Swayamsevaks' Route march undettered due to rains

ಸೇವೆಯೆಂಬ ಯಜ್ಞದಲ್ಲಿ ಸಂಘವೆಂಬ ಸಮಿಧೆ
ಆರೆಸ್ಸೆಸ್‍ಗೆ 95ರ ಹರೆಯ

ಲೇಖನ: ಟಿ. ಎಸ್. ವೆಂಕಟೇಶ್
ಕ್ಷೇತ್ರ ಸಂಪರ್ಕ ಪ್ರಮುಖ್, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ

(ಆಕ್ಟೊಬರ್ 25 ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ)


ವಿಜಯದಶಮಿ ದೇಶದೆಲ್ಲೆಡೆ ಒಂದು ಸಂಭ್ರಮದ ಹಬ್ಬ. ಆರೆಸ್ಸೆಸ್ಸಿನ ಸ್ವಯಂಸೇವಕರಿಗಂತೂ ಅದು ಇನ್ನೂ ಹೆಚ್ಚಿನ ಸಂಭ್ರಮದ ದಿನ. ಏಕೆಂದರೆ, ಆರೆಸ್ಸೆಸ್ ಸ್ಥಾಪನೆಯಾದದ್ದೂ ಇದೇ ವಿಜಯದಶಮಿಯ ಶುಭದಿನದಂದು. 1925ರಲ್ಲಿ ನಾಗಪುರದಲ್ಲಿ ಡಾಕ್ಟರ್ ಹೆಡಗೇವಾರರು ಕೆಲವು ಬಾಲಕರನ್ನು ಒಟ್ಟುಗೂಡಿಸಿ ಆರಂಭಿಸಿದ ಆರೆಸ್ಸೆಸ್ಇಂದು ಹೆಮ್ಮರವಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹಿಂದು ಸ್ವಯಂಸೇವಕ ಸಂಘ ಎಂಬ ಹೆಸರಿನಲ್ಲಿ ಸಂಘದ ಕೆಲಸ ನಡೆಯುತ್ತಿದೆ. ಸಮಾಜಕ್ಕೆ ಸಂಕಷ್ಟ-ಸವಾಲುಗಳು ಎದುರಾದಾಗಲೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್ ನೆರವಿಗೆ ಧಾವಿಸಿದೆ. ಪ್ರಕೃತಿ ವಿಕೋಪ, ಯುದ್ಧದ ಸಂದರ್ಭದಲ್ಲಷ್ಟೇ ಅಲ್ಲದೇ ಭಾರತದ ಸರ್ವಾಂಗೀಣ ಪ್ರಗತಿಗಾಗಿ ಶಿಕ್ಷಣ, ಸೇವೆ, ಪರಿಸರ ರಕ್ಷಣೆ, ಗ್ರಾಮಗಳ ವಿಕಾಸ, ಸಂಸ್ಕøತಿ-ಪರಂಪರೆಗಳ ಬಗ್ಗೆ ಜಾಗೃತಿಯಲ್ಲೂ ಆರೆಸ್ಸೆಸ್ ಮುಂಚೂಣ ಯಾಗಿ ಕೆಲಸ ಮಾಡುತ್ತಿದೆ.

ಕೋವಿಡ್-19 ರ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದಾಗ ಸಂಘದ ಸ್ವಯಂಸೇವಕರು ಹಸಿದವರ ಹೊಟ್ಟೆ ತಣ ಸುವ ಕೆಲಸ ಮಾಡಿದರು. ಸುಮಾರು 85 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ, ಒಟ್ಟು 7 ಕೋಟಿಗೂ ಅಧಿಕ ಜನರಿಗೆ ಊಟ ಒದಗಿಸಿದರು. 1.1 ಕೋಟಿ ರೇಶನ್ ಕಿಟ್ ವಿತರಣೆ, 28 ಲಕ್ಷದಷ್ಟು ವಲಸೆ ಕಾರ್ಮಿಕರಿಗೆ ಸಹಾಯ, 1.3 ಲಕ್ಷ ಜನರಿಗೆ ವಸತಿ ವ್ಯವಸ್ಥೆ ಮಾಡಿದರು. ತುರ್ತು ಔಷಧಿ ಪೂರೈಕೆ, ರಕ್ತದಾನ, ಕಷಾಯ ವಿತರಣೆ ಮೊದಲಾದ ಅನೇಕ ಸೇವಾಕಾರ್ಯಗಳಲ್ಲಿ ಒಟ್ಟು 4.7 ಲಕ್ಷ ಸ್ವಯಂಸೇವಕರು ತಮ್ಮನ್ನು ತೊಡಗಿಸಿಕೊಂಡಿದ್ದ ಒಂದು ವಿಶೇಷ ಸಂದರ್ಭ ಇದಾಗಿತ್ತು. ದೇಶದೆಲ್ಲೆಡೆ ಸ್ವಯಂಸೇವಕರೊಂದಿಗೆ ಸಮಾಜವೂ ಕೈಜೋಡಿಸಿದ್ದು ಸಂಘಕ್ಕೆ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತು.

