ ಮತ್ತು ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ವಿಶ್ವನಾಥ್ ಶೆಟ್ಟಿ ಇವರುಗಳು. ಎಲ್ಲರಿಂದಲೂ ಪ್ರಶಂಸೆಗಳ ಸುರಿಮಳೆಯಾಯಿತು.
ಪ್ರತಿ ಭಾನುವಾರ ಸಂಘದ ಸ್ವಯಂಸೇವಕರ ಸಾಂಘಿಕ್ ನಡೆಯುತ್ತದೆ, ಯಾವುದೇ ತಿಂಗಳಲ್ಲಿ ಐದನೇ ಭಾನುವಾರ ಬಂದರೆ ಅದು ಸೇವಾಕಾರ್ಯಕ್ಕೆ ಮೀಸಲು.
ಅಂತಹ ಸೇವಾ ಸಾಂಘಿಕ್ ಇವತ್ತು ನಡೆದಿದ್ದು, ಬೆಂಗಳೂರು ನಗರದ ಅನೇಕ ಕಡೆಗಳಲ್ಲಿ ಇಂತಹ ಹತ್ತಾರು ಸೇವಾ ಕಾರ್ಯಗಳು ನಡೆದಿವೆ.