ಶಕ್ತಿ ಸಂಚಯ ಸಮಾವೇಶ | 1000ಕ್ಕೂ ಅಧಿಕ ಮಹಿಳೆಯರು ಭಾಗಿ
ಹುಬ್ಬಳ್ಳಿ: ಮಹಿಳೆಯರಲ್ಲಿ ಸ್ತ್ರೀತ್ವ ಶಕ್ತಿಗಿಂತ ಮಾತೃತ್ವ ಶಕ್ತಿ ಜಾಗೃತವಾದಾಗ ಭಾರತದ ವಿಕಾಸಕ್ಕೆ ಪೂರಕ ಎಂದು ಬೆಂಗಳೂರಿನ ಖ್ಯಾತ ನ್ಯಾಯವಾದಿ ಕ್ಷಮಾ ನರಗುಂದ ಹೇಳಿದರು.
ನಗರದ ವಾಸವಿ ಮಹಲ್ ನಲ್ಲಿ ಸಂಸ್ಕೃತಿ ಟ್ರಸ್ಟ್ ವತಿಯಿಂದ ನಡೆದ ಧಾರವಾಡ ವಿಭಾಗದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಸಮಾರೋಪದಲ್ಲಿ ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಕುರಿತು ಅವರು ಮಾತನಾಡಿದರು.
ಬೌದ್ಧಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಭಾರತ ವಿಕಾಸವಾಗಬೇಕು. ಪ್ರಾಚೀನ ಇತಿಹಾಸ ಅವಲೋಕಿಸಿದಾಗ ವಿಜ್ಞಾನ ಕ್ಷೇತ್ರದ ಏಳಿಗೆಯಲ್ಲಿ ಅನೇಕ ಮಹಿಳೆಯರ ಕೊಡುಗೆ ಅಪಾರವಾಗಿದೆ. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ ನಮ್ಮ ಶೌರ್ಯ ಪರಂಪರೆಯಲ್ಲಿ ಕಾಣುತ್ತಾರೆ ಜೊತೆಗೆ ರಾಜನೀತಿಯಲ್ಲೂ ಸಹ ಮಹಿಳೆಯರು ತಮ್ಮ ಪಾಂಡಿತ್ಯ ತೋರಿದ್ದಾರೆ ಎಂದರು.
ನಮ್ಮದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ. ಸ್ವಯಂ ವ್ಯಕ್ತಿ ನಿರ್ಮಾಣದಲ್ಲಿ ತೊಡಗಿಕೊಳ್ಳುವವರು ನಾವು. ತಥಾಕಥಿತ ಮಹಿಳಾವಾದಿಗಳು ಪುರುಷ ಸಮಾಜದಿಂದ ವಿಮುಕ್ತಿ, ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಹಾಗಾದರೆ ಯಾವ ಸಮಸ್ಯೆಯೂ ಪರಿಹಾರಗೊಳ್ಳುವುದಿಲ್ಲ. ಸ್ತ್ರೀ ಎಂಬ ಕಲ್ಪನೆ ಅತ್ಯಂತ ವಿಸ್ತಾರವಾದದ್ದು. ಸ್ತ್ರೀ-ಪುರುಷರ ತಾರತಮ್ಯ ಜಂಜಡದಲ್ಲಿ ಸಿಲುಕುವ ಬದಲು ಇಬ್ಬರೂ ಸಮಾನರು ಎಂಬ ಭಾವನೆ ಹೊಂದಬೇಕು ಏಕೆಂದರೆ ಇಬ್ಬರಲ್ಲೂ ಹಲವು ಗುಣಗಳು ಸಾಮ್ಯವಾಗಿವೆ ಎಂದರು.
ಮಾತೃತ್ವ ಶಕ್ತಿ ವಿಸ್ತಾರವಾದಾಗ ಬೌದ್ಧಿಕ ವಿಕಾಸವಾಗುತ್ತದೆ. ಬಾಹ್ಯ ವಿಕಾಸಕ್ಕಿಂತ ಆಂತರಿಕ ವಿಕಾಸ, ಆಧ್ಯಾತ್ಮ-ಸಾಂಸ್ಕೃತಿಕ ವಿಕಾಸದತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಮಹಾನಗರ ಸಂಯೋಜಕಿ ಭಾರತಿ ನಂದಕುಮಾರ, ಧಾರವಾಡ ವಿಭಾಗ ಸಂಯೋಜಕಿ ಶಾಂತಾ ವೆರ್ಣೇಕರ್, ರಾಧಾ ಪುರಾಣಿಕ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದ ಕುಮುಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಪ್ರೀತಿ ಭಂಡಾರಕರ ಎಲ್ಲರ ಸುಖ ಬಯಸುವ ಭಾರತೀಯ ಸಂಸ್ಕೃತಿ ಮಹಿಳೆಯರಿಗೆ ಸಮಾಜದಲ್ಲಿ ಉತ್ಕೃಷ್ಟ ಹಾಗೂ ಪೂಜನೀಯ ಸ್ಥಾನ ಒದಗಿಸಿದೆ ಎಂದು ಹೇಳಿದರು.