ಮೊದಲು ಕ್ರಾಂತಿಕಾರಿಯಾಗಿದ್ದ, ಬಳಿಕ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಡಾಕ್ಟರ್ ಹೆಡಗೇವಾರರು ‘ಭಾರತ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಏಕೆ?’ ಎನ್ನುವುದಕ್ಕೆ ಉತ್ತರವನ್ನು ಹುಡುಕುತ್ತ ಹೊರಟರು. ನಮ್ಮನಮ್ಮಲ್ಲಿನ ಭೇದಭಾವ, ಅಹಂಕಾರ, ಪರಸ್ಪರ ದ್ವೇಷ, ನಾವು ಯಾರೆಂಬುದನ್ನೇ ನಾವು ಮರೆತಿದ್ದೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಯಿತು. ಬ್ರಿಟಿಷರನ್ನು ಓಡಿಸಿದ ಮೇಲೆ ಮತ್ತೊಮ್ಮೆ ಅಂತಹ ಸನ್ನಿವೇಶ ಎದುರಾಗದೇ ಇರಬೇಕಾದರೆ ಸಮಾಜ ಸಂಘಟಿತವಾಗಿರಬೇಕು ಎಂದು ಮನಗಂಡರು. ರಾಷ್ಟ್ರ ಸುರಕ್ಷಿತವಾಗಿ ಪ್ರಗತಿಯಾಗಬೇಕಾದರೆ ಸಂಘಟಿತ ಸಮಾಜದ ಜೊತೆಗೇ, ಸಚ್ಚಾರಿತ್ರ್ಯವುಳ್ಳ ಸಮರ್ಥ ವ್ಯಕ್ತಿಗಳೂ ಅಗತ್ಯ ಎಂದು ಚಿಂತಿಸಿ, ವ್ಯಕ್ತಿನಿರ್ಮಾಣ ಮತ್ತು ಹಿಂದೂಸಮಾಜದ ಸಂಘಟನೆಯ ಕಾರ್ಯಕ್ಕೆ ಮುಂದಾದರು.

