೧೯೬೬-೬೭ರ ಘಟನೆ. ದತ್ತೋಪಂತ ಠೇಂಗಡಿ ರಾಜ್ಯಸಭಾ ಸದಸ್ಯರಾಗಿದ್ದರು. ಪಾರ್ಲಿಮೆಂಟ್ನ ಸೆಂಟ್ರಲ್ ಹಾಲ್ನಲ್ಲಿ ಒಬ್ಬ ಕಮ್ಯೂನಿಸ್ಟ್ ಅವರೊಡನೆ ಮಾತನಾಡಲು ಕುಳಿತಿದ್ದರು. ಇನ್ನೊಬ್ಬ ಕಮ್ಯೂನಿಸ್ಟ್ ಬಾಲಚಂದ್ರ ಮೆನನ್ರವರು ಕೂಡ ಇದ್ದರು. ಆ ಮೊದಲ ಕಮ್ಯೂನಿಸ್ಟರು ಠೇಂಗಡಿಯರನ್ನು ಕುಚೇಷ್ಟೆ ಮಾಡುತ್ತಾ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದರು. ಠೇಂಗಡಿಯವರು ಅವರ ಕುತಂತ್ರ ಅರ್ಥವಾದರೂ, ಶಾಂತವಾಗಿ ಉತ್ತರಿಸುತ್ತಿದ್ದರು.
ಹೀಗೆ ಸ್ವಲ್ಪ ಹೊತ್ತು ನಡೆಯಿತು. ಇವರಿಬ್ಬರ ಮಾತುಕತೆಯನ್ನು ಕೇಳುತ್ತಿದ್ದ ಮೆನನ್ರಿಗೆ ಸಹಿಸಲಸಾಧ್ಯವಾಯಿತು. ಅವರು ಆ ಕಮ್ಯೂನಿಸ್ಟ್ ಸ್ನೇಹಿತರಿಗೆ “ದೊಡ್ಡವರ ಬಗ್ಗೆ ಕುಚೇಷ್ಟೆ ಮಾಡಬಾರದು” ಎಂದು ಕಿವಿಮಾತು ಹೇಳಿದರು.
ಆದರೂ ಆ ಮನುಷ್ಯ ಬಿಡದೆ ಮತ್ತೆ ಮತ್ತೆ ಅಂತಹುದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಡಾಕ್ಟರ್ಜಿಯವರನ್ನು ನೆಹರುರವರ ಜೊತೆ ತಾಳೆ ಮಾಡುತ್ತ ಕೆಲವೊಮ್ಮೊ ಕಟುವಾಗಿ, ಕೆಲವೊಮ್ಮೆ ಕುಹಕವಾಗಿ ಮಾತನಾಡುತ್ತಿದ್ದರು. ಆಗ ಮೆನನ್ ಅವರನ್ನು ಕೇಳಿದರು “ನೆಹರೂ ಕಾಲವಾಗಿ ಎಷ್ಟು ವರ್ಷವಾಯಿತು?”.
“ಎರಡೂ ಎರಡೂವರೆ ವರ್ಷವಾಗಿದೆ” ಆ ಕಮ್ಯೂನಿಸ್ಟರ ಉತ್ತರ.
“ನೆಹರೂ ತೀರಿಹೋದಾಗ ಅವರ ಬಗ್ಗೆ ಎಷ್ಟು ಜನಕ್ಕೆ ಗೊತ್ತಿತ್ತು?” ಮತ್ತೊಂದು ಪ್ರಶ್ನೆ ಮೆನನ್ರಿಂದ.
“ಇಡೀ ಭಾರತಕ್ಕೇ ತಿಳಿದಿತ್ತು. ಅಷ್ಟೇ ಅಲ್ಲ, ಪ್ರಪಂಚದ ಅನೇಕ ದೇಶಗಳ ಜನರಿಗೂ ಅವರ ಬಗ್ಗೆ ಗೊತ್ತಿತ್ತು”.
ಆಗ ಮೆನನ್ ಠೇಂಗಡಿಯವರ ಕಡೆ ತಿರುಗಿ “ಡಾಕ್ಟರ್ಜಿ ಸತ್ತು ಎಷ್ಟು ವರ್ಷವಾಯಿತು?”
“ಸುಮಾರು ೨೬-೨೭ ವರ್ಷವಾಯಿತು” ಠೇಂಗಡಿಯವರು ಉತ್ತರಿಸಿದರು.
“ಡಾಕ್ಟರ್ಜಿ ಸತ್ತಾಗ ಅವರ ಬಗ್ಗೆ ಎಷ್ಟು ಜನಕ್ಕೆ ತಿಳಿದಿತ್ತು?” ಮತ್ತೆ ಮೆನನ್ ಪ್ರಶ್ನೆ ಮಾಡಿದರು.
“ಭಾರತದ ಮಧ್ಯಭಾಗದ ಕೆಲವು ಸಾವಿರ ಜನಕ್ಕೆ ತಿಳಿದಿತ್ತು” ಠೇಂಗಡಿ ಹೇಳಿದರು.
ಆಗ ಮೆನನ್ರವರು ಆ ಕಮ್ಯೂನಿಸ್ಟರನ್ನು ಕುರಿತು “ಹಾಗಾದರೆ ನೆಹರೂ ವಿಚಾರಕ್ಕೆ ಪ್ರಾಣ ಕೊಡುವ ಎಷ್ಟು ಜನ ಇದ್ದಾರೆ? ಮತ್ತು ಡಾಕ್ಟರ್ಜಿಯವರ ವಿಚಾರಧಾರೆಯ ಅನುಷ್ಟಾನಕ್ಕಾಗಿ ಪ್ರಾಣವನ್ನೇ ಪಣವನ್ನಾಗಿಟ್ಟು ಕೆಲಸ ಮಾಡುವ ಎಷ್ಟು ಜನ ಇದ್ದಾರೆ?”
ಮೆನನ್ರವರ ತೀಕ್ಷ್ಣವಾದ ಆ ಪ್ರಶ್ನೆಗೆ ಉತ್ತರಿಸಲಾಗದೆ ಆ ಕಮ್ಯೂನಿಸ್ಟ್ ಸ್ನೇಹಿತರು ಸುಮ್ಮನಾದರು.
ಮಾತನ್ನು ಮುಂದುವರೆಸುತ್ತಾ ಮೆನನ್ರವರು “ಒಬ್ಬ ವ್ಯಕ್ತಿ ಸತ್ತಾಗ ಅವನು ಎಷ್ಟು ಉದ್ದದ ನೆರಳನ್ನು ಬಿಡುತ್ತಾನೆ ಎಂಬುದರ ಮೇಲೆ ಅವನು ಎಷ್ಟು ಪ್ರಭಾವಿ ಎಂದು ನಿರ್ಧಾರವಾಗುತ್ತದೆ” ಎಂದರು.
ಮೂಲ : ಸಂಘಸಂಪದ