VIKRAMA ವಿಜಯದಶಮೀ ವಿಶೇಷಾಂಕ – ೨೦೧೧
ಸೇವೆ ಆತಂಕವಾದ ಆಗುವುದೇ?
– ಚಂದ್ರಶೇಖರ ಭಂಡಾರಿ
‘ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ?’ ಇದೊಂದು ಹಳೆಯ ಗಾದೆ. ಈಗೇಕೆ ಅದರ ಉಲ್ಲೇಖ ಎಂಬುದು ತಾನೆ ನಿಮ್ಮ ಪ್ರಶ್ನೆ.
ಮೊದಲು ಈ ಲೇಖನ ಓದಿ. ಪ್ರಶ್ನೆಗೆ ಉತ್ತರ ಕೊನೆಯಲ್ಲಿ ನೀವೇ ಗುರುತಿಸುವಿರಂತೆ.
ಭಾರತದಲ್ಲಿ ಇಂದು ಕ್ರಿಯಾಶೀಲವಾಗಿರುವ ಸರಕಾರೇತರ ಸ್ವಯಂಸೇವಾ ಸಂಸ್ಥೆ – ಬಳಕೆಯ ಶಬ್ದಗಳಲ್ಲಿ ಎನ್ಜಿಓ -ಗಳಲ್ಲಿ ಅತೀ ಹೆಚ್ಚಿನವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದಿಂದ ಪ್ರೇರಿತರಾಗಿರುವ ಸ್ವಯಂಸೇವಕರು ನಡೆಸುವಂತಹವು. ತನ್ನ ಭೌಗೋಲಿಕ ವ್ಯಾಪಕತೆಯಲ್ಲಿ, ಚಟುವಟಿಕೆಗಳ ವೈವಿಧ್ಯದಲ್ಲಿ, ಸಹಭಾಗಿತ್ವ ಮತ್ತು ಫಲಾನುಭವಿಗಳ ಪ್ರಮಾಣದಲ್ಲಿ ಇವು ಇನ್ನಿತರ ಯಾವುದೇ ಒಂದು ಸಂಘಟನೆಯಿಂದ ಪ್ರೇರಿತರಾಗಿರುವವರು ನಡೆಸುವಂತಹ ಕಾರ್ಯಗಳಿಗಿಂತ ತುಂಬಾ ಮುಂದಿರುವಂತಹವು. ಕಳೆದ ಮಾರ್ಚ್ನಲ್ಲಿ ಪುತ್ತೂರಿನಲ್ಲಿ ನಡೆದಿದ್ದ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ವರದಿಯಾಗಿರುವಂತೆ ದೇಶದ 78655 ಊರುಗಳಲ್ಲಿ 1,26,669 ರಷ್ಟು ಸೇವಾ ಚಟುವಟಿಕೆಗಳನ್ನು ಸ್ವಯಂಸೇವಕರು ನಡೆಸುತ್ತಿದ್ದಾರೆ. ಇವುಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 64115 ಆರೋಗ್ಯ ಕ್ಷೇತ್ರದಲ್ಲಿ 19664ಹಾಗೂ ಅನ್ಯ ಸಮಾಜ ಸೇವಾಕ್ಷೇತ್ರಗಳಲ್ಲಿ 23853 ಮತ್ತು ಸ್ವಾವಲಂಬನದ ಕ್ಷೇತ್ರದಲ್ಲಿ ಸ್ವಸಹಾಯ ಕೇಂದ್ರಗಳಾಗಿ 19037 ಇವೆ. ಇವಲ್ಲದೆ ದೇಶದ 743 ಗ್ರಾಮಗಳಲ್ಲಿ ಅಲ್ಲಲ್ಲಿನ ಸ್ವಯಂಸೇವಕರು ಸ್ವಗ್ರಾಮಗಳ ಅನೇಕ ಮುಖ ವಿಕಾಸದ ಸಫಲ ಪ್ರಯತ್ನದಲ್ಲೂ ಕಾರ್ಯನಿರತರಾಗಿದ್ದಾರೆ. ಅವರ ಇಂತಹ ಅಮೋಘ ಸಾಧನೆಗೆ ಈ ಅಂಕೆ ಸಂಖ್ಯೆಗಳೇ ಕನ್ನಡಿ ಹಿಡಿದಿವೆ.
1925ರಲ್ಲಿ ಆರಂಭವಾದ ಸಂಘದ ಕಾರ್ಯ ಕಳೆದ 86 ವರ್ಷಗಳಲ್ಲಿ ದೇಶದ ಮೂಲೆಮೂಲೆಗೂ ಸರ್ವವ್ಯಾಪಿಯಾಗಿ ತಲುಪಿರುವುದು ಇದಕ್ಕೆ ಒಂದು ಮುಖ್ಯ ಕಾರಣವಾದಲ್ಲಿ, ಸಮಾಜದ ವಿವಿಧ ವರ್ಗಗಳ ಜನರು ಸ್ವಯಂಸೇವಕರಾಗಿ ಸಂಘದಲ್ಲಿ ಪಾಲ್ಗೊಳ್ಳುತ್ತಿರುವುದು ಹಾಗೂ ಬದುಕಿನ ವಿಭಿನ್ನ ಕ್ಷೇತ್ರಗಳಲ್ಲಿ ಅವರು ಆಸಕ್ತಿ ವಹಿಸಿ ಕ್ರಿಯಾಶೀಲರಾಗುತ್ತಿರುವುದು ಸಹ ವಿಶೇಷವಾಗಿ ಲಕ್ಷಿಸಬೇಕಾದಂತಹ ಇನ್ನೊಂದು ಸಂಗತಿ. ಹೀಗಾಗಿ ಒಟ್ಟಿನಲ್ಲಿ ರಾಷ್ಟ್ರೀಯ ವಿಕಾಸದ ಒಂದು ಬೃಹತ್ ಜನಾಂದೋಲನವಾಗಿ ಸ್ವಯಂಸೇವಕರ ಶಕ್ತಿ ಮತ್ತು ಪ್ರಭಾವ ದೇಶಕ್ಕೀಗ ಕಾಣಿಸತೊಡಗಿದೆ.
ಸ್ವಯಂಸೇವಕರ ಈ ಸೇವಾಚಟುವಟಿಕೆಗಳಲ್ಲಿ ಅವುಗಳದೇ ಆದ ಕೆಲವು ವಿಶೇಷತೆಗಳಿವೆ. ಅತ್ಯಗತ್ಯವಾಗಿ ತಿಳಿಯಬೇಕಾದಂತಹವು ಅವು.
