ದು.ಗು.ಲಕ್ಷ್ಮಣ, ಹಿರಿಯ ಪತ್ರಕರ್ತ, ಬೆಂಗಳೂರು

ಅದು 1968-69ರ ಸಮಯ.ನಾನು ಕಾಲೇಜು ವಿದ್ಯಾಭ್ಯಾಸಕ್ಕಾಗಿ ದೂರದ ಶೃಂಗೇರಿ ಸಮೀಪದ ಮೇಗೂರು ಕುಗ್ರಾಮದಿಂದ ಎಂದಿಗೂ ನೋಡಿರದ ಶಿವಮೊಗ್ಗ ಎಂಬ ಶಿವಮೊಗ್ಗಕ್ಕೆ ಬಂದಿದ್ದೆ.ಊರು ಹೊಸದು.ಜನರೂ ಹೊಸಬರು.ಯಾರದೂ ಅಷ್ಟಾಗಿ ಪರಿಚಯವಿಲ್ಲ.ಮೇಲಾಗಿ ಕಿತ್ತು ತಿನ್ನುವ ಬಡತನದ ಮನೆಯಿಂದ ಶಿವಮೊಗ್ಗ ಪೇಟೆಗೆ ಬಂದು ಬಿದ್ದಿದ್ದೆ.

ಅಲ್ಲಿ ಮೊದಲು ಪರಿಚಯವಾದವರು ಸಂಘದ ಜಿಲ್ಲಾ ಪ್ರಚಾರಕರಾಗಿದ್ದ ಜಡೆ ಚಂದ್ರಶೇಖರ್ ಎಂಬ ಖಡಕ್ ಆಸಾಮಿ.ಆದರೆ ಅವರು ಅಷ್ಟೇ ಸ್ನೇಹಶೀಲರು ಎಂಬುದು ಆನಂತರದ ದಿನಗಳಲ್ಲಿ ಅನುಭವಕ್ಕೆ ಬಂತು.ಜಡೆ ಯವರ ನಂತರ ನನಗೆ ಪರಿಚಯವಾಗಿ ಬಲು ಆತ್ಮೀಯರಾದವರೇ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಶ್ರೀ ಜಿನರಾಜ ಜೈನ್ ಅವರು.ಅವರನ್ನು ನಾನಂತೂ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ದುರ್ಗಿಗುಡಿಯ ನಮ್ಮ ಸಂಬಂಧಿಕರ ಮನೆಯಿಂದ ಪ್ರತಿನಿತ್ಯ ಡಿವಿಎಸ್ ಕಾಲೇಜಿಗೆ ನಡೆದುಕೊಂಡು ಹೋಗುವಾಗ,ರಾಘವೇಂದ್ರಸ್ವಾಮಿ ಮಠದ ಹಿಂಬದಿ ಸ್ಕೂಲ್ ಮೈದಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಒಬ್ಬರೇ ನಿಂತು ಸೂರ್ಯ ನಮ ಸ್ಕಾರ,ವ್ಯಾಯಾಮ,ಪ್ರಾರ್ಥನೆ ಮಾಡುತ್ತಿದ್ದ ದೃಶ್ಯವನ್ನು ಪ್ರತಿನಿತ್ಯ ನೋಡುತ್ತಲೇ ಕಾಲೇಜಿಗೆ ಹೋಗುತ್ತಿದ್ದೆ. “ಈ ಮಾರ್ವಾಡಿಗೆ ತಲೆ ಸರಿ ಇಲ್ಲಾಂತ ಕಾಣುತ್ತೆ. ದಿನಾ ಒಬ್ಬರೇ ಇಲ್ಲಿಗೆ ಬಂದು ವ್ಯಾಯಾಮ,ಸೂರ್ಯನಮಸ್ಕಾರ,ಪ್ರಾರ್ಥನೆ ಮಾಡುತ್ತಾನೆ..” ಅಂತ ದಾರಿಹೋಕರು ಮಾತಾಡಿಕೊಳ್ಳುತ್ತಿದ್ದುದನ್ನು ನಾನೂ ಕೇಳಿಸಿಕೊಳ್ಳುತ್ತಿದ್ದೆ.ಆಗ ನನಗೆ ಸಂಘದ ಬಗ್ಗೆ ಏನೇನೂ ಗೊತ್ತಿರಲಿಲ್ಲ(ಈಗಲೂ ತುಂಬಾ ಗೊತ್ತಿದೆ ಎಂದೇನೂ ಇಲ್ಲ!). ಜ ಡೆಯವರು ಸಂಘದ ಬಗ್ಗೆ ಅಷ್ಟಿಷ್ಟು ಹೇಳಿದ ಬಳಿಕ ಇದೇನೋ ಒಂದು ಒಳ್ಳೆ ಸಂಸ್ಥೆ ಎನಿಸಿತ್ತು.ಅವರೇ ದಿನಾ ಒಬ್ಬರೇ ವ್ಯಾಯಾಮ ಮಾಡುತ್ತಿದ್ದ ಆ ಮಾರ್ವಾಡಿ ಯಾರೆಂದು ತಿಳಿಸಿದ್ದು.ಅವರೇ ಜಿನರಾಜ ಜೈನ್.