Swayamsevaks’ Route march undettered due to rains

ದೇಶವ್ಯಾಪಿ ಬೆಳೆದ ಆರೆಸ್ಸೆಸ್
ಸಂಘ ಬೆಳೆದಂತೆ ರಾಷ್ಟ್ರದ ಸರ್ವಾಂಗೀಣ ಉನ್ನತಿಯನ್ನು ಸಾಧಿಸುವುದಕ್ಕಾಗಿ ವಿವಿಧ ಸಂಘಟನೆಗಳು ಪ್ರಾರಂಭವಾದವು. ಎಬಿವಿಪಿ, ವಿಶ್ವ ಹಿಂದೂ ಪರಿಷತ್, ಭಾರತೀಯ ಕಿಸಾನ್ ಸಂಘ, ಕಾರ್ಮಿಕ ಕ್ಷೇತ್ರದಲ್ಲಿ ಭಾರತೀಯ ಮಜ್ದೂರ್ ಸಂಘ, ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ಇತ್ಯಾದಿ ಅನೇಕ ಸಂಘಟನೆಗಳು ಸ್ವಯಂಸೇವಕರಿಂದ ಪ್ರಾರಂಭಗೊಂಡವು. ವನವಾಸಿಗಳ ಕಲ್ಯಾಣಕ್ಕಾಗಿ ಆರಂಭವಾದ ವನವಾಸಿ ಕಲ್ಯಾಣ ಆಶ್ರಮ, ಸೇವಾ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನ ಮೊದಲಾದ ಅನೇಕ ಸಂಘಟನೆಗಳು ಸಮಾಜಸೇವೆಯಲ್ಲಿ ನಿರತವಾದವು.
ಸಂಘದ ಪ್ರೇರಣೆಯಿಂದ ಆರಂಭವಾದ ಸಂಸ್ಕøತ ಭಾರತಿ ಸಂಸ್ಕøತವನ್ನು ಆಡುಭಾಷೆಯಾಗಿ ಪುನರುಜ್ಜೀವನಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇಂದು ಅನೇಕ ಕುಟುಂಬಗಳಲ್ಲಿನ ಮಕ್ಕಳ ಮಾತೃಭಾಷೆ ಸಂಸ್ಕøತವೇ ಆಗಿದೆ ಎಂದರೆ ಆಶ್ಚರ್ಯವಾಗಬಹುದಾದರೂ ಇದು ಸತ್ಯ! ರಾಷ್ಟ್ರೋತ್ಥಾನ ಪರಿಷತ್‍ನಂತಹ ಅನೇಕ ಸಂಸ್ಥೆಗಳು ಸಾಹಿತ್ಯಕೃತಿಗಳ ಮುದ್ರಣ-ಪ್ರಸಾರ, ಗೋಶಾಲೆಗಳ ನಿರ್ವಹಣೆ, ರಕ್ತನಿಧಿ, ಶಾಲೆ, ಸ್ಲಮ್‍ಗಳಲ್ಲಿ ವ್ಯಾಸಂಗಕೇಂದ್ರ ಇತ್ಯಾದಿ ಅನೇಕ ಆಯಾಮಗಳಲ್ಲಿ ಕೆಲಸ ಮಾಡುತ್ತಿವೆ. ಇಂದು ವಿಶ್ವದೆಲ್ಲೆಡೆ ಭಾರತದ ಹೆಮ್ಮೆಯ ಯೋಗಕ್ಕೆ ಮನ್ನಣೆ ದೊರಕಿದೆ. 80ರ ದಶಕದಲ್ಲೇ, ಯೋಗಕ್ಕೆ ಈಗಿನಂತಹ ಪ್ರಚಾರವಿರದ ಸಮಯದಲ್ಲೇ ಆರೆಸ್ಸೆಸ್ ಯೋಗದ ಮಹತ್ತ್ವವನ್ನು ಜನರಿಗೆ ತಿಳಿಸುವ ಕಾರ್ಯ ಪ್ರಾರಂಭಿಸಿತ್ತು. ಆರೆಸ್ಸೆಸ್ ಹಿರಿಯ ಪ್ರಚಾರಕರಾಗಿದ್ದ ಸ್ವರ್ಗೀಯ ಅಜಿತ್‍ಕುಮಾರ್ ಅವರು ಸ್ವಯಂ ತಾವೇ ಬಿ ಕೆ ಎಸ್ ಅಯ್ಯಂಗಾರ್ ಅವರಿಂದ ಯೋಗ ಕಲಿತು ಕರ್ನಾಟಕದಾದ್ಯಂತ ಯೋಗದ ಪ್ರಚಾರಕ್ಕೆ ಮುಂದಾದರು. ಆರೆಸ್ಸೆಸ್ ಸೇವಾಪ್ರಕಲ್ಪಗಳು ಯೋಗವನ್ನು ಕಲಿಸುವ ಕೇಂದ್ರಗಳನ್ನು ತೆರೆದವು. ಶಾಖೆಗಳಲ್ಲಿ ಯೋಗ ಪ್ರಾರಂಭವಾಯಿತು.

ರಾಷ್ಟ್ರಹಿತದ ಕಾರ್ಯಕ್ಕೆ ಸದಾ ಸಿದ್ಧ
1947ರಲ್ಲಿ ದೇಶವಿಭಜನೆಯಾದಾಗ ಪಾಕಿಸ್ತಾನದಿಂದ ಬರುವ ಹಿಂದೂ ನಿರಾಶ್ರಿತರ ರಕ್ಷಣೆಯಾಗಲೀ, ಜಮ್ಮು-ಕಾಶ್ಮೀರದ ಮೇಲೆ ಪಾಕಿಸ್ತಾನ ನಡೆಸಿದ ಆಕ್ರಮಣದ ಸಂದರ್ಭವಿರಲಿ ಸಂಘದ ಸ್ವಯಂಸೇವಕರು ತಮ್ಮ ಜೀವವನ್ನೇ ಒತ್ತೆಯಿಟ್ಟು ದೇಶದ ರಕ್ಷಣೆಗೆ ಮುಂದಾದರು. 1962ರ ಚೀನಾ ಆಕ್ರಮಣದ ಸಂದರ್ಭದಲ್ಲಿಯೂ ಸೇನೆಯ ಕಾರ್ಯಕ್ಕೆ ಪೂರಕವಾಗಿ ಸಂಘ ನಿಂತಿತು. ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಸಂತರು ಮತ್ತು ವಿಹಿಂಪ ನೇತೃತ್ವದಲ್ಲಿ ದೇಶವ್ಯಾಪಿ ನಡೆದ ಆಂದೋಲನದಲ್ಲಿ ಆರೆಸ್ಸೆಸ್ ಪೂರ್ಣಪ್ರಮಾಣದಲ್ಲಿ ಕೈಜೋಡಿಸಿತು.
ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಮಾತೃಭಾಷೆಯ ಬಳಕೆ ಹೆಚ್ಚಬೇಕು ಎಂಬ ಆಗ್ರಹದಿಂದ ಹಿಡಿದು ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಬೇಕು ಎನ್ನುವವರೆಗೆ ಅನೇಕ ವಿಷಯಗಳ ಬಗ್ಗೆ ಸಂಘ ಜನಜಾಗೃತಿ ಉಂಟುಮಾಡುವ ಕಾರ್ಯದಲ್ಲಿ ತೊಡಗಿದೆ. ಸಂಘದ ವಾರ್ಷಿಕ ಬೈಠಕ್ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ, ಸುರಕ್ಷೆ, ಆರ್ಥಿಕತೆ, ಸಾಮಾಜಿಕ ಸಾಮರಸ್ಯ ಹೀಗೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಆಳವಾದ ಚರ್ಚೆಗಳು ನಡೆದು, ರಾಷ್ಟ್ರಹಿತಕ್ಕೆ ಪೂರಕವಾಗುವ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.