- ಅವು ಯಾವುವೂ ಸರ್ಕಾರದ ಅನುದಾನದ ಮೇಲೆ ನಿರ್ಭರಿತವಾಗಿರುವಂತಹವಲ್ಲ. (ಸರ್ಕಾರವೇ ತನ್ನ ನೀತಿಗನುಗುಣವಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಮತ್ತು ಅನಾಥ ಶಿಶುಗಳಿಗಾಗಿ, ಅಂಗವಿಕಲ ಮಕ್ಕಳಿಗಾಗಿ ಸ್ವಯಂಸೇವಕರು ನಡೆಸುವ ಸಂಸ್ಥೆಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡುವುದು ಬೇರೆ ಮಾತು. ಸ್ವಯಂಸೇವಕರ ಅಂತಹ ಸಂಸ್ಥೆಗಳು ಸರಕಾರದ ನಿಯಮಕ್ಕನುಗುಣವಾಗಿ ಪ್ರತಿವರ್ಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವ ರೂಢಿಯೂ ಇದೆ. ಆದರೆ ಸರಕಾರ ನೀಡುವ ವಾರ್ಷಿಕ ಅನುದಾನ ಆ ಸಂಸ್ಥೆಗಳ ವರ್ಷಾವಧಿ ವೆಚ್ಚದಲ್ಲಿ ಒಂದು ಕೊಸರು ಮಾತ್ರ ಎಂಬುದೂ ಅಷ್ಟೇ ಸತ್ಯ.) ಒಟ್ಟಿನಲ್ಲಿ ಸ್ವಯಂಸೇವಕರು ನಡೆಸುವಂತಹ ಸೇವಾಸಂಸ್ಥೆಗಳು ಸರ್ಕಾರದ ಅನುದಾನವನ್ನು ನೆಚ್ಚಿಕೊಂಡು – ಅಥವಾ ಅದಕ್ಕಾಗಿಯೇ – ಇರುವಂತಹ ರೀತಿಯವು ಅಲ್ಲ.
- ವಿದೇಶಿ ನೆರವು ಪಡೆದು ಕಾರ್ಯ ನಡೆಸುವುದು ಸಹ ಸ್ವಯಂಸೇವಕರ ಸೇವಾಸಂಸ್ಥೆಗಳಲ್ಲಿ ರೂಢಿಯಲ್ಲಿಲ್ಲ. (ಅಮೆರಿಕದಲ್ಲಿನ ಕೆಲವು ಶ್ರೀಮಂತ ಸ್ವಯಂಸೇವಕರು Seva Internationalಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದಾರೆ. ಅವರದನ್ನು ಹುಟ್ಟುಹಾಕಿರುವುದು ಭಾರತದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ ಸೇವಾಕಾರ್ಯಗಳಿಗೆ – ಮುಖ್ಯವಾಗಿ ವನವಾಸಿಗಳ ಏಳ್ಗೆಗಾಗಿ ತನ್ನನ್ನು ಮುಡಿಪಾಗಿಸಿಕೊಂಡಿರುವ ಭಾರತೀಯ ವನವಾಸಿ ಕಲ್ಯಾಣಾಶ್ರಮಕ್ಕೆ – ಆರ್ಥಿಕ ನೆರವು ನೀಡುವ ಸಲುವಾಗಿಯೇ. ಹೀಗಾಗಿ ಮೇಲೆ ಹೇಳಿರುವ ನಿಯಮಕ್ಕೆ ಭಾರತೀಯ ವನವಾಸಿ ಕಲ್ಯಾಣಾಶ್ರಮ ಒಂದು ಅಪವಾದವಾಗಿರುವುದು ಸತ್ಯ. ಸ್ವಯಂಸೇವಕರು ನಡೆಸುವ ಇತರ ಸೇವಾ ಸಂಸ್ಥೆಗಳೂ ಕೆಲವೊಮ್ಮೆ ಆರ್ಥಿಕ ನೆರವಿಗಾಗಿ ಸೇವಾ ಇಂಟರ್ನ್ಯಾಶನಲ್ಗೆ ಬೇಡಿಕೆ ಸಲ್ಲಿಸುವುದುಂಟು. ಆಗ ಅಲ್ಲಿಂದ ಒಂದಿಷ್ಟು ದೇಣಿಗೆ ಅಪರೂಪವಾಗಿ ಲಭಿಸುವುದೂ ಇದೆ. ಆದರೆ ವನವಾಸಿ ಕಲ್ಯಾಣಾಶ್ರಮ ಹೊರತುಪಡಿಸಿದಲ್ಲಿ ಸೇವಾ ಇಂಟರ್ನ್ಯಾಶನಲ್ ಆರ್ಥಿಕ ನೆರವು ನೀಡುವುದು ಪ್ರಕೃತಿ ವಿಕೋಪ ಅಥವಾ ಮಾನವ ನಿರ್ಮಿತ ದುರ್ಘಟನೆಗಳಲ್ಲಿ ಅಪಾರ ಜೀವಹಾನಿ, ಆಸ್ತಿ, ಸ್ವತ್ತು ನಾಶ ಇತ್ಯಾದಿ ಸಂಭವಿಸಿದಾಗ ಅಷ್ಟೇ. ಅದು ಸ್ವಯಂಸೇವಕರ ಯಾವುದೇ ಸಂಸ್ಥೆಗೆ ಶಾಶ್ವತವಾದ ಆರ್ಥಿಕ ಮೂಲವಾಗಿ ಇರುವುದಿಲ್ಲ.)