ಅನಂತರ ಒಂದು ದಿನ ಅವರೇ ನಾನಿದ್ದ ಮನೆಗೆ ಬಂದು ನನ್ನ ಪರಿಚಯ ಮಾಡಿಕೊಂಡರು.ಗಾಂಧಿ ಬಜಾರಿನಲ್ಲಿರುವ ನಮ್ಮ ಮನೆ,ಅಂಗಡಿಗೆ ಬಾ ಎಂದು ಆತ್ಮೀಯವಾಗಿ ಕರೆದರು.ಆಗ ಹೀಗೆ ಆತ್ಮೀಯವಾಗಿ ನನ್ನನ್ನು ಕರೆಯುವವರೇ ಇರಲಿಲ್ಲ.ಏಕೆಂದರೆ ನನ್ನ ಪರಿಚಯ ಯಾರಿಗೂ ಇರಲಿಲ್ಲ.

ಅನಂತರ ಜಿನರಾಜರ ಮನೆ,ಅಂಗಡಿಗೆ ಹೋದೆ.ಅಲ್ಲಿ ಕಾಫಿ,ತಿಂಡಿಯ ಜೊತೆ ಅವರ ನಿಷ್ಕಲ್ಮಶ ಆತ್ಮೀಯತೆಯನ್ನು ಭರಪೂರ ಸವಿದೆ.ಕಾಲೇಜಿಗೆ ಫೀಸು ಕಟ್ಟಲು ಕೈಯಲ್ಲಿ ಕಾಸು ಇಲ್ಲದಿದ್ದಾಗ,ಓಟಿಸಿಗೆ ಹೋಗಲು ದುಡ್ಡು ಇಲ್ಲದೆ ಇದ್ದಾಗ ನನ್ನ ಆಪದ್ಬಾಂಧವನಂತೆ ಕೈಹಿಡಿದವರು ಇದೇ ಜಿನರಾಜರು.ಅವರೇನೂ ನನ್ನ ಬಂಧುವಾಗಿರಲಿಲ್ಲ.ಸಂಘದ ಮೂಲಕ ಪರಿಚಯ ಆದವರು,ಅಷ್ಟೇ.ಆದರೆ ನನ್ನನ್ನು ತನ್ನ ಮನೆಯ ಸದಸ್ಯನಂತೆ ,ಒಡಹುಟ್ಟಿದ ಸೋದರನೆಂಬಂತೆ ಪ್ರೀತಿಯಿಂದ ಕಂಡರು. ಆದರೆ ಕೊಟ್ಟ ಸಾಲವನ್ನು ಬರೆದಿಟ್ಟರು.ಅದನ್ನು ಹೇಗೆ ತೀರಿಸಬೇಕೆಂದು ಸಲಹೆ ನೀಡಿದ್ದೂ ಇದೇ ಜಿನರಾಜರು.ಮಕ್ಕಳಿಗೆ ಟ್ಯೂಷನ್ ಹೇಳಿ ಹಣ ಸಂಪಾದಿಸು ಎಂದು ಅವರು ಹಣ ಗಳಿಕೆಯ ಮಾರ್ಗ ತಿಳಿಸಿದ್ದರು.ಕೊನೆಗೊಮ್ಮೆ ಅವರಿಂದ ಪಡೆದುಕೊಂಡಿದ್ದ ಎಲ್ಲ ಸಾಲವನ್ನೂ ಚುಕ್ತಾ ಮಾಡಿದ್ದೆ.ಆದರೆ ಅವರು ಮೊಗೆ ಮೊಗೆದುನೀಡಿದ್ದ ಪ್ರೀತಿ,ಆತ್ಮೀಯತೆ, ಸಹೋದರತೆ, ವಾತ್ಸಲ್ಯವನ್ನು ನನಗೆ ಈಗಲೂ ಹಿಂದಿರುಗಿಸಲು ಸಾಧ್ಯವಾಗಿಲ್ಲವಲ್ಲ ಎಂಬ ನೋವು ಈ ಹೊತ್ತಿಗೂ ನನ್ನನ್ನು ಕಾಡುತ್ತಿದೆ.