ಜಯಪ್ರಕಾಶ್ ನಾರಾಯಣ್ ಅವರ ಅನುಭವ
1975-76ರ ಸಮಯದಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲ್ಪಟ್ಟಾಗ ಪ್ರಜಾಪ್ರಭುತ್ವವನ್ನು ಬಂಧನದಿಂದ ಬಿಡುಗಡೆಗೊಳಿಸಲು ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಮುಂದಾಳತ್ವದ ಸಂಪೂರ್ಣ ಕ್ರಾಂತಿ ಆಂದೋಲನದಲ್ಲಿ ಸಂಘದ ಸ್ವಯಂಸೇವಕರು ಧುಮುಕಿದರು. ಆ ಸಮಯದಲ್ಲಿ ಸ್ವಯಂಸೇವಕರ ಜೊತೆ ನಡೆದ ಚಿಕ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಪಿ ಅವರ ಮುಂದೆ ತಮ್ಮ ಪರಿಚಯ ಮಾಡಿಕೊಳ್ಳುತ್ತ ಪ್ರತಿಯೋರ್ವ ಸ್ವಯಂಸೇವಕ ತಾನು ಎಷ್ಟು ವರ್ಷಗಳಿಂದ ಆರೆಸ್ಸೆಸ್ ಸ್ವಯಂಸೇವಕ ಎನ್ನುವುದನ್ನೂ ಹೇಳುತ್ತಿದ್ದರು. ಸ್ವಯಂಸೇವಕರು ಇಪ್ಪತ್ತೈದು ಮೂವತ್ತು ನಲವತ್ತು ವರ್ಷಗಳಿಂದ ಸಂಘದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟ ಜೆಪಿ ತಾವು ನಂಬಿದ ಒಂದು ಧ್ಯೇಯಕ್ಕಾಗಿ ಜೀವವನ್ನೇ ಮುಡಿಪಾಗಿಡುವುದು ಅತ್ಯಂತ ದೊಡ್ಡ ವಿಚಾರ ಎಂದು ಹೇಳಿದ್ದರು.

ಆರೆಸ್ಸೆಸ್ ಕಳೆದ ತೊಂಬತ್ತೈದು ವರ್ಷಗಳಿಂದ ರಾಷ್ಟ್ರಸೇವೆಯ ಯಜ್ಞದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಅದಕ್ಕೆ ಸಮಾಜವೂ ಅಷ್ಟೇ ಪ್ರೀತಿಯಿಂದ ಸ್ಪಂದಿಸುತ್ತಿದೆ. ಸಂಘವನ್ನು ವಿರೋಧಿಸುವವರ ಯಾವ ಟೀಕೆ ಟಿಪ್ಪಣ ಗಳಿಗೂ ವಿಚಲಿತವಾಗದೇ ನಿತ್ಯ ಪ್ರಾರ್ಥನೆಯಲ್ಲಿ ಪುನರುಚ್ಚರಿಸುವಂತೆ ಮಾತೃಭೂಮಿಯನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ತನ್ನ ಸಂಕಲ್ಪದಲ್ಲಿ ಆರೆಸ್ಸೆಸ್ ಕಟಿಬದ್ಧವಾಗಿದೆ. ರಾಷ್ಟ್ರೋನ್ನತಿಯ ಈ ಸಂಕಲ್ಪವನ್ನು ಸಂಘದ ಸಂಸ್ಥಾಪನಾ ದಿನವೂ ಆದ ವಿಜಯದಶಮಿಯ ಸಂದೇಶ ದೃಢಗೊಳಿಸುತ್ತದೆ.

ಟಿ. ಎಸ್. ವೆಂಕಟೇಶ್
ಕ್ಷೇತ್ರ ಸಂಪರ್ಕ ಪ್ರಮುಖ್, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published.

This site uses Akismet to reduce spam. Learn how your comment data is processed.