- ತಮ್ಮ ಆರ್ಥಿಕ ಅಗತ್ಯಗಳಿಗೆ ಸ್ವಾವಲಂಬಿಯಾಗಿರುವುದೇ ಸ್ವಯಂಸೇವಕರ ಸೇವಾಸಂಸ್ಥೆಗಳು ಅನುಸರಿಸುವ ಕಾರ್ಯನೀತಿ. ನಮಗೆ ನಮ್ಮ ಸಮಾಜವೇ ಕಾಮಧೇನು, ಕಲ್ಪತರು ಎಂಬುದು ಸ್ವಯಂಸೇವಕರ ನಂಬಿಕೆ. ಸಮಾಜದ ಹಿತಕ್ಕಾಗಿ ನಿಸ್ಪೃಹರಾಗಿ – ಹೆಸರು, ಕೀರ್ತಿಗೂ ಅಪೇಕ್ಷೆ ಪಡದೆ – ದುಡಿದು ಅದರ ವಿಶ್ವಾಸ ಗಳಿಸಿದಲ್ಲಿ ಅದಕ್ಕಿಂತ ಮಿಗಿಲಾದ ಶಕ್ತಿ ಬೇರಾವುದೂ ಬೇಕಾಗುವುದಿಲ್ಲ. ನಮ್ಮ ಸಮಾಜದಲ್ಲಿ ಅಂತಹ ಸಾಮರ್ಥ್ಯವೂ ಇದೆ, ಉದಾರತೆಯೂ ಇದೆ ಎಂಬುದೇ ಸ್ವಯಂಸೇವಕರ ಅನುಭವ. ಮುಖ್ಯವಾಗಿ ಬೇಕಾದುದು ಸಮಾಜದ ವಿಶ್ವಾಸದ ಗಳಿಕೆ. ಇತ್ತೀಚಿನ ದಿನಗಳಲ್ಲಂತೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಅಪಾರ ಜೀವಹಾನಿ, ಆಸ್ತಿ ನಷ್ಟ ಇತ್ಯಾದಿ ಸಂಭವಿಸಿದಾಗ, ಅನೇಕ ಖ್ಯಾತನಾಮ ಉದ್ಯಮಗಳು, ಸಮಾಜದ ಗಣ್ಯರು ತಮ್ಮ ದೇಣಿಗೆಯನ್ನು ಇನ್ನಾರಿಗೂ ನೀಡದೆ ಸ್ವಯಂಸೇವಕರ ಕೈಗಳಿಗೆ ತಾವಾಗಿಯೇ ತಂದೊಪ್ಪಿಸುವುದು ಮಾಮೂಲಿಯಾಗಿದೆ. ಸ್ವಯಂಸೇವಕರು ಸಮಾಜದ ವಿಶ್ವಾಸಕ್ಕೆ ಪಾತ್ರರಾಗಿರುವುದಕ್ಕೆ ಇದೊಂದೇ ಸಾಕ್ಷಿ ಸಾಕಾದೀತು. ಸಂಘದ ಪ್ರೇರಣೆಯಿಂದ ಆರಂಭವಾಗಿರುವ ಯಾವುದೇ ಕಾರ್ಯ ಹಣದ ಅಡಚಣೆಯಿಂದಾಗಿ ನಿಂತಿರುವ ಉದಾಹರಣೆ ಈವರೆಗಿಲ್ಲ.
- ತಮ್ಮೆಲ್ಲ ಸಾಮಾಜಿಕ ಕಾರ್ಯಗಳಲ್ಲಿ ಇತರರ ಸಹಭಾಗಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವುದು ಸ್ವಯಂಸೇವಕರು ಸಾಮಾನ್ಯವಾಗಿ ಅನುಸರಿಸುವ ಕಾರ್ಯಸೂತ್ರ. ಕೆಲಸಕ್ಕೆ ಸಂಬಂಧಿಸಿದ ಚಿಂತನೆಯಲ್ಲಿ , ಅದರ ಯೋಜನೆಯಲ್ಲಿ ಮತ್ತು ಪ್ರತ್ಯಕ್ಷ ಪರಿಶ್ರಮಿಸುವುದರಲ್ಲಿ ತಾವಂತೂ ಅಗ್ರಪಂಕ್ತಿಯಲ್ಲಿರುವವರೇ. ಆದರೆ ಅದನ್ನು ಮಾಡುವವರು ತಾವು ಮಾತ್ರವೆಂಬಂತೆ ಆಗಲೂ ಬಾರದೆಂಬ ಎಚ್ಚರ ಅವರು ವಹಿಸುತ್ತಾರೆ. ಸಮಾಜದ ಕೆಲಸದಲ್ಲಿ ಸಹಭಾಗಿಯಾಗಬೇಕಾದುದು ಪ್ರತಿಯೊಬ್ಬನ ಕರ್ತವ್ಯವೇ. ಈ ಸಹಭಾಗಿತ್ವ ಹಲವು ರೀತಿಗಳಲ್ಲಾಗಬಹುದು. ಪ್ರತ್ಯಕ್ಷ ಪರಿಶ್ರಮದ ಮೂಲಕ, ವಸ್ತು ಅಥವಾ ಧನದ ನೆರವಿನ ಮೂಲಕ, ಸ್ವಂತದ ಕೌಶಲ್ಯ, ಅನುಭವ – ಇವುಗಳ ಉಚಿತ ಹಂಚಿಕೆಯ ಮೂಲಕ – ಹೀಗೆ ಸಮಾಜದ ಕೆಲಸಗಳಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬರಿಗೂ ಹಲವಾರು ಮಾರ್ಗಗಳಿವೆ. ಮುಖ್ಯವಾಗಿ ಸಮಾಜದ ಕೆಲಸದಲ್ಲಿ ತನಗೂ ಒಂದು ಹೊಣೆಯಿದೆಯೆಂದು ಪ್ರತಿಯೊಬ್ಬನಿಗೂ ಅನಿಸಬೇಕು. ಸಮಾಜದಿಂದ ಹತ್ತುಹಲವು ರೀತಿಗಳಲ್ಲಿ ಉಪಕೃತರಾಗುವ ನಮಗೆ ಅದರ ಋಣ ತೀರಿಸಬೇಕಾದ ಹೊಣೆ ಇಲ್ಲವೆ? ಅದನ್ನು ಅಲಕ್ಷಿಸುವಂತಿಲ್ಲ ಎಂಬ ಅರಿವು ಮನದಲ್ಲಿ ಸದಾ ಜಾಗೃತವಾಗಿರಬೇಕು. ಯಾವುದೇ ಸಾಮಾಜಿಕ ಕಾರ್ಯವನ್ನು ತಾವು ಮಾತ್ರ ಮಾಡುವುದರಲ್ಲಿ ಸ್ವಯಂಸೇವಕರು ತೃಪ್ತರಾಗುವುದಿಲ್ಲ. ಬದಲಾಗಿ ಅತೀ ಹೆಚ್ಚಿನ ಜನರು ಅದರಲ್ಲಿ ಸಹಭಾಗಿಯಾಗುವಂತೆ ಅವರು ಲಕ್ಷ್ಯ ವಹಿಸುತ್ತಾರೆ. ಸಮಾಜದ ಕೆಲಸದಲ್ಲಿ ಪ್ರತಿಯೊಬ್ಬರೂ ರುಚಿ ಕಾಣಬೇಕು ಮತ್ತು ಕ್ರಮೇಣ ಅದನ್ನು ಸ್ವಭಾವವಾಗಿ ಮೈಗೂಡಿಸಿಕೊಳ್ಳಬೇಕು ಎಂಬುದು ಸ್ವಯಂಸೇವಕರ ದೃಷ್ಟಿ.