ಶಿವಮೊಗ್ಗದಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅನಂತರ ಪ್ರಚಾರಕನಾಗಿದ್ದಾಗ ಅವರ ಮನೆಯಲ್ಲಿ ಅದೆಷ್ಟು ಬಾರಿ ತಿಂಡಿ ತಿಂದಿದ್ದೇನೋ,ಊಟ ಮಾಡಿದ್ದೆ ನೋ ಲೆಕ್ಕ ಇಟ್ಟವರಾರು?ಪ್ರಚಾರಕ ವೃತ್ತಿಯಿಂದ ನಿವೃತ್ತಿಯಾದ ಬಳಿಕವೂ ಅವರ ಮನೆಗೆ ಆಗಾಗ ಹೋಗಿದ್ದಿದೆ.ಅದೇ ಪ್ರೀತಿ,ಅದೇ ಆತ್ಮೀಯತೆ,ಅದೇ ಆತಿಥ್ಯ,ಉಪಚಾರ.ಅವರ ತಾಯಿ,ಅವರ ಪತ್ನಿಯವರ ಕೈ ಅಡುಗೆ ಸವಿಯುವ ಭಾಗ್ಯ ಒಟ್ಟಾರೆ ನನಗೆ ಲಭಿಸಿದ್ದು ನನ್ನ ಅದೃಷ್ಟವೇ ಸರಿ.

ಜಿನರಾಜರು ಒಬ್ಬರೇ ಮೂರು ತಿಂಗಳ ಕಾಲ ದುರ್ಗಿಗುಡಿ ಶಾಖೆಯನ್ನು ತಪ್ಪದೆ ನಡೆಸಿದ್ದುಂಟು.ಅದೆಂಥ ಅಪ್ಪಟ ಸಂಘನಿಷ್ಠೆ ಅವರದು!ಮುಖ್ಯಶಿಕ್ಷಕರಾಗಿ, ಭಾಗ ಕಾರ್ಯವಾಹರಾಗಿ,ತಾಲೂಕು ಕಾರ್ಯವಾಹರಾಗಿ,ವಿಕಾಸ ಶಾಲೆಯ ಮಾರ್ಗದರ್ಶಕರಾಗಿ,ಹಲವು ಬಡ ವಿದ್ಯಾರ್ಥಿಗಳಿಗೆ ಬಾಳ ಬೆಳಕಾಗಿ ಮಿನುಗಿದ ಜಿನರಾಜರು ಒಬ್ಬ ಸದ್ದಿಲ್ಲದ,ತೆರೆಮರೆಯ ಸಮಾಜ ಜೀವಿ.ಸಂಘ ಜೀವಿ.ಒಬ್ಬ ಆದರ್ಶ ಸಾಧಕ.