ಇಡೀ ಲೋಕದ ಒಳಿತನ್ನು ಬಯಸುವುದು ಭಾರತೀಯ ಸಂಸ್ಕೃತಿಯಾಗಿದೆ. ಈ ಸಂಸ್ಕೃತಿ ಅನಾದಿ ಕಾಲದಿಂದಲೂ ಇದೆ. ಪ್ರತಿಯೊಬ್ಬ ಸ್ತ್ರೀಯಲ್ಲೂ ಶಕ್ತಿ ಇದೆ. ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅದನ್ನು ಜಾಗೃತಗೊಳಿಸುವುದು ಅವಶ್ಯ. ಸ್ತ್ರೀಯರಿಗೆ ಶಿಕ್ಷಣ, ಸ್ವಾತಂತ್ರ್ಯ ಇರಲಿಲ್ಲ ಎಂಬ ಮಿಥ್ಯವನ್ನೇ ಅನೇಕ ಬಾರಿ ಕೇಳಿದ್ದೇವೆ. ಹೇಗೆ ಋಷಿಗಳು ಇದ್ದರು ಹಾಗೇ ಋಷಿಕೆಯರು, ಬ್ರಹ್ಮಚಾರಿಣಿಯರು, ಮಂತ್ರ ದೃಷ್ಟಾರೆಯರು ಸಹ ಹಿಂದೆ ಇದ್ದರು. ಋಷಿಗಳು ಹಾಗೆ ಬ್ರಹ್ಮ ಜ್ಞಾನ ಪಡೆದು ಸ್ತ್ರೀಯರು ಋಷಿಕೆಯರಾಗುತ್ತಿದ್ದರು. ಋಷಿಗಳಂತೆ ವೇದಮಂತ್ರ ಪಡಿಸುತ್ತಿದ್ದರು ಎಂದರು.
ವಿಧವೆಯರನ್ನೂ ಸಹ ಸುಮಂಗಲೆಯರಂತೆ ಕಾಣಬೇಕು ಎಂದು ವೇದದಲ್ಲಿ ಉಲ್ಲೇಖವಿದೆ. ವೇದ ಕಾಲದ ಸ್ತ್ರೀಯರು 8-16 ವರ್ಷದವರೆಗೆ ಶಿಕ್ಷಣ ಪಡೆಯುತ್ತಿದ್ದರು. ಉನ್ನತ ಆರ್ಥಿಕ ಸ್ವಾತಂತ್ರ್ಯ ಹೊಂದಿದ್ದ ಸ್ತ್ರೀ ತನ್ನ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಸಹ ಹೊಂದಿದ್ದಳು ಎಂದರು.
ವಿವಾಹ ಸಂದರ್ಭದಲ್ಲೂ ತನ್ನ ಇಚ್ಛೆಯ ವರನನ್ನು ಆರಿಸಿಕೊಳ್ಳಲು ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ಆಗಿನ ಅವಿಭಕ್ತ ಕುಟುಂಬಗಳ ಕೇಂದ್ರ ಬಿಂದು ಗೃಹಿಣಿಯಾಗಿದ್ದಳು. ಪ್ರಸ್ತುತ ಲವ್ ಇನ್ ರಿಲೇಷನ್, ಡೇಟಿಂಗ್, ವಿಭಕ್ತ ಕುಟುಂಬ ಮುಂತಾದ ಪಾಶ್ಚಾತ್ಯರ ಅನುಕರಣೆಯಿಂದ ಸಮಾಜಕ್ಕೆ ಧಕ್ಕೆಯಾಗುತ್ತಿದೆ. ಸ್ತ್ರೀ ಶಕ್ತಿಯ ಜಾಗರಣದಿಂದ ಸಮಾಜ ಸದೃಢಗೊಳುಸುವುದು ಅನಿವಾರ್ಯ ಎಂದು ಹೇಳಿದರು.
ದೇವರಹುಬ್ಬಳ್ಳಿಯ ಖ್ಯಾತ ಜನಪದ ಕಲಾವಿದರಾದ ಪಾರ್ವತವ್ವ ಹೊಂಗಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ತ್ರೀಯರ ಯಶಸ್ಸಿನ ಹಿಂದೆ ಪುರುಷರ ಪಾತ್ರವೂ ಗಮನಾರ್ಹವಾಗಿದೆ. ಮನೆ ನಿಭಾಯಿಸುವುದು ಮಹಿಳೆಯರ ಹೊರೆಯಲ್ಲ ಬದಲಾಗಿ ಕರ್ತವ್ಯ. ಸ್ತ್ರೀಯರು ಒಗ್ಗಟ್ಟು ಸಮಾಜದ ಉನ್ನತಿಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಜೀವನ ನಡೆಸುತ್ತ, ಸಂಘಟಿತರಾಗಬೇಕು ಎಂದು ಹೇಳಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಸಹ ಕಾರ್ಯವಾಹಿಕಾ ಆಶಾ ನಾಯಕ, ವಿಭಾಗ ಸಂಯೋಜಕಿ ಶಾಂತಾ ವೆರ್ಣೇಕರ್ ಮುಂತಾದವರು ಪಾಲ್ಗೊಂಡಿದ್ದರು.
ಮನು ಹೇಳಿದ ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಎಂಬ ಉಕ್ತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಮಕ್ಕಳಿಂದ ಹೀಗೆ ಸಮಾಜದಲ್ಲಿ ಪೂಜ್ಯ ಸ್ಥಾನದಲ್ಲಿರುವ ಸ್ತ್ರೀಯರನ್ನ ಸದಾ ರಕ್ಷಿಸಬೇಕೆಂದು ಮನುವಿನ ಉಕ್ತಿಯ ಭಾವಾರ್ಥವಾಗಿದೆ ಎಂದರು.
– ಡಾ. ಪ್ರೀತಿ ಭಂಡಾರಕರ, ಪ್ರಾಚಾರ್ಯರು, ಕುಮುಟಾ