- ಸ್ವಯಂಸೇವಕರು ನಡೆಸುವ ಯಾವುದೇ ಕಾರ್ಯವಾದರೂ ನೇರವಾಗಿ ಸಂಘದ ಅಂಕಿತಕ್ಕೊಳಪಟ್ಟಿರುವುದೆಂದೇನಲ್ಲ. ತಮ್ಮದೇ ಮೂಲ ಚಿಂತನೆ. (Initiative), ಕಾರ್ಯದ ರಚನೆ ಮತ್ತು ನಿರ್ವಹಣೆ, ಅದಕ್ಕಾಗಿ ಅಗತ್ಯವೆನಿಸುವ ಕಾರ್ಯಕರ್ತರ ಪಡೆ ಮತ್ತು ಸಂಪನ್ಮೂಲಗಳ ಜೋಡಣೆ, ಹಣಕಾಸು ವ್ಯವಸ್ಥೆ, ಕಾರ್ಯದಲ್ಲಿ ಗುಣಾತ್ಮಕ ವಿಕಾಸಕ್ಕಾಗಿ ಅದರ ಶೈಲಿಯ ಮತ್ತು ಸಫಲತೆ – ವಿಫಲತೆಗಳ ವಿಶ್ಲೇಷಣೆ, ಹೊಸ ಹೊಸ ಪ್ರಯೋಗಗಳ ಸಂಯೋಜನೆ ಇತ್ಯಾದಿ ಎಲ್ಲವನ್ನೂ ಮಾಡುವವರು ಆಯಾ ಕೆಲಸಕ್ಕಾಗಿ ತಮ್ಮನ್ನು ಮುಡಿಪಾಗಿಸಿಕೊಂಡ ಸ್ವಯಂಸೇವಕರೇ. ಸಂಘದ ಪಾತ್ರ ಏನಿದ್ದರೂ ಆರಂಭದ ಹಂತದಲ್ಲಿ ಪ್ರೇರಣೆ ಮತ್ತು ಸಲಹೆಯ ನಿಟ್ಟಿನಲ್ಲಿ ಮಾತ್ರ ; ಅಗತ್ಯವೆನಿಸಿದಲ್ಲಿ ಒಂದಿಷ್ಟು ಬೀಜಧನ (seed money) ಒದಗಿಸಬಹುದು. ಕಾರ್ಯದಲ್ಲಿ ಸಮಸ್ಯೆಗಳೆದುರಾದಾಗ ಪ್ರಮುಖರ ಜೊತೆ ಸಮಾಲೋಚನೆಯಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಬಹುದು. ನಿರ್ವಹಣೆಗಾಗಿ ಹೆಚ್ಚಿನ ಕಾರ್ಯಕರ್ತರ ಬೇಡಿಕೆ ಇದ್ದಲ್ಲಿ ಅವರನ್ನು ಒದಗಿಸಲೂ ಬಹುದು. ಆದರೆ ಯಾವುದೇ ಕಾರ್ಯದ ಮೇಲೆ ಸಂಘದ ಅಂಕಿತ ಅಥವಾ ನಿಯಂತ್ರಣವೆಂಬುದಿಲ್ಲ.
- ಸಾಮಾಜಿಕ ಕಾರ್ಯಗಳಿಗೆ ಸಂಬಂಧಿಸಿ ಸಂಘದ ಕಾರ್ಯನೀತಿ : “ನಿಷ್ಕ್ರಿಯ ಪ್ರೇರಣಾತ್ಮಕ” (passively motivating) ಎಂಬಂತೆ. ಈ ಕಲ್ಪನೆಯನ್ನು ಸ್ಪಷ್ಟೀಕರಿಸಲು ಪ್ರಾಯಶಃ ಒಂದು ಉದಾಹರಣೆ ಉಪಯುಕ್ತವಾದೀತು. ಸೂರ್ಯ ಪ್ರಚಂಡ ಶಕ್ತಿಶಾಲಿ. ತನ್ನ ಸ್ಥಾನದಲ್ಲೇ ಸ್ಥಿರವಾಗಿ ಇದ್ದೂ ಸಹ ಸಹಸ್ರಾರು ಗ್ರಹಗಳು ತಮ್ಮ ನಿಗದಿತ ಪಥದಲ್ಲೇ ಚಾಚೂ ತಪ್ಪದೆ ಚಲಿಸುವಂತೆ ಮಾಡಬಲ್ಲವನು ಅವನು. ಅವನ ಗುರುತ್ವ ಶಕ್ತಿ ಎಲ್ಲ ಗ್ರಹಗಳಿಗೆ ಚೈತನ್ಯದಾಯಕವಾಗಿರುವುದಲ್ಲದೆ ಅವುಗಳ ಭ್ರಮಣದಲ್ಲೂ ಪರಸ್ಪರ ಸಮನ್ವಯವನ್ನು ಕಾಪಾಡಬಲ್ಲದು. ತನ್ನ ಸುತ್ತ ತಿರುಗುತ್ತಿರುವಂತಹ ಗ್ರಹಗಳ ಹೋಲಿಕೆಯಲ್ಲಿ ಅವನು ನಿಶ್ಚಲ ; ಆದರೆ ಅವೆಲ್ಲದಕ್ಕೂ ಚಾಲಕ ಶಕ್ತಿ ಅವನೇ. ಸ್ವಯಂಸೇವಕರು ಮಾಡುವಂತಹ ಎಲ್ಲ ಸಾಮಾಜಿಕ ಕಾರ್ಯಗಳಲ್ಲೂ ಸಂಘದ ಪಾತ್ರ ಇದೇ ರೀತಿಯದು.