ನಾನು ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗ ನನ್ನ ಸಹಪಾಠಿ ಒಬ್ಬರಿದ್ದರು.ಹೆಸರು ವಿನಯಚಂದ್ರ.ಬಲು ಶಿಸ್ತಿನ,ಸೂಕ್ಷ್ಮಗ್ರಾಹಿ, ಗಂಭೀರ ಸ್ವಭಾವದ ವ್ಯಕ್ತಿ.ಆತನ ವಾಸ್ತವ್ಯ ಇದ್ದಿದ್ದು ದುರ್ಗಿಗುಡಿಯ ಜೈನ ವಿದ್ಯಾರ್ಥಿ ನಿಲಯದಲ್ಲಿ.ನಾನು ಪ್ರತಿ ಭಾನುವಾರ ಅವರನ್ನು ತಪ್ಪದೆ ಸಾಂಘಿಕ್ ಗೆ ಕರೆದುಕೊಂಡು ಹೋಗುತ್ತಿದ್ದೆ.ಸಂಘದ ಆಟ,ಹಾಡು,ಪ್ರಾರ್ಥನೆ, ಬೌದ್ಧಿಕ್ ಇವೆಲ್ಲ ಇಷ್ಟವಾದರೂ ವಿನಯಚಂದ್ರರಿಗೆ ಕೈಯಲ್ಲಿ ದಂಡ ಹಿಡಿಯುವುದು ಸರಿ ಎನ್ನಿಸಿರಲಿಲ್ಲ.ದಂಡ ಹಿಂಸೆಯ ಪ್ರತೀಕ.ಅದನ್ನು ಕೈಯಲ್ಲಿ ಹಿಡಿಯಬಾರದು ಎಂದು ವಾದಿಸುತ್ತಿದ್ದರು.ನಾನು ,ಅದು ಹಾಗಲ್ಲ.ದಂಡ ನಮ್ಮ ಆತ್ಮರಕ್ಷಣೆಯ,ಆತ್ಮವಿಶ್ವಾಸದ ಪ್ರತೀಕ.ದಂಡ ಹಿಡಿದ ಕೂಡಲೇ ಯಾರಿಗಾದರೂ ಹೊಡೆಯಬೇಕೆಂದು ಅರ್ಥವಲ್ಲ ಎಂದು ಬಿಡಿಸಿ ಹೇಳಿದ್ದೆ.ಆದರೆ ನನ್ನ ವಿವರಣೆ ಅವರಿಗೇನೂ ಸರಿ ಎನಿ ಸಿರಲಿಲ್ಲ.ಅವರನ್ನು ಸಾಂಘಿಕ್ ಗೆ ಕರೆದುಕೊಂಡುಬಂದ ಸುದ್ದಿ ಜಿನರಾಜರಿಗೆ ತಿಳಿದು ಸಂತಸವಾಗಿತ್ತು.ಹೊಸಬರನ್ನು ಹೀಗೇ ಸಂಘಕ್ಕೆ ಕರೆತರಬೇಕು ಎಂದಿದ್ದರು.
ಈ ವಿನಯಚಂದ್ರ ತಮ್ಮ ಪದವಿ ಮುಗಿಸಿ ಹೊಂಬುಜ ಜೈನ ಮಠದ ಸ್ವಾಮೀಜಿಯಾಗಿ ಹೋಗಿದ್ದು ಇನ್ನೊಂದು ರೋಚಕ ಕಥೆ.ಜೈನಮಠದ ಸ್ವಾಮೀಜಿಯಾಗಿ ಹಲವಾರು ಬಾರಿ ದೇಶವಿದೇಶ ಸುತ್ತಿ ಜೈನ ಧರ್ಮ,ಅಹಿಂಸಾ ತತ್ವ ಪ್ರಸಾರ ಮಾಡಿ,ಅನಂತರ ಇತ್ತೀಚೆಗೆ ಅವರು ಜಿನೈಕ್ಯರಾದರು.ಹೊಂಬುಜ ಮಠದ ಆವರಣದಲ್ಲಿ ಒಮ್ಮೆ ಸಂಘದ ಪ್ರಾಥಮಿಕ ಶಿಕ್ಷಾವರ್ಗ ನಡೆಸಲು ಒಪ್ಪಿ,ಸಕಲ ನೆರವು ನೀಡಿದ್ದರು.ಜಿನರಾಜರು ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ,ಮನದಲ್ಲೇ ಖುಷಿ ಪಟ್ಟಿದ್ದರು.

ಜಿನರಾಜರ ಮನೆಗೆ ಹೋದಾಗಲೆಲ್ಲ ವೈಚಾರಿಕ ಚರ್ಚೆ,ರಾಷ್ಟ್ರೀಯ ವಿಷಯಗಳ ಬಗ್ಗೆ ವಿಶ್ಲೇಷಣೆ,ಸಂಘ,ಸಮಾಜ…ಹೀಗೆ ಹತ್ತುಹಲವು ವಿಷಯಗಳು ಅಲ್ಲಿ ಹಾದುಹೋಗಿದ್ದುಂಟು.ಆತ್ಮಜೀವಿಎಂಬ ಕಾವ್ಯನಾಮದಡಿ ಅವರು ಹನಿಗವನಗಳನ್ನು ಬರೆಯುತ್ತಿದ್ದರು.ಕೆಲವು ವಿಕ್ರಮ,ಹೊಸದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಬದುಕಿನ ತೊಳಲಾಟಗಳ ಬಗ್ಗೆ,ಮನುಷ್ಯನ ಬಾಳಿನ ಬಗ್ಗೆ ಒಂದು ಸೂಕ್ಷ್ಮ ಅವಲೋಕನ,ಒಂದು ಒಳನೋಟ,ಒಂದು ಚಿಕಿತ್ಸಕ ದೃಷ್ಟಿ ಆ ಹನಿಗವನಗಳಲ್ಲಿರುತ್ತಿತ್ತು.

