“ದೇಶಕ್ಕೆ ಆಪತ್ತು – ವಿಪತ್ತು ಬಂದಾಗ ಸ್ವಯಂಪ್ರೇರಿತರಾಗಿ ರಕ್ಷಣಾ ಕಾರ್ಯಕ್ಕೆ ಮುಂದಾಗುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸಮರ್ಪಣಾ ಮನೋಭಾವ, ದೇಶ ಭಕ್ತಿ, ಸಾಮಾಜಿಕ ಬದ್ಧತೆಯುಳ್ಳ ದೇಶದ ಅಸ್ಥಿತೆಯನ್ನು ಕಾಯುವ ವ್ಯಕ್ತಿ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಹೇಳಿದರು.
ತೆಕ್ಕಟ್ಟೆಯ ಶ್ರೀ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಸಂಜೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಬೌದ್ಧಿಕ ನೀಡಿ ಮಾತನಾಡಿದರು.
“ಹಿಂದು ರಾಷ್ಟ್ರದ ಪ್ರಖರ ಚಿಂತನೆ ಇಂದು ವಿಶ್ವವ್ಯಾಪಿ ಸೆಳೆಯುತ್ತಿದೆ. ಪಾಶ್ಚಿಮಾತ್ಯಕ್ಕೆ ಸಂಸ್ಕೃತಿಗೆ ವಿದಾಯ ಹೇಳಿ ನಮ್ಮ ಭಾರತೀಯ ಸಂಸ್ಕೃತಿಯನ್ನು ವಿದೇಶಿಗರು ಮೈಗೂಡಿಸಿಕೊಳ್ಳುತ್ತಿದ್ದಾರೆ.”
“ಸಂಘವು 2025ನೇ ಇಸವಿಯಲ್ಲಿ 100ರ ಸಂಭ್ರಮಾಚರಣೆ ಗೈಯಲಿದೆ. ಆ ಪ್ರಯುಕ್ತ ಈಗಿಂದಲೇ ಪ್ರತಿ ಹಳ್ಳಿ ಭಾಗದಲ್ಲೂ ಶಾಖೆ ಸೃಷ್ಟಿಸಲು ಸಿದ್ಧವಾಗಿದೆ. ದೇಶ ಕಾಯುವ ಕೆಲಸ ಸಂಘ ಮಾಡುತ್ತದೆ. ಈ ಬಗ್ಗೆ ಬೇರೆನೂ ಚಿಂತಿಸುವ ಅಗತ್ಯತೆ ಇಲ್ಲ” ಎಂದು ಮನಗಾಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ ಅವರು ಮಾತನಾಡಿ “ಶಿಸ್ತುಬದ್ಧ ಜೀವನ, ಸಂಸ್ಕೃತಿ, ಸಮಾನತೆ ಹಾಗೂ ಭಾವೈಕ್ಯತೆಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲಿಸುತ್ತದೆ. ಜೀವನದಲ್ಲಿ ಸೋಲು ಶಾಶ್ವತವಲ್ಲ, ಸೋಲನ್ನು ಎದುರಿಸಿ ನಿಲ್ಲುವ ಛಲಗಾರಿಕೆ ಬೇಕು ಎಂದರು.
ಮನುಷ್ಯ ಜೀವನ ಎನ್ನುವುದು ಮುಖ್ಯವಲ್ಲ ಜೀವನದಲ್ಲಿ ಮಾಡಿದ ಸಾಧನೆಗಳೇ ಮುಖ್ಯವಾಗುತ್ತದೆ. ನನ್ನ ಜೀವನದಲ್ಲಿ ಸಾಕಷ್ಟು ಅಸ್ಪೃಶ್ಯ ಆಚರಣೆಗಳನ್ನು ಕಂಡಿದ್ದೇನೆ ಹಾಗೂ ಅನುಭವಿಸಿದ್ದೇನೆ. ಸಾಮಾಜಿಕ ಬದಲಾದರೂ, ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯ ಅಂಶಗಳು ಇನ್ನೂ ಉಳಿದುಕೊಂಡಿರುವುದು ಬೇಸರದ ಸಂಗತಿ. ಕಲಿಯುವಿಕೆಗೆ ವಯಸ್ಸಿನ ಮಿತಿ ಇಲ್ಲ. ಜ್ಞಾನದ ಹಸಿವು ಇದ್ದವರಿಗೆ ಜ್ಞಾನಾರ್ಜನೆ ನಿರಂತರ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಡಾ.ವಾಮನ ಶೆಣೈ ಇದ್ದರು. ಪ್ರಶಿಕ್ಷಣಾರ್ಥಿಗಳು ಘೋಷ ವಾದನ, ಕವಾಯತು. ಆಟೋಟ, ಯುದ್ಧಕಲೆ, ದಂಡ ಹಾಗೂ ಯೋಗ ಪ್ರದರ್ಶನ ನೀಡಿದರು. ವೈಯಕ್ತಿಕ ಗೀತೆ ಹಾಡಲಾಯಿತು.
ಆರ್ಎಸ್ಎಸ್ ಮಂಗಳೂರು ವಿಭಾಗದ ಸೇವಾ ಪ್ರಮುಖ್ ಸುಭಾಶ್ಚಂದ್ರ ಟಿ. ನಾಯಕ್ ಸ್ವಾಗತಿಸಿದರು. ಆರ್ಎಸ್ ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಗೂ ರುದ್ರಯ್ಯ ವರದಿ ಮಂಡಿಸಿದರು. ಮಂಗ ಳೂರು ವಿಭಾಗದ ಸಹ ಸೇವಾ ಪ್ರಮುಖ ಯೋಗೀಶ್ ಶಿರಿಯಾರ ವಂದಿಸಿದರು. ಮಂಗಳೂರು ವಿಭಾಗೀಯ ಪ್ರಚಾರಕ್ ಸುರೇಶ್ ನಿರೂಪಿಸಿದರು.