- ಹೀಗಾಗಿ ಅಂತಹ ಸಾಮಾಜಿಕ ಕಾರ್ಯಗಳು – ಕೆಲವೊಮ್ಮೆ ಅವು ಬೃಹತ್ ಸಂಸ್ಥೆಗಳಾಗಿ ಬೆಳೆದಿದ್ದರೂ – ಸಂಘದ ಉಪಸಂಸ್ಥೆ (outfits)ಗಳೆಂದಲ್ಲ. Outfit ಬೇಕಾಗುವುದು ರಾಜಕೀಯ ಪಕ್ಷಗಳಿಗೆ. ಸಮಾಜದ ಯಾವುದೋ ವರ್ಗ ಅಥವಾ ಕ್ಷೇತ್ರದ ಮೇಲೆ ತಮ್ಮ ವರ್ಚಸ್ಸು ಸ್ಥಾಪಿಸಿ, ಅದರಿಂದ ಚುನಾವಣೆಯಲ್ಲಿ ತಮಗೆ ಲಾಭ ಸಾಧಿಸಿಕೊಳ್ಳಲು ರಾಜಕೀಯ ಪಕ್ಷಗಳು ತಮಗೆ ಬೇಕಾದಂತಹ ಟ್ಠಠ್ಛಿಜಿಠಿo ಗಳನ್ನು ಹುಟ್ಟುಹಾಕುತ್ತವೆ. ಆ ಟ್ಠಠ್ಛಿಜಿಠಿoಗಳ ಕಾರ್ಯನೀತಿಯ ನಿರ್ಧಾರ, ನಾಯಕರ ನಿಯುಕ್ತಿ, ಹಣಕಾಸು ವ್ಯವಸ್ಥೆ ಇತ್ಯಾದಿ ಮಾಡಿ ಅವುಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳುವುದೇ ರಾಜಕೀಯ ಪಕ್ಷಗಳ ರೀತಿ. ಆದರೆ ಸಂಘ ಒಂದು ರಾಜಕೀಯ ಪಕ್ಷವೇ ಅಲ್ಲ. ಹೀಗಾಗಿ ರಾಜಕೀಯ ಲಾಭದ ಅಪೇಕ್ಷೆಯೂ ಅದರಲ್ಲಿಲ್ಲ. ತನ್ನ ಉದ್ದೇಶದ ಸಾಧನೆಗಾಗಿ ಸಂಘವು ಇನ್ನಾವುದೇ ಉಪಸಂಸ್ಥೆಯ ಮೇಲೆ ಅವಲಂಬಿತವಾಗಿರುವುದೂ ಇಲ್ಲ. ಹೀಗಾಗಿ ಸಂಘಕ್ಕೆ ಟ್ಠಠ್ಛಿಜಿಠಿoಗಳೆಂಬುದಿಲ್ಲ. ನಿಜ, ಸ್ವಯಂಸೇವಕರು ನಡೆಸುವಂತಹ ಎಲ್ಲ ಸಾಮಾಜಿಕ ಕಾರ್ಯಗಳು ಪರಸ್ಪರ ಸಹಕಾರ ಮತ್ತು ಸಮನ್ವಯವಿರಿಸಿಕೊಂಡು ಒಟ್ಟು ದೇಶ ಹಿತದ ಒಂದೇ ಗುರಿಯೆಡೆಗೆ ಮುನ್ನಡೆಯಬೇಕೆಂದು ಸಂಘ ಅಪೇಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಅವುಗಳಲ್ಲಿ ಪಾರಿವಾರಿಕ ಶೈಲಿಯ (Family like)ಸಂಬಂಧವಿರುವಂತೆ ಸಂಘವು ಲಕ್ಷ್ಯವೀಯುವುದು ಮಾತ್ರ ಸತ್ಯ. ಈ ಪರಿವಾರದ ಮುಖ್ಯಸ್ಥನಾಗಿ ಅಂತಹ ಸಹಕಾರ ಮತ್ತು ಸಮನ್ವಯ ಕಾಪಾಡುವ ಹೊಣೆಯನ್ನು ಸಂಘ ವಹಿಸುತ್ತದೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅದಕ್ಕಿಂತ ಮಿಗಿಲಾಗಿ ಬೇರೇನೂ ಇರುವುದೂ ಇಲ್ಲ.
- ಹಲವು ಶತಮಾನಗಳ ಕಾಲ ವಿದೇಶಿ ಆಕ್ರಮಕರ ವಿರುದ್ಧ ಸತತವಾಗಿ ಸಂಘರ್ಷ ನಡೆಸಿದ, ನಡು ನಡುವೆ ಕೆಲವೊಮ್ಮೆ ಗೆದ್ದಿದ್ದರೂ ಮೇಲಿಂದ ಮೇಲೆ ಸೋತಿದ್ದ , ಪರಿಣಾಮವಾಗಿ ಸುದೀರ್ಘವಾದ ಗುಲಾಮಗಿರಿ ಅನುಭವಿಸಿದ ರಾಷ್ಟ್ರಜೀವನ ನಮ್ಮದು. ಇವೆಲ್ಲದರಿಂದಾಗಿ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಬದುಕು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದುದು ಕಠೋರ ವಾಸ್ತವಿಕತೆ. ಈ ಕಾಲಾವಧಿಯಲ್ಲಿ ಹತ್ತಾರು ವಿಧ ವಿಕೃತಿಗಳು, ದೋಷ ದುರ್ಗುಣಗಳು ನಮ್ಮಲ್ಲಿ ನುಸುಳಿಕೊಂಡಿದ್ದುದೂ ಒಪ್ಪಲೇ ಬೇಕಾದ ಸಂಗತಿ. ಇವೆಲ್ಲ ಕಾರಣಗಳಿಂದಾಗಿ ಹಳಿ ತಪ್ಪಿದ್ದ ನಮ್ಮ ರಾಷ್ಟ್ರಜೀವನವನ್ನು ಸ್ವರಾಜ್ಯಪ್ರಾಪ್ತಿಯ ನಂತರ ಪುನರಪಿ ಹಳಿಗೆ ತರಬೇಕಾಗಿದ್ದುದೇ ನಮ್ಮ ಮುಂದಿದ್ದ ಬಹು ದೊಡ್ಡ ಸವಾಲು. ಕೇವಲ ಸ್ವಕೀಯರ ಸರ್ಕಾರ ಆಳ್ವಿಕೆಗೆ ಬಂದ ಮಾತ್ರದಿಂದ ಸರಿಪಡಿಸಬಹುದಾದ ಕೆಲಸವಾಗಿರಲಿಲ್ಲ ಅದು. ಸಂಪೂರ್ಣ ಸಮಾಜದ ಸ್ವಯಂಪ್ರೇರಿತ ಸಹಭಾಗಿತ್ವಕ್ಕೂ ಅದಕ್ಕೆ ಅತ್ಯಗತ್ಯವಾಗಿತ್ತು. ‘ಈ ರಾಷ್ಟ್ರ ನಮ್ಮದು’, ‘ಇದರ ಏಳ್ಗೆ ಸಾಧಿಸಬೇಕಾದವರು ನಾವೇ’, ‘ಇದರಲ್ಲಿನ ವಿಕೃತಿಗಳ, ದೋಷಗಳ ನಿವಾರಣೆಯ ಹೊಣೆಯೂ ನಮ್ಮದೇ ಅಲ್ಲದೆ ಇನ್ನಾರದೂ ಅಲ್ಲ’ ಎಂಬಂತಹ ಜನಮಾನಸ ರೂಪಿಸುವುದೇ ಮೊಟ್ಟಮೊದಲು ಆಗಬೇಕಾಗಿದ್ದ ಕೆಲಸ. ಒಮ್ಮೆ ಇಂತಹ ಮಾನಸಿಕತೆಯಿಂದ ಇಲ್ಲಿನ ಪ್ರತಿಯೊಬ್ಬನೂ ಓತಪ್ರೋತನಾದಲ್ಲಿ ಮುಂದಿನ ಕೆಲಸ ಸಲೀಸು. ಈ ನಿಷ್ಕರ್ಷೆ ಮನಗಂಡು ಸಂಘವು ಕಳೆದ ೮೬ ವರ್ಷಗಳಿಂದ ನಿತ್ಯಶಾಖೆಯ ಆಟ, ಹಾಡು, ಚರ್ಚೆ, ಪ್ರಾರ್ಥನೆಯಂತಹ ಸರಳವಾದ ಕಾರ್ಯಕ್ರಮಗಳ ಮೂಲಕ ಮೊದಲು ವ್ಯಕ್ತಿನಿರ್ಮಾಣದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿತು. ಸಂಘದ ಈ ಸಾಧನೆಯ ಫಲವಾಗಿಯೇ ಇಂದು ದೇಶಾದ್ಯಂತ ಲಕ್ಷಾಂತರ ಸ್ವಯಂಸೇವಕರು ರಾಷ್ಟ್ರದ ಪುನರ್ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾದ ಮನೋಧರ್ಮವನ್ನು ಮೈಗೂಡಿಸಿಕೊಂಡಿದ್ದಾರೆ. ಅವರೀಗ ವಿಭಿನ್ನ ಸಾಮಾಜಿಕ ಕಾರ್ಯದಲ್ಲಿ ಕ್ರಿಯಾಶೀಲರಾಗುತ್ತ ಸಮಾಜ ಪರಿವರ್ತನೆಯ ಮಹತ್ಕಾರ್ಯದಲ್ಲಿ ಸಹಭಾಗಿಗಳಾಗುತ್ತಿರುವುದು ಅವರು ಸಂಘದಲ್ಲಿ ಪಡೆದಿರುವ ತದನರೂಪ ಸಂಸ್ಕಾರಗಳದೇ ಅಭಿವ್ಯಕ್ತಿ.
ಆರಂಭದ ನಾಲ್ಕೈದು ದಶಕಗಳ ಕಾಲ ತನ್ನ ಸಂಘಟನಾತ್ಮಕ ರಚನೆಯನ್ನು ವಿಸ್ತರಿಸಿ ದೃಢಗೊಳಿಸುವುದರಲ್ಲೇ ಸಂಘವು ಲಕ್ಷ್ಯ ಹರಿಸಿದುದು ಸಹಜವೇ. ಯಾವುದೇ ಸಂಘಟನೆಯಾದರೂ ಮಾಡುವುದು ಅದನ್ನೇ. ಸಣ್ಣ ಬೀಜವೊಂದು ವಿಶಾಲ ವಟವೃಕ್ಷವಾಗಿ ಹೂ ಹಣ್ಣು ಬಿಡಬೇಕಾದರೂ ಹಲವು ವರ್ಷಗಳು ತಗಲುವುದು ಪ್ರಕೃತಿಯ ನಿಯಮ. ನಿಂತ ನೆಲದಲ್ಲಿ ಬೇರುಗಳನ್ನು ಆಳಕ್ಕಿಳಿಸಿ, ದೃಢವಾದ ಕಾಂಡ ಬೆಳೆಸಿ, ನೂರಾರು ಕೊಂಬೆರೆಂಬೆಗಳನ್ನು ಹರಡಿಸಿದ ನಂತರವಷ್ಟೇ ವೃಕ್ಷವು ಹೂ ಹಣ್ಣು ಕೊಡಲಾರಂಭಿಸುತ್ತದೆ ; ಪಶುಪಕ್ಷಿಗಳಿಗೆ ಆಶ್ರಯ ನೀಡುತ್ತದೆ ; ತನ್ನ ಮಡಿಲಿಗೆ ಬರುವವರಿಗೆ ತಂಪಿನ ನೆರಳು ಒದಗಿಸುತ್ತದೆ. ವಿಮಾನವೊಂದು ಆಗಸಕ್ಕೆ ನೆಗೆಯುವ ಮೊದಲು ಒಂದಿಷ್ಟು ದೂರ ನೆಲದಲ್ಲೇ ಓಡುತ್ತ, ಸಾಕಷ್ಟು ವೇಗ ಗಳಿಸಿದ ನಂತರವೇ ಮೇಲಕ್ಕೆ ಜಿಗಿಯುತ್ತದೆ. ಸಂಘದ ಸ್ವಯಂಸೇವಕರು ಈಗ ವಿಭಿನ್ನ ಸಾಮಾಜಿಕ ಕಾರ್ಯಗಳಲ್ಲಿ ಪೂರ್ಣ ಶಕ್ತಿ ತೊಡಗಿಸಿ ಕ್ರಿಯಾಶೀಲರಾಗುತ್ತಿರುವುದು ಸಹ ಸಂಘದ ಮೂಲ ಕಾರ್ಯವು ದೃಢ, ವಿಸ್ತೃತ ಹಾಗೂ ಪ್ರಭಾವೀಯಾದ ನಂತರವಷ್ಟೆ. ಸಂಘದ ಹಲವು ದಶಕಗಳ ಬೆಳವಣಿಗೆ ಮತ್ತು ಈಗ ಸ್ವಯಂಸೇವಕರು ಮಾಡುವಂತಹ ಎಲ್ಲ ಕಾರ್ಯಗಳೂ ರಾಷ್ಟ್ರದ ಪುನರ್ನಿರ್ಮಾಣಕ್ಕಾಗಿಯೇ ಇರುವಂತಹವು. ಇನ್ನೀಗ ಅವರ ಅಂತಹ ಕಾರ್ಯಗಳ ವೇಗ, ವ್ಯಾಪ್ತಿ ಮತ್ತು ಪ್ರಭಾವ ಸದಾ ವೃದ್ಧಿಂಗತವಾಗುವಂತಹವೇ.