ಅವರು ಬರೆದ ಆ ಹನಿಗವನಗಳನ್ನು ಸಂಗ್ರಹಿಸಿ ಅದನ್ನೊಂದು ಕೃತಿಯಾಗಿ ಹೊರ ತರಬೇಕೆಂಬ ಪ್ರಯತ್ನ ಕೂಡ ಆಗಿತ್ತು.ಅದಕ್ಕಾಗಿ ನಾನೇ ಎರಡು ದಿನ ಬಿಡುವು ಮಾಡಿಕೊಂಡು ಅವರ ಮನೆಯಲ್ಲೇ ಉಳಿದು,ಅಲ್ಲೇ ಊಟ,ತಿಂಡಿ ಸೇವಿಸಿ,ಕವನಗಳನ್ನು ಒಪ್ಪ ಓರಣವಾಗಿ ಸಂಗ್ರಹಿಸಿ, ತಿದ್ದಿತೀಡಿ,ಶೀರ್ಷಿಕೆ ನೀಡಿ ಮುದ್ರಣಕ್ಕೆ ಕೊಟ್ಟು ಬಂದಿದ್ದೆ.ಆದರೆ ಆಮೇಲೆ ಅದನ್ನು ಪ್ರಕಟಿಸಬೇಕೆಂಬ ಆಸಕ್ತಿ
ಜಿ ನರಾಜರಲ್ಲಿ ಅಷ್ಟಾಗಿ ಇರಲಿಲ್ಲ ಎಂದು ಅವರ ಸೊಸೆ ಚೈತನ್ಯ ಹೇಳುತ್ತಾರೆ.

ತೀರಾ ಇತ್ತೀಚಿನವರೆಗೂ ಆರೋಗ್ಯ ಕುಸಿದಿದ್ದಾಗಲೂ ನನಗೆ ಫೋನ್ ಮಾಡಿ,ಹೇಗಿದ್ದೀಯ,ಏನು ಬರಿತಾ ಇದೀಯಾ,ಜೀವನಕ್ಕೆ ತೊಂದ್ರೆ ಇಲ್ವಾ,ಇತ್ಯಾದಿ ಮನಸ್ಸಿಗೆ ತಟ್ಟುವಂತೆ ಆ ಪ್ಯಾಯಮಾನವಾಗಿ ಪ್ರೀತಿಯಿಂದ ವಿಚಾರಿಸುತ್ತಿದ್ದರು.ಆಗೆಲ್ಲ ನನಗೆ ಅವರು , ಯಾವುದೋ ಜನ್ಮದಲ್ಲಿ ಅಣ್ಣನೋ ಬಂಧುವೋ ಆಗಿದ್ದರೆನೊ ಅಂತ ಅನಿಸಿದ್ದಿದೆ.

ಪ್ರತಿ ಬಾರಿ ಅವರ ಮನೆಯಿಂದ ಆತಿಥ್ಯ ಸ್ವೀಕರಿಸಿ,ಮಾತಾಡಿ ಹೊರಡುವಾಗ ಅವರ ಪ್ರಶ್ನೆ: “ಇನ್ನು ಯಾವಾಗ ಬರ್ತೀಯ? ಈ ಕಡೆ ಬಂದರೆ ಮರೀಬೇಡ.ಮನೆಗೆ ಬರ್ತಾ ಇರು.”

ನನಗೆ ಇದಕ್ಕಿಂತ ಅಮೃತಸಮಾನ ನುಡಿಗಳು ಇನ್ನೇನು ಬೇಕು?ಇದಕ್ಕಿಂತ ಆತ್ಮೀಯತೆ ಇನ್ನೆಲ್ಲಿ ಸಿಕ್ಕೀತು?

