ಬೆಳಗಾವಿ :ಹಿಂದುತ್ವದ ಧ್ಯೇಯಮಂತ್ರ ನೀಡಿ, ಹಿಂದೂ ಅಸ್ಮಿತೆಗೆ ಪ್ರಖರ ವ್ಯಾಖ್ಯೆ ಬರೆದ ಭಾರತಭೂಮಿಯ ಶ್ರೇಷ್ಠ ರಾಜ ಛತ್ರಪತಿ ಶಿವಾಜಿಮಹಾರಾಜರ ಆದರ್ಶ,ಆಡಳಿತ ನೀತಿ,ರಾಜಧರ್ಮ ಪಾಲನೆ ಇಂದಿನ ಪೀಳಿಗೆಗೆ ಮೇಲ್ಪಂಕ್ತಿಯಾಗಬೇಕು ಎಂದು ಬೆಂಗಳೂರು ಗೋಸಾಯಿ ಮಠದ ಪೂಜ್ಯ ವೇದಾಂತಾಚಾರ್ಯ ಶ್ರೀ ಮಂಜುನಾಥಭಾರತಿ ಸ್ವಾಮೀಜಿ ಕರೆ ನೀಡಿದರು.

ಶ್ರೀಗಳು ಇಲ್ಲಿ ಜರುಗಿದ ಜ್ಞಾನಭಾರತಿ ಟ್ರಸ್ಟ್ ಪ್ರಕಟಿಸಿದ ಕನ್ನಡದ “ಶಕಾವತಾರ” ಮತ್ತು ಮರಾಠಿಯ “ಸಹ್ಯ ಕೇಸರಿ”ಕಾಫಿ ಟೇಬಲ್ ಪುಸ್ತಕಗಳ ಲೋಕಾರ್ಪಣೆ ಮಾಡಿ, ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಪ್ರಾಸ್ತಾವಿಕ ನುಡಿಯಾಡಿದ ಉತ್ತರ ಕರ್ನಾಟಕ ಆರೆಸ್ಸೆಸ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದ ರಾವ್ ದೇಶಪಾಂಡೆಯವರು, ಶಿವಾಜಿ ಒಂದುವೇಳೆ ಜನ್ಮ ತಾಳದಿರುತ್ತಿದ್ದರೆ, ಭಾರತವರ್ಷದಲ್ಲಿ ಹಿಂದೂ ಸಂತತಿ ಎಂಬುದೇ ಉಳಿಯುತ್ತಿರಲಿಲ್ಲ. ಶಿವಾಜಿ ಹಿಂದೂ ಅಸ್ಮಿತೆಯ ಪ್ರತೀಕ ಎಂದು ಬಣ್ಣಿಸಿದರು.

ಮಂಗಳೂರಿನ ಜ್ಞಾನಭಾರತಿ ಟ್ರಸ್ಟ್ ಇಂತಹ ವಿಶಿಷ್ಟ ಕಾರ್ಯಕ್ರಮದ ಮೂಲಕ ನಮ್ಮ ಹಿಂದಿನ ಪರಂಪರೆ, ಸಂಸ್ಕೃತಿ, ಸಾಮರಸ್ಯವನ್ನು ನೆನಪಿಸುವ ಇದೇ ರೀತಿಯ ಇನ್ನೂ 9 ಕಾಫಿ ಟೇಬಲ್ ಪುಸ್ತಕಗಳನ್ನು ಈಗಾಗಲೇ ಜ್ಞಾನಭಾರತಿ, ವಿಕ್ರಮ ಪತ್ರಿಕೆ ಮೂಲಕ ಹೊರತಂದಿದ್ದು, ಅದು ಓದುಗರ ಒಲವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಜ್ಞಾನಭಾರತಿ ನಿರ್ದೇಶಕ ದು.ಗು.ಲಕ್ಷ್ಮಣ ಅಭಿಪ್ರಾಯಪಟ್ಟರು.