ಈಗ ಹೇಳಿ, ಇಂತಹ ಕಾರ್ಯಗಳಿಗಾಗಿ ತಮ್ಮನ್ನು ಮುಡಿಪಾಗಿಸಿಕೊಂಡವರು ಆತಂಕವಾದಿ ಮಾನಸಿಕತೆಯವರಾಗಿರುವುದು ಸಾಧ್ಯವೇ? ಸೇವಾ ಕಾರ್ಯಗಳ ಮೂಲಕ ರಾಷ್ಟ್ರದ ಪುನರ್ನಿರ್ಮಾಣ ಮತ್ತು ಆತಂಕವಾದ ಇವು ವಿರೋಧಾಭಾಸವಲ್ಲವೆ? ಸೇವೆಯ ಮನೋಧರ್ಮ ರೂಢಿಸಿಕೊಂಡವರು ಆತಂಕವಾದಿಗಳೂ ಆಗುವುದು ಎಲ್ಲಾದರೂ ಉಂಟೆ? ವ್ಯತಿರಿಕ್ತವಾಗಿ ಆತಂಕವಾದವನ್ನು ತಮ್ಮ ಬದುಕಿನ ಶೈಲಿಯಾಗಿ ಮಾಡಿಕೊಂಡವರು ಸಮಾಜ ಸೇವೆಗೂ ಮುಂದಾಗಿರುವ ಉದಾಹರಣೆಯಾದರೂ ಇದೆಯೇ? ಬೇರೆಯವರ ಸೇವೆ ಬಿಡಿ, ತಮ್ಮ ಸ್ವಸಮುದಾಯದವರಲ್ಲಿ ಮತಾಂಧತೆ ಬೆಳೆಸುವುದು ಬಿಟ್ಟು, ಅವರ ಏಳಿಗೆಗಾಗಿ ಒಲವು ತೋರಿರುವುದುಂಟೇ?
ತದ್ವಿರುದ್ಧವಾಗಿ ಸ್ವಯಂಸೇವಕರ ರೀತಿ ನೋಡಿ. ಸಮಾಜ ಸೇವೆಯ ಯಾವುದೇ ಕಾರ್ಯಕ್ರಮದಲ್ಲಿ ಜಾತಿ, ಮತ, ವರ್ಗ ಇತ್ಯಾದಿ ಅವರು ನೋಡುವವರಲ್ಲ. ಹಿಂದೂ ಸ್ವಭಾವತಃ ವಿಶ್ವಕುಟುಂಬಿ. ಪೀಡಿತರ, ನೊಂದವರ, ಜಾತಿ, ಮತ, ಕುಲ, ವರ್ಗ ಇತ್ಯಾದಿ ಲಕ್ಷಿಸದೆ ಸೇವೆ ಮಾಡಬೇಕೆಂಬುದೇ ಹಿಂದುಗಳ ರೀತಿ. ಸ್ವಯಂಸೇವಕರು ತಮ್ಮ ಸೇವಾಕಾರ್ಯಗಳಲ್ಲಿ ಅನುಸರಿಸುತ್ತಿರುವುದು ಇದೇ ಆದರ್ಶ. ಉದಾಹರಣೆಗಳು ಒಂದೆರಡಲ್ಲ, ಹಲವಾರು. ಪ್ರಾತಿನಿಧಿಕವಾಗಿ ಇಲ್ಲಿವೆ ಕೆಲವು.
೧. ಹಿಂದೊಮ್ಮೆ ಗುಜರಾತ್ನ ಮೋರ್ವಿಯಲ್ಲಿ ಪ್ರವಾಹ ಬಂದು ಜನಜೀವನವೆಲ್ಲ ಉಧ್ವಸ್ತಗೊಂಡು ನೂರಾರು ಕುಟುಂಬಗಳು ತಮ್ಮದೆಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿದ್ದವು. ಆಗ ರಂಜಾನ್ ದಿನಗಳು. ಪೀಡಿತರಲ್ಲಿ ಅನೇಕ ಮುಸಲ್ಮಾನ ಪರಿವಾರಗಳಿದ್ದವು. ಅವರ ನೆರವಿಗೆ ಧಾವಿಸಿದ ಸ್ವಯಂಸೇವಕರು ಅವರೆಲ್ಲರ ಪುನರ್ವಸತೀಕರಣದ ತನಕ ಪ್ರತಿನಿತ್ಯ ಅವರಿಗೆ ನಮಾಜ್ಗಾಗಿ ವ್ಯವಸ್ಥೆ ಮಾಡುತ್ತಿದ್ದುದಲ್ಲದೆ, ರಾತ್ರಿಹೊತ್ತು ಅವರಿಗಾಗಿಯೇ ಪ್ರತ್ಯೇಕ ಅಡುಗೆ ಮಾಡಿ ಊಟ ಬಡಿಸುತ್ತಿದ್ದುದೂ ಉಂಟು.
