ಬೆಂಗಳೂರು: ಉಂಡ ದಲಿತರು, ಉಣದ ದಲಿತರಿಗೆ ತಟ್ಟೆಯನ್ನು ಬಿಟ್ಟುಕೊಡಬೇಕು. ಏಕೆಂದರೆ ತಟ್ಟೆಯೊಂದೇ, ಕೈಗಳು ಹಲವು ಎನ್ನುವುದನ್ನು ಮೀಸಲಾತಿಯ ಫಲಾನುಭವಿಗಳಾಗಿ ಬೆಳೆದವರು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ಮೀಸಲಾತಿಯನ್ನು ಪಡೆಯುವವರ ಮಾನಸಿಕತೆ ದಕ್ಕಿದೆಲ್ಲಾ ನಮಗೇ ಇರಲಿ ಎನ್ನುವಂತಿರದೆ, ನಮ್ಮಂತೆ ಇರುವ ಅನೇಕರಿಗೆ ಉಪಯೋಗವಾಗಬೇಕು ಎನ್ನುವಂತಿರಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.

ಮಂಥನ ಜಯನಗರ, ಬೆಂಗಳೂರು ಇದರ ವತಿಯಿಂದ ಆಯೋಜಿಸಲಾದ ಕರ್ನಾಟಕದಲ್ಲಿ ಒಳ ಮೀಸಲಾತಿ ಅಂತ್ಯೋದಯದತ್ತ ದಿಟ್ಟ ಹೆಜ್ಜೆ ಎಂಬ ವಿಷಯದ ಕುರಿತಾದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಮೀಸಲಾತಿಯ ಪುನರ್ ಹಂಚಿಕೆ ನಾಲ್ಕು ಹಂತದಲ್ಲಾಗಿದೆ. ಪರಿಶಿಷ್ಠ ಜಾತಿ ಮೀಸಲಾತಿ ಶೇ.೧೫ ರಿಂದ ೧೭ಕ್ಕೆ ಹಾಗೂ ಪರಿಶಿಷ್ಠ ಪಂಗಡ ಮೀಸಲಾತಿ ಶೇ.೩ ರಿಂದ ಶೇ.೭ಕ್ಕೆ ವಿಸ್ತರಣೆ ಮಾಡಿರುವುದು ಮೊದಲನೇಯದ್ದು. ಎರಡನೇಯದಾಗಿ ಪರಿಶಿಷ್ಠ ಪಂಗಡದ ಮೀಸಲಾತಿಯ ವರ್ಗೀಕರಣವನ್ನು ಮಾಡಲಾಗಿದೆ. ಮೂರನೇಯ ಹಂತದಲ್ಲಿ ಒಬಿಸಿಯೊಳಗಿದ್ದ ೨ಬಿ ಪ್ರವರ್ಗದಲ್ಲಿ ಸಂವಿಧಾನ ವಿರೋಧಿಯಾಗಿ ಮುಸಲ್ಮಾನರಿಗೆ ನೀಡಲಾದ ಶೇ. ೪ ಮೀಸಲಾತಿಯ ರದ್ದು ಮಾಡಲಾಗಿದೆ. ನಾಲ್ಕನೇಯದಾಗಿ ಮುಸಲ್ಮಾನರಿಗೆ ನೀಡಲಾಗುತ್ತಿದ್ದ ಶೇ.೪ ಮೀಸಲಾತಿಯನ್ನು ತೆಗೆದು ರೈತಾಪಿ ವರ್ಗವನ್ನು ಪ್ರತಿನಿಧಿಸುವಂತಹ ೩ಎ ಮತ್ತು ೩ಬಿಯನ್ನು ೨ಸಿ ಮತ್ತು ೨ಡಿ ಎಂದು ಪುನರ್ ವಿಂಗಡಿಸಿ ತಲಾ ಶೇ.೨ ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದು ನುಡಿದರು.

ಒಳ ಮೀಸಲಾತಿ ನಕಲಿ ಸರ್ಟಿಫಿಕೇಟ್ ಹಾಗೂ ನಮ್ಮನ್ನೂ ಎಸ್ಸಿ, ಎಸ್ಟಿಗೆ ಸೇರಿಸಿ ಎನ್ನುವ ಬೇಡಿಕೆಗಳಿಗೆ ಕಡಿವಾಣ ಹಾಕುತ್ತದೆ. ಅಷ್ಟೇಯಲ್ಲದೇ ಬುಟ್ಟಿಯಲ್ಲಿರುವ ಹಣ್ಣುಗಳು ಕೇವಲ ಶಕ್ತಿವಂತರ ಪಾಲಾಗದೆ, ಎಲ್ಲರಿಗೂ ಸಮನಾಗಿ ಹಂಚುವ ಪ್ರಕ್ರಿಯೆ ಒಳಮೀಸಲಾತಿಯಾಗಿದೆ. ಒಂದೇ ವಾಕ್ಯದಲ್ಲಿ ಹೇಳುವುದೆಂದರೆ ತಾಯಿ ತನ್ನ ಮಕ್ಕಳಿಗೆ ಊಟವನ್ನು ಹಂಚುವಂತೆ ಮೀಸಲಾತಿ ವಿಂಗಡನೆಯಾಗಬೇಕಿದೆ. ಈ ಮೀಸಲಾತಿಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ತಾಯ್ತನದ ಗುಣವೂ ಸಮುದಾಯಗಳಿಗೆ ಇರಬೇಕು ಎಂದು ನುಡಿದರು.
