ನಡೆದಾಡುವ ವಿಶ್ವಕೋಶ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಕಡಲ ತಡಿಯ ಭಾರ್ಗವ ಕೋಟ ಶಿವರಾಮ ಕಾರಂತರು ದೇಶ ಕಂಡಂತಹ ಶ್ರೇಷ್ಠ ಬರಹಗಾರ. ಇವರು ಕವಿ, ಕಾದಂಬರಿಕಾರ, ನಾಟಕಕಾರರಾಗಿ ಪ್ರಸಿದ್ಧಿ ಪಡೆದರು. ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಕಾರಂತರನ್ನು ನವ್ಯ ಭಾರತದ ರವೀಂದ್ರನಾಥ್ ಟ್ಯಾಗೋರ್ ಎಂದು ವರ್ಣಿಸಿದ್ದಾರೆ. ಕನ್ನಡಕ್ಕೆ ಮೂರನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದ ಶಿವರಾಮ ಕಾರಂತರ ಜಯಂತಿ ಇಂದು.
ಪರಿಚಯ
ಶಿವರಾಮ ಕಾರಂತರು ಅಕ್ಟೋಬರ್ 10, 1902 ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಜನಿಸಿದರು. ಇವರ ತಂದೆ ಶೇಷ ಕಾರಂತ ಹಾಗೂ ತಾಯಿ ಲಕ್ಷ್ಮಮ್ಮ. ಶಿವರಾಮ ಕಾರಂತರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕುಂದಾಪುರದಲ್ಲಿ ಮುಗಿಸಿದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿಗೆ ಸೇರಿದಾಗ ತಮ್ಮ ವಿದ್ಯಾರ್ಥಿ ದೆಸೆಯಲ್ಲೆ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರಂತರು ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.
ಶಿವರಾಮ ಕಾರಂತರು ಐದು ವರ್ಷಗಳ ಕಾಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿದ್ದ ಕಾರ್ನಾಡ್ ಸದಾಶಿವ ರಾವ್ ನೇತೃತ್ವದಲ್ಲಿ ಖಾದಿ ಮತ್ತು ಸ್ವದೇಶಿ ಪ್ರಚಾರ ನಡೆಸಿದರು. ನಂತರ ದಿನಗಳಲ್ಲಿ ಕಾರಂತರು ಕಾಲ್ಪನಿಕ ಕಾದಂಬರಿಗಳು ಮತ್ತು ನಾಟಕಗಳನ್ನು ಬರೆಯಲು ಆರಂಭಿಸಿದ್ದರು.
ಸಾಹಿತ್ಯ ಕ್ಷೇತ್ರದ ಕೊಡುಗೆ
ಶಿವರಾಮ ಕಾರಂತರು 1925ರಲ್ಲಿ ‘ವಸಂತ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಸಂಪಾದಕಾರಾಗಿ ಐದು ವರ್ಷ ಕೆಲಸ ಮಾಡಿದರು. ಈ ಪತ್ರಿಕೆಯ ಮೂಲಕವೇ “ವಿಚಿತ್ರ ಕೂಟ” ಎಂಬ ಕಾದಂಬರಿಯನ್ನ ಅವರು ಹೊರಗೆ ತಂದರು. ನಂತರ ಕಾರಣಾಂತರಗಳಿಂದ 1930ರಲ್ಲಿ ಈ ಪತ್ರಿಕೆ ನಿಂತು ಹೋಯಿತು. 1950ರಲ್ಲಿ ಅವರು “ವಿಚಾರಮಣಿ” ಎಂಬ ಮತ್ತೊಂದು ಪತ್ರಿಕೆಯನ್ನು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಕಾರಂತರು ಮಕ್ಕಳ ಶಿಕ್ಷಣದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಅದಕ್ಕೆ ಪೂರಕವಾಗಿ ಮಕ್ಕಳಿಗಾಗಿ ಅನೇಕ ಕಥೆಗಳನ್ನು ರಚಿಸಿದ್ದರು.
“ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ” ಸೇರಿದಂತೆ ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ. ಜೊತೆಗೆ ಅವರು ಅವಳಿ ನಾಟಕಗಳು, ಏಕಾಂಕ ನಾಟಕಗಳು, ಐದು ನಾಟಕಗಳು, ಕಟ್ಟೆ ಪುರಾಣ, ಕಠಾರಿ ಭೈರವ, ಕರ್ಣಾರ್ಜುನ, ಕೀಚಕ ಸೈರಂಧ್ರಿ, ಗರ್ಭಗುಡಿ, ಗೀತ ನಾಟಕಗಳನ್ನು ರಚಿಸಿದ್ದಾರೆ.
ಶಿವರಾಮ ಕಾರಂತರು ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೆ ಚಲನಚಿತ್ರದಲ್ಲೂ ಸಹ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಭೂತರಾಜ್ಯ, ಡೊಮಿಂಗೋ ಎಂಬ ಮೂಕಿ ಚಿತ್ರವನ್ನು ನಿರ್ದೇಶಿಸಿದರು. ಕುಡಿಯರ ಕೂಸು, ಚೋಮನದಡಿ, ಚಿಗುರಿದ ಕನಸು, ಬೆಟ್ಟದ ಜೀವ ಎಂಬ ಚಲನಚಿತ್ರಗಳು ಇವರ ಕಾದಂಬರಿಯಾಧಾರಿತವಾದದ್ದು.
ಸಾಹಿತ್ಯದ ಜೊತೆಗೆ ಯಕ್ಷಗಾನವನ್ನು ಸಹ ಇಷ್ಟ ಪಡುತ್ತಿದ್ದರು. ಹೀಗಾಗಿ ಅವರು ಯಕ್ಷಗಾನ ಬಯಲಾಟ ಎಂಬ ಕೃತಿಯನ್ನು ರಚಿಸಿದ್ದರು. ಕಾರಂತರು 1955ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಶಸ್ತಿ
ಶಿವರಾಮ ಕಾರಂತರಿಗೆ ‘ಮೂಕಜ್ಜಿಯ ಕನಸುಗಳು’ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪದ್ಮಭೂಷಣ,ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ.
ಶಿವರಾಮ ಕಾರಂತರು ಡಿಸೆಂಬರ್ 9, 1997ರಂದು ನಿಧನರಾದರು.