೨. ಒಮ್ಮೆ ಹರಿಯಾಣ ಪ್ರದೇಶದ ಆಕಾಶದಲ್ಲಿ ಹಾರುತ್ತಿದ್ದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು, ಬೆಂಕಿಹೊತ್ತಿ ಚರ್ಕಿ-ದಾದ್ರಿ ಎಂಬ ಗ್ರಾಮದ ಬಳಿ ಉರುಳಿಬಿದ್ದವು. ಅರಬ್ ದೇಶಗಳಿಗೆ ಸೇರಿದ್ದ ಇವೆರಡೂ ವಿಮಾನಗಳಲ್ಲಿದ್ದು ಸತ್ತ ಪ್ರಯಾಣಿಕರ ಪೈಕಿ ಸುಮಾರಾಗಿ ಹೆಚ್ಚಿನವರು ಆ ದೇಶಗಳ ನಾಗರಿಕರೇ. ದುರಂತ ಸಂಭವಿಸಿದಂತೆಯೇ ಆ ಗ್ರಾಮದ ಸ್ವಯಂಸೇವಕರು ಸತ್ತವರ ಶವಗಳಿಗೆ ಅಗತ್ಯವೆನಿಸಿದ ಸರ್ವವಿಧ ವ್ಯವಸ್ಥೆ ಮಾಡಿದಲ್ಲದೆ, ಅವುಗಳನ್ನು ಸ್ವದೇಶಕ್ಕೆ ಒಯ್ಯಲು ಬಂದಿದ್ದ ಅವರ ಪರಿವಾರದವರಿಗೆ ಆಹಾರ, ವಸತಿ, ಶವ ಗುರುತಿಸಲು ನೆರವು, ಅಮೂಲ್ಯ ವಸ್ತುಗಳ ಸಂರಕ್ಷಣೆ ಹಾಗೂ ವಾರಸುದಾರರಿಗೆ ಅವನ್ನು ಸುರಕ್ಷಿತವಾಗಿ ತಲುಪಿಸುವುದು ಇತ್ಯಾದಿ ಎಲ್ಲವನ್ನೂ , ಸತ್ತವರು ತಮ್ಮ ಪರಿವಾರದವರೇ ಏನೋ ಎಂಬಂತೆ ತಿಳಿದು ನೆರವಾದರು. ಆಪತ್ತಿನ ಸಂದರ್ಭದಲ್ಲಿ ಗುರುತು ಪರಿಚಯವೇ ಇಲ್ಲದವರಿಗೂ ಅಂತಹ ತುಂಬುಮನದ ಸಹಾಯಕ್ಕೆ ಸ್ವಯಂಸೇವಕರು ಮುಂದಾಗಿರುವುದು ಆಯಾ ದೇಶದ ಮಾಧ್ಯಮದವರಿಗೆ ನಂಬಲೂ ಸಹ ಆಗದಂತಹ ವಿದ್ಯಮಾನವಾಗಿತ್ತದು. ಆ ದಿನಗಳಲ್ಲಿ ಭಾರತದ ವಿಮಾನಯಾನ ಖಾತೆಯ ಮಂತ್ರಿ ಆಗಿದ್ದವರು ಸ್ವತಃ ಓರ್ವ ಮುಸಲ್ಮಾನ ನಾಯಕರು. ಅವರು ಸಹ ಸ್ವಯಂಸೇವಕರಿಗೆ ಬಿಚ್ಚುಮನದ ಆಭಾರ ಸಲ್ಲಿಸಿರುವ ದಾಖಲೆ ಇದೆ.
೩. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಸೆರೆಮನೆಗಳಲ್ಲಿ ಸ್ವಯಂಸೇವಕರ ಜೊತೆಯಲ್ಲಿ ಅನ್ಯ ಕಾರಣಕ್ಕಾಗಿ ಬಂಧಿತರಾಗಿದ್ದ ಜಮಾತೆ ಇಸ್ಲಾಂನ ಕೆಲವು ಮುಸಲ್ಮಾನ ಕೈದಿಗಳೂ ಇದ್ದರು. ಸಹಬಂದಿ ಗಳಾಗಿದ್ದ ಕಾರಣದಿಂದಾಗಿ ಪರಸ್ಪರರಲ್ಲಿ ಸ್ನೇಹ ಬೆಳೆಯಿತು. ಕೆಲವು ಸಂದರ್ಭಗಳಲ್ಲಿ ಜಮಾತ್ನ ಬಂಧುಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಹೊರಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಅಂದಿನ ಸನ್ನಿವೇಶದಲ್ಲಿ ಜಾಮೀನು ನೀಡಲು ಸ್ವಸಮುದಾಯದವರೇ ಹೆದರಿ ಹಿಂದೇಟು ಹಾಕುತ್ತಿದ್ದುದುಂಟು. ಆದರೆ ಅದೇ ತಾನೇ ಪರಿಚಯವಾಗಿದ್ದರೂ ಸ್ವಯಂಸೇವಕರು (ಹೊರಗಿದ್ದವರು) ಅಂತಹವರಿಗೆ ಪೂರಾ ವಿಶ್ವಾಸದಿಂದ ಜಾಮೀನು ನೀಡಿದ್ದುಂಟು. ನೆರವಾಗಬೇಕಾದುದು ಆಪತ್ಕಾಲದಲ್ಲಲ್ಲದೆ ಇನ್ಯಾವಾಗ?
ಇವು ಕೆಲವು ಉದಾಹರಣೆಗಳು, ಅಷ್ಟೆ. ಕಷ್ಟದಲ್ಲಿರುವವರಿಗೆ ನೆರವಾಗುವಾಗ ಜಾತಿ, ಮತ, ಕುಲ ನೋಡಬಾರದೆಂಬುದು ಸ್ವಯಂಸೇವಕರ ದೃಷ್ಟಿ. ಇಂತಹವರು ಆತಂಕವಾದಿಗಳಾಗುವರೇ?
ಆದರೆ ಆ ರೀತಿ ತಿಳಿಯುವ ವಿಕೃತ ಬುದ್ಧಿಯವರೂ ಕೆಲವರಿದ್ದಾರೆ. ಅವರಿಗೆ ಸ್ವಯಂಸೇವಕರು ಆತಂಕವಾದಿಗಳಾಗಿ ಕಾಣುವುದು ಏಕೆ ಗೊತ್ತೆ? ತಮ್ಮ ಸೇವಾಕಾರ್ಯಗಳಿಂದಾಗಿ ಸ್ವಯಂಸೇವಕರ ಜನಪ್ರಿಯತೆ ಮತ್ತು ಸಮಾಜದ ಮೇಲೆ ಅವರ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಂತದ ರಾಜಕೀಯ ನೆಲ ಕುಸಿಯುತ್ತಿರುವ ಅನುಭವ ಅವರಿಗೆ ಆಗತೊಡಗಿದೆ. ಅವರ ಪಾಲಿಗೆ ಈ ವಿದ್ಯಮಾನ ನಿಜಕ್ಕೂ ಚಿಂತೆಯ ಮತ್ತು ಆತಂಕಕಾರಿ ಸಂಗತಿಯೇ ಆಗಿದೆ. ಅವರೀಗ ಸಂಘವನ್ನು ಗುರಿಯಾಗಿರಿಸಿ ಹಿಂದೂ ಆತಂಕವಾದದ ಹುಯಿಲೆಬ್ಬಿಸುತ್ತಿರುವುದು ಈ ಕಾರಣಕ್ಕಾಗಿ.
Article by Sri Chandrashekhara Bhandary, Senior Thinker-Writer, RSS Pracharak
Keshavakrupa, Bangalore.
i m very grateful to part of rss……..