ಮುಖ್ಯ ಭಾಷಣ ಮಾಡಿದ ರಾ. ಸ್ವ.ಸಂಘದ ಅಖಿಲ ಭಾರತೀಯ ಸಹ ವ್ಯವಸ್ಥಾಪ್ರಮುಖ ರಾದ ಶ್ರೀ ಅನಿಲ್ ಓಕ್ , ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಬಳಿ ಯಾವುದೇ ಸೈನ್ಯ,ಸಾಧನ,ಸಲಕರಣೆ ಇಲ್ಲದ ದೀನ ಸ್ಥಿತಿಯಲ್ಲೂ ಕುಶಲ ಸಂಘಟನಾ ಸಾಮರ್ಥ್ಯ ಬಳಸಿ,ಬಡ ಮಾವಳಿಗಳ ಧೀರ ಪಡೆ ಕಟ್ಟಿ,ಶತ್ರುಗಳ ಆಯುಧಗಳನ್ನೇ ತಮ್ಮ ಆಯುಧಗಳನ್ನಾಗಿ ಮಾಡಿಕೊಂಡು ಹೋರಾಡಿದ ರಣಧುರಂಧರರಾಗಿ ಮೆರೆದರು. ಶಿವಾಜಿ ಪ್ರತಿಯೊಬ್ಬ ವ್ಯಕ್ತಿಯ ತಾಕತ್ತು ಗ್ರಹಿಸಿ,ಆತನಲ್ಲಿ ರಾಷ್ಟ್ರಭಕ್ತಿಯ, ತ್ಯಾಗದ,ದೇಶಪ್ರೇಮದ, ಹಿಂದುತ್ವದ ಪ್ರೇರಣೆ ತುಂಬುತ್ತಿದ್ದ ಪರಿಯೇ ವಿಸ್ಮಯಕರ.ಅದೊಂದು ಇಂದಿಗೂ ಅಧ್ಯಯನಯೋಗ್ಯ ವಿಷಯ ಎಂದು ವಿಶ್ಲೇಷಿಸಿದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ,ಶಿಕ್ಷಣತಜ್ಞ ಡಾ.ಪ್ರಭಾಕರ ಕೋರೆ ಯವರನ್ನು ಸನ್ಮಾನಿಸಲಾಯಿತು.

ಕಾಫಿ ಟೇಬಲ್ ಪುಸ್ತಕಗಳಿಗೆ ಲೇಖನ ಒದಗಿಸಿ ಸಹಕರಿಸಿದ,ಪುಸ್ತಕ ಪ್ರಕಟಣೆಗೆ ನೆರವಿತ್ತ ಮಹನೀಯರನ್ನು ಶಾಲು ಹೊದೆಸಿ ,ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಕ್ರಮ ಸಂಪಾದಕ ಪಿ.ಎಂ. ರಮೇಶ್ ಎಲ್ಲರನ್ನೂ ಸ್ವಾಗತಿಸಿ, ಪರಿಚಯಿಸಿದರು. ಶಿವಾಜಿ ಕುರಿತ ಹಿಂದಿ,ಇಂಗ್ಲಿಷ್ ಕಾಫಿ ಟೇಬಲ್ ಪುಸ್ತಕಗಳ ಅವತರಣಿಕೆಯೂ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದೂ ತಿಳಿಸಿದರು.ಹುಬ್ಬಳ್ಳಿಯ ಹೊಸದಿಗಂತ ಬ್ಯೂರೋ ಮುಖ್ಯಸ್ಥರಾದ ಶ್ರೀ ವಿಠಲದಾಸ ಕಾಮತ್ ಆಭಾರ ವಂದಿಸಿದರು.ಶ್ರೀಮತಿ ಮಾನಸಿ ಗೋಖಲೆ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಡೇ, ವಿಕ್ರಮ ಗೌರವ ಸಂಪಾದಕ ನ.ನಾಗರಾಜ್, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಹಲವು ಜನಪ್ರತಿನಿಧಿಗಳು, ಗಣ್ಯರು, ಸಂಘದ ಹಿರಿಯ ಕಾರ್ಯಕರ್ತರು ಕೆ ಎಲ್ ಇ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.