ಇಂದು ಜಯಂತಿ

ಭಾರತದ ನಾಲ್ಕು ದಿಕ್ಕಿನಲ್ಲೂ ಮಠಗಳನ್ನು ಸ್ಥಾಪಿಸಿ ರಾಷ್ಟ್ರದ ಏಕತೆಗೆ ಕಾರಣದ ಶಂಕರಾಚಾರ್ಯರು ದಾರ್ಶನಿಕರು, ತತ್ವಜ್ಞಾನಿ, ಸಮಾಜ ಸುಧಾರಕರಾಗಿ ವಿಶ್ವಕ್ಕೆ ಬೆಳಕು ನೀಡಿದ ಮಹಾನ್‌ ಸಂತ. ಅವರು ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿಲು ಸಾಕಷ್ಟು ಶ್ರಮವಹಿಸಿದರು. “ಅದ್ವೈತ” ತತ್ವವನ್ನು ಪ್ರತಿಪಾದಿಸಿ ಜಗತ್ತಿಗೆ ಸಾರಿದವರು.ಈ ವರ್ಷ ಮೇ 12 ರಂದು ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ.

ಪರಿಚಯ
ಶಂಕರಾಚಾರ್ಯರು  ಕೇರಳದ ಕಾಲಡಿ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಶಿವಗುರು, ತಾಯಿ ಆರ್ಯಾಂಬೆ. ಶಂಕರಾಚಾರ್ಯರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ನಂತರದ ದಿನಗಳಲ್ಲಿ ಆಧ್ಯಾತ್ಮದ ಆಸಕ್ತಿ ಹೊಂದಿದ್ದ ಇವರು 12ನೇ ವಯಸ್ಸಿನಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಶಂಕರಾಚಾರ್ಯರು ಚಿಕ್ಕವಯಸ್ಸಿನಿಂದಲೂ ಬಹಳ ಪ್ರತಿಭಾವಂತರಾಗಿದ್ದರು.
ಶಂಕರಚಾರ್ಯರು ನರ್ಮದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದರು. ಈ ವೇಳೆ ಅವರನ್ನು ತನ್ನ ಗುರುಗಳಾಗಿ ಸ್ವೀಕರಿಸಿದರು. ಅವರಿಂದ ವೇದ, ಉಪನಿಷತ್‌, ವೇದಾಂತಗಳನ್ನು ಕಲಿತು ಕಾಶಿಗೆ ತೆರಳಿದರು. ಅಲ್ಲಿ ಅವರು ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೆ ವೇದಾಂತದ ಬಗ್ಗೆ ಪಾಠ ಮಾಡಿದರು.

ಶಂಕರಾಚಾರ್ಯರು ಹಿಂದೂ ಧರ್ಮದ ಅತ್ಯಂತ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲೊಬ್ಬರು. ಅವರು ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಈ ಸಿದ್ಧಾಂತವೂ ಆತ್ಮ ಮತ್ತು ಪರಮಾತ್ಮ ಒಂದೇ ಆಗಿದೆ ಎನ್ನುವುದನ್ನು ಪ್ರತಿಪಾದಿಸುತ್ತದೆ. ಇವರು ಈ ಸಿದ್ಧಾಂತದ ಜ್ಞಾನವನ್ನು ಜನರಿಗೆ ತಿಳಿಸುವ ಸಲುವಾಗಿ ದೇಶಾದ್ಯಂತ ಸಂಚರಿಸಿದರು. ಅಷ್ಟೇ ಅಲ್ಲದೆ ಇವರು ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಲು ಶ್ರಮವಹಿಸಿದರು.

ಸಾಹಿತ್ಯದ ಕೊಡುಗೆ
ಸೌಂದರ್ಯಲಹರಿ, ಶಿವಾನಂದಲಹರಿ, ನಿರ್ವಾಣ ಶಾಲ್ಕಂ, ಮನೀಷ ಪಂಚಕಂ ಸೇರಿದಂತೆ ಸುಮಾರು 72 ಭಕ್ತಿ ಮತ್ತು ಧ್ಯಾನ ಗೀತೆಗಳನ್ನು ರಚಿಸಿದ್ದಾರೆ. ಅವರು ಬ್ರಹ್ಮ ಸೂತ್ರಗಳು, ಭಗವದ್ಗೀತೆ ಮತ್ತು 12 ಪ್ರಮುಖ ಉಪನಿಷತ್ತುಗಳು ಸೇರಿದಂತೆ 18 ಭಾಷ್ಯ ಗ್ರಂಥಗಳನ್ನು ಬರೆದಿದ್ದಾರೆ.ವಿವೇಕ ಚೂಡಾಮಣಿ , ಆತ್ಮ ಬೋಧ , ವಾಕ್ಯಾವರ್ತಿ, ಉಪದೇಶ ಸಹಸ್ರಿ ಸೇರಿದಂತೆ 23 ಪುಸ್ತಕಗಳನ್ನು ಬರೆದಿದ್ದಾರೆ.

ನಾಲ್ಕು ಮಠಗಳು
ಉತ್ತರ ದಿಕ್ಕಿನಲ್ಲಿ ಇರುವ ಬದರಿ ಪೀಠ, ದಕ್ಷಿಣದಲ್ಲಿ ಕರ್ನಾಟಕದ ಶೃಂಗೇರಿಯಲ್ಲಿರುವ ಶೃಂಗೇರಿ ಪೀಠ, ಒರಿಸ್ಸಾದ ಪುರಿಯಲ್ಲಿ ಗೋವರ್ಧನ ಪೀಠ, ಗುಜರಾತದ ದ್ವಾರಕೆಯಲ್ಲಿ ದ್ವಾರಕ ಪೀಠವನ್ನು ಶಂಕರಾಚಾರ್ಯರು ಸ್ಥಾಪಿಸಿದರು. ಇದು ರಾಷ್ಟ್ರದ ಐಕ್ಯತೆ ಮತ್ತು ಅಖಂಡತೆಯನ್ನು ಸಂಕೇತಿಸುತ್ತದೆ.
ಶಂಕರಾಚಾರ್ಯರು ತಮ್ಮ 32ನೇ ವಯಸ್ಸಿನಲ್ಲಿ ಕೇದಾರನಾಥದಲ್ಲಿ ಇಹಲೋಕ ತ್ಯಜಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.