ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಕಾಶ್ಮೀರೀ ಪಂಡಿತರ ಸಮುದಾಯವು ಈ ಬಾರಿಯ ವಿಸಜಯದಶಮಿಯನ್ನು ಅತ್ಯಂತ ಅರ್ಥ ಪುರ್ಣವಾಗಿ ಆಚರಿಸುತ್ತಿದ್ದು, ಕಾಶ್ಮೀರದ ತೀತ್ವಾಲದಲ್ಲಿರುವ ಶಾರದಾ ದೇವಾಲಯದಲ್ಲಿ ಸ್ಥಾಪಿಸುವ ಸಲುವಾಗಿ ಮೂರ್ತಿಯನ್ನು ಶೃಂಗೇರಿಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಕಡೆಯಿಂದ ಪಡೆಯಲಾಗುತ್ತಿದೆ ಎಂದಿದ್ದಾರೆ.
ಈ ಕುರಿತು ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಶಾರದಾ ಮಿಷನ್ನ ಕುರಿತಾಗಿ ಕೆಲಸ ಮಾಡುತ್ತಿರುವ ಶ್ರೀ ರವೀಂದ್ರ ಪಂಡಿತ ಅವರು ಶಾರದಾ ಮೂರ್ತಿಯನ್ನು ಪಡೆಯಲು ಬೆಂಗಳೂರಿನಿಂದ ಅಕ್ಟೋಬರ್ 4ರಂದು ಹೊರಡಲಿದ್ದು 5ನೆಯ ತಾರೀಖಿನ ವಿಜಯ ದಶಮಿಯ ಪುಣ್ಯ ದಿನದಂದು ಶೃಂಗೇರಿಯ ಜಗದ್ಗುರುಗಳು ತಮ್ಮ ಅಮೃತ ಹಸ್ತದಿಂದ ತೀತ್ವಾಲದಲ್ಲಿ ಸ್ಥಾಪಿಸಲಿರುವ ಶಾರದಾ ವಿಗ್ರಹವನ್ನು ಹಸ್ತಾಂತರಿಸಲಿದ್ದಾರೆ.
ಅಲ್ಲದೆ ಈ ಮೂರ್ತಿಯು ಉತ್ತರಾಯಣ ಪುಣ್ಯ ಕಾಲದ ಸಮಯದಲ್ಲಿ ಅಂದರೆ ಜನವರಿ 15,2023ರ ನಂತರ ಕಾಶ್ಮೀರಕ್ಕೆ ಯಾತ್ರೆಯ ಮೂಲಕ ಹೊರಡಲಿದೆ. ಅದು ಬೆಂಗಳೂರಿನ ಜಯನಗರದ NAL ಲೇಔಟ್ನಲ್ಲಿರುವ ಕಾಶ್ಮೀರೀ ಭವನದಿಂದ ಹೊರಡಲಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಲೈನ್ ಆಫ್ ಕಂಟ್ರೊಲ್ಗೆ ಅತ್ಯಂತ ಸಮೀಪದಲ್ಲಿರುವ ತೀತ್ವಾಲದಲ್ಲಿನ ಶಾರದಾ ದೇವಾಲಯವು ನಿರ್ಮಾಣ ಹಂತದಲ್ಲಿದ್ದು ಬಾಗಿಲುಗಳನ್ನು ಕೂರಿಸಲಾಗಿದೆ. ದೇವಾಲಯದ ನಾಲ್ಕು ದಿಕ್ಕುಗಳಿಗೆ ನಾಲ್ಕು ಬಾಗಿಲಿದ್ದು ಒಂದೊಂದು ಬಾಗಿಲು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತವಾದ ನಾಲ್ಕು ದೇವಾಲಯಗಳ ಸಂಕೇತ ಎನ್ನಲಾಗಿದೆ.
ಇದು ಶಾರದಾ ಯಾತ್ರಾ ದೇವಾಲಯವಾಗಿದ್ದು 1947ರವೆಗೂ ಇಲ್ಲಿ ಧರ್ಮಛತ್ರವಿತ್ತು ಎನ್ನಲಾಗಿದೆ.ಈಗ ಬಿಳಿಯ ಕಲ್ಲಿನಿಂದ ನಿರ್ಮಾಣವಾಗುತ್ತಿರುವ ಇದರ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ನುರಿತ ಕುಶಲಕರ್ಮಿಗಳು ಹಾಗು ಕಾರ್ಮಿಕರು ಮಾಡುತ್ತಿದ್ದಾರೆ.