ಜಿನರಾಜರೇ,ನೀವು ಸಂಘಜೀವಿ,ಸಮಾಜಜೀವಿ.ಧ್ಯೇಯ,ನಿಷ್ಠೆ,ಪ್ರಾಮಾಣಿಕತೆ,ಸ್ನೇಹಕ್ಕೆ ಇನ್ನೊಂದು ಹೆಸರೇ ಜಿನರಾಜ್ ಜೈನ್. ಸಂಪತ್ತಿದ್ದರೂ ನೀವು ಅತ್ಯಂತ ಸರಳ. ನಿಮ್ಮಂಥವರು ಈ ಲೋಕದಲ್ಲಿ ಬಲು ವಿರಳ.ನಿಮ್ಮ ಹೃದಯ ಶ್ರೀಮಂತಿಕೆಯನ್ನು ಅಳೆಯುವುದಾದರೂ ಎಂತು?

ತೀರಾ ಇತ್ತೀಚೆಗೆ ಶಿವಮೊಗ್ಗದ ಶಾಖೆಯೊಂದರಲ್ಲಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಂಘದ ಕುರಿತ ಪ್ರಶ್ನೆಮಾಲಿಕೆಯನ್ನು ನೀವೇ ಸಿದ್ಧಪಡಿಸಿ ,ಇದಕ್ಕೆ ಸೂಕ್ತ ಉತ್ತರಗಳನ್ನು ಬರೆದು ಕಳಿಸುವಂತೆ ನೀವು ನನಗೆ ಕೋರಿಕೆ ಸಲ್ಲಿಸಿದ್ದನ್ನು ಹೇಗೆ ಮರೆಯಲು ಸಾಧ್ಯ?ತಕ್ಷಣವೇ ಉತ್ತರಗಳನ್ನು ಬರೆದು ನಿಮ್ಮ ಸೊಸೆಯ ವಾಟ್ಸಾಪ್ ಗೆ ಕಳಿಸಿದ್ದೆ.ಅಲ್ಲೇ ಯಾರಿಗಾದರೂ ನೀವು ಉತ್ತರಗಳನ್ನು ಬರೆದುಕೊಡುವಂತೆ ಕೇಳಬಹುದಿತ್ತು.ಆದರೆ ದೂರದಲ್ಲಿರುವ ನನಗೇ ಏಕೆ ಹೇಳಿದಿರಿ ಎಂದು ನನಗೆ ಅರ್ಥವಾಗಿರಲಿಲ್ಲ.ಸಂಘದ ಬಗ್ಗೆ ನನಗೆಷ್ಟು ಗೊತ್ತು ಎಂದು ಅರಿಯುವ ಕುತೂಹಲ ನಿಮಗಿದ್ದಿರಬಹುದೇ?ಈ ಅನುಮಾನ ಈಗಲೂ ನನ್ನನ್ನು ಕಾಡುತ್ತಿದೆ.ಜಿನರಾಜರೇ,ಸಂಘದ ಜವಾಬ್ದಾರಿ ನನಗೆ ಈಗಿಲ್ಲದಿದ್ದರೂ ನಿಮ್ಮಂತೆಯೇ ನಾನೂ ಈಗಲೂ ಕ್ರಿಯಾಶೀಲ.ಏಕೆಂದರೆ ನೀವು ಹಾಕಿಕೊಟ್ಟ ಮೇಲ್ಪಂಕ್ತಿ ಅದೇ ಅಲ್ಲವೇ?

ನಿಮಗೆ ,ನಿಮ್ಮ ಈ ಕಿರಿಯ ಸ್ನೇಹಿತನ ಭಾವಪೂರ್ಣ ವಿದಾಯ.
ಹೋಗಿಬನ್ನಿ ಜಿನರಾಜರೇ.ಶಿವಮೊಗ್ಗದ ಗಾಂಧಿಬಜಾರ್ ಗೆ ಬಂದಾಗಲೆಲ್ಲ ನಿಮ್ಮ ನೆನಪು ಕಾಡದೆ ಇರುವುದಿಲ್ಲ.ನಿಮ್ಮಂಥವರ ಸಂತತಿ ಸಾಸಿರವಾಗಲಿ ಎಂದಷ್ಟೇ ಹಾರೈಸುವೆ.

Leave a Reply

Your email address will not be published.

This site uses Akismet to reduce spam. Learn how your comment data is processed.